ಕಡಲ್ಕೊರೆತ ಶಾಶ್ವತ ತಡೆಗೆ ಕ್ರಿಯಾಯೋಜನೆ
ಉಡುಪಿ: ಕರಾವಳಿಯಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿರುವ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಶಾಶ್ವತ ಪರಿಹಾರ ಒಡಗಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು. ಬಳಿಕ ಅದಕ್ಕೆ ಬೇಕಾಗಿರುವ ಹಣಕಾಸು ವ್ಯವಸ್ಥೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಹೊಂದಾಣಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಹೇಳಿದರು.
ಮಂಗಳವಾರ ಪಡುಬಿದ್ರೆ ಬೀಚ್‌ನಲ್ಲಿ ಸಮುದ್ರ ಕೊರೆತ ವೀಕ್ಷಿಸಿ ಮಾತನಾಡಿದರು. ಪಡುಬಿದ್ರಿ ಬೀಚ್ ನಲ್ಲಿ ಸಾಕಷ್ಟು ಕಾಮಗಾರಿ ನೆಡೆದಿದ್ದು, ಇನ್ನೂ ಅನೇಕ ಕಾಮಗಾರಿ ಬಾಕಿ ಹಾಗೂ ಹೊಸ ಕಾಮಗಾರಿ ಕೈಗೊಳ್ಳಬೇಕಿದೆ ಎಂದರು.
ಉಡುಪಿ ಖಾಸಗಿ ಕಾಲೇಜಿನಲ್ಲಿ ನಡೆದ ವೀಡಿಯೊ ಪ್ರಕರಣದ ತನಿಖೆ ಡಿವೈಎಸ್ ಪಿ ಮಟ್ಟದ ಅಧಿಕಾರಿಯಿಂದ ನಡೆಯುತ್ತಿದೆ. ಪೊಲೀಸರ ವರದಿ ಬರಲಿ. ಆಮೇಲೆ ನೋಡೋಣ. ಸದ್ಯ ಈ ಪ್ರಕರಣದ ಬಗ್ಗೆ ಸದ್ಯ ಏನೂ ಹೇಳುವುದಿಲ್ಲ ಎಂದರು.
ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಯ ವೇತನ ಬಿಡುಗಡೆ ಬಗ್ಗೆ ಕೂಡಲೇ ಹಣಕಾಸು ಇಲಾಖೆಗೆ ಸೂಚನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಂದರು ಮತ್ತು ಮೀನುಗಾರಿಕೆ ಸಚಿವ ಮಾಂಕಳ ವೈದ್ಯ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಮೊದಲಾದವರಿದ್ದರು.