For the best experience, open
https://m.samyuktakarnataka.in
on your mobile browser.

ಓ! ಹಸಿವೆ ನೀನೇಕೆ ಜೀವ ಕಸಿವೆ?

08:48 AM Oct 06, 2024 IST | Samyukta Karnataka
ಓ  ಹಸಿವೆ ನೀನೇಕೆ ಜೀವ ಕಸಿವೆ

ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಡಾಡಿ ನಾಯಿಗಳ ಕಾಟ ಮಿತಿ ಮೀರಿದೆ. ಚಿಕ್ಕ ಮಕ್ಕಳು ಮತ್ತು ಒಬ್ಬಂಟಿಗರ ಮೇಲೆ ಅವುಗಳು ಕೆಲವೊಮ್ಮೆ ಸಾಮೂಹಿಕ ಮಾರಣಾಂತಿಕ ಆಕ್ರಮಣ ಮಾಡುತ್ತಿವೆ. ವರ್ಷದಿಂದ ವರ್ಷಕ್ಕೆ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿವೆ. ಒಂದು ವರದಿಯ ಪ್ರಕಾರ ೨೦೨೦ರಲ್ಲಿ ಶ್ವಾನ ದಾಳಿಯ ೧,೬೩,೩೬೬ ಪ್ರಕರಣಗಳು ನಡೆದಿದ್ದವು. ೨೦೨೩ರಲ್ಲಿ ಇದು ೨,೩೨,೭೫೪ಕ್ಕೇರಿತು. ಈ ವರ್ಷ ಈಗಾಗಲೇ ೨,೭೩,೦೩೭ ಪ್ರಕರಣಗಳ ವರದಿಯಾಗಿವೆ. ಬೀದಿ ನಾಯಿಗಳ ಈ ಉಪಟಳವು ಸಾರ್ವಜನಿಕರಿಗೆ ತಲೆನೋವಾಗಿದ್ದರೆ ತಜ್ಞರಿಗೆ ಜಿಜ್ಞಾಸದ ವಿಷಯವಾಗಿದೆ. ಸಮಸ್ಯೆಯ ಕಾರಣ ಮತ್ತು ಪರಿಹಾರಗಳ ಬಗ್ಗೆ ವಿಮರ್ಶಿಸಿದ ತಜ್ಞರು ಇದಕ್ಕೆಲ್ಲ ಬೀದಿ ನಾಯಿಗಳಿಗೆ ಆಹಾರ ಸಿಗದಿರುವುದೇ ಮುಖ್ಯ ಕಾರಣವೆಂದಿದ್ದಾರೆ. ಮೊದಲೆಲ್ಲ ಬೀದಿನಾಯಿಗಳಿಗೆ ಸಾರ್ವಜನಿಕರು ಅಳಿದುಳಿದ ಆಹಾರವನ್ನು ಹಾಕುತ್ತಿದ್ದರು. ಈಗ ಅನೇಕರ ಮನೆಯಲ್ಲಿಯೇ ಸಾಕಿದ ನಾಯಿಗಳಿರುತ್ತವೆ. ಕೆಲವರಂತೂ ೨-೩ ನಾಯಿಗಳನ್ನು ಸಾಕಿರುತ್ತಾರೆ. ಅವುಗಳ ಆರೈಕೆಯೇ ಒಂದು ದೊಡ್ಡ ಪ್ರಹಸನವಾಗಿರುವಾಗ ಬೀದಿನಾಯಿಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ? ಅಲ್ಲದೇ ಈಗ ಎಲ್ಲೆಂದರಲ್ಲಿ ಮಿಕ್ಕಿದ, ಆಹಾರವನ್ನು ಚೆಲ್ಲುವಂತಿಲ್ಲ. ಹೀಗಾಗಿ ಸಾಕಷ್ಟು ಆಹಾರ ಸಿಗದೇ ನಾಯಿಗಳು ಆಕ್ರಮಣಕಾರಿಯಾಗುತ್ತವೆ. ಕಾರಣ ಬಿಬಿಎಂಪಿ ಬೀದಿನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡುವ ಯೋಜನೆ ಮಾಡಿದೆ. ಈ ಪ್ರಯೋಗ ಯಶಸ್ವಿಯಾದರೆ ಸಾರ್ವಜನಿಕರ ನಾಯಿಪಾಡು'' ತಪ್ಪುತ್ತದೆ! ಜಾಗತಿಕ ಆಹಾರ ಕಾರ್ಯಕ್ರಮದ ವರದಿಯ ಪ್ರಕಾರ ೩೪.೫ ಕೋಟಿ ಜನತೆಗೆ ಆಹಾರದ ಭದ್ರತೆ ಇಲ್ಲ. ಜಾಗತಿಕ ಆರೋಗ್ಯ ಸಂಸ್ಥೆ, ವಿಶ್ವ ಸಂಸ್ಥೆ, ಅನೇಕ ಸ್ವಯಂಸೇವಾ ಸಂಸ್ಥೆಗಳ ಪ್ರಯತ್ನದ ಹೊರತಾಗಿಯೂ ಜಗತ್ತಿನಲ್ಲಿ ಪ್ರತಿದಿನ ೧೦ ಸಾವಿರ ಮಕ್ಕಳನ್ನೂ ಒಳಗೊಂಡಂತೆ ಒಟ್ಟು ೨೫ ಸಾವಿರ ಜನರು ಹಸಿವೆಯಿಂದ ಸಾಯುತ್ತಾರೆ. ಆರ್ಥಿಕಾಭಿವೃದ್ಧಿಯಾಗದ ದೇಶಗಳಲ್ಲಿ ಬಡತನ, ಅಸಮಾನತೆಗಳು ಹಸಿವಿಗೆ ಕಾರಣವಾಗಿವೆ. ಪಡಿತರ ವಿತರಣಾ ದೋಷ, ವಾತಾವರಣದ ಬದಲಾವಣೆ, ಪರಿಸರ ಮಾಲಿನ್ಯ, ಕಾಡುನಾಶ, ಮಳೆಕೊರತೆ, ಯುದ್ಧ, ಅಶಾಂತಿ, ಸಂಪತ್ತಿನ ಅನುಚಿತ ಹಂಚಿಕೆ, ವ್ಯಾಪಾರ ನೀತಿ, ಇವು ಹಸಿವಿನ ಉಲ್ಬಣಕ್ಕೆ ಕಾರಣಗಳು. ೮೧೭ ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯ ಜಗತ್ತಿನಲ್ಲಿ ದಕ್ಷಿಣ ಆಫ್ರಿಕಾ, ದಕ್ಷಿಣ ಏಶಿಯಾ ಮತ್ತಿತರ ಕೆಲಭಾಗಗಳಲ್ಲಿ ಹಸಿವಿನ ತಾಂಡವವಾಡುತ್ತಿದೆ. ಇತ್ತೀಚೆಗೆ ಆಹಾರದ ಕೊರತೆಯ ಕಾರಣ ನಮೀಬಿಯಾದಲ್ಲಿ ೮೩ ಆನೆಗಳನ್ನು ಒಳಗೊಂಡಂತೆ ೭೯೩ ಪ್ರಾಣಿಗಳನ್ನು ಮತ್ತು ಜಿಂಬಾಬ್ವೆಯಲ್ಲಿ ೨೦೦ ಆನೆಗಳನ್ನು ಕೊಲ್ಲಲು ಅಲ್ಲಿನ ಸರಕಾರಗಳು ಸಮ್ಮತಿಸಿವೆ. ಪ್ರಾಣಿದಯಾ ಸಂಘಗಳು ಇದನ್ನು ವಿರೋಧಿಸಿವೆ. ಪ್ರಾಣಿಗಳ ಮೇಲಿನ ದಯೆ ಏನೋ ಸರಿ ಆದರೆ ಮನುಷ್ಯರ ಹಸಿವಿಗೇನು ಮಾಡುವುದು? ಉಳಿದ ಜಗತ್ತು ಅದರ ಹೊಣೆಯನ್ನು ಹೊರಬೇಕಲ್ಲವೇ?ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ'' ಎನ್ನುವುದು ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಗಾಧವಾದ ಅಂತರವನ್ನು ತೋರಿಸುತ್ತದೆ. ಬಕಾಸುರನಿಗೆ ಪ್ರತಿದಿನ ಬಂಡೆ ತುಂಬ ಅನ್ನ, ಒಬ್ಬ ನರ ಮಾನವನ ಬಲಿ ಬೇಕಾಗಿತ್ತಂತೆ. ಕುಂಭಕರ್ಣ ೬ ತಿಂಗಳು ನಿದ್ದೆ ಹೋಗುವ ಮೊದಲು ಅಷ್ಟು ದಿನಕ್ಕೂ ಆಗುವಷ್ಟು ಆಹಾರ ಸ್ವೀಕರಿಸುತ್ತಿದ್ದನಂತೆ! ಮನುಷ್ಯ ತಾನು ಜೀವಂತವಾಗಿ ಉಳಿಯಲು ಜಗದ ಇನ್ನಿತರ ಜೀವ ಜಂತುಗಳನ್ನು ಕೊಲ್ಲುತ್ತಾನೆ! ಜಗತ್ತಿನ ವಿವಿಧ ಪ್ರದೇಶಗಳ ಜನರು ವಿವಿಧ ಪ್ರಾಣಿ-ಪಕ್ಷಿಗಳ ಮಾಂಸವನ್ನು ಭಕ್ಷಿಸುತ್ತಾರೆ. ಕೋಳಿ, ಮೀನು, ಬಾತು, ಹಂದಿ, ಕುರಿ, ಮೇಕೆ, ಮೊಲ, ಪಾರಿವಾಳ, ಆಕಳು, ಎಮ್ಮೆ, ಕುದುರೆ ಇತ್ಯಾದಿಗಳನ್ನು ಆಹಾರಕ್ಕಾಗಿ ವಧೆ ಮಾಡಲಾಗುತ್ತದೆ. ದಿನವೊಂದಕ್ಕೆ ಈ ರೀತಿ ಆಹಾರಕ್ಕಾಗಿ ಬಳಕೆಯಾಗುವ ಪಶು-ಪಕ್ಷಿಗಳ ಸಂಖ್ಯೆಯೇ ೩೪೦ ರಿಂದ ೬೫೦ ಕೋಟಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇವುಗಳ ಪೈಕಿ ಚಿಕನ್ ಮತ್ತು ಮೀನಿನದ್ದೇ ಸಿಂಹಪಾಲು! ೧೯೬೦ ರಿಂದೀಚೆಗೆ ೬೦ ವರ್ಷಗಳ ಅವಧಿಯಲ್ಲಿ ಇವುಗಳ ಸೇವನೆಯು ಶೇ. ೬೦೦ರಷ್ಟು ಹೆಚ್ಚಿದೆ! ಮುಂದೊಂದು ದಿನ ಇವುಗಳ ಸಂತತಿಯೇ ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅದರ ಜೊತೆಗೆ ಈ ಪ್ರಾಣಿಗಳ ಮಾಂಸ ಸಂಸ್ಕರಣ ಸಮಯದಲ್ಲಿ ಸರಿಯಾದ ಗುಣಮಟ್ಟತೆ, ಸ್ವಚ್ಛತೆ, ಸುರಕ್ಷತೆಯನ್ನು ಕಾಯ್ದುಕೊಳ್ಳದಿದ್ದರೆ ಆರೋಗ್ಯದ ಅನೇಕ ಸಮಸ್ಯೆಗಳೂ ಉದ್ಭವಿಸುವ ಸಾಧ್ಯತೆ ಇರುತ್ತದೆ.
ಆಹಾರವು ಗಾಳಿ ಮತ್ತು ನೀರಿನಂತೆ ಯಾವುದೇ ಒಂದು ಜೀವಿ ಜೀವಂತವಾಗಿರಲು ಅತೀ ಅವಶ್ಯವಾದ ಮೂಲಭೂತ ಸಂಗತಿಗಳಲ್ಲೊಂದು. ಚಟುವಟಿಕೆಯಿಂದಿರಲು ಅದುವೇ ಜೀವಿಗಳಿಗೆ ಶಕ್ತಿಯ ಮೂಲಕೂಡ. ಆಹಾರ ಸಿಗದಿದ್ದರೆ ಜೀವಿಗಳಿಗೆ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಸಾಮಾಜಿಕಾರ್ಥಿಕ ತೊಂದರೆಗಳಾಗುತ್ತವೆ. ಬೆಳವಣಿಗೆ ಕುಂಠಿತವಾಗುತ್ತದೆ. ಆಹಾರದ ಕೊರತೆಯಿಂದ ಜೀವಿಯ ಜೈವಿಕ ವ್ಯವಸ್ಥೆಗಳ ಮತ್ತು ರೋಗ ಪ್ರತಿಬಂಧಕ ಶಕ್ತಿಗೆ ಕುಂದುಂಟಾಗುತ್ತದೆ. ಹಾಗಾಗಿ ದೇಹವು ರಕ್ತದೊತ್ತಡ, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತದೆ. ಬಿದ್ದ ಗೂಳಿಗೆ ಮತ್ತೊಂದು ಕಲ್ಲು'' ಎಂಬಂತೆ ಅತೀ ಸುಲಭವಾಗಿ ಬ್ಯಾಕ್ಟೀರಿಯಾ, ವೈರಸ್, ಶಿಲೀಂದ್ರಗಳು ಮತ್ತು ಪರೋಪ ಜೀವಿಗಳ ದಾಳಿಗೊಳಗಾಗುತ್ತದೆ. ಹಸಿದಾಗ ಜೀವಿಯ ಮೆದುಳು ಮತ್ತು ನರಮಂಡಲಗಳು ಸರಿಯಾಗಿ ಕೆಲಸವನ್ನು ಮಾಡಲಾರವು. ಹೀಗಾಗಿ ಅದು ಮಾನಸಿಕವಾಗಿ ಕುಗ್ಗುತ್ತದೆ. ಗರ್ಭಿಣಿ ಹೆಣ್ಣು ಮಕ್ಕಳ ಆರೋಗ್ಯವು ಆಹಾರದ ಕೊರತೆಯಿಂದ ಮತ್ತು ಅಪೌಷ್ಟಿಕತೆಯಿಂದ ಹೆಚ್ಚು ಸಂಕೀರ್ಣಗೊಳ್ಳುವ ಸಾಧ್ಯತೆ ಇದೆ. ಮನುಷ್ಯನ ಉತ್ಪಾದನಾ ಹಾಗೂ ಯೋಚನಾ ಶಕ್ತಿಗಳಿಗೆ ಹೊಡೆತ ಬೀಳುತ್ತದೆ. ಅನಿಮಿಯಾ, ದೃಷ್ಟಿಹೀನತೆ, ಮೆದುಳಾಘಾತ, ಶೈಕ್ಷಣಿಕವಾಗಿ ಹಿಂದುಳಿಯುವಿಕೆಗಳು ಇವು ಇತರ ಪರಿಣಾಮಗಳು. ಹಸಿವು ಎಂತಹ ಸಾತ್ವಿಕ ವ್ಯಕ್ತಿಯನ್ನೂ ಧೃತಿಗೆಡೆಸುತ್ತದೆ. ಏನಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಅನಿವಾರ್ಯತೆಯನ್ನು ನಿರ್ಮಿಸುತ್ತದೆ. ಕಳ್ಳತನ, ಮೋಸ, ದರೋಡೆ ಮಾಡಿಯಾದರೂ ಸರಿಯೇ, ಸ್ವಾಭಿಮಾನ ಬಿಟ್ಟು ಭಿಕ್ಷೆಯನ್ನು ಬೇಡಿದರೂ ಸರಿಯೇ, ಒಟ್ಟಾರೆ ಹಸಿವಾದಾಗ ತುತ್ತಿನ ಚೀಲವನ್ನು ತುಂಬಿಕೊಳ್ಳಬೇಕು. ಹಸಿವಿಗಿಂತ ಹೆಚ್ಚಿನ ವೈರಿ ಇನ್ಯಾರಿಲ್ಲ. ಅದಕ್ಕಿಂತ ಕೆಟ್ಟದ್ದು ಇನ್ನೊಂದಿಲ್ಲ. ಹಸಿವಿನಿಂದ ಕಂಗೆಟ್ಟ ಮನುಷ್ಯನ ವರ್ತನೆಯೇ ಬೇರೆಯಾಗಿರುತ್ತದೆ. ಆಗ ಮನುಷ್ಯ ಮನುಷ್ಯನಾಗಿರುವುದಿಲ್ಲ. ಹಸಿದ ಹೆಬ್ಬುಲಿಯಾದವನು ಪರರ ಬಗೆಗೆ ಚಿಂತಿಸಲಾರ. ಎಲ್ಲ ಪ್ರಾಣಿಗಳಿಗಿಂತ ಬುದ್ಧಿವಂತನೂ ಸಂಸ್ಕಾರವಂತನೂ ಆದ ಮನುಷ್ಯನೇ ರಕ್ಕಸನಂತೆ ವರ್ತಿಸುತ್ತಾನೆ. ಅಂತಹುದರಲ್ಲಿ ಪ್ರಾಣಿಗಳಿಗೆಲ್ಲಿ ತಾಳ್ಮೆ ಬರಬೇಕು? ಕಾಡಿನ ಪ್ರಾಣಿಗಳಿಗೆ ಆಹಾರ ದೊರಕದೇ ನಾಡಿಗೆ ನುಗ್ಗುತ್ತಿವೆ. ಕಾಡಿಗಂಟಿಕೊಂಡಿರುವ ಗ್ರಾಮಗಳ ಜನತೆಗೆ ಕಾಡುಪ್ರಾಣಿಗಳ ಭಯ ಸದಾ ಕಾಡುತ್ತಿರುತ್ತದೆ. ನಾಯಿ, ಹಸು, ಆಡುಗಳ ಬೇಟೆಯಾಡುತ್ತಿದ್ದ ಹುಲಿ, ಚಿರತೆ, ತೋಳಗಳು ಈಗ ಮನುಷ್ಯರ ಬೇಟೆಯನ್ನು ಆರಂಭಿಸಿವೆ! ಮಳೆಯಿಂದ ವಂಚಿತವಾದ ಕಾಡುಗಳಲ್ಲಿನ ಆನೆಗಳು ಭತ್ತ, ಕಬ್ಬಿನ ಗದ್ದೆಗಳಿಗೆ ನುಗ್ಗುತ್ತಿವೆ. ಹಸಿವಿನ ಸಂಕಟವನ್ನರಿತ ಸರಕಾರ, ಮಠ-ಮಾನ್ಯಗಳು ಅನಾದಿಕಾಲದಿಂದಲೂ ಅನ್ನದಾಸೋಹವನ್ನು ನಡೆಸಿಕೊಂಡು ಬಂದಿವೆ. ಧರ್ಮಸ್ಥಳ, ತಿರುಪತಿ, ಸಿದ್ದಗಂಗೆ, ಉಡುಪಿ, ಹೊರನಾಡು, ಮಂತ್ರಾಲಯಗಳಲ್ಲದೇ ಚಿಕ್ಕದೇವಾಲಯಗಳಲ್ಲೂ ತಮ್ಮ ಶಕ್ತಾಯನುಸಾರ ಪ್ರಸಾದದ ರೂಪದಲ್ಲಿ ಅನ್ನದಾನ ಮಾಡುತ್ತಿವೆ. ದಾಸ-ಶರಣರಂತೂಕಾಗೆ ಒಂದಗುಳ ಕಂಡರೆ ಕರೆಯದೆ ತನ್ನ ಬಳಗವ?'' ಕೋಳಿಯೊಂದು ಕುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವ'' ಎಂದು ಪ್ರಾಣಿಗಳಲ್ಲಿರುವಹಂಚಿಕೊಂಡು ತಿನ್ನುವ ಸುಸಂಸ್ಕೃತಿ''ಯನ್ನು ಎತ್ತಿ ತೋರಿಸಿದರು. ಹಸಿವಾದಾಗ ತಾನೊಬ್ಬನೇ ತಿಂದರೆ ಅದು ಪ್ರಕೃತಿ, ಇತರರ ಜೊತೆಗೆ ಹಂಚಿಕೊಂಡು ತಿಂದರೆ ಅದು ಸಂಸ್ಕೃತಿ. ಮತ್ತೊಬ್ಬರದನ್ನು ಕಿತ್ತುಕೊಂಡು ತಿಂದರೆ ಅದು ವಿಕೃತಿ. ಅನ್ನದಾನಕ್ಕಿಂತ ಇನ್ನು ದಾನವಿಲ್ಲ'' ಎನ್ನುವ ಮಾತು ಹಸಿವು ಇಂಗಿಸುವ ಕಳಕಳಿಯನ್ನು ತೋರಿಸುತ್ತದೆ. ಹಸಿವಿನಿಂದ ಯಾರೂ ಸಾಯಬಾರದೆಂದು ಸ್ಥಳೀಯ ಸಂಸ್ಥೆಗಳು, ರಾಜ್ಯ ಸರಕಾರಗಳು ಸಾರ್ವಜನಿಕರಿಂದ ತೆರಿಗೆ ಹಣ ಸಂಗ್ರಹಿಸಿ ಭಿಕ್ಷುಕರ ಕಲ್ಯಾಣ ನಿಧಿ/ಧರ್ಮಶಾಲೆಗಳನ್ನು ಸ್ಥಾಪಿಸಿದ್ದಾರೆ. ಇಸ್ಕಾನಿನ ಅಕ್ಷಯಪಾತ್ರ, ಅದಮ್ಯ ಚೇತನದ ಅನ್ನಪೂರ್ಣ, ರಾಜ್ಯ-ಕೇಂದ್ರ ಸರಕಾರಗಳ ಮಧ್ಯಾಹ್ನದ ಬಿಸಿ ಊಟದ ಮತ್ತು ಅನ್ನಭಾಗ್ಯ ಯೋಜನೆಗಳು ಯಾರೊಬ್ಬರೂ ಹಸಿವಿನಿಂದಾಗಿ ಬಳಲಬಾರದೆಂದು ಮಾಡಿರುವ ಪ್ರಯತ್ನಗಳು. ಬರ, ನೆರೆಹಾವಳಿ, ಭೂಕಂಪನ, ಸುನಾಮಿಯಂತಹ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸರಕಾರ/ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ಗಂಜಿಕೇಂದ್ರಗಳು ಮತ್ತು ಗೋಶಾಲೆಗಳು ತಾತ್ಕಾಲಿಕವಾಗಿ ಹಸಿವನ್ನು ನೀಗಿಸುವ ವ್ಯವಸ್ಥೆಗಳು. ಹಸಿದ ಹೊಟ್ಟೆಗೆ ಶಾಸ್ತ್ರಾಭ್ಯಾಸ ಹೇಳಲಾಗದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಮಿಕ್ಕಿದ ಆಹಾರವನ್ನು ಸಂಗ್ರಹಿಸಿ ಅನಾಥಾಲಯಗಳಿಗೆ, ದಿಕ್ಕಿಲ್ಲದವರಿಗೆ, ಭಿಕ್ಷುಕರಿಗೆ ಹಂಚುವ ಸೇವಾಸಂಸ್ಥೆಗಳೂ ಅಲ್ಲಲ್ಲಿ ಹುಟ್ಟಿಕೊಂಡಿವೆ. ಬೇಸಿಗೆಯಲ್ಲಿ ಪಕ್ಷಿಗಳಿಗಾಗಿ ನೀರಿಡುವ, ಕಾಳು ಹಾಕುವ ಪರಿಪಾಠವಿದೆ. ವನವಾಸದಲ್ಲಿದ್ದ ಪಾಂಡವರ ಬಳಿ ಅಕ್ಷಯಪಾತ್ರೆ ಇದ್ದ ವಿಷಯ ದೂರ್ವಾಸ ಮುನಿಗಳಿಗೆ ಗೊತ್ತಾಗಿತ್ತು. ದಿನದಲ್ಲಿ ಅಕ್ಷಯ ಪಾತ್ರೆಯನ್ನೊಮ್ಮೆ ಉಪಯೋಗಿಸಿ ತೊಳೆದಿಟ್ಟಿದ್ದರೆ ಮತ್ತೆ ಆ ದಿನ ಅದನ್ನು ಉಪಯೋಗಿಸುವಂತಿರಲಿಲ್ಲ. ಆದರೆ ದೂರ್ವಾಸ ಮುನಿಗಳೋ ಪಾಂಡವರ ಬಳಿ ಬಂದದ್ದೇ ತಡವಾಗಿತ್ತು. ಅದಾಗಲೇ ದ್ರೌಪದಿಯು ಅಕ್ಷಯ ಪಾತ್ರೆಯನ್ನೊಮ್ಮೆ ಬಳಸಿ ತೊಳೆದುಬಿಟ್ಟಿದ್ದಳು. ಸ್ನಾನ ಮುಗಿಸಿಕೊಂಡು ಬಂದು ಆಹಾರ ಸ್ವೀಕರಿಸುವುದಾಗಿ ಹೇಳಿ ದೂರ್ವಾಸ ಮುನಿಗಳು ಮತ್ತವರ ಸಂಗಡಿಗರು ನದಿಗೆ ಹೊರಟರು. ಇತ್ತ ದ್ರೌಪದಿಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ದೂರ್ವಾಸರೋ ಮೊದಲೇ ಮಹಾ ಕೋಪಿಷ್ಟರು. ಹಸಿದ ಅವರ ರೂಪವನ್ನು ಊಹಿಸಿಕೊಳ್ಳಲೂ ಅಸಾಧ್ಯವಾಗಿತ್ತು. ಭಗವಂತನಿಗೆ ಮೊರೆ ಹೋಗುವುದನ್ನು ಬಿಟ್ಟರೆ ಪಾಂಚಾಲಿಗೆ ಬೇರೆ ದಾರಿ ಕಾಣಲಿಲ್ಲ.ನೀನೇ ಕಾಯಬೇಕು ಕೃಷ್ಣ!'' ಎಂದು ಮೊರೆ ಇಟ್ಟಳು. ಭಗವಂತ ಕರುಣೆ ತೋರಿದ. ಅಕ್ಷಯಪಾತ್ರೆ ತರಲು ಹೇಳಿದ. ದೇವರ ಸೂಕ್ಷಮದೃಷ್ಟಿಗೆ ಪಾತ್ರೆಯ ಅಂಚಿನಲ್ಲೊಂದು ಅಗಳು ಕಂಡಿತು. ಭಗವಂತ ಅದನ್ನೇ ಸ್ವೀಕರಿಸಿದ, ನಸುನಕ್ಕ. ಅತ್ತ ನದಿಯಲ್ಲಿ ಸ್ನಾನ ಮಾಡುತ್ತಿದ್ದ, ಹಸಿದು ಹುಲಿಯಾಗಿದ್ದ ದೂರ್ವಾಸರು ಮತ್ತವರ ಜೊತೆಗಾರರಿಗೆ ಹೊಟ್ಟೆ ತುಂಬಿ, ತೇಗು ಬರತೊಡಗಿದವು. ದೇವರ ಮಹಿಮೆ ಅಪಾರ. ಹುಟ್ಟಿಸಿದ ದೇವರು ಹುಲ್ಲು ಮೇಯಿಸನು'' ಎನ್ನುವ ಮಾತಿದೆ.ಹಸಿವು'', ಹಸಿವಿನಿಂದ ಸಾವು''-ಇವು ನಾಗರಿಕ ಸಮಾಜವು ನಾಚಿಕೆಪಟ್ಟುಕೊಳ್ಳಬೇಕಾದ ಸಂಗತಿಗಳು. ಮಾನವೀಯತೆಯ ಹಿನ್ನೆಲೆಯಲ್ಲಿ ನೋಡಬೇಕಾದ ತುರ್ತು ವಿಷಯಗಳು. ಕಾರಣವೇನೇ ಇರಲಿ ಹಸಿರು ಕ್ರಾಂತಿಯ ಬಗೆಗೆ ಹೇಳುವಾಗ ಹಸಿವು ಅಪ್ರಸ್ತುತವಾಗಬೇಕು.ಹಂಚಿ ತಿನ್ನುವ'' ಸ್ವಭಾವವೇ ಇಂದಿನ ಅಕ್ಷಯ ಪಾತ್ರೆಯಾಗಬೇಕು. ಮಾನವೀಯತೆಯೇ ಭಗವಂತನ ರೂಪವಾಗಬೇಕು. ಅಂತಹ ಅಕ್ಷಯ ಪಾತ್ರೆ, ಭಗವಂತನ ಕೃಪೆ ಇದ್ದರೆ ಜಗದ ಪಶು-ಪಕ್ಷಿ, ಕೀಟ, ಮನುಷ್ಯ, ಕಣ್ಣಿಗೆ ಕಾಣದ ಸೂಕ್ಷಜೀವಿಗಳು, ಗಿಡ-ಮರಗಳು ಯಾರಿಗೂ ಆಹಾರದ ತೊಂದರೆಯೇ ಆಗದು.