ಕಠಿಣ ಶಿಕ್ಷೆಗೆ ಹೆಸರುವಾಸಿ ಬಳ್ಳಾರಿ ಸೆಂಟ್ರಲ್ ಜೈಲು
ಮಲ್ಲಿಕಾರ್ಜುನ ಚಿಲ್ಕರಾಗಿ
ಬಳ್ಳಾರಿ: ಬ್ರಿಟಿಷ್ ಆಡಳಿತ ಅವಧಿಯಲ್ಲಿಯೇ ನಿರ್ಮಾಣಗೊಂಡ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಇದ್ದ ಪ್ರಖ್ಯಾತಿಯೂ ಇದ್ದು, ನೂರಾರು ನಟೋರಿಯಸ್ ಕ್ರಿಮಿನಲ್‌ಗಳನ್ನು ದಂಡಿಸಿದ ಕುಖ್ಯಾತಿಯನ್ನೂ ಹೊಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ೨ ಆರೋಪಿ, ನಟ ದರ್ಶನ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವ ಆದೇಶ ಹೊರಬಿದ್ದ ಬಳಿಕ ಕೇಂದ್ರ ಕಾರಾಗೃಹದ ಇತಿಹಾಸ ಮತ್ತೊಮ್ಮೆ ತೆರೆದುಕೊಂಡಿದೆ. ದೇಶದ ಅತ್ಯಂತ ಹಳೆಯ ಮತ್ತು ಫೇಮಸ್ ಜೈಲುಗಳಲ್ಲಿ ಬಳ್ಳಾರಿಯೂ ಒಂದಾಗಿದೆ. ಅಂಡಮಾನ್ ಬಿಟ್ಟರೆ ಅತಿ ಕಠಿಣ ಮತ್ತು ಹೈ ಭದ್ರತೆಯ ಕಾರಾಗೃಹ ಇದಾಗಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಎಲ್ಲ ಜೈಲುಗಳಂತೆ ಬದಲಾಗಿರುವುದು ಹಲವು ಬಾರಿಯ ಪರಿಶೀಲನೆ ವೇಳೆ ಬಹಿರಂಗವಾಗಿದೆ.
ಮೂರು ಜೈಲು: ೧೮೪೦ರಲ್ಲಿ ವಿಶಾಲ ೧೬ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಜೈಲು ಈಗಲೂ ಗಟ್ಟಿಮುಟ್ಟಾಗಿದೆ. ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಸಾವಿರಾರು ದೇಶಭಕ್ತರು ಇಲ್ಲಿ ಸೆರೆಮನೆ ವಾಸ ಅನುಭವಿಸಿದ್ದಾರೆ. ೨ನೇ ಮಹಾಯುದ್ಧಕ್ಕೂ ಮುಂಚಿತವಾಗಿ ಆರಂಭವಾದ ಈ ಜೈಲು ದೇಶಭಕ್ತರಿಗೆ ಶಿಕ್ಷೆ ನೀಡಲು ಬಳಕೆಯಾಗಿದೆ.
ಈ ಮೂರು ಜೈಲುಗಳು ಈಗಲೂ ಬಳಕೆಯಾಗುತ್ತಿವೆ. ಈಗಿರುವ ಬಳ್ಳಾರಿ ಕೇಂದ್ರ ಕಾರಾಗೃಹ ಹೊರತುಪಡಿಸಿ, ಅಲ್ಲಿಪುರ ಜೈಲು ಈಗ ವಿಮ್ಸ್ ಆಸ್ಪತ್ರೆಯಾಗಿ ಮಾರ್ಪಾಡಾಗಿದೆ. ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಹೊರರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ಆರ್ಥರ್ ವೆಲ್ಲಿಸ್ಲಿ ಟಿಬಿ ಸ್ಯಾನಿಟೋರಿಯಂ ಜೈಲು, ಕಿವುಡು ಮತ್ತು ಮೂಗು ಮಕ್ಕಳ ಆಶ್ರಮವಾಗಿ ಮಾರ್ಪಾಟಾಗಿದೆ. ಅಚ್ಚರಿ ಎಂದರೆ ಈ ಮೂರು ಕಟ್ಟಡಗಳು ಎಂಟು ದಶಕಗಳೇ ಕಳೆದರೂ ಗಟ್ಟಿಮುಟ್ಟಾಗಿಯೇ ಇವೆ.
ಇಲ್ಲಿಯೂ ಗಲ್ಲು ಶಿಕ್ಷೆ: ದೇಶದ ಕೆಲವೇ ಕೆಲವು ಜೈಲುಗಳಲ್ಲಿ ಮಾತ್ರ ಗಲ್ಲುಶಿಕ್ಷೆಯ ವ್ಯವಸ್ಥೆಯಿದೆ. ಇಂಥ ವ್ಯವಸ್ಥೆ ದೇಶದ ಪುರಾತನ ಜೈಲಾದ ಬಳ್ಳಾರಿಯಲ್ಲಿಯೂ ಇದೆ. ಇತ್ತೀಚಿನವರೆಗೆ ಗಲ್ಲು ಶಿಕ್ಷೆಗೆ ನಿಷೇಧವಿದ್ದರಿಂದ ಸ್ಥಗಿತಗೊಂಡಿದೆ. ಈ ಜೈಲಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಇದೆ. ಸ್ವಾತಂತ್ರö್ಯ ಹೋರಾಟದ ಕಿಚ್ಚು ಹೆಚ್ಚಾದಾಗ ಸಾವಿರಕ್ಕೂ ಹೆಚ್ಚು ಹೋರಾಟಗಾರ ಬಂಧನವಾಗುತ್ತಿತ್ತು. ಆ ಸಂದರ್ಭದಲ್ಲಿ ಬಳ್ಳಾರಿ ಹೊರವಲಯದ ಅಲಿಪುರದ ಬಳಿ ಓಪನ್ ಜೈಲು ಆರಂಭಿಸಿದರು. ಸ್ಯಾನಿಟೋರಿಯಂ ಜೈಲು ಟಿಬಿ ಕೈದಿಗಳಿಗಾಗಿ ಆರಂಭವಾದ ಜೈಲಿದು. ನೆಪೋಲಿಯನ್ ಸೋಲುಣಿಸಿದ ಆರ್ಥರ್ ವೆಲ್ಲೆಸ್ಲಿ ಬಳ್ಳಾರಿಯಲ್ಲಿ ಕೆಲ ಕಾಲ ಬ್ರಿಟಿಷ್ ಅಧಿಕಾರಿಯಾಗಿದ್ದರು. ಅವರ ಹೆಸರಿನಲ್ಲಿ ನಿರ್ಮಿಸಿದ ಜೈಲಿನಲ್ಲಿ ೩೫೦ಕ್ಕೂ ಹೆಚ್ಚು ಟಿಬಿ ರೋಗವಿದ್ದ ಕೈದಿಗಿಳಿರುವ ವ್ಯವಸ್ಥೆಯಿತ್ತು. ದೇಶದಲ್ಲಿ ಅತಿ ಹೆಚ್ಚು ಕಾರಾಗೃಹವಿದ್ದ ನಗರಗಳಲ್ಲಿ ಬಳ್ಳಾರಿ ನಗರ ಮೊದಲ ಸ್ಥಾನದಲ್ಲಿದೆ.
ನಟೋರಿಯಸ್ ಆರೋಪಿಗಳು
ಬಳ್ಳಾರಿ ಜೈಲು ಈಗ ಹಲವು ನಟೋರಿಯಸ್‌ಗಳನ್ನು ದಂಡಿಸಲು ಬಳಕೆಯಾಗುತ್ತಿದೆ. ಭೀಮಾ ತೀರದ ಹಂತಕರು, ರೇಪಿಸ್ಟ್ ಉಮೇಶ್ ರೆಡ್ಡಿ, ಡೆಡ್ಲಿ ಸೋಮ, ಸಿಗ್ಲಿ ಬಸ್ಯಾ, ನಟೋರಿಯಸ್ ರೌಡಿ ಬಚ್ಚಾಖಾನ್ ಇಲ್ಲಿ ಮುದ್ದೆ ಮುರಿದಿದ್ದಾರೆ. ಹರ್ಷ ಮತ್ತು ಪ್ರವೀಣ್ ಪೂಜಾರಿ ಮರ್ಡರ್ ಕೇಸ್ ಆರೋಪಿಗಳು ಇಲ್ಲಿದ್ದಾರೆ. ಬೇರೆ ಬೇರೆ ಕಾರಾಗೃಹದಲ್ಲಿದ್ದರೂ ಸುಧಾರಿಸದ ಅಪರಾಧಿಗಳನ್ನು ಇಲ್ಲಿಗೆ ಶಿಫ್ಟ್ ಮಾಡಲಾಗುತ್ತದೆ. ಬಳ್ಳಾರಿಯಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಇಲ್ಲಿನ ಕೈದಿಗಳಿಗೆ ಅದೇ ಶಿಕ್ಷೆಯಾಗಲಿದೆ. ಪೂರ್ಣ ಕಲ್ಲಿನಿಂದಲೇ ಜೈಲು ನಿರ್ಮಾಣವಾಗಿದ್ದು, ಬೇಸಿಗೆ ಅವಧಿಯಲ್ಲಿ ಈ ಜೈಲಿನಲ್ಲಿ ಕಾಲ ಕಳೆಯುವುದೇ ಕಷ್ಟ.
ಮಹನೀಯರ ಭೇಟಿ
ಬಳ್ಳಾರಿ ಜೈಲಿಗೆ ೧೯೦೫ರಲ್ಲಿ ಬಾಲ ಗಂಗಾಧರ ತಿಲಕ್ ಭೇಟಿ, ೧೯೩೭ರಲ್ಲಿ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಭೇಟಿ ನೀಡಿದ್ದರು. ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ೧೯೪೨ರ ಎರಡನೇ ಮಹಾಪ್ರಪಂಚ ಯುದ್ಧದ ಸಂದರ್ಭದಲ್ಲಿ ವಿದೇಶಿ ಬಂಧಿಗಳನ್ನು ಸಹ ಬಳ್ಳಾರಿಯ ಜೈಲುಗಳಲ್ಲಿ ಬಂಧಿಯಾಗಿರಿಸಿದ್ದರು ಎನ್ನುವುದು ಮತ್ತೊಂದು ವಿಶೇಷ.