ಕನಸಿನಲ್ಲಿ ಬಂದ ದೇವರ ವಿಗ್ರಹ ವಾಸ್ತವದಲ್ಲಿ ಶೋಧಿಸಿದಾಗ ನಿಜವಾಗಿತ್ತು..
ಮಂಗಳೂರು: ಏಳು ನೂರು ವರ್ಷ ಹಳೆಯದು ಎನ್ನಲಾದ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹವೊಂದು ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲು ಎಂಬಲ್ಲಿ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರಿಗೆ ಕನಸಿನಲ್ಲಿ ಬಂದ ಮಾಹಿತಿಯಂತೆ, ಸ್ಥಳೀಯರು ಉತ್ಖನನ ನಡೆಸಿದಾಗ ವಿಗ್ರಹ ಪತ್ತೆಯಾಗಿದ್ದು ಸ್ಥಳೀಯರನ್ನು ಅಚ್ಚರಿಗೀಡು ಮಾಡಿದೆ.
ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಲಕ್ಷ್ಮಣ್ ಅವರು, ಇತ್ತೀಚೆಗೆ ತೆಕ್ಕಾರಿನಲ್ಲಿ ಭೂಮಿ ಖರೀದಿಸಿದ್ದರು. ಪಕ್ಕದ ಜಮೀನಿನ ಬಾವಿಯಲ್ಲಿ ಗೋಪಾಲಕೃಷ್ಣನ ವಿಗ್ರಹ ಇರುವುದಾಗಿ ಅವರಿಗೆ ವಿಚಿತ್ರ ಕನಸು ಬಿದ್ದಿತ್ತು. ಈ ಬಗ್ಗೆ ಸ್ಥಳೀಯರಲ್ಲಿ ಕೇಳಿದಾಗ ನೂರಾರು ವರ್ಷಗಳ ಹಿಂದೆ, ತೆಕ್ಕಾಡಿ ಗ್ರಾಮದಲ್ಲಿ ಗೋಪಾಲಕೃಷ್ಣನ ದೇವಸ್ಥಾನವಿದ್ದು, ಆನಂತರದ ದಿನಗಳಲ್ಲಿ ನೆಲಸಮವಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದರು. ಆ ಮಾಹಿತಿ ಅವರಿಗೆ ತಮ್ಮ ಹಿರಿಯರಿಂದ ಬಂದಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ದೇವಸ್ಥಾನ ಯಾವ ಭಾಗದಲ್ಲಿತ್ತು ಎಂಬುದು ಯಾರಿಗೂ ತಿಳಿದಿರಲಿಲ್ಲ. ಈ ನಡುವೆ, ಸ್ಥಳೀಯರು ತಾಂಬೂಲ ಪ್ರಶ್ನೆ ಇಟ್ಟು ನೋಡಿದ್ದು ದೇವರ ಅಸ್ತಿತ್ವ ಇರುವುದು ಪತ್ತೆಯಾಗಿತ್ತು.
ದೇವರ ವಿಗ್ರಹ ಇದೆಯೆಂದು ಕನಸಿನಲ್ಲಿ ಬಂದಿದ್ದ ಜಾಗ ಮುಸ್ಲಿಂ ವ್ಯಕ್ತಿ ಅಹ್ಮದ್ ಬಾವಾ ಎಂಬವರ ವಶದಲ್ಲಿತ್ತು. ಹೀಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಲ್ಲಿ ಸ್ಥಳೀಯರು ತಿಳಿಸಿದ್ದು, ವಿವಾದಿತ ಜಾಗದ ದಾಖಲೆ ಪರಿಶೀಲಿಸುವ ಸಂದರ್ಭದಲ್ಲಿ ಸರಕಾರಿ ಕುಮ್ಕಿ ಭೂಮಿ ಎಂದು ತಿಳಿದುಬಂದಿತ್ತು. ವಿವಾದಿತ ೨೫ ಸೆಂಟ್ ಭೂಮಿಯನ್ನು ಬಳಿಕ ಟ್ರಸ್ಟ್ ಹೆಸರಲ್ಲಿ ಧಾರ್ಮಿಕ ದತ್ತಿ ಇಲಾಖೆಯಡಿ ನೋಂದಣಿ ಮಾಡಿಸಿ ಸ್ಥಳೀಯರು ದೇವಸ್ಥಾನದ ಪಳಿಯುಳಿಕೆಗಳ ಬಗ್ಗೆ ಶೋಧನೆ ನಡೆಸಿದ್ದರು. ಅಲ್ಲಿದ್ದ ಪಾಳು ಬಿದ್ದ ಬಾವಿಯನ್ನು ಅಗೆಯುವ ಸಂದರ್ಭದಲ್ಲಿ ಅರ್ಧ ತುಂಡಾಗಿರುವ ಗೋಪಾಲಕೃಷ್ಣನ ಕಲ್ಲಿನ ವಿಗ್ರಹ ಪತ್ತೆಯಾಗಿದೆ.
‘ತಾನು ಆ ಊರಿನವ ಅಲ್ಲ. ಆ ಜಾಗದಲ್ಲಿ ಜಮೀನು ಸಿಕ್ಕಿದ್ದಕ್ಕೆ ಖರೀದಿಸಿದ್ದೇನೆ ಎಂದಿದ್ದಾರೆ. ಕನಸು ಬಿದ್ದ ಬಳಿಕ ಸ್ಥಳೀಯರಲ್ಲಿ ಹೇಳಿದ್ದೆ. ವಿಗ್ರಹ ಇದ್ದ ಜಾಗದಲ್ಲಿದ್ದವರು ಹಿಂದೆ ಶ್ರೀಮಂತರಾಗಿದ್ದರೂ, ಆ ಜಾಗದಲ್ಲಿ ಒಳ್ಳೆಯದಾಗಿರಲಿಲ್ಲವಂತೆ. ಅದಕ್ಕೂ ಹಿಂದೆ ಇದ್ದವರೂ ಅದೇ ರೀತಿಯಲ್ಲಿ ನಷ್ಟಗೊಂಡು ಆ ಭೂಮಿ ಬಿಟ್ಟು ಹೋಗಿದ್ದರಂತೆ. ದೇವಸ್ಥಾನದ ಕುರುಹು ಇದ್ದ ಕಾರಣಕ್ಕೆ ಹಾಗಾಗಿರಬಹುದು ಎಂದು ಲಕ್ಷ್ಮಣ್ ಹೇಳಿದ್ದಾರೆ. ಸ್ಥಳೀಯರು ಈಗ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಗೋಪಾಲಕೃಷ್ಣ ದೇವಸ್ಥಾನ ಕಟ್ಟಲು ತಯಾರಿ ನಡೆಸಿದ್ದಾರೆ.