ಒತ್ತುವರಿ ತೆರವಿಗೆ ಖಡಕ್ ಅಧಿಕಾರಿ ಬೇಕು
ನಾವು ಜೀವನ ಪರ್ಯಂತ ಪ್ರಾಮಾಣಿಕವಾಗಿ ದುಡಿದರೂ ತಲೆ ಮೇಲೊಂದು ಸೂರು ಕಟ್ಟಿಕೊಳ್ಳಲೂ ಹೆಣಗಾಡಬೇಕಾಗುತ್ತದೆ. ಆದರೆ ರಾಜಕೀಯ ಕ್ಷೇತ್ರ ಪ್ರವೇಶ ಮಾಡುವುದಕ್ಕೆ ಮೊದಲು ಸಾಮಾನ್ಯರಲ್ಲೇ ಸಾಮಾನ್ಯರಂತಿದ್ದ ರಾಜಕಾರಣಿಗಳು ಕೇವಲ ೫-೧೦ ವರ್ಷಗಳಲ್ಲೇ ಭವ್ಯ ಕಟ್ಟಡ, ಐಷಾರಾಮಿ ಕಾರು, ತೋಟ, ಜಮೀನು ಮಾಡಿಕೊಂಡು ಶ್ರೀಮಂತ ವ್ಯಕ್ತಿಗಳಾಗುತ್ತಾರೆ. ಕಾನೂನಿನ ಅಂಜಿಕೆ ಇಲ್ಲದೆ ಸಾರ್ವಜನಿಕ ಆಸ್ತಿ-ಪಾಸ್ತಿ ಕಬಳಿಸುತ್ತಾರೆ. ಅಕ್ರಮ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದು ಸಾಮಾನ್ಯ ಜನತೆ ಆಡಿಕೊಳ್ಳುವ ಮಾತುಗಳು. ಆದರೆ ಆಯಾ ಭಾಗದಲ್ಲಿರುವ ಇಂತಹ ರಾಜಕಾರಣಿಗಳ ಬಗ್ಗೆ ಎಲ್ಲವೂ ಗೊತ್ತಿದ್ದರೂ ಇದೇ ಜನತೆ ಚುನಾವಣೆ ಬಂದಾಗ ಅಂಥವರನ್ನೇ ಗೆಲ್ಲಿಸುತ್ತಾರೆ. ಹೀಗಾಗಿ ಕಾನೂನಿನ ಒಳದಾರಿಗಳನ್ನು ಬಳಸಿಕೊಳ್ಳುವ ಬಲಾಢ್ಯರ ಅಕ್ರಮ ಗಳಿಕೆ ನಿರಂತರವಾಗಿ ಮುಂದುವರಿದಿರುತ್ತದೆ.
ಅರಣ್ಯ, ಗುಡ್ಡ-ಬೆಟ್ಟ, ಕೆರೆ, ರಸ್ತೆ, ಉದ್ಯಾನವನ, ರಾಜಕಾಲುವೆ, ಕಂಸರವೆನ್ಸಿ, ಗೋಮಾಳ ಸೇರಿದಂತೆ ಸರ್ಕಾರದ ಜಾಗಗಳನ್ನು ಒತ್ತುವರಿ ಮಾಡಿಕೊಂಡು ತೋಟ, ಕಟ್ಟಡ, ಬಹುಮಹಡಿ ಕಟ್ಟಡ, ವಸತಿ ಸಮುಚ್ಛಯ, ಕೈಗಾರಿಕೆ, ರೆಸಾರ್ಟ್, ಹೋಟೆಲ್ ಮತ್ತಿತರ ವಾಣಿಜ್ಯ ಚಟುವಟಕೆಗಳಿಗೆ ಬಳಸಿಕೊಳ್ಳುತ್ತಿರುವ ರಾಜಕಾರಣಿಗಳು, ಅವರೊಟ್ಟಿಗೆ ಇರುವ ಬಲಾಢ್ಯ ಬೆಂಬಲಿಗ ಭೂನುಂಗಣ್ಣ’ರುಗಳಿಂದ ಸರ್ಕಾರದ ಆಸ್ತಿ-ಪಾಸ್ತಿ ಉಳಿಸಬೇಕಿದೆ. ಇವರೆಲ್ಲ ವೇದಿಕೆ ಮೇಲೆ ಸತ್ಯ ಹರಿಶ್ಚಂದ್ರರಂತೆ ಭಾಷಣ ಬಿಗಿಯುವ ಜೊತೆಗೆ ಒತ್ತುವರಿ ತೆರವು ಮಾಡುವ ಮಾತನಾಡುತ್ತಾರೆ. ತಾವೇನೂ ಅಂತಹ ಕೃತ್ಯ ಮಾಡೇ ಎಲ್ಲ ಎಂಬಂತೆ ವರ್ತಿಸುತ್ತಾರೆ. ನಮ್ಮ ಸಂವಿಧಾನ, ಕಾನೂನು-ಕಾಯ್ದೆಗಳನ್ನು ಇಂಥವರು ಹೇಗೆ ಬೇಕೋ ಹಾಗೆ ಬಳಸಿಕೊಂಡು ತಾವು ಏನೇ ಮಾಡಿದರೂ ಸರಿಯೇ ಎಂಬ ದುರಹಂಕಾರ ಮೆರೆಯುತ್ತಿರುವುದು ವ್ಯವಸ್ಥೆಯ ವೈಫಲ್ಯತೆಯನ್ನು ಬಿಂಬಿಸುತ್ತಿದೆ. ನಮಗೆ ಬೇಕಿದೆ ಖಡಕ್ ಅಧಿಕಾರಿಗಳು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ಯಥೇಚ್ಛವಾಗಿ ನಡೆದಿದೆ. ರಾಜಕಾರಣಿಗಳು ಮತ್ತವರ ಬೆಂಬಲಿಗರು ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡು ಕಾಫಿತೋಟ, ಅಡಿಕೆ ತೋಟಗಳನ್ನಾಗಿ ನಿರ್ಮಿಸಿದ್ದಾರೆ. ಸುಪ್ರೀಂ ಆದೇಶದಂತೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಮುಂದಾದಾಗ, ೩ ಎಕರೆಗಿಂತ ಕಡಿಮೆ ಒತ್ತುವರಿ ಮಾಡಿದವರನ್ನು ತೆರವು ಕಾರ್ಯಾಚರಣೆಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದರೂ ಕೂಡ ಸಣ್ಣ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಹುಯಿಲೆಬ್ಬಿಸುವ ಇಂತಹ ರಾಜಕಾರಣಿಗಳು ಅಧಿಕಾರಿಗಳ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದೂ ಉಂಟು. ಇನ್ನು ಅಲ್ಲಲ್ಲಿ ಕೆಲವು ದಕ್ಷ ಮತ್ತು ದಿಟ್ಟ ಅಧಿಕಾರಿಗಳು ಅರಣ್ಯ ಮತ್ತು ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಇತ್ತೀಚೆಗಷ್ಟೆ ಮಾಜಿ ಸಚಿವ, ಕಾಂಗ್ರೆಸ್ಸಿನ ಹಿರಿಯ ನಾಯಕ ಸಗೀರ್ ಅಹಮದ್ ಅವರಿಗೆ ಒತ್ತುವರಿಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ಕಂದಾಯ ಇಲಾಖೆ ಅಧಿಕಾರಿಗಳು ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿ ಇರುವ ಸಗೀರ್ ಅಹಮದ್ ಅವರ ಮನೆಗೆ ಈ ಸಂಬಂಧ ನೋಟಿಸ್ ಕೂಡ ಅಂಟಿಸಿ ಬಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಅತ್ತಿಗುಂಡಿ ಬಳಿ ೩೧ ಎಕರೆ ಕಂದಾಯ ಭೂಮಿ ಒತ್ತುವರಿ ಮಾಡಿರುವ ಆರೋಪ ಸಗೀರ್ ಅಹಮದ್ ಅವರ ವಿರುದ್ಧ ಕೇಳಿ ಬಂದಿದೆ. ಅವರ ಕುಟುಂಬದಿಂದ ೩೧ ಎಕರೆ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿ ಕಾಫಿ ತೋಟವನ್ನಾಗಿ ಪರಿವರ್ತನೆ ಮಾಡಲಾಗಿದೆ. ಕಂದಾಯ ಭೂಮಿ ಕಾಫಿ ತೋಟವಾದ ಬಳಿಕ ಫಾರಂ ನಂಬರ್ ೫೭ರ ಅಡಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆಗೆ ಒಳಪಟ್ಟಿತ್ತು. ವಾದ ಪ್ರತಿವಾದದ ನಂತರ ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಭೂಮಿಯನ್ನು ಕಂದಾಯ ಇಲಾಖೆ ವಶಕ್ಕೆ ಪಡೆಯುವಂತೆ ಆದೇಶ ಹೊರಡಿಸಿದ್ದಾರೆ. ಕೆರೆ ಒತ್ತುವರಿ ತೆರವಿಗೂ ಬೇಕು ಕಠಿಣ ಕ್ರಮ ಚಿಕ್ಕಮಗಳೂರು ನಗರದ ಕೋಟೆ ಕೆರೆ ಒತ್ತುವರಿ ತೆರವುಗೊಳಿಸುವಂತೆ ಅಲ್ಲಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕೆಳಗಿನ ಹಂತದ ಅಧಿಕಾರಿಗಳು ಅಸಡ್ಡೆ ತೋರಿದ್ದರು. ಸ್ವತಃ ಕಟಾರಿಯ ಅವರು ಕೆರೆಗೆ ಭೇಟಿ ನೀಡಿದಾಗ ಒತ್ತುವರಿ ಆಗಿರುವುದು ಕಂಡುಬಂದಿತ್ತು. ಕೂಡಲೇ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕು ಎಂದು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ತೆರವು ಕಾರ್ಯಾಚರಣೆ ಮಾಡಿರಲಿಲ್ಲ. ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿದ್ದ ಅವರು,
ನಾನಿಲ್ಲಿ ಬರುವುದು ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಲು, ಇಲ್ಲಿಗೆ ಬಂದು ಗಂಟೆಗಟ್ಟಲೆ ಕುಳಿತು ಮಾತನಾಡಿ, ಕಾಫಿ ಟೀ ಕುಡಿದು ಹೋಗಲು ಅಲ್ಲ. ಆ ರೀತಿ ಮಾಡಿದರೆ ಜನ ನಮ್ಮಗಳ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ ಅಲ್ವಾ, ಈ ರೀತಿಯ ಉದಾಸೀನತೆ ಸಹಿಸಿಕೊಳ್ಳಲಾಗದು’ ಎಂದು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದರು. ತರೀಕೆರೆ ತಾಲೂಕೊಂದರಲ್ಲೇ ೨೨೪ ಕೆರೆಗಳ ಪೈಕಿ ೧೦೬ ಕೆರೆಗಳ ಒತ್ತುವರಿ ಆಗಿವೆ. ಕೆರೆ ತೆರವುಗೊಳಿಸುವಾಗ ಯಾರೇ ಫೋನ್ ಮಾಡಿದರೂ ಅದಕ್ಕೆ ಸ್ಪಂದಿಸಬೇಡಿ, ನಿಮ್ಮ ಕೆಲಸ ಮುಂದುವರೆಸಿ, ಇಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿ ಯಾವುದೂ ಇರುವುದಿಲ್ಲ ಎಂದು ಅಧಿಕಾರಿಗಳನ್ನು ಹುರುದುಂಬಿಸಿದ್ದಾರೆ. ನಮಗಿಂದು ಇಂತಹ ಖಡಕ್ ಅಧಿಕಾರಿಗಳ ಅಗತ್ಯ ಇದೆ. ಸದಾ ರಾಜಕಾರಣಿಗಳ ಬಾಲಂಗೋಸಿಗಳಂತಿರುವ ಅಧಿಕಾರಿಗಳಿಂದ ಒತ್ತುವರಿ ಆಗಿರುವ ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಖಡಕ್ಕಾಗಿ ದಕ್ಷತೆಯಿಂದ ಕಾನೂನು ರೀತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ಅಗತ್ಯವಿದ್ದು, ಅಂತಹ ಅಧಿಕಾರಿಗಳಿಗೆ ಜನತೆ ಹುರುದುಂಬಿಸಿ ಕೆಲಸ ಮಾಡಿಸಬೇಕಿದೆ.
ಏಷ್ಯಾದ ಅತಿ ದೊಡ್ಡ ಕೆರೆಗೂ ಬಿಟ್ಟಿಲ್ಲ ಒತ್ತುವರ ಕಾಟ
ಏಷ್ಯಾದಲ್ಲಿಯೇ ೨ನೇ ಅತಿದೊಡ್ಡ ಕೆರೆಯಾಗಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಐತಿಹಾಸಿಕ ಸೂಳೆಕೆರೆ ಸುಮಾರು ೧೫೦೦ ಎಕರೆಯಷ್ಟು ಒತ್ತುವರಿ ಆಗಿದೆ. ೪೦ ಕಿ.ಮೀ ಸುತ್ತಳತೆ ಹೊಂದಿರುವ ಈ ಕೆರೆಯ ಸರ್ವೆ ಕಾರ್ಯಕ್ಕಾಗಿ ಸರ್ಕಾರದಿಂದ ೧೧ ಲಕ್ಷ ಬಿಡುಗಡೆಯಾಗಿತ್ತು. ಕರ್ನಾಟಕ ನೀರಾವರಿ ನಿಗಮ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿತ್ತು. ಜಿಲ್ಲಾಧಿಕಾರಿ ಅವರು ವರದಿ ಸರ್ಟಿಫೈ ಮಾಡಿ ಕಳುಹಿಸುವಂತೆ ತಾಲ್ಲೂಕು ಅಧಿಕಾರಿಗೆ ಕಳುಹಿಸಿದ್ದಾರೆ. ಆದರೆ, ಕಳೆದ ಮೂರು ವರ್ಷಗಳಿಂದ ಅದು ಅಲ್ಲೇ ಉಳಿದಿದೆ. ಒತ್ತುವರಿ ತೆರವು ಮಾಡದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೂಳೆಕೆರೆ ಉಳಿಸಿ ಹೋರಾಟ ಸಮಿತಿ ಲೋಕಾಯುಕ್ತದಲ್ಲಿ ದೂರು ಕೂಡ ದಾಖಲಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿ ೪೫೦ಕ್ಕೂ ಹೆಚ್ಚು ಕೆರೆಗಳಿದ್ದು, ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಗಿಡಗಂಟಿಗಳು ಬೆಳೆದು ಹೂಳು ತುಂಬಿವೆ. ಕೆರೆಗಳ ಸುತ್ತಲಿನ ೩೦ ಮೀಟರ್ ಪ್ರದೇಶವನ್ನು ಬಫರ್‌ಝೋನ್ ಆಗಿಸುವಂತೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ಸೂಚಿಸಿದೆ. ಆದರೆ, ಇದೂ ಸೇರಿ ಕೆರೆಗಳ ಸಂರಕ್ಷಣೆ ಕುರಿತ ಯಾವುದೇ ನಿಯಮಗಳೂ ಪಾಲನೆಯಾಗದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಧಿಕಾರಿಗಳ ಬೇಜವಾಬ್ದಾರಿ ಅಕ್ರಮ ಒತ್ತುವರಿದಾರರಿಗೆ ವರದಾನವಾಗಿದೆ. ಅಧಿಕಾರಿಗಳ ಕೃಪಾಕಟಾಕ್ಷದಿಂದ ಕೆಲವು ಕಡೆ ಬಲಾಢ್ಯರು ಇಡೀ ಕೆರೆಗಳನ್ನೇ ಆಪೋಷನ ಮಾಡಿಕೊಂಡು, ಬೃಹತ್ ಕಟ್ಟಡ, ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡಿರುವ ನಿದರ್ಶನಗಳೂ ಇವೆ. ದಾವಣಗೆರೆ ಜಿಲ್ಲಾಡಳಿತ ಭವನಕ್ಕೆ ಕೂಗಳತೆಯಲ್ಲಿರುವ ಬಾತಿ ಕೆರೆಯನ್ನು ಬರೋಬ್ಬರಿ ನಾಲ್ಕು ಎಕರೆ ಒತ್ತುವರಿ ಮಾಡಿಕೊಂಡು ಖಾಸಗಿ ವಸತಿ ಬಡಾವಣೆ ನಿರ್ಮಿಸಲಾಗಿದೆ. ಅಚ್ಚರಿ ಎಂದರೆ ಈ ಬಡಾವಣೆಗೆ ಜಿಲ್ಲಾಧಿಕಾರಿ ಕಚೇರಿಯಿಂದಲೇ ಭೂಪರಿವರ್ತನೆ ಮಾಡಿಸಿಕೊಳ್ಳಲಾಗಿದೆ. ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಔಟ್‌ವಿನ್ಯಾಸ ನಕ್ಷೆಗೆ ಅನುಮೋದನೆ ಕೂಡ ಸಿಕ್ಕಿದೆ. ನಂತರ ತಪ್ಪಿನ ಅರಿವಾಗಿ ಅಲಿನೇಷನ್ ರದ್ದುಪಡಿಸುವಂತೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರಾಜಕಾರಣಿಗಳ ಕೈಗೊಂಬೆಯಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅತಿ ಹೆಚ್ಚು ಕೆರೆಗಳಿವೆ ಎಂಬುದು ದಾಖಲೆಯಲ್ಲಿದೆ. ಶಿವಮೊಗ್ಗ ಮತ್ತು ಭದ್ರಾವತಿ ನಡುವೆ ಸುಮಾರು ೧೭ ಕೆರೆಗಳಿದ್ದವು, ಈಗ ಒಂದೆರೆಡು ಮಾತ್ರ ಕಣ್ಣಿಗೆ ಕಾಣುತ್ತಿವೆ, ಉಳಿದವೆಲ್ಲವೂ ಕಬಳಿಕೆ ಆಗಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ಕೆರೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕನಿಷ್ಟ ಪಕ್ಷ ಕಣ್ಣಿಗೆ ಕಾಣುವ ಕೆರೆಗಳನ್ನಾದರೂ ಒತ್ತುವರಿ ತೆರವುಗೊಳಿಸಿ, ಉಳಿಸಿ ಅಭಿವೃದ್ಧಿಪಡಿಸಬೇಕಾದ ಜವಾಬ್ಧಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಕೃಪಾಪೋಷದಿಂದ ತಮಗೆ ಬೇಕಾದ ಜಾಗಕ್ಕೆ ಬಂದಿರುತ್ತಾರೆ. ಒತ್ತುವರಿದಾರರಲ್ಲಿ ಬಹುತೇಕರು ಜನಪ್ರತಿನಿಧಿಗಳ ಬೆಂಬಲಿಗರಿದ್ದು, ಅಧಿಕಾರಿಗಳು ತೆರವಿಗೆ ಮುಂದಾದಾಗ ಒತ್ತಡ ಬಂದಾಕ್ಷಣ ಸುಮ್ಮನಾಗುತ್ತಾರೆ. ಹಾಗಾಗಿ ಬಹುತೇಕ ಕೆರೆಗಳ ಸಂರಕ್ಷಣೆ ಕಾರ್ಯ ನನೆಗುದಿಗೆ ಬಿದ್ದಿದೆ.