ಒಳಮೀಸಲಾತಿಗೆ ಮತ್ತೊಂದು ಆಯೋಗ: ಕಾಲಹರಣ ತಂತ್ರ
ಸುಪ್ರೀಂ ಕೋರ್ಟ್ ತೀರ್ಪು ನೀಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಒಳಮೀಸಲಾತಿ ಕಲ್ಪಿಸಿಕೊಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ ಎಂದು ಹೇಳಿದೆ. ಅದನ್ನು ಜಾರಿಗೆ ಕೊಡಲು ಸಚಿವ ಸಂಪುಟ ತೀರ್ಮಾನಿಸಬೇಕಿತ್ತು. ಅದನ್ನು ಬಿಟ್ಟು ಮತ್ತೊಂದು ಆಯೋಗ ರಚಿಸಿ, ಅದರ ವರದಿ ಬರುವವರೆಗೆ ಎಲ್ಲ ನೇಮಕಾತಿಗಳನ್ನು ಮೂಂದೂಡುವುದಕ್ಕೆ ತೀರ್ಮಾನಿಸಿರುವುದು ಉದ್ಯೋಗಕ್ಕಾಗಿ ಹಾತೊರೆಯುತ್ತಿರುವವರಿಗೆ ನಿರಾಸೆ ತಂದಿದೆ. ಅಲ್ಲದೆ ಉದ್ಯೋಗಕ್ಕೆ ಇರುವ ವಯೋಮಿತಿ ಮೀರಿಹೋಗುವ ಭಯವೂ ಬಹುತೇಕ ನಿರುದ್ಯೋಗಿಗಳನ್ನು ಕಾಡುತ್ತಿದೆ. ಕಳೆದ ಮೂರೂವರೆ ದಶಕಗಳಿಂದ ಇದಕ್ಕಾಗಿ ಹೋರಾಟ ನಡೆಸುತ್ತ ಬಂದ ಸಮುದಾಯಗಳಿಗೆ ಅದಷ್ಟು ತ್ವರಿತಗತಿಯಲ್ಲಿ ಒಳಮೀಸಲಾತಿ ಕಲ್ಪಿಸಿಕೊಡುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವ ಅಗತ್ಯವಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ಕೊಡುವುದು ಹೇಗೆ ಎಂಬುದನ್ನು ಸರ್ಕಾರ ತೀರ್ಮಾನಿಸಬೇಕು. ಇದನ್ನು ವಿಧಾನಸಭೆಯಲ್ಲಿ ಚರ್ಚಿಸುವ ಅಗತ್ಯವೂ ಇದೆ. ಕಾಯ್ದೆಗೆ ಸೂಕ್ತ ನಿಯಮಗಳನ್ನೂ ಜಾರಿಗೆ ತರಬೇಕು. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಒಳಮೀಸಲಾತಿ ಆಗುಹೋಗು ಮತ್ತು ಕೆನೆಪದರ ಸಮಸ್ಯೆಯನ್ನೂ ಚರ್ಚಿಸಲಾಗಿದೆ. ಸಂವಿಧಾನದ ಪೂರ್ಣ ಪೀಠ ಚರ್ಚಿಸಿ ತೀರ್ಮಾನಕ್ಕೆ ಬಂದಿರುವಾಗ ಆ ತೀರ್ಪಿನ ಮೇಲೆ ಏಕ ಸದಸ್ಯ ಆಯೋಗ ರಚಿಸುವ ಅಗತ್ಯವೇನು ಎಂಬುದು ಸ್ಪಷ್ಟಗೊಂಡಿಲ್ಲ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂವಿಧಾನದಲ್ಲೇ ಮೀಸಲು ಕಲ್ಪಿಸುವಾಗ ವಿವರವಾದ ಚರ್ಚೆ ನಡೆದಿದೆ. ಅಲ್ಲದೆ ಕೆನೆಪದರ ತೆಗೆಯುವ ಬಗ್ಗೆಯೂ ಚರ್ಚೆ ನಡೆದಿದೆ. ಮೀಸಲಾತಿ ಮೊದಲ ತಲೆಮಾರಿಗೆ ಮಾತ್ರ ಇರಬೇಕೆಂಬ ವಾದವೂ ಇದೆ. ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಒಂದೇ ಗುಂಪಾಗಿ ಪರಿಗಣಿಸಲಾಗಿದೆ. ಇದಕ್ಕೆ ಹಿಂದೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತ್ತು. ಈಗ ಅದೇ ಸುಪ್ರೀಂ ಕೋರ್ಟ್ ಒಳಮೀಸಲಾತಿ ಕಲ್ಪಿಸಿಕೊಡಬೇಕು ಎಂದು ಹೇಳಿದೆ. ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂಬ ತತ್ವದ ಆಧಾರದ ಮೇಲೆ ಒಳಮೀಸಲಾತಿಗೆ ಒಪ್ಪಿಗೆ ನೀಡಿದೆ. ಈಗ ಇರುವ ನಿಯಮದಂತೆ ಮೀಸಲಾತಿಯನ್ನು ಸ್ಪೃಶ್ಯ ಮತ್ತು ಅಸ್ಪೃಶ್ಯರಿಗೂ ಕಲ್ಪಿಸಿಕೊಡಲಾಗಿದೆ. ಮೀಸಲಾತಿಯ ಹೆಚ್ಚಿನ ಲಾಭವನ್ನು ಬಲಗೈನವರು ಪಡೆದುಕೊಂಡಿದ್ದಾರೆ. ಉಳಿದವರಿಗೆ ಅವಕಾಶಗಳು ಕಡಿಮೆಯಾಗಿವೆ. ಒಳಮೀಸಲಾತಿ ನೀಡಿದರೆ ಇದುವರೆಗೆ ಮೀಸಲಾತಿ ಸವಲತ್ತು ಪಡೆಯದ ಸಮುದಾಯಗಳಿಗೆ ನ್ಯಾಯ ದೊರಕುತ್ತದೆ ಎಂದು ಅವಕಾಶ ವಂಚಿತ ಸಮುದಾಯದವರು ಒತ್ತಾಯ ಮಾಡುತ್ತಿದ್ದಾರೆ. ಈಗ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿರುವ ಸಮುದಾಯದವರು ತಮಗೆ ಲಭಿಸಿರುವ ಮೀಸಲಾತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿಲ್ಲ. ಅವರ ರಾಜಕೀಯ ಪ್ರಭಾವದಿಂದ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪನ್ನು ನೇರವಾಗಿ ಅನುಷ್ಠಾನಕ್ಕೆ ತರಲು ಮುಂದಾಗುತ್ತಿಲ್ಲ. ಜನಸಂಖ್ಯೆಯನ್ನು ಆಧಾರವಾಗಿ ತೆಗೆದುಕೊಂಡಲ್ಲಿ ಎಡಗೈನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜಕೀಯವಾಗಿ ಪ್ರಬಲರು ಬಲಗೈನವರು. ಅವರು ತಮ್ಮ ಅವಕಾಶವನ್ನು ಕಡಿಮೆ ಮಾಡಿಕೊಳ್ಳಲು ಮಾನಸಿಕವಾಗಿ ಇನ್ನೂ ಒಪ್ಪಿಕೊಂಡಿಲ್ಲ. ಅಧಿಕಾರದಲ್ಲಿರುವವರು ಈ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿ ತೋರಿಸುವುದು ಅಗತ್ಯ. ಒಳಮೀಸಲಾತಿ ಜಾರಿಗೆ ಬಂದಲ್ಲಿ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ಈಗ ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಉಪ ಸಮರ ನಡೆಯುತ್ತಿರುವುದರಿಂದ ಅದರ ಫಲಿತಾಂಶದ ಮೇಲೆ ಪರಿಣಾಮ ಅಗಬಾರದು ಎಂಬ ಕಾರಣಕ್ಕೆ ಸರ್ಕಾರ ಆಯೋಗ ರಚಿಸುವ ತೀರ್ಮಾನ ಕೈಗೊಂಡಿದೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ಮಾರನೇ ದಿನವೇ ಇದರ ಬಗ್ಗೆ ತೀರ್ಮಾನ ಕೈಗೊಳ್ಳಬಹುದು. ಪ್ರಜಾಪ್ರಭುತ್ವದ ಪ್ರಕಾರ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಲಭಿಸಬೇಕು. ಅದಕ್ಕೆ ಮೀಸಲಾತಿ-ಒಳಮೀಸಲಾತಿ ಸಾಧನ ಮಾತ್ರ ಎಂಬುದನ್ನು ಮರೆಯಬಾರದು.. ಒಳಮೀಸಲಾತಿ ತೀರ್ಮಾನ ಆಗುವವರೆಗೆ ಯಾವುದೇ ನೇಮಕಾತಿ ಇಲ್ಲ ಎಂಬ ಸರ್ಕಾರದ ನಿರ್ಧಾರ ಕೂಡ ಸೂಕ್ತವಾಗಿಲ್ಲ. ಈಗಾಗಲೇ ಸರ್ಕಾರಿ ನೇಮಕಾತಿಗಳನ್ನು ಮುಂದೂಡುತ್ತ ಬರಲಾಗಿದೆ. ಯುವಕ-ಯುವತಿಯರಿಗೆ ಉದ್ಯೋಗ ಪಡೆಯುವ ವಯಸ್ಸು ಮೀರಿ ಹೋದರೆ ಅವರಿಗೆ ಲಭಿಸಲಿದ್ದ ಅವಕಾಶವನ್ನು ಸರ್ಕಾರವೇ ಕಸಿದುಕೊಂಡಂತೆ. ಉದ್ಯೋಗ ಅವಕಾಶ ಕಡಿಮೆ ಮಾಡಿದರೂ ರಾಜ್ಯದ ಆದಾಯ ಅಧಿಕಗೊಳ್ಳುತ್ತಿದೆ ಎಂಬುದು ಆಶ್ಚರ್ಯಕರವಾಗಿ ಕಂಡರೂ ನಿಜ. ದೇಶದಲ್ಲಿ ಜಿಎಸ್‌ಡಿಪಿ ಬೆಳವಣಿಗೆಯಲ್ಲಿ ಕರ್ನಾಟಕವೇ ಮೊದಲು ಇರುವುದಕ್ಕೆ ಉಚಿತ ಗ್ಯಾರಂಟಿಗಳೂ ಕಾರಣ ಎಂದು ಸರ್ಕಾರವೇ ಹೇಳಿ ಕೊಂಡಿದೆ. ಹಣದುಬ್ಬರ ನಿಯಂತ್ರಣ, ನಿರುದ್ಯೋಗ ನಿವಾರಣೆ ಆರ್ಥಿಕ ಅಭಿವೃದ್ಧಿಗೆ ಕಾರಣ ಎಂದು ಇದುವರೆಗೆ ಹೇಳಿಕೊಂಡು ಬರಲಾಗಿದೆ. ಒಳಮೀಸಲಾತಿ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಲವು ಸಮುದಾಯಗಳಿಗೆ ಆಶಾಕಿರಣವಾಗುವುದರಲ್ಲಿ ಸಂದೇಹವಿಲ್ಲ. ಹಲವು ದಶಕಗಳಿಂದ ಒಳಮೀಸಲಾತಿಗೆ ಒತ್ತಾಯ ಮುಂದುವರಿದಿದೆ. ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಸೂಕ್ತ ಮಾರ್ಪಾಡು ಮಾಡಿಕೊಂಡಲ್ಲಿ ಒಳಮೀಸಲಾತಿ ಕಲ್ಪಿಸುವುದು ಕಷ್ಟವೇನಲ್ಲ. ಒಳಮೀಸಲಾತಿ ಜಾರಿಗೆ ಕಾಯುತ್ತಿರುವ ಸಮುದಾಯದವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಒಮ್ಮತಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. ಇಂಥ ವಿಷಯದಲ್ಲಿ ಪಕ್ಷ ರಾಜಕಾರಣ ಅಡ್ಡಿಯಾಗಬಾರದು.