ಕಡತಗಳ ರಾಕೆಟ್ ವೇಗದ ವಿಲೇವಾರಿ ಗುಟ್ಟು ರಟ್ಟಾಗಲಿ
ವಿಧಾನಸಭೆ: ರಾಜ್ಯದ ಕೆಲ ಇಲಾಖೆಗಳ ಕಡತಗಳು ರಾಕೆಟ್ ವೇಗದಲ್ಲಿ ವಿಲೇವಾರಿಯಾಗುತ್ತಿರುವುದರ ಗುಟ್ಟೇನೆಂಬುದು ಬಹಿರಂಗವಾಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೧.೩೭ ಲಕ್ಷ ಕಡತಗಳು ವಿಲೇವಾರಿಯಾಗಿಲ್ಲವೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ, ಕೆಲ ಕಡತಗಳು ರಾಕೆಟ್ ವೇಗದಲ್ಲಿ ವಿಲೇವಾರಿಯಾಗುತ್ತಿವೆ. ಇದು ಯಾವ ಮಟ್ಟು? ಯಾವ ಪಟ್ಟು?, ಈ ಮಟ್ಟುಗಳ ಒಡೆಯ ಯಾರು? ಇದರ ನಿಜವಾದ ಗುಟ್ಟೇನು? ಎಂಬುದು ಸದನದಲ್ಲಿ ರಟ್ಟಾಗಬೇಕಿದೆ ಎಂದರು.
ಬೀದರ್ ಜಿಲ್ಲೆಯಲ್ಲಿ ನಗರೋತ್ಥಾನ ಯೋಜನೆಯ ಕಡತಗಳು ಡಾಕ್ಟರ್ ಚೀಟಿ' ಇದ್ದರಷ್ಟೆ ವಿಲೇವಾರಿಯಾಗುತ್ತಿವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ ಎನ್ನುತ್ತಿದ್ದಂತೆ ಬಿಜೆಪಿ ಸದಸ್ಯರು
ಯಾವ ಡಾಕ್ಟರ್ ಚೀಟಿ' ಎಂದು ಕೆಣಕಿದರು. ಆಗ ಕುಮಾರಸ್ವಾಮಿ, ಇದು ಮಾಮೂಲಿ ಡಾಕ್ಟರಲ್ಲ, ಮಧ್ಯವರ್ತಿ ಡಾಕ್ಟರ್ ಚೀಟಿ ಎಂದು ಮಾರ್ಮಿಕವಾಗಿ ನುಡಿದರು.
ಗದಗ ಜಿಲ್ಲೆಯಲ್ಲಿ ಮರಳುದಂಧೆಯಿಂದಾಗಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಪರ್ಸಂಟೇಜ್ ಬಗ್ಗೆ ಮಾತಾಡಿದ್ದಾರೆ. ಈ ಸರ್ಕಾರದಲ್ಲಿ ಪರ್ಸಂಟೇಜ್ ಕಡಿಮೆಯಾಗಿದೆಯಾ? ಜಾಸ್ತಿಯಾಗಿದೆಯಾ? ತಿಳಿಸಬೇಕು. ದೇಶದ ಜಿಡಿಪಿಯ ೨೫೦ ಲಕ್ಷ ಕೋಟಿಯಲ್ಲಿ ಪ್ರತಿ ವರ್ಷ ೨೫ ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಹೊರದೇಶಕ್ಕೆ ಹೋಗುತ್ತಿದೆ ಎಂಬ ವರದಿಯಿದೆ. ಹೀಗಿರುವಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡದಿರುವುದೇ ಲೇಸು ಎಂದರು.