ಕಂಪನಿಯಲ್ಲಿ ರಾಸಾಯನಿಕ ಸೋರಿಕೆ: 12ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ!
ಕಾರವಾರದ ಬಿಣಗಾದ ಆದಿತ್ಯ ಬಿರ್ಲ ಕಂಪನಿಯಲ್ಲಿ ರಾಸಾಯನಿಕ ಸೋರಿಕೆ
ಕಾರವಾರ: ರಾಸಾಯನಿಕ ಸೋರಿಕೆಯಾಗಿ 12 ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಕಾರವಾರದ ಬಿಣಗಾದ ಆದಿತ್ಯ ಬಿರ್ಲ ಕಂಪನಿಯಲ್ಲಿ ಶನಿವಾರ ನಡೆದಿದೆ.
ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪತ್ರದೇಶ ಹಾಗೂ ಬಿಹಾರ ಮೂಲದವರಾದ ನೀಲಕಂಠ (22), ಜಹಾನೂರ (20), ಕಮಲೇಶ ವರ್ಮಾ (22), ನಂದಕಿಶೋರ (21), ದೀಪು (28), ಅಜೀಜ್ (23), ಕಲ್ಲು (37), ಸುಜನ್ (26), ನಜೀದುಲ್ಲಾ (24), ಬೇಜನಕುಮಾರ್ (27), ಕಿಶನ್ ಕುಮಾರ್ (28) ಮೋಹಿತ ವರ್ಮಾ(21) ಅಸ್ವಸ್ಥಗೊಂಡವರಾಗಿದ್ದಾರೆ.
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಾಸಾಯನಿಕ ಸೋರಿಕೆಯಾಗಿ ಈ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅಸ್ವಸ್ಥಗೊಂಡ ಕಾರ್ಮಿಕರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಸ್ಥಳಕ್ಕೆ ಕಂಪನಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಇನ್ನು ಹಲವು ಕಾರ್ಮಿಕರು ಅಸ್ವಸ್ಥಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಕೆಲ ದಿನದ ಹಿಂದೆ ಕ್ಲೋರಿನ್ ಸೋರಿಕಯಿಂದ ಕಾರ್ಮಿಕನೋರ್ವ ಮೃತಪಟ್ಟಿದ್ದ ಬೆನ್ನಲ್ಲೇ ಇದೀಗ ಮತ್ತೆ ಈ ದುರ್ಘಟನೆ ಸಂಭವಿಸಿದೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.