For the best experience, open
https://m.samyuktakarnataka.in
on your mobile browser.

ಕಣದಲ್ಲಿ ಟಾಪ್ ಟೆನ್ ಕುಬೇರರು

01:30 AM Apr 09, 2024 IST | Samyukta Karnataka
ಕಣದಲ್ಲಿ ಟಾಪ್ ಟೆನ್ ಕುಬೇರರು

ನವದೆಹಲಿ: ಮೊದಲನೇ ಹಂತದ ಚುನಾವಣೆಯ ಪ್ರಚಾರ ಬಿರುಸುಗೊಂಡಿದ್ದು, ಏಪ್ರಿಲ್ ೧೯ರಂದು ಮತದಾನ ನಡೆಯಲಿದೆ. ಈ ಹಂತದ ಸ್ಪರ್ಧಾಳುಗಳ ಪೈಕಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದರೆ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಕೂಡ ಟಾಪ್ ೧೦ ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಟಾಪ್-೧೦ ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಮುಖಂಡ ಕಮಲನಾಥ್ ಪುತ್ರ ನಕುಲ್ ನಾಥ್ ಅವರು ಮಧ್ಯಪ್ರದೇಶದ ಛಿಂದವಾಡ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರು ೭೧೬ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದಾರೆ.
ತಮಿಳುನಾಡಿನ ಈರೋಡ್ ಕ್ಷೇತ್ರದಿಂದ ಸ್ಪರ್ಧಿಸಿರುವ ಎಐಎಡಿಎಂಕೆ ಅಭ್ಯರ್ಥಿ ಅಶೋಕ್ ಕುಮಾರ್ ೬೬೨ ಕೋಟಿ ರೂಪಾಯಿಗೂ ಹೆಚ್ಚು ಧನವಂತರು.
ತಮಿಳುನಾಡಿನ ಶಿವಗಂಗೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವನಾಥನ್ ಯಾದವ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದು ಇವರ ಆಸ್ತಿ ಮೌಲ್ಯ ೩೦೪ ಕೋಟಿ ರೂಪಾಯಿಗೂ ಜಾಸ್ತಿ. ಉತ್ತರಾಖಂಡದ ತೆಹ್ರಿ ಗಢವಾಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಲಾ ರಾಜ್ಯಲಕ್ಷ್ಮೀ ಶಾ ಹೆಸರಿಗೆ ತಕ್ಕಂತೆ ಲಕ್ಷ್ಮೀ ಪುತ್ರಿ. ಅವರು ೨೦೬ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಗೆ ಒಡೆಯರಾಗಿದ್ದಾರೆ.
ಸಹರಾನ್‌ಪುರದ ಬಿಎಸ್‌ಪಿ ಅಭ್ಯರ್ಥಿ ಮಜೀದ್ ಅಲಿ ೧೫೯ ಕೋಟಿ ರೂಪಾಯಿ, ವೆಲ್ಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಷಣ್ಮುಗಂ ೧೫೨ ಕೋಟಿ ರೂಪಾಯಿ, ಕೃಷ್ಣಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರಕಾಶ್.ವಿ ೧೩೫ ಕೋಟಿ ರೂಪಾಯಿ, ಶಿಲ್ಲಾಂಗ್‌ನ ಕಾಂಗ್ರೆಸ್ ಅಭ್ಯರ್ಥಿ ವಿನ್ಸೆಂಟ್ ಪಾಲ ೧೨೫ ಕೋಟಿ ರೂಪಾಯಿ, ರಾಜಸ್ಥಾನದ ನಾಗೌರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜ್ಯೋತಿ ಮಿರ್ಧಾ ೧೦೨ ಕೋಟಿ ರೂಪಾಯಿ, ತಮಿಳುನಾಡಿನ ಶಿವಗಂಗೈ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾರ್ತಿ ಚಿದಂಬರಂ ೯೬ ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಹೊಂದಿದ್ದಾರೆ.