ಕತ್ತೆಗಳ ಮಾರಾಟ ಕಂಪನಿಗೆ ಬೀಗ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿದ್ದ ಕತ್ತೆಗಳ ಮಾರಾಟ ಕಂಪನಿಗೆ ಮಂಗಳವಾರ ತಾತ್ಕಾಲಿಕವಾಗಿ ಬೀಗ ಜಡಿಯಲಾಯಿತು.
ಆಂಧ್ರಪ್ರದೇಶದ ಅನಂತಪುರ ಮೂಲದ ಜೆನ್ನಿಮಿಲ್ಕ್ ಎಂಬ ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳ ತಂಡ ಟ್ರೇಡ್ ಲೈಸೆನ್ಸ್ ಇಲ್ಲದ ಕಾರಣ ಕಚೇರಿಗೆ ಬೀಗ ಜಡಿದರು.
ಜೆನ್ನಿಮಿಲ್ಕ್ ಎಂಬ ಕಂಪನಿ ಕತ್ತೆ ಹಾಲು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಸೇರಿ ನಾನಾ ಕಾರಣ ಹೇಳಿ ಬಹಳಷ್ಟು ರೈತರಿಗೆ ಸಾಕಾಣಿಕೆ ವ್ಯವಸ್ಥೆ ಮಾಡಿ ನಗರದಲ್ಲಿ ಮಾರಾಟ ಮಳಿಗೆ ತೆರೆದಿದ್ದರು. ವಿಷಯ ತಿಳಿದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಪರಿಸರ ಎಂಜಿನಿಯರ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಉದ್ಯಮ ಪರವಾನಿಗೆ ಪಡೆದಿರಲಿಲ್ಲ. ಹಾಗಾಗಿ ತಾತ್ಕಾಲಿಕವಾಗಿ ಬಂದ್ ಮಾಡಿದ್ದೇವೆ. ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆದರೆ ಅದರ ಆಧಾರದ ಮೇಲೆ ಟ್ರೇಡ್ ಲೈಸೆನ್ಸ್ ನೀಡುವ ಕುರಿತು ಪರಿಶೀಲಿಸಬಹುದು. ಸದ್ಯಕ್ಕೆ ಅದ್ಯಾವುದೂ ಇಲ್ಲದ ಕಾರಣ, ಜನರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಬಂದ್ ಮಾಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕತ್ತೆಗಳ ಮಾರಾಟ ಕಂಪನಿಯು ರೈತರು ಮತ್ತು ಸಾಕಣೆದಾರರಿಂದ ಲಕ್ಷ, ಲಕ್ಷ ಹಣ ಪಡೆದಿರುವ ಕುರಿತು ಕೆಲ ರೈತ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದವು. ಈ ಕುರಿತು ತನಿಖೆಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್ ಅವರನ್ನು ತನಿಖೆಗೆ ನೇಮಿಸಲಾಗಿತ್ತು. ಇವರು ಕಚೇರಿಗೆ ಹೋದಾಗ ಕೇಳಿದ ದಾಖಲೆಗಳ ಪೈಕಿ ಟ್ರೇಡ್ ಲೈಸೆನ್ಸ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇದೇ ಆಧಾರದ ಮೇಲೆ ಪೌರಾಯುಕ್ತರಿಗೆ ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಸೂಚಿಸಿದ್ದರು.