ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕನ್ನಡದ ಕಲಬೆರಕೆಗೆ ತಡೆ ಅವಶ್ಯ

02:03 PM Nov 21, 2024 IST | Samyukta Karnataka

ರಾಜು ಮಳವಳ್ಳಿ
ಬೆಂಗಳೂರು: ಕನ್ನಡ ದಿನೇ ದಿನೇ ಕಲಬೆರಕೆಯಾಗುತ್ತಿರುವುದು ಕನ್ನಡಕ್ಕೆ ಸದ್ಯ ಒದಗಿರುವ ಬಹುದೊಡ್ಡ ಅಪಾಯ. ಬೇರೆ ಬೇರೆ ಭಾಷೆಗಳು ಕನ್ನಡದೊಳಗೆ ಸೇರಿಕೊಂಡು ಹೆಚ್ಚು ಹೆಚ್ಚು ಇಂಗ್ಲೀಷ್‌ಮಯವಾಗುತ್ತಿದೆ. ಕನ್ನಡ ಭಾಷೆ ಉಳಿಯಬೇಕಾದರೆ ಈ ಇಂಗ್ಲೀಷ್‌ಮಯ'ತೆಗೆ ಅಂತ್ಯ ಹಾಡಬೇಕು... ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತಗೊಂಡಿರುವ ನಾಡೋಜ ಗೊ.ರು. ಚನ್ನಬಸಪ್ಪ ಅವರ ಸ್ಪಷ್ಟೋಕ್ತಿಯಿದು. ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇಸಂಯುಕ್ತ ಕರ್ನಾಟಕ' ಕ್ಕೆ ನೀಡಿದ ಸಂದರ್ಶನದಲ್ಲಿ ಸುದೀರ್ಘವಾಗಿ ಮಾತನಾಡಿದ ಗೊ.ರು.ಚ, ಕನ್ನಡಕ್ಕಿರುವ ಕಂಟಕ ಭಾಷೆಯ ಕಲಬೆರಕೆ. ಇದನ್ನು ತಡೆದು ಶುದ್ಧ ಕನ್ನಡದ ಬಳಕೆಗೆ ಆದ್ಯತೆ ನೀಡಬೇಕು. ಸಾಹಿತಿಗಳು, ವಿದ್ವಾಂಸರು ಆ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು. ಸರ್ಕಾರ ಕನ್ನಡಮಯ ವಾತಾವರಣ ನಿರ್ಮಿಸುವ ಮೂಲಕ ಇಂಗ್ಲೀಷ್‌ಮಯತೆಗೆ ಇತಿಶ್ರೀ ಹಾಡಬೇಕು. ಎಲ್ಲಾ ಅಗತ್ಯ ಸೌಲಭ್ಯ ನೀಡಬೇಕೆಂದರು.
ಕನ್ನಡಿಗರ ಅಭಿಮಾನಶೂನ್ಯತೆ ತೊಲಗಬೇಕು. ಆದರೆ, ಈ ನಿರಭಿಮಾನ ಕನ್ನಡಕ್ಕೆ ಆತಂಕಕಾರಿಯಲ್ಲ. ಕನ್ನಡ ನಾಡು-ನುಡಿಗಿರುವ ಪರಂಪರೆ, ಇತಿಹಾಸ ಕನ್ನಡದ ಬಗ್ಗೆ ಅಭಿಮಾನ ಉಕ್ಕಿಸದೇ ಇರದು. ಪ್ರತಿ ಕನ್ನಡಿಗನೂ ತಾಯ್ನಾಡು, ತಾಯ್ಭಾಷೆಯ ಬಗ್ಗೆ ಒಲವು ಹೊಂದಬೇಕು. ಆ ಒಲವಿನಿಂದಲೇ ಕನ್ನಡಕ್ಕೆ ಸದಾ ಗೆಲುವು ಎನ್ನುವ ಗೊ.ರು.ಚ ಅವರು ಕನ್ನಡ ಭಾಷೆ-ಬದುಕಿನ ಕುರಿತು ಸವಿಸ್ತಾರವಾಗಿ ಆಡಿದ ಮಾತುಗಳು ಹತ್ತಾರು. ಆ ಮಾತುಗಳ ಒಟ್ಟು ಸಾರ ಕನ್ನಡ ನಾಡಲ್ಲಿ ಕನ್ನಡವೇ ಸತ್ಯವಾಗಬೇಕು, ಕನ್ನಡವೇ ಸದಾ ನಿತ್ಯವಾಗಬೇಕು.

ಸಂ.ಕ.: ಸಮ್ಮೇಳನಾಧ್ಯಕ್ಷರಾಗಿದ್ದೀರಿ…
ಗೊ.ರು.ಚ: ಕನ್ನಡದ ದೊಡ್ಡ ಮಾತೃಸಂಸ್ಥೆ ನಡೆಸುವ ನಾಡಹಬ್ಬದ ಭಾಗವಾಗುವುದು ಸಂತೋಷದ ಸಂಗತಿ. ಆ ದೃಷ್ಟಿಯಿಂದ ಈ ಗೌರವ ಒಪ್ಪಿಕೊಂಡಿದ್ದೇನೆ. ಈ ವಯಸ್ಸಿನಲ್ಲಿ ಯಾವುದನ್ನೂ ಒಪ್ಪಿಕೊಳ್ಳಬಾರದು. ಆದರೆ, ನಮ್ಮದೇ ಹಬ್ಬವೆಂಬ ಭಾವ ಪುನೀತಗೊಳಿಸಿದೆ.

ಸಂ.ಕ.: ಸಮ್ಮೇಳನಾಧ್ಯಕ್ಷರ ಜವಾಬ್ದಾರಿ ಏನು?
ಗೊ.ರು.ಚ: ಸಮ್ಮೇಳನದ ಅಧ್ಯಕ್ಷರಾಗಿ ನಾಡಿಗೆ ನಮ್ಮ ತಿಳಿವಳಿಕೆ-ಗ್ರಹಿಕೆಯನ್ನು ಹಂಚುವುದೇ ಮುಖ್ಯ. ಪರಿಷತ್ತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು. ಪರಿಷತ್ತಿನ ಜತೆಗೆ ನಾಡಿನ ಸಾಂಸ್ಕೃತಿಕ-ಸಾಹಿತ್ಯಿಕ ಸಂಸ್ಥೆಗಳು-ಸರ್ಕಾರ ಬದ್ಧತೆಯಿಂದ ಕನ್ನಡಪರ ವಾತಾವರಣ ಸೃಷ್ಟಿಸುವ ಕುರಿತು ಸಲಹೆ-ಮಾರ್ಗದರ್ಶನ ಮಾಡುವುದು ಸಮ್ಮೇಳನಾಧ್ಯಕ್ಷರ ಜವಾಬ್ದಾರಿ.

ಸಂ.ಕ.: ಜಾತ್ರೆ ಆಗಿರೋದು ಸರಿಯೇ?
ಗೊ.ರು.ಚ: ಸಮ್ಮೇಳನಗಳು ಜಾತ್ರೆ ಆಗಲಿ ಬಿಡಿ ಅದೊಂದು ಸಾಂಸ್ಕೃತಿಕ ಜಾತ್ರೆ. ನಾಡಿನ ನಾನಾ ಭಾಗದ ಜನ ಒಂದೆಡೆ ಸೇರಿ ಸಾಹಿತಿಗಳು, ವಿದ್ವಾಂಸರು, ಕವಿಗಳು, ಕಲಾವಿದರು ಸಂತೋಷಪಡುವಂತಹುದು. ಈ ಜಾತ್ರೆಯಲ್ಲಿ ಜನ ಸೇರುವುದರಿಂದ ಸಾಹಿತ್ಯಿಕ-ಸಾಂಸ್ಕೃತಿಕ-ಸಾಮಾಜಿಕ-ರಾಜಕೀಯ ಸೇರಿದಂತೆ ಎಲ್ಲಾ ಚರ್ಚೆಗಳು ನಡೆಯಲಿ. ಈ ಸಾರ್ವತ್ರಿಕ ವೇದಿಕೆಯಲ್ಲಿ ಸಮಕಾಲೀನ ಬದುಕಿನ ವಿಚಾರ-ಸಾಹಿತ್ಯದ ಪ್ರಾಚೀನತೆ, ಪರಂಪರೆ, ಇತಿಹಾಸದ ಕುರಿತು ಚಿಂತನೆಗಳು ನಡೆಯುವ ವಿಶೇಷ ಅವಕಾಶವಿದು. ನಾನು ಕಸಾಪ ಅಧ್ಯಕ್ಷನಾಗಿದ್ದಾಗ ರಾಜಕೀಯ ಸಾಹಿತ್ಯ, ಕಾನೂನು ಸಾಹಿತ್ಯ, ನಾಟಕ ಸಾಹಿತ್ಯ, ಚಲನಚಿತ್ರ ಸಾಹಿತ್ಯ… ಹೀಗೆ ಬೇರೆ ಬೇರೆ ಪ್ರಕಾರದ ಸಾಹಿತ್ಯ ಕುರಿತು ರಾಜ್ಯ ಮಟ್ಟದ ಸಮಾವೇಶ ಮಾಡುವ ಯೋಜನೆ ಮಾಡಿದ್ದೆ. ಅದು ಈಗ ಅತ್ಯಂತ ಪ್ರಸ್ತುತವೆನಿಸುತ್ತದೆ. ಒಂದೊಂದು ವಿಷಯದ ಕುರಿತ ಸಮಾವೇಶದಲ್ಲಿ ವ್ಯಾಪಕ ಚರ್ಚೆಗೆ ಅವಕಾಶವಿರುತ್ತದೆ. ಸಾಹಿತ್ಯ ಪರಿಷತ್ತು ಈಗ ಅಂತಹ ಸಮಾವೇಶಗಳನ್ನು ರಾಜ್ಯಾದ್ಯಂತ ಏರ್ಪಡಿಸಬೇಕು. ಸರ್ಕಾರ ಈ ಕೆಲಸಕ್ಕೆ ಆರ್ಥಿಕ ನೆರವು ನೀಡಬೇಕು.

ಸಂ.ಕ.: ಹೊಸದನ್ನು ನಿರೀಕ್ಷಿಸಬಹುದೇ?
ಗೊ.ರು.ಚ : ಈ ಹಳಬನಿಂದ ಏನು ಹೊಸದ್ದು ಸಿಗುತ್ತೆ. ನನಗೆ ಹೊಳೆಯುವ ನಾಲ್ಕಾರು ಪ್ರಮುಖ ವಿಷಯವನ್ನು ಪ್ರಸ್ತಾಪಿಸುತ್ತೇನೆ. ಬಹುಮುಖ್ಯವಾಗಿ ಕನ್ನಡದ ವಾತಾವರಣ ಉಳಿದುಕೊಳ್ಳಬೇಕಾದ, ಬೆಳೆಸಬೇಕಾಗಿದ್ದಕ್ಕೆ ಏನು ಮಾಡಬಹುದು? ರಾಜ್ಯದ ಎಲ್ಲಾ ಭಾಗದ ಜನರು ಸಮನ್ವಯದಿಂದ, ಸೌಹಾರ್ದಯುತವಾಗಿ ಬದುಕಲಿಕ್ಕೆ ಸರ್ಕಾರ-ಸಂಸ್ಥೆಗಳು ಏನು ಮಾಡಬೇಕೆಂಬುದನ್ನು ಹೇಳುತ್ತೇನೆ.

ಸಂ.ಕ.: ಸಮ್ಮೇಳನದ ನಿರ್ಣಯಗಳು ಜಾರಿಯಾಗುತ್ತಿಲ್ಲವೆಂಬ ಕೂಗಿದೆ.
ಗೊ.ರು.ಚ: ಇದು ಬಹಳ ದಿನದ ಪ್ರಶ್ನೆ. ನಾನು ಕಸಾಪ ಅಧ್ಯಕ್ಷನಾಗಿದ್ದಾಗ ಸಮ್ಮೇಳನದ ನಿರ್ಣಯಗಳ ಜಾರಿಗೆ ಅನುಷ್ಠಾನ ಸಮಿತಿ ರಚಿಸಿದ್ದೆವು. ಅಂತಹದೊಂದು ವ್ಯವಸ್ಥೆಯನ್ನು ಮಾಡಬೇಕು. ಸರ್ಕಾರ ಆ ಕಡೆ ಗಂಭೀರ ಗಮನಹರಿಸಿ ಅನುಷ್ಠಾನಗೊಳಿಸುವ ಬದ್ಧತೆ ಪ್ರದರ್ಶಿಸಬೇಕು.

ಸಂ.ಕ.: ಕನ್ನಡ-ಕನ್ನಡಿಗ-ಕರ್ನಾಟಕ ಎದುರಿಸುತ್ತಿರುವ ನಿಜವಾದ ಸವಾಲೇನು?
ಗೊ.ರು.ಚ: ನಮ್ಮ ನಾಡು-ನುಡಿ ಬಗ್ಗೆ ಸಾರ್ವತ್ರಿಕವಾಗಿ ಅಭಿಮಾನ ಮೂಡಿಸುವುದೇ ನಿಜವಾದ ಸವಾಲು. ಸಾಹಿತ್ಯಿಕ ಚರ್ಚೆಗಳು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಬದಲು ಸಾರ್ವತ್ರಿಕವಾಗಬೇಕು. ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯಬೇಕು. ಕನ್ನಡೇತರರು ಬಹಳಷ್ಟು ಜನರಿರುವುದರಿಂದ ಅವರಿಗೆ ಕನ್ನಡದ ಸೊಗಸು, ಪರಂಪರೆ-ಇತಿಹಾಸವನ್ನು ತಿಳಿಸಬೇಕು. ಈ ದೆಸೆಯಲ್ಲಿ ಕಸಾಪ, ವಿಶ್ವವಿದ್ಯಾಲಯಗಳು ಕಾರ್ಯೋನ್ಮುಖವಾಗಬೇಕು. ಸರ್ಕಾರ ಹಣ ನೀಡಿ ಸಹಕರಿಸಬೇಕು.

ಸಂ.ಕ.: ಜಾನಪದ ಸಂಶೋಧನೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲವೆಂಬಮಾತಿದೆ
ಗೊ.ರು.ಚ: ಜಾನಪದ ಕ್ಷೇತ್ರ ಕಾರ್ಯ ನಿಂತೇ ಹೋಗಿದೆ ಅಂತ ನನ್ನ ಭಾವನೆ. ಆರಂಭಿಕ ತಜ್ಞರು ಒಂದಷ್ಟು ಸಂಶೋಧನೆ ಮಾಡದಿದ್ದರೆ ಇವತ್ತು ಏನೇನೂ ಉಳಿಯುತ್ತಿರಲಿಲ್ಲ. ಆ ದೃಷ್ಟಿಯಿಂದಲೇ ನಾವು ಜಾನಪದ ವಿವಿಯನ್ನು ಸ್ಥಾಪಿಸಿದ್ದು. ಆದರೆ, ಆ ವಿವಿಗೆ ಅಗತ್ಯ ಪೋಷಣೆ ಸಿಗಲಿಲ್ಲ. ಜನರ ಬಳಿಗೆ ಜಾನಪದ ವಿವಿ ಹೋಗಬೇಕೆಂಬುದು ನನ್ನ ಆಶಯ. ಅದಕ್ಕಾಗಿ ಪ್ರಸ್ತಾವನೆ ಕೊಟ್ಟಿದೆ. ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲವೆಂಬ ಕೊರಗಿದೆ.

ಸಂ.ಕ.: ಸಂಸ್ಕೃತಿ ರಕ್ಷಣೆಗೆಮಾರ್ಗವೇನು?
ಗೊ.ರು.ಚ: ಜನಪದ ಕಲಾಪ್ರದರ್ಶನಗಳ ಮೂಲಕ ಸಂಸ್ಕೃತಿ ಉಳಿಸಬೇಕಿದೆ. ಆಧುನಿಕ ಬದುಕಿಗೆ ಜನಪದ ಅಂಶಗಳು ಎಷ್ಟು ಸಹಕಾರಿ ಆಗುತ್ತವೆ ಎಂಬುದನ್ನು ಅನ್ವಯ ಮಾಡಬೇಕಿದೆ.

ಸಂ.ಕ.: ಕನ್ನಡಪರ ಸಂಸ್ಥೆಗಳ ಕಾರ್ಯನಿರ್ವಹಣೆ ಹೇಗಿರಬೇಕು..?
ಗೊ.ರು.ಚ: ಕನ್ನಡಪರ ಸಂಸ್ಥೆಗಳು ಇನ್ನಷ್ಟು ಬದ್ಧತೆಯಿಂದ ಕನ್ನಡದ ಕೈಂಕರ್ಯ ಮಾಡಬೇಕು. ಕನ್ನಡಪರ ಚಟುವಟಿಕೆಗಳನ್ನು ವ್ಯಾಪಕಗೊಳಿಸಬೇಕು. ಜಿಲ್ಲೆಯ ಗಡಿದಾಟಿ ಹಳ್ಳಿಗಳೆಡೆಗೆ ಹೋಗಬೇಕು. ಸರ್ಕಾರವೂ ಆ ದಾರಿಯಲ್ಲಿ ಚಿಂತಿಸಬೇಕು.

ಸಂ.ಕ.: ನವನವೀನ ತಂತ್ರಾಂಶದಲ್ಲಿ ಕನ್ನಡ ಅರಳಿಸುವ ಮಾರ್ಗವೇನು?
ಗೊ.ರು.ಚ: ಇದು ಅತ್ಯಂತ ಅವಶ್ಯವಾಗಿ ಆಗಬೇಕಿರುವ ಕೆಲಸ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಿದ್ದರೆ ಭಾಷೆ ಬೆಳಗಲಾಗದು. ಅದಕ್ಕೆ ಬೇಕಾದ ತರಬೇತಿ ನೀಡಬೇಕು. ಕಸಾಪ-ವಿವಿಗಳಲ್ಲಿ ಇದಕ್ಕಾಗಿ ಪ್ರತ್ಯೇಕ ವಿಭಾಗವಿರಬೇಕು.

ಸಂ.ಕ.: ಕನ್ನಡದಬಿಕ್ಕಟ್ಟಿಗೆ ಏನು ಪರಿಹಾರ?
ಗೊ.ರು.ಚ: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಬೇಕು. ಮಕ್ಕಳು ಎಳವೆಯಲ್ಲೇ ಕನ್ನಡ ಕಲಿತರೆ ಮುಂದೆ ಕನ್ನಡ ಬೆಳಸುತ್ತಾರೆ. ಸರ್ಕಾರ ಈ ಕೆಲಸಕ್ಕೆ ಇಂಬು ಕೊಡಬೇಕು. ಹಳ್ಳಿಶಾಲೆಗಳ ಸುಧಾರಣೆಗೆ ಒತ್ತು ನೀಡಬೇಕು.

ಸಂ.ಕ.: ಇಂಗ್ಲೀಷ್ ಕಲಿಕೆ ಮತ್ತು ವ್ಯಾಮೋಹದ ಪ್ರಮಾಣ ಎಷ್ಟಿರಬೇಕು?
ಗೊ.ರು.ಚ: ಇಂಗ್ಲೀಷ್ ಕಲಿಕೆ ಈಗ ಅನಿವಾರ್ಯ. ನಮ್ಮ ಮಕ್ಕಳು ಅದರಿಂದ ವಂಚಿತವಾಗುವುದು ಬೇಡ. ಬೇರೆ ಬೇರೆ ವಲಯದಲ್ಲಿ ಶಿಕ್ಷಣ ನೀಡುವಂತೆ ಕನ್ನಡದ ಮಕ್ಕಳಿಗೆ ಇಂಗ್ಲೀಷ್ ಭಾಷೆಯ ಬಗ್ಗೆ ಪ್ರತ್ಯೇಕ ತರಬೇತಿ ನೀಡಬೇಕು. ಆಗ ಪೋಷಕರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುತ್ತಾರೆ.

Next Article