For the best experience, open
https://m.samyuktakarnataka.in
on your mobile browser.

ಒತ್ತಡ ಆಂತರಿಕ ಬದಲಾವಣೆಗೆ ದಿಕ್ಸೂಚಿ

03:30 AM Oct 15, 2024 IST | Samyukta Karnataka
ಒತ್ತಡ ಆಂತರಿಕ ಬದಲಾವಣೆಗೆ ದಿಕ್ಸೂಚಿ

ಭೂಮಿಯ ಮೇಲೆ ಜೀವಿಗಳ ಉಗಮವಾದ ಕ್ಷಣದಿಂದಲೂ ಜೀವನ ಮಹಾಸಾಗರ'ದಲ್ಲಿ ಜೀವಿಗಳು ಮತ್ತು ನಿರ್ಜೀವಿ ವರ್ಗಗಳ ನಡುವೆ ದೀರ್ಘಕಾಲಿಕ ಕೊಡು-ಕೊಳ್ಳುವಿಕೆ ನಡೆಯುತ್ತಲೇ ಬಂದಿದೆ. ಇತರ ಮಾನವರೊಂದಿಗಿನ ಸಂವಹನ-ನಿರ್ದಿಷ್ಟವಾಗಿ ಭಾವನಾತ್ಮಕ ಸಂವಹನಗಳು ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ಅಸಂಖ್ಯಾತ ಮತ್ತು ಸೂಕ್ಷ್ಮ ರೀತಿಯಲ್ಲಿ ನಮ್ಮ ಜೈವಿಕ ಕಾರ್ಯನಿರ್ವಹಣೆಯ ಮೇಲೆ ಅದರದ್ದೇ ಆದ ಪರಿಣಾಮ ಬೀರುತ್ತದೆ ಮತ್ತು ಇವುಗಳೇ ಆರೋಗ್ಯದ ಪ್ರಮುಖ ನಿರ್ಣಾಯಕರಾಗಿದ್ದಾರೆ. ನಮ್ಮ ಮಾನಸಿಕ ಒಳಸುಳಿಗಳು, ನಮ್ಮ ಭಾವನಾತ್ಮಕ ಪರಿಸರ ಮತ್ತು ನಮ್ಮ ಶರೀರಶಾಸ್ತ್ರದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಒಟ್ಟಾರೆ ಯೋಗಕ್ಷೇಮದ ಬುನಾದಿಯಾಗಿದೆ. ಹಠಾತ್ ನಿರುದ್ಯೋಗ, ವಿವಾಹ ವಿಚ್ಛೇದನ ಅಥವಾ ಪ್ರೀತಿಪಾತ್ರರನ್ನು ಕಳೆದುಕೊಳ್ಳುವಿಕೆ ಮುಂತಾದ ಪ್ರಮುಖ ಘಟನಾವಳಿಗಳು ಅನೇಕ ಬಾರಿ ಒತ್ತಡದ ಮೂಲಗಳಾಗಿರುತ್ತವೆ. ಆದರೆ ಜೀವನದಲ್ಲಿ ದೀರ್ಘಕಾಲದ ದೈನಂದಿನ ಒತ್ತಡಗಳೂ ಇದ್ದು ಅದು ಅವರ ದೀರ್ಘಕಾಲೀನ ಜೈವಿಕ ಪರಿಣಾಮಗಳಲ್ಲಿ ಅದೃಶ್ಯವಾಗಿ ಪ್ರಕಟವಾಗುವ ಮೂಲಕ (ದೈಹಿಕ ಅನುಭವಕ್ಕೆ ಬಾರದ ರೀತಿಯಲ್ಲಿ) ಹೆಚ್ಚು ಹಾನಿಕಾರಕವಾಗುತ್ತವೆ. ಆಂತರಿಕವಾಗಿ ಉತ್ಪತ್ತಿಯಾಗುವ ಒತ್ತಡಗಳು ಯಾವುದೇ ರೀತಿಯಲ್ಲಿಯೂ ಸಾಮಾನ್ಯವೆಂಬಂತೆ ಇರುವುದಿಲ್ಲ. ಬಾಲ್ಯದಿಂದಲೂ ಹೆಚ್ಚಿನ ಮಟ್ಟದ ಆಂತರಿಕ ಒತ್ತಡ ಅಭ್ಯಾಸವಾಗಿರುವವರಿಗೆ ಒತ್ತಡದ ಅನುಪಸ್ಥಿತಿಯೇ ಅಸ್ವಸ್ಥತೆಗೆ, ಬೇಸರಕ್ಕೆ, ಅರ್ಥಹೀನತೆಯ ಭಾವನೆಗೆ ಕಾರಣವಾಗುವುದುಂಟು. ಜೊತೆಗೆ, ಒತ್ತಡದ ಹಾರ್ಮೋನುಗಳಾದ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ಗೆ ವ್ಯಸನಿಗಳಾಗುವುದೂ ಇದೆ. ಅಂತಹ ವ್ಯಕ್ತಿಗಳಿಗೆ ಒತ್ತಡವು ಅಪೇಕ್ಷಣೀಯವೆಂದು ಭಾಸವಾಗುತ್ತದೆ ಮತ್ತು ಅದು ಸದಾ ಇರಬೇಕಾದ ಸಂಗತಿಯೆಂಬಂತೆ ಭಾವಿಸುತ್ತಾರೆ. ಜನರು ತಮ್ಮನ್ನು ತಾವು ಒತ್ತಡಕ್ಕೆ ಒಳಗಾಗಿದ್ದಾರೆಂದು ವಿವರಿಸುವಾಗ ಅವರು ತಮ್ಮ ವೃತ್ತಿಬದುಕು, ಕುಟುಂಬ ನಿರ್ವಹಣೆ, ಕೌಟುಂಬಿಕ ಸಂಬಂಧಗಳು, ಹಣಕಾಸು, ಆರೋಗ್ಯದ ವಿಚಾರಗಳಲ್ಲಿ ಸಾಮಾನ್ಯವಾಗಿ ಅತಿಯಾದ ಬೇಡಿಕೆಗಳ ಅಡಿಯಲ್ಲಿ ಅನುಭವಿಸುವ ನರಗಳ ಸ್ಥಿತಿಗತಿಯನ್ನು ಕಲ್ಪಿಸಿಕೊಳ್ಳುತ್ತಾರೆ. ಆದರೆ ನರಗಳ ಒತ್ತಡದ ಸಂವೇದನೆಗಳು ವಾಸ್ತವದಲ್ಲಿ ಇದಕ್ಕೆ ಕಾರಣವಾಗಿರುವುದಿಲ್ಲ. ಒತ್ತಡವೆಂಬುದು ನಾವು ವ್ಯಾಖ್ಯಾನಿಸುವಂತೆ ವ್ಯಕ್ತಿ ಅಥವಾ ವಿಚಾರನಿಷ್ಠ ಭಾವನೆಯ ವಿಷಯವಲ್ಲ. ಇದು ಮಿದುಳು, ಹಾರ್ಮೋನು ಮಟ್ಟ, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಇತರ ಅನೇಕ ಅಂಶಗಳನ್ನು ಒಳಗೊಂಡಿರುವ ದೇಹದಲ್ಲಿನ ವಸ್ತುನಿಷ್ಠ ಶಾರೀರಿಕ ಮತ್ತು ಜೈವಿಕ ಘಟನೆಗಳ ಒಟ್ಟು ಮೊತ್ತವಾಗಿರುತ್ತದೆ. ಮನುಷ್ಯರು ಮತ್ತು ಪ್ರಾಣಿಗಳು ಒತ್ತಡದ ಉಪಸ್ಥಿತಿಯ ಅರಿವಿಲ್ಲದೆಯೂ ಅದನ್ನು ಅನುಭವಿಸಬಹುದು. ಒತ್ತಡವು ಕೇವಲ ನರಗಳಿಂದ ಮಾತ್ರವೇ ಉಂಟಾಗುವುದಲ್ಲ. ಒತ್ತಡದ ಪ್ರತಿಕ್ರಿಯೆಗಳು ನರಮಂಡಲದ ವ್ಯವಸ್ಥೆಗಳಿಲ್ಲದ ಸಸ್ಯಗಳಲ್ಲಿ, ಪ್ರಾಣಿಗಳಲ್ಲಿ ಸಹ ಸಂಭವಿಸುತ್ತದೆ. ವಾಸ್ತವವಾಗಿ, ಅರಿವಳಿಕೆಗೆ ಒಳಗಾದ ರೋಗಿಗಳ ಪ್ರಜ್ಞಾಹೀನ ಸ್ಥಿತಿಯಲ್ಲಿಯೂ ಒತ್ತಡವನ್ನು ಉಂಟುಮಾಡಬಹುದು. ಅಂತೆಯೇ ಸಂಪೂರ್ಣವಾಗಿ ಎಚ್ಚರವಾಗಿರುವ ಆದರೆ ಪ್ರಜ್ಞಾಹೀನ ಭಾವನೆಗಳ ಹಿಡಿತದಲ್ಲಿರುವ ಅಥವಾ ದೇಹದ ಪ್ರತಿಕ್ರಿಯೆಗಳಿಂದ ತನಗರಿವಿಲ್ಲದೆಯೇ ಸಂಪರ್ಕ ಕಡಿತಗೊಂಡ ವ್ಯಕ್ತಿಗಳಲ್ಲಿ ಒತ್ತಡದ ಪರಿಣಾಮಗಳು ಹೆಚ್ಚು ಸಕ್ರಿಯವಾಗಿರುತ್ತವೆ. ಹಾಗಾದರೆ ಒತ್ತಡ ಎಂದರೇನು? ನಿರ್ದಿಷ್ಟ ಕಾರಣ ಅಥವಾ ನಿರ್ದಿಷ್ಟ ಅರಿವನ್ನು ಲೆಕ್ಕಿಸದೆ ದೇಹದಲ್ಲಿ ಸಂಭವಿಸುವ ವ್ಯಾಪಕವಾದ ಜೈವಿಕ ಪ್ರಕ್ರಿಯೆಗಳ ಒಟ್ಟು ಪರಿಣಾಮವಿದು. ಜೀವಿಯು ತನ್ನ ಅಸ್ತಿತ್ವ ಅಥವಾ ಯೋಗಕ್ಷೇಮಕ್ಕೆ ಬೆದರಿಕೆಯನ್ನು ಗ್ರಹಿಸಿದಾಗ ಸಂಭವಿಸುವ ಆಂತರಿಕ ಬದಲಾವಣೆಗಳು. ಇದು ವ್ಯಕ್ತಿಯ ಅನುಭವಕ್ಕೆ ಗೋಚರಿಸಬಹುದು ಅಥವಾ ಗೋಚರಿಸದೆಯೂ ಇರಬಹುದು. ನರಗಳ ಒತ್ತಡವು ಒಂದು ಕಾರಣವಾಗಿದ್ದರೂ ಸಹ ಒತ್ತಡವನ್ನು ಅನುಭವಿಸದೆಯೇ ಒಬ್ಬರು ಒತ್ತಡಕ್ಕೆ ಒಳಗಾಗಬಹುದು. ಮತ್ತೊಂದೆಡೆ, ಶಾರೀರಿಕ ಕಾರ್ಯವಿಧಾನಗಳನ್ನು ಸಕ್ರಿಯಗೊಳಿಸದೆಯೇ ಉದ್ವೇಗವನ್ನು ಅನುಭವಿಸಲು ಸಾಧ್ಯವಿದೆ. ವ್ಯಕ್ತಿಯ ಮೇಲೆ ಜೀವನದ ಅವಶ್ಯಕತೆಗಳು ಉಂಟುಮಾಡುವ ಬೇಡಿಕೆಗಳು ಅವುಗಳನ್ನು ಪೂರೈಸುವ ವ್ಯಕ್ತಿಯ ಸಾಮರ್ಥ್ಯವನ್ನು ಮೀರಿದಾಗ ಅತಿಯಾದ ಒತ್ತಡ ಸಂಭವಿಸುತ್ತದೆ. ಇದು ದೈಹಿಕ ಹಾನಿ, ಸೋಂಕು, ಗಾಯ ಅಥವಾ ಮಾನಸಿಕ ಆಘಾತದ ಮೂಲಕ ಪ್ರಕಟವಾಗಬಹುದು. ಒತ್ತಡದ ಅನುಭವವು ಮೂರು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು; ದೈಹಿಕ ಅಥವಾ ಭಾವನಾತ್ಮಕವಾಗಿದ್ದು ಅನುಭವಿಸುವ ವ್ಯಕ್ತಿಯ ದೇಹವು ಅದನ್ನು ತನ್ನ ಅಸ್ತಿತ್ವಕ್ಕೆ ಒಡ್ಡಿದ ಬೆದರಿಕೆಯೆಂದೇ ಗ್ರಹಿಸುತ್ತದೆ. ಇಲ್ಲಿ 'ಗ್ರಹಿಕೆ'ಯೇ ಒತ್ತಡವಾಗಿರುತ್ತದೆ. ಎರಡನೆಯದು; ಸಂಸ್ಕರಣಾ ಪ್ರಕ್ರಿಯೆಯಾಗಿದ್ದು ಅದು ಒತ್ತಡದ ಅರ್ಥವನ್ನು ಅನುಭವಿಸುತ್ತದೆ ಮತ್ತು ಅರ್ಥೈಸುತ್ತದೆ. ಮಾನವರ ವಿಚಾರದಲ್ಲಿ ಸಂಸ್ಕರಣಾ ವ್ಯವಸ್ಥೆಯು ನರಮಂಡಲ ಅಥವಾ ಮಿದುಳೇ ಆಗಿದೆ. ಮೂರನೆಯದು; ಒತ್ತಡದ ಪ್ರತಿಕ್ರಿಯೆಯಾಗಿದ್ದು ಇದು ಗ್ರಹಿಸಿದ ಬೆದರಿಕೆಗೆ ಪ್ರತಿಯಾಗಿ ಮಾಡಿದ ವಿವಿಧ ಶಾರೀರಿಕ ಮತ್ತು ವ್ಯಕ್ತಿಯ ನಡವಳಿಕೆಯ ಹೊಂದಾಣಿಕೆಗಳನ್ನು ಒಳಗೊಂಡಿರುತ್ತದೆ. ಒತ್ತಡದ ವ್ಯಾಖ್ಯಾನವು ಅದಕ್ಕೆ ಅರ್ಥವನ್ನು ನಿಗದಿಪಡಿಸುವ ಸಂಸ್ಕರಣಾ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ ಎಂದು ನಾವು ತಕ್ಷಣವೇ ಭಾವಿಸುತ್ತೇವೆ. ಉದಾಹರಣೆಗೆ; ಭೂಕಂಪದ ಆಘಾತವು ಬ್ಯಾಕ್ಟೀರಿಯಾಗಳನ್ನು ಹೊರತುಪಡಿಸಿ ಇತರೆಲ್ಲಾ ಜೀವಿಗಳಿಗೆ ನೇರ ಬೆದರಿಕೆಯಾಗಿರುತ್ತದೆ. ಇದ್ದ ಉದ್ಯೋಗವನ್ನು ಕಳೆದುಕೊಳ್ಳುವ ಆಘಾತವು ಆಕರ್ಷಕ ವೇತನವಿರುವವರಿಗಿಂತ ಹೆಚ್ಚಾಗಿ ತನ್ನ ಸಂಬಳದಲ್ಲೇ ಕುಟುಂಬವನ್ನು ನಿಭಾಯಿಸುವ ಮಂದಿಗೆ ತೀವ್ರ ಆಘಾತ ಉಂಟುಮಾಡುತ್ತದೆ. ಒತ್ತಡದ ಗ್ರಹಿಕೆಯು ವ್ಯಕ್ತಿತ್ವ ಹಾಗೂ ವ್ಯಕ್ತಿಯ ಆ ಸಂದರ್ಭದ ಮಾನಸಿಕ ಸ್ಥಿತಿಯನ್ನೂ ಸಮಾನವಾಗಿ ಅವಲಂಬಿಸಿದೆ. ಉದ್ಯೋಗದ ನಷ್ಟ ಒಬ್ಬರಿಗೆ ಆಘಾತವಾಗಿ ಪರಿಗಣಿಸಿದರೆ ಇನ್ನೊಬ್ಬರು ಅದನ್ನು ಅವಕಾಶವನ್ನಾಗಿಯೂ ಪರಿಗಣಿಸಬಹುದು.ಒತ್ತಡ' ಮತ್ತು `ಒತ್ತಡದ ಪ್ರತಿಕ್ರಿಯೆ'ಯ ನಡುವೆ ಯಾವುದೇ ಏಕರೂಪದ ಮತ್ತು ಸಾರ್ವತ್ರಿಕ ಸಂಬಂಧವಿಲ್ಲ ಮತ್ತು ಒತ್ತಡದ ತೀವ್ರತೆ ಮತ್ತು ಅದರ ದೀರ್ಘಕಾಲೀನ ಪರಿಣಾಮಗಳು ಪ್ರತಿಯೊಬ್ಬ ವ್ಯಕ್ತಿಮಟ್ಟದಲ್ಲೂ ತನ್ನದೇ ಆದ ವಿಶಿಷ್ಟ ಅಂಶಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಒತ್ತಡವೂ ವರ್ತಮಾನದಲ್ಲಿ ಘಟಿಸುತ್ತದೆಯಾದರೂ ಅದರ ಕಂಪನಗಳು ಭೂತಕಾಲದ ವಿದ್ಯಮಾನಗಳಲ್ಲಿ ಅಡಗಿರುತ್ತವೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಒತ್ತಡವನ್ನು ವ್ಯಾಖ್ಯಾನಿಸುವುದು ವೈಯಕ್ತಿಕ ಇತ್ಯರ್ಥ ಮತ್ತು ಇನ್ನೂ ಹೆಚ್ಚಾಗಿ ವೈಯಕ್ತಿಕ ಇತಿಹಾಸದ ವಿಷಯವಾಗಿದೆ.
ಒತ್ತಡವು ಪ್ರಧಾನವಾಗಿ ದೇಹದಲ್ಲಿನ ಮೂರು ವಿಧದ ಅಂಗ/ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ: ಹಾರ್ಮೋನ್ ವ್ಯವಸ್ಥೆ, ಮೂತ್ರಜನಕಾಂಗದ ಗ್ರಂಥಿಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆ. ಒತ್ತಡವು ಗುಲ್ಮ, ಥೈಮಸ್ ಮತ್ತು ದುಗ್ಧರಸ ಗ್ರಂಥಿಗಳ ಮೇಲೆ ಹಾಗೂ ಕರುಳಿನ ಒಳಪದರದ ಮೇಲೆ ಹಾನಿ ಉಂಟುಮಾಡುತ್ತದೆ. ಒತ್ತಡದ ಪ್ರತಿಕ್ರಿಯೆಯ ಸಾಮಾನ್ಯ ರೂಪುರೇಷೆಯು ಮಿದುಳು ಮತ್ತು ನರವ್ಯೂಹ, ಪಿಟ್ಯುಟರಿ, ಮೂತ್ರಜನಕಾಂಗ, ಮೂತ್ರಪಿಂಡ, ರಕ್ತನಾಳಗಳು, ಥೈರಾಯ್ಡ್, ಯಕೃತ್ತು, ಬಿಳಿರಕ್ತಕಣಗಳನ್ನು ಒಳಗೊಳ್ಳುವುದು ಮಾತ್ರವಲ್ಲದೆ ಅವುಗಳ ನಡುವಿನ ಬಹುವಿಧದ ಸಂಬಂಧಗಳನ್ನೂ ಸಹ ಪ್ರಭಾವಿಸುತ್ತದೆ. ಈ ಹಿನ್ನೆಲೆಯಲ್ಲಿ ನಾವು ಮುಖ್ಯವಾಗಿ ತಿಳಿಯಬೇಕಾದುದು: ಒತ್ತಡದ ಪ್ರತಿಕ್ರಿಯೆಗಳನ್ನು ಆರಂಭದಲ್ಲಿಯೇ ಸರಿಯಾಗಿ ಗುರುತಿಸಿ ಆ ಬಗ್ಗೆ ಸಕಾರಾತ್ಮಕವಾಗಿ ಚಿಂತನೆ ನಡೆಸಿದಲ್ಲಿ ಒತ್ತಡವನ್ನೇ ನಮ್ಮ ಆಂತರಿಕ ಬದಲಾವಣೆಗಳಿಗೆ ದಿಕ್ಸೂಚಿಯನ್ನಾಗಿ ಮಾರ್ಪಡಿಸಿಕೊಳ್ಳಬಹುದು.