ಓಟು ನೀಡದವನ ಗೂಟಕ್ಕೆ ಕಟ್ಟು ಸರ್ವಜ್ಞ
ಚುನಾವಣೆ ಮುಗಿಯಿತು ಎಂಬ ಖುಷಿಯಲ್ಲಿ ವಿಶ್ವನ ಜೊತೆ ಹರಟುತ್ತಾ ಕುಳಿತಿದ್ದೆ. ವಿಶಾಲು ತಾನು ಓಟು ಮಾಡಲು ಅನುಸರಿಸಿದ ಸುಲಭ ವಿಧಾನವನ್ನು ಹೇಳಿದಳು.
“ನಾನು ಬೆಳಗ್ಗೆ ೭ ಗಂಟೆಗೆಲ್ಲ ನನ್ನ ಗಂಡನ್ನ ಎಳ್ಕೊಂಡು ಬೂತ್ಗೆ ಹೋದೆ. ನಿದ್ದೆ ಕಣ್ಣಲ್ಲಿ ಇವರು ನಾ ಹೇಳಿದವರಿಗೇ ಒತ್ತಿದರು. ಮೊದಲ ಓಟು ನಮ್ಮದೇ, ಬೇರೆ ಯಾರೂ ಅಲ್ಲಿ ರ್ಲಿಲ್ಲ”
“ಪೋಲಿಂಗ್ ಆಫೀರ್ರೂ ರ್ಲಿಲ್ವಾ?” ಎಂದಾಗ ನಗು ಕಾಣಿಸಿತು.
“ಕರ್ನಾಟಕದ ಅರ್ಧ ಭಾಗದಲ್ಲಿ ಮಾತ್ರಾನೇ ಓಟ್ ಆಗಿರೋದು. ಇನ್ನರ್ಧ ಭಾಗದಲ್ಲಿ ಪ್ರಚಾರ ನಡೀತಾ ಇದೆಯಲ್ಲ?” ಎಂದ ವಿಶ್ವ.
ಆ ವೇಳೆಗೆ ಗೆಳೆಯ ಮೋಹನ ಮನೆಯ ಪ್ಲ್ಯಾನ್ನ ಕಾಪಿಯನ್ನು ಹಿಡಿದು ನನ್ನ ಹುಡುಕಿಕೊಂಡು ವಿಶ್ವನ ಮನೆಗೆ ಬಂದ.
“ನಿಮ್ಮನೆಗೆ ಹೋಗಿದ್ದೆ, ನೀನು ಇಲ್ಲಿದ್ದೀಯ ಅಂತ ಗೊತ್ತಾಯ್ತು. ಅದಕ್ಕೆ ಬಂದೆ. ನಿನ್ನಿಂದ ಒಂದು ಸಹಾಯ ಆಗ್ಬೇಕು” ಎಂದ.
“ಹೇಳಪ್ಪಾ, ಮಾಡೋಣ” ಎಂದೆ.
“ನಾನು ಮನೆ ಪ್ಲ್ಯಾನ್ ಸ್ಯಾಂಕ್ಷನ್ಗೆ ಅರ್ಜಿ ಕೊಟ್ಟಿದ್ದೆ. ತಡ ಮಾಡ್ತಿದ್ದಾರೆ” ಎಂದ.
“ಎಲ್ಲಿ, ಕೈ ಕೊಡು” ಎಂದು ಅವನ ಕೈ ಸೆಳೆದುಕೊಂಡೆ.
ಅವನ ಬೆರಳ ಮೇಲೆ ಚುಕ್ಕೆ ಇರಲಿಲ್ಲ.
“ಮನುಷ್ಯನಾ ನೀನು? ಯಾಕೆ ಓಟ್ ಮಾಡಿಲ್ಲ” ಎಂದು ರೇಗಿದೆ.
“ಮನೆಗೆ ಯಾರೋ ನೆಂಟರು ಬಂದಿದ್ರು. ಓಟ್ ಮಾಡೋಕಾಗ್ಲಿಲ್ಲ”
“ಅಲ್ವೋ ಮೋಹನ, ಬೆಳಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೇವರೆಗೂ ಕಾಲಾವಕಾಶ ಇರುತ್ತೆ. ನಿಮ್ಮನೆ ಹತ್ರ ಇರೋ ಬೂತ್ಗೆ ಎರಡು ನಿಮಿಷ ಹೋಗೋಕಾಗ್ಲಿಲ್ವಾ ?” ಎಂದು ರೇಗಿದೆ.
ವಿಶ್ವನಿಗೆ ಬೈಯಲು ಹುಮ್ಮಸ್ಸು ಬಂತು.
“ಹೌದು ಮೋಹನ, ಓಟು ಮಾಡ್ದೇ ಇದ್ರೆ ನಿನ್ಗೆ ಸರ್ಕಾರದ ಸವಲತ್ತು ಪಡೆಯೋಕೆ ರೈಟೇ ಇಲ್ಲ. ನಿನ್ನ ಮನೆ ಪ್ಲ್ಯಾನ್ ಪೆಂಡಿಂಗ್ ಇಡಬೇಕು” ಎಂದ.
“ನಮ್ಮ ದೇಶದಲ್ಲಿ ಹಾಗೆಲ್ಲ ಇಲ್ವಲ್ಲ?” ಎಂದ ಮೋಹನನಿಗೆ ನಾನು ಡಾಕ್ಯುಮೆಂಟರಿ ಪ್ರೂಫ್ ಕೊಟ್ಟೆ.
“ಆಸ್ಟ್ರೇಲಿಯಾದಲ್ಲಿ ೧೯೧೫ರಷ್ಟು ಹಿಂದೇನೇ ಕಂಪಲ್ಸರಿ ಓಟಿಂಗ್ ಶುರುವಾಯ್ತು. ಅಲ್ಲಿನ ಕನ್ನಡ ಸಂಘದ ಅಧ್ಯಕ್ಷ ಶರ್ಮಾಜಿ ಹೇಳಿದ ಒಂದು ಪದ್ಯ ಹೇಳ್ತೀನಿ, ಕೇಳು.
ಓಟು ಕೊಡುವುದು ಸ್ವರ್ಗ, ಕೊಡದೆ ಇರುವುದು ನರಕ
ಬೇಕಾಗಿ ಓಟು ನೀಡದವನ ಗೂಟಕ್ಕೆ ಕಟ್ಟು ಸರ್ವಜ್ಞ ||
“ಆಸ್ಟ್ರೇಲಿಯಾದಲ್ಲಿ ಗೂಟಕ್ಕೆ ಕಟ್ತಾರಾ?” ಎಂದ.
“ಹೌದು, ಗೂಟಕ್ಕೆ ಕಟ್ಟು ಅಂದ್ರೆ ಟಾರ್ಗೆಟ್ ಮಾಡು ಅಂತ ಅರ್ಥ. ಆಸ್ಟ್ರೇಲಿಯಾದಲ್ಲಿ ಓಟ್ ಮಾಡ್ಲಿಲ್ಲ ಅಂದ್ರೆ ಅದು ಪನಿಷಬಲ್ ಅಫೆನ್ಸು. ಅಂದರೆ ಶಿಕ್ಷಾರ್ಹ ಅಪರಾಧ. ಮನೆಗೆ ಮೊದಲು ಬಿಳೀ ನೋಟೀಸ್ ಬರುತ್ತೆ. ತಿಂಗಳಲ್ಲಿ ಉತ್ತರ ಕೊಡ್ಲಿಲ್ಲ ಅಂದ್ರೆ ಹಸಿರು ನೋಟಿಸ್ ಬರುತ್ತೆ. ಅದಕ್ಕೂ ಉತ್ತರ ಕೊಡ್ಲಿಲ್ಲ ಅಂದ್ರೆ ಫೈರ್ ಬ್ರ್ಯಾಂಡ್ ನೀಲಿ ನೋಟಿಸ್ ಬರುತ್ತೆ. ಕಾನೂನಿನ ಪ್ರಕಾರ ಶಿಕ್ಷೆ, ಜುಲ್ಮಾನೆ ಎಲ್ಲಾ ಇರುತ್ತೆ. ನೋಟಿಸ್ಗೆ ಅಲ್ಲಿನ ಜನ ನಡುಗ್ತಾರೆ ಗೊತ್ತಾ ?” ಎಂದೆ.
ಮೋಹನ್ಗೆ ಭಯವಾಗಲಿಲ್ಲ.
“ನಮ್ಮ ದೇಶದಲ್ಲಿ ಕಷ್ಟ ಇಲ್ಲ. ನಮ್ಮ ಎಂ.ಎಲ್.ಎ.ಗೆ ಹೇಳಿದ್ರೆ ಅವರು ಬಚಾವ್ ಮಾಡ್ತಾರೆ” ಎಂದ.
“ಓಟು ಕೊಡದವ ಮಂಗ” ಎಂದೆ.
ವಿಶಾಲೂ ಕಾಫಿ ತಂದಿಟ್ಟಳು.
“ನಮ್ಮ ದೇಶದಲ್ಲಿ ಕೋತಿಗಳಿಗೆ ಓಟಿಂಗ್ ಪವರ್ ಇದ್ದಿದ್ರೆ ಏನಾಗ್ತಿತ್ತು ಗೊತ್ತಾ? ಕಳ್ಳೇಕಾಯಿ ಕೊಡೋ ಗ್ಯಾರಂಟಿ ಕೊಟ್ರೆ ಖಂಡಿತ ಓಟ್ ಮಾಡ್ತಿದ್ವು” ಎಂದಳು.
“ನನಗೆ ಟೈಂ ಇಲ್ಲ. ನನ್ನ ಮನೆ ಪ್ಲ್ಯಾನ್ ಸ್ಯಾಂಕ್ಷನ್ನು ಆಗಬೇಕು” ಎಂದ.
“ಸರ್ಕಾರದ ಸವಲತ್ತು ಬೇಕು, ಆದ್ರೆ ಸರ್ಕಾರಾನ ಚುನಾಯಿಸೋಕೆ ಪುರುಸೊತ್ತು ಇಲ್ಲವಾ?” ಎಂದೆ.
ಮೋಹನ ಪೆಚ್ಚಾದ.
“ಹೋಗ್ಲಿ ಬಿಟ್ಬಿಡು, ಪಾಪ ಮೋಹನ ಒಳ್ಳೆಯವನು” ಎಂದು ವಿಶ್ವ ಶಿಫಾರಸ್ಸು ಮಾಡಿದ.
“ಒಳ್ಳೆಯವನಾಗಿದ್ರೆ ಎಲೆಕ್ಷನ್ ದಿನ ಹೋಗಿ ಓಟ್ ಮಾಡ್ತಿದ್ದ. ಎಷ್ಟೊಹತ್ತಿನ ಕೆಲ್ಸ ಅದು? ಮನೆ ಹತ್ರ ಬೂತು. ಟೀವಿಗಳಲ್ಲಿ, ಪೇಪರ್ಗಳಲ್ಲಿ ಎಷ್ಟು ಗಣ್ಯರು ಬೇಡಿಕೊಂಡ್ರು, ಓಟ್ ಹಾಕಿ, ಓಟ್ ಹಾಕಿ ಅಂತ. ಆದ್ರೂ ಈ ಮೋಹನ ಬಿಡುವಿದ್ರೂ ಹೋಗ್ಲಿಲ್ಲ ಅಂದ್ರೆ ಇವನು ಕೋತಿಗಿಂತ ಕಡೆ” ಎಂದೆ.
“ಬೈದಿದ್ದು ಸಾಕು, ಪ್ಲ್ಯಾನ್ ಸ್ಯಾಂಕ್ಷನ್ಗೆ ಏನ್ಮಾಡ್ಲಿ ಹೇಳಪ್ಪ” ಎಂದ ಮೋಹನ.
“ನಾನಂತೂ ನಿಂಗೆ ಸಹಾಯ ಮಾಡೊಲ್ಲ” ಅಂತ ಖಚಿತವಾಗಿ ಹೇಳ್ದೆ. ವಿಶ್ವ ಮೋಹನ್ಗೆ ಸಮಾಧಾನ ಮಾಡಿದ.
“ರೆವೆನ್ಯೂ ಆಫೀಸಲ್ಲಿ ಸೂಪರಿಂಟೆಂಡೆಂಟ್ ನನಗ್ಗೊತ್ತು. ನಾನೊಂದ್ಮಾತು ಹೇಳ್ತೀನಿ” ಎಂದು ಮೋಹನನಿಗೆ ಧೈರ್ಯ ತುಂಬಿ ಕಳಿಸಿಕೊಟ್ಟ.
“ಎಷ್ಟೋ ದೇಶಗಳಲ್ಲಿ ಕಂಪಲ್ಸರಿ ಓಟಿಂಗ್ ಇದೆ. ಉದಾ : ಬೆಲ್ಜಿಯಂ, ಈಜಿಪ್ಟ್, ಸಿಂಗಾಪುರ, ಅರ್ಜೆಂಟೈನಾ. ನಮ್ಮಲ್ಲಿ ವಿದ್ಯಾವಂತರೇ ಓಟ್ ಮಾಡೊಲ್ಲ. ರಜಾ ಸಿಕ್ತು ಮಜಾ ಮಾಡೋಣ ಅಂತ ರೆಸಾರ್ಟ್ಗಳಿಗೆ ಟೂರ್ ಹೋಗ್ತಾರೆ, ಜೋಗ್ಫಾಲ್ಸ್ಗೆ, ಕಾಶ್ಮೀರಕ್ಕೆ ಅದೇ ದಿನ ಹೋಗಬೇಕಾ?” ಎಂದು ಬೇಸರಿಸಿದೆ.
“ಮೊದಲೇ ಟೂರ್ ಬುಕ್ ಮಾಡಿದ್ರೆ ಏನ್ಮಾಡ್ಬೇಕು?” ಎಂದ ವಿಶ್ವ.
“ಒಂದೂವರೆ ತಿಂಗಳ ಮೊದಲೇ ಓಟಿಂಗ್ ಡೇಟ್ ಸಿಗುತ್ತಲ್ಲ? ಟೂರ್ ಡೇಟ್ ಬದಲಾಯಿಸ್ಕೋಬಹುದು” ಎಂದೆ.
“ಓಟು ಹಾಕದವರಿಗೆ ನಮ್ಮಲ್ಲಿ ಹೇಗೆ ಕ್ರಮ ತಗೋಬಹುದು ಅಂತ ಸಲಹೆ?” ವಿಶಾಲೂ ಕೇಳಿದಳು.
“ಓರ್ಸ್ ಲಿಸ್ಟಲ್ಲಿ ಆ್ಯಬ್ಸೆಂಟ್ ಅಂತ ಹಾಕ್ಬಹುದು. ಯಾವ್ದೇ ಸರ್ಕಾರಿ ಕೆಲ್ಸಕ್ಕೆ ಹೋದಾಗ ಫಸ್ಟ್ ಅರ್ಜಿದಾರನ ಕೈ ಬೆರಳು ನೋಡ್ಬೇಕು. ಚುಕ್ಕೆ ಇಲ್ಲ ಅಂದ್ರೆ ಕಾರಣ ಕೇಳಬೇಕು”
“ಒಂದ್ವೇಳೆ ಸುಮ್ಸುಮ್ನೆ ಅವನೇ ಚುಕ್ಕೆ ಇಟ್ಕೊಂಡು ಬಂದಿದ್ರೆ?” ವಿಶಾಲು ಪ್ರಶ್ನೆ.
“ಆಧಾರ್ ಕಾರ್ಡ್ ನಂಬರ್ ಹಾಕಿದ್ರೆ ಓಟ್ ಮಾಡಿದ್ದಾನಾ, ಇಲ್ವಾ ಅಂತ ಗೊತ್ತಾಗುತ್ತೆ. ಓಟ್ ಮಾಡ್ದೆ ಇರೋವನಿಂದ ಆಸ್ಟ್ರೇಲಿಯಾದಲ್ಲಿ ಮಾಡೋ ಹಾಗೆ ಫೈನ್ ಕಟ್ಟಿಸ್ಕೋಬೇಕು”
ವಿಶ್ವ ಒಪ್ಪಲಿಲ್ಲ.
“ಹೇ, ನಮ್ಮಲ್ಲಿ ಫೈನು, ದಂಡ ವರ್ಕೌಟ್ ಆಗೊಲ್ಲ. ಜನ ಮುಷ್ಕರಕ್ಕೆ ಇಳೀತಾರೆ” ಎಂದ.
“ಯಾಕೆ ಓಟು ಮಾಡ್ಲಿಲ್ಲ? ಏನು ಕಾರಣ? ಅಜ್ಜಿ ಸತ್ಹೋದ್ಲು, ತಾತ ಸತ್ಹೋದ, ನಾನೇ ಸತ್ಹೋಗಿದ್ದೆ ಅಂತೆಲ್ಲಾ ಕಾರಣ ಕೊಟ್ಟು ಒಂದು ಅರ್ಜಿಯಾದರೂ ಕೊಡ್ಬೇಕು”ಎಂದೆ.
“ಇನ್ನೂ ಸುಲಭವಾದ ವಿಧಾನ ಇದ್ರೆ ಹೇಳಿ” ಎಂದಳು ವಿಶಾಲೂ.
“ಬಿಡುವಿದ್ದೂ ಓಟ್ ಮಾಡದವರ ಆಧಾರ್ ಕಾರ್ಡು ನಿಷ್ಕಿçಯ ಮಾಡಬಹುದು. ಅಂದರೆ ಸರ್ಕಾರ ಲಾಕ್ ಮಾಡಬಹುದು. ಆಗ ಆಧಾರ್ ಕಾರ್ಡ್ ಆಫೀಸ್ಗೆ ಹೋಗಿ ತಾನು ಓಟ್ ಮಾಡ್ದೆ ಇರೋಕೆ ಕಾರಣ ಬರೆದು ಕೊಟ್ಟು ಆ ಲಾಕ್ ಓಪನ್ ಮಾಡಿಸ್ಬೇಕು. ಈ ಥರ ಒಂದ್ಸಲ ಮಾಡಿದ್ರೆ ಎಲ್ರೂ ಓಡೋಡಿ ಬಂದು ಓಟ್ ಹಾಕ್ತಾರೆ” ಎಂದೆ.
“ಸರಿಯಾಗಿ ಹೇಳಿದ್ರಿ, ನಮ್ಮ ಫ್ರೆಂಡ್ಸು, ರಿಲೆಟೀವ್ಸು ಉತ್ತರ ಕರ್ನಾಟಕದಲ್ಲಿದ್ದಾರೆ. ಅಲ್ಲಿ ಓಟಿನ್ನೂ ಆಗಿಲ್ಲ. ಅವರಿಗೆಲ್ಲ ಓಟು ಮಾಡ್ಲೇಬೇಕು ಅಂತ ಎಚ್ಚರಿಸ್ತೀನಿ” ಎಂದು ವಿಶಾಲು ಸಮ್ಮತಿಸಿದಳು.
ನಾನು ಭಾಷಣ ಮಾಡಿದ್ದಕ್ಕೂ ಸಾರ್ಥಕ ಆಯಿತು ಎಂಬ ಭಾವ ನನ್ನಲ್ಲಿ ಮೂಡಿತು.