ಕಂಡವರ ಆಸ್ತಿಯ ಮೇಲೆ ಕಣ್ಣು ಹಾಕಿದರೆ ಹುಷಾರ್
ಚಿಕ್ಕಮಗಳೂರು: ದುರ್ಬಳಕೆ ಆಗಿರುವ ದಾನದ ಆಸ್ತಿ ವಾಪಸ್ ಪಡೆದುಕೊಳ್ಳುವುದು ಬೇರೆ, ಕಂಡ ಕಂಡವರ ಆಸ್ತಿಯ ಮೇಲೆ ಕಣ್ಣು ಹಾಕುವುದು ಬೇರೆ, ಕಂಡವರ ಆಸ್ತಿಯ ಮೇಲೆ ಕಣ್ಣು ಹಾಕಿದರೆ ಜನ ಕೇವಲ ಬಡಿಗೆ ಮಾತ್ರ ತೆಗೆದುಕೊಳ್ಳುವುದಿಲ್ಲ, ಜೊತೆಗೆ ಕಾಲಿನಲ್ಲಿ ಇರುವುದನ್ನು ತೆಗೆದುಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಗಿಂತ ಬಿಜೆಪಿ ಅವಧಿಯಲ್ಲಿ ಹೆಚ್ಚು ನೋಟಿಸ್ ನೀಡಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ದಾನದ ಆಸ್ತಿಯನ್ನು ಪ್ರಭಾವಿಗಳು ದುರ್ಬಳಕೆ ಮಾಡಿಕೊಂಡಿರುವುದು ಅನ್ವರ್ ಮಾನಪ್ಪಾಡಿ ವರದಿಯಲ್ಲಿ ಉಲ್ಲೇಖವಾಗಿತ್ತು. ದುರ್ಬಳಕೆಯಾಗಿರುವ ಆಸ್ತಿಯನ್ನು ಉಳಿಸಿ ಎಂದು ನಾವು ಹೇಳಿದ್ದು ನಿಜ ಎಂದರು.
ದುರ್ಬಳಕೆ ಆಗಿರುವ ಆಸ್ತಿಯನ್ನು ಉಳಿಸಿಕೊಳ್ಳುವ ಬದಲು ಈಗ ಎಲ್ಲವೂ ನಂದು ನಂದು ಎಂದು ಕಂಡವರ ಆಸ್ತಿ ಮೇಲೆ ಕಣ್ಣು ಹಾಕುವ ಕೆಲಸವಾಗುತ್ತಿದೆ. ರೈತರ ೧೮ ಸಾವಿರ ಎಕರೆ ಆಸ್ತಿಯನ್ನು ದಾಖಲೆ ಇಲ್ಲದೆ ವಕ್ಫ್ ಬೋರ್ಡ್ ಹೆಸರಿಗೆ ಮಾಡಲು ನಾವು ಹೇಳಿದ್ದೆವಾ ಎಂದು ಪ್ರಶ್ನಿಸಿ, ದುರ್ಬಳಕೆ ಆಗಿರುವ ದಾನದ ಆಸ್ತಿಯನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ನಾವು ಈಗಲೂ ಬದ್ಧ. ಆದರೆ ಕಂಡವರ ಆಸ್ತಿ ಮೇಲೆ ಕಣ್ಣು ಹಾಕುವುದನ್ನು ನಾವು ವಿರೋಧಿಸುತ್ತೇವೆ ಎಂದರು.