ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಒಲಿಂಪಿಕ್ಸ್ ತತ್ವ ಮನುಜಪಥದ ಸತ್ವ

02:32 AM Aug 14, 2024 IST | Samyukta Karnataka

ಒಲಿಂಪಿಕ್ಸ್ ಕ್ರೀಡೆ ಭಾರತದಂತೆ ಪುರಾಣ ಹಾಗೂ ಪುಣ್ಯಪುರುಷರ ಆಚಾರ ವಿಚಾರಗಳನ್ನು ನಂಬುವ ಗ್ರೀಸ್ ದೇಶದ ಕೊಡುಗೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಜಗತ್ತಿನ ಯಾವುದಾದರೂ ಒಂದು ದೇಶದಲ್ಲಿ ನಡೆಯುವ ಈ ಕ್ರೀಡಾ ಕೂಟದ ಮಹತ್ವವಿರುವುದು ಕ್ರೀಡೆ ಹಾಗೂ ಕ್ರೀಡಾ ಪಟುಗಳ ಔನ್ನತ್ಯದ ಪ್ರದರ್ಶನಕ್ಕೆ ವೇದಿಕೆಯಾಗಿ. ಆದರೆ, ಇದಕ್ಕಿಂತಲೂ ಮುಖ್ಯವಾಗುವುದು ಇಡೀ ಜಗತ್ತಿಗೆ ಭ್ರಾತೃ ಸಂದೇಶವನ್ನು ರವಾನಿಸುವ ಮೂಲಕ ವಿಶ್ವಶಾಂತಿಯ ನಗಾರಿಯನ್ನು ಬಾರಿಸುವುದು. ಆಟಕ್ಕೂ ಶಾಂತಿಗೂ ಯಾವ ಬಾದರಾಯಣ ಸಂಬಂಧ ಎಂದು ಕೇಳುವವರೂ ಇರಬಹುದು. ಆದರೆ, ಪರಸ್ಪರ ವಿಶ್ವಾಸ ಹಾಗೂ ಸಂಬಂಧಗಳಿಲ್ಲದ ಆಟಗಳೇ ಬಹುಶಃ ಎಲ್ಲೂ ಇರಲಾರವು. ಏಕೆಂದರೆ, ಆಟದಲ್ಲಿ ಸ್ಪರ್ಧಿಗಳು ಹಾಗೂ ಪ್ರತಿಸ್ಪರ್ಧಿಗಳು ಇರುತ್ತಾರೆಯೇ ವಿನಃ ವೈರಿಗಳು ಅಥವಾ ವೈರಿ ಪಡೆ ಎಂಬುದು ಇರುವುದಿಲ್ಲ. ಇಂತಹ ಮಹಾನ್ ಸಂದೇಶ ಹೊತ್ತು ತರುವ ಒಲಿಂಪಿಕ್ಸ್ ಕ್ರೀಡಾ ಕೂಟ ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್‌ನಲ್ಲಿ ವೈಭವೋಪೇತದಿಂದ ನಡೆದು ಸಂಪನ್ನವಾಗಿರುವುದು ಒಪ್ಪುವ ಮಾತೆ. ಆದರೆ, ಭಾರತದ ಮಟ್ಟಿಗೆ ಒಪ್ಪದಿರುವ ಇನ್ನೊಂದು ಮಾತು ಎಂದರೆ ಕೈಗೆ ಬಂದ ತುತ್ತು ಬಾಯಿಗೆ ತಲುಪಲಿಲ್ಲವಲ್ಲ ಎಂಬಂತೆ ವಿನೀಶ್ ಪೋಗಟ್‌ಗೆ ಕೇವಲ ೧೦೦ ಗ್ರಾಂ ತೂಕದ ವ್ಯತ್ಯಾಸದಿಂದ ಪದಕ ವಂಚಿತವಾಗಿರುವುದು. ಇಂತಹ ಬೆಳವಣಿಗೆಗೆ ಯಾರೊಬ್ಬರೂ ನೇರವಾಗಿ ಕಾರಣರಲ್ಲದಿದ್ದರೂ ಬಹುಶಃ ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿರುವ ಹಾಗೂ ಆಡಳಿತದಲ್ಲಿ ಭಾಗಿಯಾಗಿರುವ ಎಲ್ಲರೂ ಕೂಡಾ ಒಂದಿಲ್ಲೊಂದು ರೀತಿಯಲ್ಲಿ ಸಮಾನ ಆರೋಪಿಗಳೇ. ಏಕೆಂದರೆ, ಇದೊಂದು ಪರಿಸ್ಥಿತಿಯ ಪಿತೂರಿ.
ಒಲಿಂಪಿಕ್ಸ್ ಕ್ರೀಡಾಕೂಟ ಸಂಘಟಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇಡೀ ಜಗತ್ತಿನ ಬಹುತೇಕ ಆಟಗಳಿಗೆ ಈ ಕೂಟದಲ್ಲಿ ಪ್ರಾಧಾನ್ಯತೆ ಸಿಗಬೇಕು. ಈ ಎಲ್ಲ ಕ್ರೀಡೆಗಳಿಗೂ ಮೈದಾನ ಹಾಗೂ ತರಬೇತುದಾರರು ಮತ್ತು ತರಬೇತಿಗೆ ಸ್ಥಳ ಹಾಗೂ ಪೂರಕ ಸೌಲಭ್ಯಗಳನ್ನು ಒದಗಿಸುವುದು ಸಾಮಾನ್ಯದ ಸಂಗತಿಯಲ್ಲ. ಇದರ ಜೊತೆಗೆ ಎಲ್ಲ ದೇಶಗಳಿಂದ ಆಗಮಿಸುವ ಆಟಗಾರರು ಹಾಗೂ ಅಧಿಕಾರಿಗಳಿಗೆ ವಸತಿ ಹಾಗೂ ಊಟೋಪಚಾರದ ಸೌಲಭ್ಯವನ್ನು ಕಲ್ಪಿಸುವುದು ಕೂಡಾ ಕಲ್ಪನೆಗೂ ಮೀರಿದ ವಿಚಾರ. ಏಕೆಂದರೆ, ಒಂದೊಂದು ದೇಶದ ಅಭಿರುಚಿ ಬೇರೆ. ಎಲ್ಲರಿಗೂ ಹೊಂದುವ ರೀತಿಯಲ್ಲಿ ಸೌಲಭ್ಯಗಳನ್ನು ಸೃಷ್ಟಿಸಲು ಸಂಪನ್ಮೂಲ ಒದಗಿಸುವ ಔದಾರ್ಯ ಸರ್ಕಾರಗಳಿಗಿರಬೇಕು. ಹೀಗಾಗಿಯೇ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಸಂಘಟಿಸುವ ದೇಶದ ಬಗ್ಗೆ ಇಡೀ ಜಗತ್ತಿಗೆ ಗೌರವ. ಜಪಾನ್ ದೇಶ ಕಳೆದ ಬಾರಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ಭರ್ಜರಿಯಾಗಿ ನಡೆಸಿ ಜಗತ್ತಿನ ಮನಸೂರೆಗೊಂಡಿತ್ತು. ಪ್ಯಾರಿಸ್ ಒಲಿಂಪಿಕ್ಸ್ ಕೂಟವನ್ನು ಕೂಡಾ ರಂಗುರಂಗಾಗಿ ಸಂಘಟಿಸುವ ಮೂಲಕ ಫ್ರಾನ್ಸ್ ದೇಶ ವಿಶ್ವದ ಕಣ್ಮಣಿಯಾಗಿ ಹೋಗಿದೆ. ಮುಂದಿನ ಸರದಿ ಅಮೆರಿಕದ ದೇಶದ ಲಾಸ್ ಏಂಜಲೀಸ್‌ದು. ಎಲ್ಲವೂ ಅಂದುಕೊಂಡಂತೆಯೇ ಆಗುವುದಾದರೆ ೨೦೩೬ರ ಒಲಿಂಪಕ್ಸ್ ಕೂಟವನ್ನು ಸಂಘಟಿಸುವ ಅವಕಾಶ ಭಾರತಕ್ಕೆ ಒದಗೀತು. ಸುಪ್ರಸಿದ್ಧ ಉದ್ಯಮಿ ಕುಟುಂಬವಾದ ಅಂಬಾನಿ ಸಂಸ್ಥೆಯವರು ಈ ಕ್ರೀಡಾಕೂಟ ಸಂಘಟಿಸುವ ಆಸಕ್ತಿ ವಹಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಅಂದ ಹಾಗೆ ಈ ಕ್ರೀಡಾ ಕೂಟ ಸಂಘಟಿಸಲು ಆತಿಥ್ಯ ವಹಿಸುವ ಸೌಲಭ್ಯ ಸಿಗುವುದು ಕೂಡಾ ಕಷ್ಟವೇ. ಒಲಿಂಪಿಕ್ಸ್ ಆಡಳಿತ ಮಂಡಳಿ ಆತಿಥ್ಯ ಕೋರುವ ರಾಷ್ಟ್ರಗಳ ಸಾಮರ್ಥ್ಯವನ್ನು ತೂಗಿ ನೋಡಿ ನಿರ್ಧಾರ ಕೈಗೊಂಡರಷ್ಟೆ ಈ ಕೂಟ ನಡೆಸುವ ಅವಕಾಶ. ಹೀಗಾಗಿ ಭಾರತಕ್ಕೆ ಈ ಅವಕಾಶ ಪ್ರಾಪ್ತಿಯಾಗುವುದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಷ್ಟೆ.
ಭಾರತದಲ್ಲಿ ಈ ಕ್ರೀಡಾಕೂಟವನ್ನು ಏರ್ಪಡಿಸಲು ಆಟದ ಮೈದಾನಗಳ ನಿರ್ಮಾಣ ಈಗಿನಿಂದಲೇ ಆರಂಭವಾದರಷ್ಟೆ ಸಾಧ್ಯ. ಏಕೆಂದರೆ, ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಮೈದಾನಗಳೇ ನಿರ್ಧಾರಕ್ಕೆ ನಿರ್ಣಾಯಕ. ಉಳಿದ ಸೌಲಭ್ಯಗಳನ್ನು ಸೃಷ್ಟಿಸುವುದು ಕೂಡಾ ಅಷ್ಟೆ ಮುಖ್ಯ. ಹಿಂದೆ ಏಷಿಯಾ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟ ಸಂಘಟಿಸಿ ಹೊಂದಿರುವ ಅನುಭವವನ್ನು ಭಾರತ ಈಗ ಬಳಸಿಕೊಳ್ಳುವುದು ಸೂಕ್ತ. ಇದರ ಜೊತೆಗೆ ಕೂಟದಲ್ಲಿ ಭಾರತದ ಸ್ಪರ್ಧಿಗಳ ಪ್ರಮಾಣ ಹೆಚ್ಚಿರುವಂತೆ ನೋಡಿಕೊಳ್ಳುವುದು ಆದ್ಯತೆಯ ಮೇಲೆ ಆಗಬೇಕಾದ ಕೆಲಸ. ಕ್ರೀಡೆಯಲ್ಲಿ ನಿಸ್ಸೀಮರಾಗಲು ಸಾಕಷ್ಟು ಪರಿಶ್ರಮ, ಏಕಾಗ್ರತೆ ಹಾಗೂ ಬದ್ಧತೆ ಬಹಳ ಮುಖ್ಯ. ಇದರ ಜೊತೆಗೆ ಸರ್ಕಾರದ ಪ್ರೋತ್ಸಾಹವೂ ಕೂಡಾ ಆಟಗಾರರಿಗೆ ಒದಗಿಬರಬೇಕು. ತರಬೇತಿ ಸೌಲಭ್ಯ ಲಭ್ಯವಾದರೆ ಸಾಧಾರಣ ಕ್ರೀಡಾಪಟುವು ಕೂಡಾ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳುವ ಅವಕಾಶ ಉಂಟು. ಇವೆಲ್ಲವೂ ಆಗಬೇಕಾದರೆ ಕ್ರೀಡಾಕ್ಷೇತ್ರದಲ್ಲಿ ಕ್ರೀಡಾಪಟುಗಳಿಗೆ ಆಡಳಿತಾಧಿಕಾರಿಗಳಾಗುವ ಅವಕಾಶ ಹೆಚ್ಚು ಸೃಷ್ಟಿಯಾಗಬೇಕು. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ವೇಗದ ರಾಣಿ ಪಿ.ಟಿ. ಉಷಾ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿರುವುದು ಈ ನಿಟ್ಟಿನಲ್ಲಿ ಆಗಿರುವ ಒಳ್ಳೆಯ ಬೆಳವಣಿಗೆ. ಇಂತಹ ಕ್ರಮ ಮತ್ತಷ್ಟು ಕ್ರೀಡೆಗಳಿಗೆ ಅನ್ವಯವಾದಾಗ ಮಾತ್ರ ಎಳವೆಯಲ್ಲಿಯೇ ಮಕ್ಕಳು ಕ್ರೀಡೆಗಳ ಕಡೆ ಆಕರ್ಷಿತರಾಗಿ ಒಟ್ಟಾರೆ ಕ್ರೀಡಾ ಕ್ಷೇತ್ರದ ನೋಟವೇ ಬದಲಾಗುವ ಎಲ್ಲ ಅವಕಾಶಗಳು ಮುಕ್ತವಾಗಿವೆ. ಒಲಿಂಪಿಕ್ಸ್ ಆಟವೆಂಬುದು ಜನರನ್ನು ಬೆಸೆಯುವ ಒಂದು ಆಟ. ಭಾವನೆಗಳ ಕೆರಳಿಸುವುದು ಆಟದ ಉದ್ದೇಶ ಆಗಲೇಬಾರದು. ಅದೇನಿದ್ದರೂ ಭಾವನೆಗಳ ಅರಳಿಸುವ ಆಟವಾಗುವಂತೆ ನೋಡಿಕೊಂಡು ಆಟದ ಸೌಂದರ್ಯವನ್ನು ಹಾಗೆಯೇ ಉಳಿಸಿ ಬೆಳೆಸಿಕೊಂಡರೆ ಮಾತ್ರ ಒಲಿಂಪಿಕ್ಸ್ ತತ್ವ ಮನುಜಪಥದ ಸತ್ವ ಎಂಬುದು ಸಾರ್ಥಕವಾಗುತ್ತದೆ.

Next Article