ಒಬ್ಬರಿಗೊಬ್ಬರು ಕಾಣಲು ಬರಿ ಕಣ್ಣು ಸಾಲದು
ಸಮಾಜಕ್ಕೆ ಜೈವಿಕ ಅಸ್ತಿತ್ವವಿರುವುದರಿಂದ ಮನುಷ್ಯ ಮತ್ತು ಸಮಾಜದ ಸಂಬಂಧವು ಇಂದ್ರಿಯ ಮತ್ತು ಶರೀರದ ಹಾಗೆ; ಎಲೆ ಮತ್ತು ವೃಕ್ಷದ ಸಂಬಂಧದಂತೆಯೇ ಇರುವುದು. ಪ್ರತಿಯೊಂದು ಇಂದ್ರಿಯವೂ ತನ್ನ ಶರೀರಕ್ಕಾಗಿ ಯಾವುದಾದರೊಂದು ಕೆಲಸಮಾಡಲೇಬೇಕು. ಹಾಗಿದ್ದಲ್ಲಿ ಮಾತ್ರವೇ ಶರೀರ ಆರೋಗ್ಯದಿಂದಿರುವುದು. ಎಲೆ, ಕಾಂಡ ಇತ್ಯಾದಿಗಳು ವೃಕ್ಷಕ್ಕಾಗಿ ಕೆಲಸಮಾಡುತ್ತಿರುವವರೆಗೂ ಇಡೀ ವೃಕ್ಷ ಹಸಿರಾಗಿರುವುದು. ಹೀಗೆಯೇ ಮನುಷ್ಯನೂ ತನ್ನ ಸಮಾಜದ ಸಲುವಾಗಿ ಕರ್ತವ್ಯಪಾಲನೆ ಮಾಡುತ್ತಿರುವವರೆಗೂ ಆ ಸಮಾಜದ ಶ್ರೇಯಸ್ಸು, ಅಭ್ಯುದಯ ಸಾಧ್ಯ.
ಸಂಸ್ಕಾರ (ಮಾನಸಿಕ ಪ್ರಭಾವಗಳು) ಮತ್ತು ಸನ್ನಿಕರ್ಷ (ಪರಿಸರ, ವಾತಾವರಣ ನಿಷ್ಕರ್ಷೆ)ಗಳಿಗೆ ತಕ್ಕಂತೆ ಮನುಷ್ಯನ ಮನೋಗತ ಪ್ರವೃತ್ತಿ ಇರುವುದು. ಪ್ರವೃತ್ತಿಗೆ ತಕ್ಕಂತೆ ಅಭಿರುಚಿ, ಅಭಿರುಚಿಗೆ ತಕ್ಕಂತೆ ಅಭಿಪ್ರಾಯ ಇರುವುದು. ಆದರೆ ಎಲ್ಲರ ಸಂಸ್ಕಾರ ಮತ್ತು ಸನ್ನಿಕರ್ಷ ಒಂದೇ ಸಮನಾಗಿ ಇರುವುದಿಲ್ಲ. ಅದಕ್ಕಾಗಿಯೇ ಭಿನ್ನಾಭಿಪ್ರಾಯಗಳು. ಸಭ್ಯಸಮಾಜದ ಎಲ್ಲಾ ವ್ಯಕ್ತಿಗಳಲ್ಲಿ ಒಮ್ಮತಾಭಿಪ್ರಾಯ ಅಸ್ವಾಭಾವಿಕ. “ಪರಸ್ಪರಂ ಭಾವಯನ್ತಃ” - ಇದು ಲೋಕಜೀವನ ಸೂತ್ರ. ಅದರ ಒಂದು ಪ್ರಾಥಮಿಕ ರೂಪವೇ ಕೌಟುಂಬಿಕ ಬಾಂಧವ್ಯ. ಗಂಡ ತನ್ನ ಹೆಂಡತಿಯ ಸುಖಕ್ಕಾಗಿ ಒಂದಿಷ್ಟು ತ್ಯಾಗಮಾಡಬೇಕು; ಹೆಂಡತಿ ಗಂಡನ ಸುಖಕ್ಕಾಗಿ ಒಂದಿಷ್ಟು ತ್ಯಾಗಮಾಡಬೇಕು. ಈ ಉಭಯತ್ಯಾಗವೇ ಯಜ್ಞ. ಈ ಯಜ್ಞವಾದಾಗಲೇ ದಾಂಪತ್ಯದ ಪ್ರೇಮಾಭಿವೃದ್ಧಿ. ಇಂತಹ ಯಜ್ಞವಿಲ್ಲದೆ ಕುಟುಂಬವಿಲ್ಲ, ಸ್ನೇಹವಿಲ್ಲ, ಸಮಾಜವಿಲ್ಲ. ಯಾವ ಮಾನವಬಾಂಧವ್ಯವೂ ಇಲ್ಲ. ಒಳ್ಳೆಯತನ ಎಲ್ಲರಲ್ಲಿಯೂ ಅಷ್ಟಿಷ್ಟು ಇರುತ್ತದೆ; ಆದರೆ ಅವಿತುಕೊಂಡಿರುತ್ತದೆ. ಒಳಗಡೆ ಎಲ್ಲೋ ಆಳದಲ್ಲಿರುತ್ತದೆ. ಅದನ್ನೆತ್ತಿ ಮೇಲಕ್ಕೆ ತರಬೇಕು. ಅದು ಶಾಸ್ತ್ರ ಸಂಪ್ರದಾಯಗಳ ಪ್ರಯತ್ನ.
ಕೃಷ್ಣರಾಜಸಾಗರದಲ್ಲಿರುವ ನೀರು ಮಹಾರಾಶಿ. ಅದರಿಂದ ನಮ್ಮೂರಿಗೆ ತಂದ ನಲ್ಲಿಯಲ್ಲಿ ಬರುವ ನೀರು ತೊಟ್ಟು ತೊಟ್ಟು ಮಾತ್ರದ್ದು. ಅಲ್ಲಿಂದ ಇಲ್ಲಿಗೆ ಬರುವ ಕೊಳವೆಗಳಲ್ಲಿ ಏನೋ ಕಶ್ಮಲ ಸೇರಿಕೊಂಡು ನೀರಿನ ಹರಿವಿಗೆ ಅಡ್ಡಿಯಾಗಿರುತ್ತದೆ. ಆದರೆ ನಮ್ಮ ನಲ್ಲಿಯ ಮುಖದಲ್ಲಿನ ನೀರಿನ ಹಿಂದೆ ಸಾಗರದ ನೀರಿದೆಯೆಂಬುದನ್ನು ನಾವು ನೆನಪಿಗೆ ತಂದುಕೊಳ್ಳಬೇಕು. ಆ ನೆನಪೇ ಧೈರ್ಯ! ಭಗವಂತನ ಸ್ಮರಣೆಯೇ ಆ ನೆನಪು. ದೇವರಲ್ಲಿ ವರಬೇಡುವಾಗ ಆ ವರದ ಸದುಪಯೋಗಕ್ಕೆ ಅವಶ್ಯವಾದ ಸಹನಶಕ್ತಿ ಸಂಯಮಶಕ್ತಿಗಳನ್ನೂ ಬೇಡಿಕೊಳ್ಳಬೇಕು. ಹೊಟ್ಟೆಯ ಶಕ್ತಿಯನ್ನು ಮರೆತುಬಿಟ್ಟು ಔತಣವೆಂದು ಉಂಡರೆ ಹೊಟ್ಟೆನೋವು ಸಿದ್ಧ. ಊಟ ಬೇಡುವುದರ ಜೊತೆಗೆ ಅಜೀರ್ಣಕ್ಕೆ ಔಷಧಿಯನ್ನೂ ಬೇಡಿಕೊಳ್ಳಬೇಕು. ಮಕ್ಕಳಾಗಬೇಕೆಂದು ಹರಕೆಹೊರುವಾಗ ಹಿಟ್ಟು ಬಟ್ಟೆಗಳಿಗೋಸ್ಕರ ಬೇಡುವುದನ್ನು ಮರೆಯಬಾರದು. ರಾಜ್ಯವನ್ನು ಬೇಡಿಕೊಂಡಾಗ ಸೈನ್ಯವನ್ನೂ, ಖಜಾನೆಯನ್ನೂ ಬೇಡಿಕೊಳ್ಳಬೇಕು. ಅದಕ್ಕೇ ಶ್ರೀಕೃಷ್ಣ ಅರ್ಜುನನಿಗೆ ವಿಶ್ವರೂಪ ದರ್ಶನಕ್ಕೆ ಮುಂಚೆ ಅವಶ್ಯವಾದ ನಯನತೇಜಸ್ಸನ್ನು ಅನುಗ್ರಹಿಸಿದ! ದೇವರೇ ಒಂದು ವಿಸ್ಮಯ, ಒಂದು ಪವಾಡ! ಅವನು ಅನೇಕರಿಗೆ 'ಅಸಂಭವ'. 'ಅ'ಕಾರ ವಾಚ್ಯದಿಂದ ಸಂಭವವಾಗುವ ವಿಶ್ವವೇ ಒಂದು 'ಅ-ಸಂಭವ' ಎಂಬ ವೈಯ್ಯಾಕರಣರ ಚಮತ್ಕಾರಿಕ ಅರ್ಥದಲ್ಲಲ್ಲ! ಇದನ್ನು ನಂಬಲೂ, ಮಾನವ 'ಸಂಭೂತಿ'ಯ ಹಳ್ಳದಿಂದ 'ವಿಭೂತಿ'ಯ ಎತ್ತರಕ್ಕೇರಿ ಕಂಡುದಾದರೆ, ಕಣ್ಣು ಕೋರೈಸುವ ಭವ್ಯ 'ಸಂಭವಾಮಿ ಯುಗೇ ಯುಗೇ' ಕಾಣುತ್ತದೆ ಎಂಬುದನ್ನು ಡಿ.ವಿ.ಜಿ.ಯವರು 'ಜೀವನಧರ್ಮಯೋಗ' ದಲ್ಲಿ ಬಹಳ ಸೊಗಸಾಗಿ ವಿವರಿಸಿದ್ದಾರೆ.
ನಾವು ಒಬ್ಬರಿಗೊಬ್ಬರು ಕಾಣಬರುವುದು ಹೇಗೆ? ಕಣ್ಣಿರುವುದರಿಂದ ಎಂದು ತಿಳಿದುಕೊಂಡಿದ್ದೇವೆ. ಬರಿಯ ಕಣ್ಣು ಸಾಲದು. ಅಮಾವಾಸ್ಯೆಯ ರಾತ್ರಿ ದೀಪವಿಲ್ಲದಾಗ ಒಬ್ಬರನ್ನೊಬ್ಬರು ಕಾಣಲಾಗುವುದಿಲ್ಲ. ನಮ್ಮ ಕಣ್ಣು ಕೆಲಸಮಾಡಬೇಕಾದರೆ ಅದಕ್ಕೆ ಸೂರ್ಯನೋ ದೀಪವೋ ನೋಟಕ್ಕೂ ನೋಡುವವನಿಗೂ ಸಮಾನನಿವೇದಕವಾಗಿರಬೇಕು. ಕಣ್ಣಿನಲ್ಲಿ ಮೂಡುವ ಹೊಳಪೂ; ಸೂರ್ಯನ ಅಥವಾ ದೀಪದ ಬೆಳಕೂ ಸೇರಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಮನಸ್ಸಿಗೆ ಆ ಪ್ರಭಾವ ಮಾಡಿಸಿಕೊಳ್ಳುವ ಯೋಗ್ಯತೆ ಎಂದರೆ ಸಂವೇದನಾಸಾಮರ್ಥ್ಯ ಎಲ್ಲಿಂದ ಬರುತ್ತದೆ? ಒಳಗಿರುವ ಪರಮಾತ್ಮನಿಂದ. ಆದ್ದರಿಂದಲೇ ಅಂತರಾತ್ಮನನ್ನು 'ಪರಂಜ್ಯೋತಿ' ಎನ್ನುವುದು. ಇದನ್ನೇ ಬೃಹದಾರಣ್ಯಕೋಪನಿಷತ್ತಿನಲ್ಲಿ "ಅತ್ರಾಯಂ ಪುರುಷಃ ಸ್ವಯಂಜ್ಯೋತಿರ್ಭವತಿ" ಎಂದಿದೆ.
ಸಮುದ್ರದಲ್ಲಿ ನೊರೆಯಿದೆ; ನೊರೆಯಲ್ಲಿ ಸಮುದ್ರವಿಲ್ಲ. ದೇಹಕ್ಕೆ ಕೇಶ-ನಖಗಳಿವೆ; ಕೇಶ-ನಖಗಳಲ್ಲಿ ದೇಹವಿಲ್ಲ. ಮನುಷ್ಯನಲ್ಲಿ ನಿದ್ದೆ-ಕನಸುಗಳಿವೆ; ನಿದ್ದೆ-ಕನಸುಗಳಲ್ಲಿ ಮನುಷ್ಯನಿಲ್ಲ. ಈ ಜಗತ್ತು ಒಮ್ಮೆ ವಾಸ್ತವದಂತೆಯೂ, ಮತ್ತೊಮ್ಮೆ ಮಿಥ್ಯೆಯಂತೆಯೂ, ಮಗದೊಮ್ಮೆ ಅಸ್ತಿತ್ವದಲ್ಲೇ ಇಲ್ಲದಿರುವಂತೆಯೂ ತೋರಿಸುವ ವಿವಿಧ ಪ್ರಜ್ಞಾಸ್ಥಿತಿಗಳಿವೆ. ಪ್ರಜ್ಞೆಯ ವಿವಿಧ ಸ್ಥಿತಿಗಳೆಂದರೆ; ಜಾಗೃತಾವಸ್ಥೆ (ಎಚ್ಚರದ ಸ್ಥಿತಿ), ಸ್ವಪ್ನಾವಸ್ಥೆ (ಕನಸಿನ ಸ್ಥಿತಿ), ಸುಪ್ತಾವಸ್ಥೆ ಅಥವಾ ಸುಷುಪ್ತಿ (ಕನಸಿಲ್ಲದ ಆಳವಾದ ನಿದ್ರಾಸ್ಥಿತಿ) ಮತ್ತು ತುರೀಯಾವಸ್ಥೆ (ಈ ಹಿಂದಿನ ಮೂರುಸ್ಥಿತಿಗಳ ಆಚೆಯಿರುವ ಅನುಭವಾತೀತ ಸ್ಥಿತಿ). ಮೊದಲ ಮೂರು ಸ್ಥಿತಿಗಳಲ್ಲಿ ಪ್ರಜ್ಞೆಯು ಕಾರ್ಯನಿರ್ವಹಿಸುತ್ತದೆ. ಒಬ್ಬನು ಎಚ್ಚರವಿದ್ದಾಗ ಸ್ವಪ್ನಾವಸ್ಥೆಯು ಸುಳ್ಳೆನಿಸುತ್ತದೆ, ಆ ಕನಸು ಬಿಟ್ಟರೆ ಬೇರಾವುದೂ ವಾಸ್ತವವಲ್ಲ. ಆ ಕನಸು ಅದೆಷ್ಟು ನಿಜವೆಂಬಂತೆ ಭಾಸವಾಗುತ್ತದೆಂದರೆ; ನಮ್ಮೆಲ್ಲಾ ಇಂದ್ರಿಯಗಳು ಕನಸಿನಲ್ಲಿ ನಡೆಯುತ್ತಿರುವುದನ್ನು ಗ್ರಹಿಸುತ್ತವೆ. ಅಷ್ಟೇ ಅಲ್ಲ, ಎಲ್ಲಾ ಭಾವನೆಗಳನ್ನೂ ನಾವು ಅಕ್ಷರಶಃ ಅನುಭವಿಸುತ್ತೇವೆ. ಸ್ವಪ್ನಾವಸ್ಥೆಯಲ್ಲಿ ಸೂಕ್ಷ್ಮ ಶರೀರದ ಇಂದ್ರಿಯಗಳು ಜಾಗೃತಾವಸ್ಥೆಯ ಸ್ಥೂಲಶರೀರದ ಪಂಚೇಂದ್ರಿಯಗಳ ಕಾರ್ಯವನ್ನು ನಿರ್ವಹಿಸುತ್ತವೆ. ಇನ್ನು ಕನಸಿಲ್ಲದ ಗಾಢನಿದ್ರಾವಸ್ಥೆಯಲ್ಲಿ ಎರಡೂ ಸ್ಥಿತಿಗಳನ್ನೂ ಪ್ರಜ್ಞೆಯು ಗ್ರಹಿಸುವುದಿಲ್ಲವಾದ್ದರಿಂದ ಒಂದು ರೀತಿಯಲ್ಲಿ ಸ್ವತಃ ಪ್ರಜ್ಞೆಯೆಂಬುದೇ ಅಸ್ತಿತ್ವದಲ್ಲಿ ಇಲ್ಲವೇನೋ ಎನಿಸಿಬಿಡುತ್ತದೆ. ಗಾಢನಿದ್ರೆಯಲ್ಲಿರುವಾಗ ಜಾಗೃತಾವಸ್ಥೆಯ ಮತ್ತು ಸ್ವಪ್ನಾವಸ್ಥೆಯ ಎಲ್ಲಾ ಅನುಭವಗಳೂ ಕಣ್ಮರೆಯಾದಂತೆ ತೋರುತ್ತದೆ. ಪ್ರಜ್ಞೆಯನ್ನು ಬಾಹ್ಯಪ್ರಪಂಚವಾಗಲೀ, ಆಂತರಿಕ ಕನಸಿನ ಪ್ರಪಂಚವಾಗಲೀ ಬಾಧಿಸುವುದಿಲ್ಲ. ಒಟ್ಟಿನಲ್ಲಿ ಆ ಸಂದರ್ಭದಲ್ಲಿ ಮನಸ್ಸು ಅತ್ಯಂತ ನೆಮ್ಮದಿ ಹಾಗೂ ಸಂತೋಷದ ಉತ್ತುಂಗವನ್ನು ತಲುಪಿರುತ್ತದೆ. ಕನಸು ಕಂಡವನಿಗೆ ಅವನು ಆಗ ಕಂಡ ವಸ್ತುಗಳು ನಿಜವಾಗಿ ಸೇರಿದುವಲ್ಲ. ಅವನಿಗೂ ಅವಕ್ಕೂ ಸಂಬಂಧವುಂಟಾದದ್ದು ಕೇವಲ ಸ್ವಪ್ನದಿಂದ. ಹಾಗೆಯೇ ಮನುಷ್ಯನಿಗೂ ಜಗತ್ತಿಗೂ ಸಂಬಂಧ ಉಂಟಾಗುವುದು ಮಾಯೆಯ ಮೂಲಕ. ಮಾಯೆಯನ್ನು ಬಿಟ್ಟರೆ ಆ ಸಂಬಂಧ ನಿಲ್ಲಲಾರದು. ಮಾಯೆ ಬಹುರೂಪವಾದ್ದರಿಂದ ಅದರ ಪ್ರಭಾವದಿಂದ ಜಗತ್ತು ಬಹುರೂಪಗಳಾಗಿ ಕಾಣಿಸಿಕೊಳ್ಳುತ್ತದೆ. ಮನುಷ್ಯನು ಅದರ ರುಚಿ-ಗುಣಗಳಲ್ಲಿ ಸಂತೋಷಿಸಿಕೊಂಡು 'ನಾನು' 'ನನ್ನದು' ಎಂಬ ಅಭಿಮಾನಗಳಿಂದ ಅದನ್ನು ಗ್ರಹಿಸುತ್ತಾನೆ.
ಮಾವಿನ ಮರದ ಬೆಳವಣಿಗೆ ನೆಲ, ನೀರು, ಉಷ್ಣ ಮುಂತಾದ ಪಂಚಮಹಾಭೂತಗಳ ಸಂಸರ್ಗದಿಂದ ಆದದ್ದು. ಆದರೂ ಮಾವಿನಹಣ್ಣನ್ನು ತಿನ್ನುವಾಗ ಅದರಲ್ಲಿ ಪೃಥ್ವಿಯನ್ನಾಗಲಿ, ತೇಜವನ್ನಾಗಲಿ ಗುರುತಿಸುವುದಿಲ್ಲ. ಹೀಗೆ ಎಲ್ಲ ಮರಗಿಡಗಳ ವಿಷಯದಲ್ಲೂ. ಆನೆಯ ಬೊಂಬೆಯಲ್ಲಿ ಹೊರನೋಟಕ್ಕೆ ಆನೆಯಿದೆ; ಒಳನೋಟಕ್ಕೆ ಆನೆಯಿಲ್ಲ; ಒಳನೋಟಕ್ಕೆ ಮಣ್ಣಿದೆ, ಹೊರನೋಟಕ್ಕೆ ಮಣ್ಣಿಲ್ಲ. ಒಂದು ದೃಷ್ಟಿಯಿಂದ ಉಂಟು; ಒಂದು ದೃಷ್ಟಿಯಿಂದ ಇಲ್ಲ!
ಅಸಂಭವಗಳ ಪರಂಪರೆಯೇ ನಡೆಯುತ್ತ ಬಂದಿದ್ದಾಗ ನಂಬದ ಮನವೂ ಸಂಶಯದ ಪ್ರಭಾವಲಯದಲ್ಲೇ ಈ ನಂಬಿಕೆಯನ್ನಿಟ್ಟು ಗೌರವಿಸಬೇಕು. ಜೀವನವೇ ಹಾಗಲ್ಲವೇ? ಹುಟ್ಟು-ಸಾವುಗಳೆಂಬ ನಿಶ್ಚಿತಾವಧಿಯ ಆಚೆ ಈಚೆ ಏನಿದೆ ಎಂಬುದು ಸಂಶಯಾತ್ಮಕವಾಗಿಯೇ ಕಾಣುವ ಪಾಮರನಿಗೆ ಆ ಅವಧಿಗಳ ನಡುವೆಯೂ ನಡೆಯುವ ಎಷ್ಟು ಘಟನೆಗಳಲ್ಲಿ ನಂಬಿಕೆ ಬಂದೀತು? ಪಶು-ಪಕ್ಷಿಗಳಿಗೆ ಇಲ್ಲದ 'ಮಾತು' ಮಾನವನಿಗೆ ಇರುವುದು ಪವಾಡ, 'ಅಸಂಭವ' ಎನಿಸುವುದಿಲ್ಲವೇ? ಪಶುಪ್ರಾಯರಿಗೆ ಕಾಣದ ಸೌಂದರ್ಯವೊಂದು ಜೀವನದಲ್ಲಿ, ಪ್ರಕೃತಿಯಲ್ಲಿ ಮಾನವರಿಗೆ ಕಾಣುವುದು 'ಅಸಂಭವ' ಎನಿಸಲಾರದೇ? ಒಬ್ಬನಿಗೆ ಎಲ್ಲವೂ ಅಸಂಭವ. ಇನ್ನೊಬ್ಬನಿಗೆ ಯಾವುದೂ ಸಂಭವ. ವಯಸ್ಸಾದ ದಶರಥನಿಗೆ ಪತ್ನಿಯರಲ್ಲಿ ಪಾಯಸದಿಂದ ಮಕ್ಕಳಾದುದು ಯಾವ 'ಸಂಭವ' ನಿಯಮವೋ, ಅದೇ ನಿಯಮ, ಅಲ್ಲಿ ದೇವಕಿಗೆ ಸ್ತ್ರೀ-ಪುರುಷ ಸಂಯೋಗವಿಲ್ಲದಂತೆ ಒಂದು ಗರ್ಭ ದಯಪಾಲಿಸಿದ್ದಂತೆ ಇಲ್ಲಿ ಯಶೋದೆಗೂ ಒಂದನ್ನು ದಯಪಾಲಿಸಿತ್ತು!