For the best experience, open
https://m.samyuktakarnataka.in
on your mobile browser.

ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ

11:51 AM Jan 03, 2024 IST | Samyukta Karnataka
ಕನ್ನಡದ ಕಣ್ವ ಬಿ ಎಂ ಶ್ರೀಕಂಠಯ್ಯ

ಇಂದು ಬಿ.ಎಂ.ಶ್ರೀಕಂಠಯ್ಯ ಅವರ ಜನ್ಮದಿನ ತನ್ನಿಮಿತ್ತ ಲೇಖನ.

ಸುರೇಶ ಗುದಗನವರ, ಧಾರವಾಡ
ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು, ಇರಳು ಕತ್ತಲೆಯ ಗವಿ, ಮನೆ ದೂರ ಕನಿಕರಿಸಿ, ಕೈ ಹಿಡಿದು ನಡೆಸೆನ್ನನು. ಈ ಹಾಡನ್ನು ಕೇಳದಿರುವ ಕನ್ನಡಿಗನೇ ಇಲ್ಲ ಎಂದರೂ ತಪ್ಪಾಗಲಾರದು. ಈ ಕವಿತೆ ಮೂಲತಃ ಆಂಗ್ಲ ಸಾಹಿತಿ ನ್ಯೂಮನ್ ಅವರು ಬರೆದ ಲೀಡ್ ಕೈಂಡ್ಲಿ ಲೈಟ್' ಎಂಬ ಕವಿತೆಯ ಕನ್ನಡದ ಅನುವಾದ ಎಂದರೆ ಆಶ್ಚರ್ಯವಾಗುತ್ತದಲ್ಲವೇ? ಹೌದು, ಈ ಕವಿತೆಯನ್ನು ರಚಿಸಿ,ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ' ಎಂದು ಗುಣಗಾನ ಮಾಡಿ ಕನ್ನಡ ಭಾಷೆಯ ಘನತೆ ತೋರಿಸಿಕೊಟ್ಟವರು ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ.
ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳೂರು ಗ್ರಾಮದವರಾದ ಬಿ.ಎಂ.ಶ್ರೀಕಂಠಯ್ಯ ೧೮೮೪ನೆಯ ಜನವರಿ ೩ರಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಮೈಲಾರಯ್ಯ ಮತ್ತು ತಾಯಿ ಭಾಗೀರಥಮ್ಮ. ಶ್ರೀಕಂಠಯ್ಯನವರು ತಮ್ಮ ಬಾಲ್ಯದ ಶಿಕ್ಷಣವನ್ನು ಬೆಳ್ಳೂರಿನಲ್ಲಿಯೇ ಮುಗಿಸಿ, ನಂತರ ಮೈಸೂರ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು, ಮದರಾಸು ವಿಶ್ವವಿದ್ಯಾಲಯದಿಂದ ಬಿ.ಎಲ್. ಪದವಿ, ಎಂ.ಎ. ಪದವಿ ಪಡೆದರು. ಶ್ರೀಕಂಠಯ್ಯನವರು ತಮ್ಮ ತಂದೆಯಂತೆಯೇ ಇಂಗ್ಲಿಷ್ ಮತ್ತು ಕಾನೂನು ಪದವಿ ಪಡೆದರಾದರೂ, ವಕೀಲ ವೃತ್ತಿಯಲ್ಲಿ ಮುಂದುವರಿಯದೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕ ವೃತ್ತಿಗೆ ಸೇರಿಕೊಂಡರು. ಅಲ್ಲಿ ೨೫ ವರ್ಷ ಸೇವೆ ಸಲ್ಲಿಸಿ, ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾಗಿ ಕಾಲೇಜಿನ ಸರ್ವತೋಮುಖ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸಿದರು. ತಮ್ಮ ನಿವೃತ್ತಿಯ ನಂತರ ಅವರು ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಅಧ್ಯಕ್ಷರಾದರು. ಧಾರವಾಡದ ಕೆ.ಇ. ಬೋರ್ಡ್ನ ಮುಖ್ಯಸ್ಥರಾಗಿ ನೇಮಕಗೊಂಡು, ಅವರು ಆರ್ಟ್ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು.
ಕನ್ನಡ ಎಂದರೆ ಎಲ್ಲರಿಗೂ ತಾತ್ಸಾರದ ಭಾವನೆ, ಕನ್ನಡದಲ್ಲಿ ಏನಿದೆ ಎನ್ನುವಂತಹ ಉದ್ಧಟತನ. ಕನ್ನಡಿಗರೇ ಕನ್ನಡ ಮಾತನಾಡಲು ಸಂಕೋಚಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವು ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಸ್ಥಾನಮಾನಗಳಿರಲಿಲ್ಲ. ಅದೊಂದು ದಿನ ಇದ್ದಕ್ಕಿದ್ದಂತೆಯೇ ಶ್ರೀಕಂಠಯ್ಯನವರಿಗೆ ಸ್ವತಃ ಜ್ಞಾನೋದಯವಾಗಿ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯಲು ನಿರ್ಧರಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿಯೇ ಮುಡಿಪಾಗಿಟ್ಟರು. ಅದಕ್ಕಾಗಿಯೇ ಧಾರವಾಡದಲ್ಲಿ ಪ್ರಥಮ ಬಾರಿಗೆ `ಕನ್ನಡ ಮಾತು ತಲೆಯೆತ್ತುವ ಬಗೆ' ಎಂಬ ಭಾಷಣ ಮಾಡಿ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಅವರು ತಮ್ಮ ಅಧ್ಯಾಪಕ ವೃತ್ತಿಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅದೊಂದು ದಿನ ಬೆಳಗ್ಗೆ ಬಚ್ಚಲು ಮನೆಯಲ್ಲಿ ಜಾರಿಬಿದ್ದ ಪರಿಣಾಮ ಅವರ ಕಾಲು ಉಳುಕಿದ್ದಲ್ಲದೇ, ಬಲಗೈ ಮೂಳೆ ಮುರಿದುಹೋಯಿತು, ಕೂಡಲೇ ವೈದ್ಯರಲ್ಲಿ ಹೋಗಿ ಪ್ಲಾಸ್ಟರ್ ಹಾಕಿ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದರು. ಅದರೂ ಕಾಲೇಜಿಗೆ ತೆರಳಿದರು. ಅಷ್ಟರಲ್ಲಿ ಕಾಲೇಜಿನ ಪ್ರಾಚಾರ್ಯ ಜೆ.ಸಿ.ರಾಲೋ ಅವರು ಅವರಿದ್ದಲ್ಲಿಗೆ ಬಂದು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ರಜೆ ಮಂಜೂರು ಮಾಡಿದರು. ಪ್ರಾಚಾರ್ಯರ ಮಾತನ್ನು ಲೆಕ್ಕಿಸದೇ ತರಗತಿಗೆ ತೆರಳಿ ಪಾಠ ಮಾಡಿದ್ದರಂತೆ. ಅವರ ವಿದ್ಯಾರ್ಥಿಗಳಾದ ಮಾಸ್ತಿ, ಕುವೆಂಪು, ಎಸ್.ವಿ.ರಂಗಣ್ಣ, ತೀ.ನಂ.ಶ್ರೀಕಂಠಯ್ಯ, ಜೆ.ಪಿ.ರಾಜರತ್ನಂ, ಡಿ.ಎಲ್.ನರಸಿಂಹಚಾರ್, ರಂ.ಶ್ರೀ.ಮುಗಳಿ ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿಸಿದರು.
ಅವರು ರಚಿಸಿದ ಗದಾಯುದ್ಧ, ಅಶ್ವತ್ಥಾಮ, ಪಾರಸಿಕರು ನಾಟಕಗಳು ಬಹಳ ಪ್ರಸಿದ್ಧವಾದವು. ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಬಾವುಟ ಎಂಬ ಪುಸ್ತಕಗಳಲ್ಲದೆ, ಕೆಲವು ಕವನಗಳನ್ನು ಸೇರಿಸಿ ಹೊಂಗನಸು ಎಂಬ ಕವನ ಸಂಕಲನ ಹೀಗೆ ಅವರು ಸೃಜನಶೀಲರಾಗಿ ಬರೆದರು. ಅವರು ಬರೆದದ್ದಕ್ಕಿಂತ ಇತರರನ್ನು ಪ್ರೇರೇಪಿಸಿ ಪ್ರೋತ್ಸಾಹಿಸಿ, ಅವರಿಂದ ಬರೆಸಿದ್ದೇ ಅಗಣಿತ. ಆಗ ಕನ್ನಡವನ್ನು ಜನಪ್ರಿಯ ಮಾಡಲು ಲಿಪಿ ಸುಧಾರಣೆಗೂ ಪ್ರಯತ್ನಿಸಿದರು.
ಕನ್ನಡ ಭಾಷೆಯ ಉಳಿವಿಗಾಗಿ ಸಲ್ಲಿಸಿದ ಸೇವೆಗೆ ಮೈಸೂರಿನ ಮಹಾರಾಜರು ರಾಜಸೇವಾಸಕ್ತ ಎಂಬ ಬಿರುದನ್ನು ನೀಡಿ ಗೌರವಿಸಿದರು. ೧೪ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಏಳಿಗೆಗಾಗಿ ಶ್ರಮಿಸಿದರು.
೧೯೪೬ರ ಜನವರಿ ೫ರಂದು ಧಾರವಾಡದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ಅವರು ನಮ್ಮನ್ನಗಲಿದರು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾಡಿನ ಪ್ರಖ್ಯಾತ ಸಾಹಿತಿಗಳು, ಸಾರಸ್ವತ ಲೋಕದ ದಿಗ್ಗಜರು ಮತ್ತು ಅಪಾರ ಸಂಖ್ಯೆಯ ಕನ್ನಡಿಗರು ಸ್ವಪ್ರೇರಣೆಯಿಂದ ಬಂದಿರುವುದನ್ನು ನೋಡಿ, ವರಕವಿ ದ.ರಾ.ಬೇಂದ್ರೆಯವರು "ಆಹಾ! ಸತ್ತ ವ್ಯಕ್ತಿಗೆ ಇಂತಹ ಸಂಭ್ರಮದ ಬೀಳ್ಕೊಡುಗೆ ಸಿಗುವುದಾದರೆ ಸಾವು ಸಹ ಸ್ವಾಗತಾರ್ಹವಾದದ್ದೇ" ಎಂದು ಉದ್ಗರಿಸಿದ್ದು ಬಿ.ಎಂ.ಶ್ರೀ.ಗಳ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ. ಕನ್ನಡಿಗರಲ್ಲಿ ಕನ್ನಡ ಅಸ್ಮಿತೆಯನ್ನು ಜಾಗೃತಿಗೊಳಿಸಿ, ಕನ್ನಡತನವನ್ನು ಅಪ್ಪಿಕೊಳ್ಳಲು ಪ್ರೇರೇಪಿಸಿ, ಕನ್ನಡದ ಬೆಳೆ ಬೆಳೆದ ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.