For the best experience, open
https://m.samyuktakarnataka.in
on your mobile browser.

ಕನ್ನಡದ ಶೇಕ್ಸ್‌ಪಿಯರ್‌ ಕಂದಗಲ್ಲ ಹನುಮಂತರಾಯರು

01:11 PM Nov 12, 2023 IST | Samyukta Karnataka
ಕನ್ನಡದ ಶೇಕ್ಸ್‌ಪಿಯರ್‌ ಕಂದಗಲ್ಲ ಹನುಮಂತರಾಯರು

ಕುವೆಂಪು ಅವರನ್ನು ರಸಋಷಿ ಎಂದು ನಾವೆಲ್ಲ ಗೌರವದಿಂದ ಕರೆಯುತ್ತೇವೆ. ಆದರೆ ಕುವೆಂಪು ಅವರೇ ರಸಋಷಿ ಎಂದು ಕರೆದು ಗೌರವಿಸಿದ್ದು ಕನ್ನಡದ ಮಹಾನ್ ನಾಟಕಕಾರ ಆಗಿದ್ದ ಕನ್ನಡದ ಶೇಕ್ಸ್ಪಿಯರ್ ಎಂದೇ ಖ್ಯಾತರಾಗಿದ್ದ ಕಂದಗಲ್ ಹನುಮಂತರಾಯರನ್ನು (ಜನನ: ೧೮೯೬ ಮರಣ:೧೯೬೬). ರಗಳೆಗಳನ್ನು ಸರಳೀಕರಿಸಿ ರಂಗಭಾಷೆಯ ಬೆಸುಗೆ ಹಾಕುವ ಯಶಸ್ವಿ ರಂಗ ಕಾವ್ಯದ ರಸಋಷಿ ಕಂದಗಲ್ಲ ಹನುಮಂತರಾಯರು ಎನ್ನುವುದು ಕುವೆಂಪು ಅವರ ಮುಕ್ತಕಂಠದ ಪ್ರಶಂಸೆ.
ಹನುಮಂತರಾಯರು ನಮ್ಮನ್ನೆಲ್ಲ ಅಗಲಿ ೫೭ ವರ್ಷ ಸಂದುಹೋಗಿದೆ. ಇಂಥ ಅಪ್ರತಿಮರೊಬ್ಬರು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕ ಬರೆಯುತ್ತ ಈ ನೆಲದ ಮೇಲೆ ನಡೆದಾಡಿದ್ದರು ಎನ್ನುವುದನ್ನು ಹೊಸ ತಲೆಮಾರಿನ ಪೀಳಿಗೆಗೆ ತಿಳಿಸಿಕೊಡುವ ಯಾವ ಯತ್ನವೂ ನಮ್ಮಲ್ಲಿ ನಡೆದಿಲ್ಲ. ನಿಜ, ನಮಗೆ ಯಾವತ್ತೂ ಹಿತ್ತಲ ಗಿಡ ಮದ್ದಾದ ಉದಾಹರಣೆ ಇಲ್ಲವೇ ಇಲ್ಲ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ೨೫ಕ್ಕೂ ಅಧಿಕ ನಾಟಕ ಕಂಪನಿಗಳುಳ್ಳ ಊರು. ಅದು ಹನುಮಂತರಾಯರ ಕಾರ್ಯಕ್ಷೇತ್ರವೂ ಆಗಿತ್ತು. ಅಲ್ಲಿ ಅವರ ಹೆಸರಿನ ರಂಗಮಂದಿರವೊಂದು ೩೫ ವರ್ಷದಿಂದ ನಿರ್ಮಾಣ ಹಂತದಲ್ಲೇ ಇದೆ ಎನ್ನುವುದು ಸಂಸ್ಕೃತಿ ಪ್ರಿಯ ಕರ್ನಾಟಕದ ವ್ಯಕ್ತಿತ್ವಕ್ಕೆ ಮಸಿ ಬಳಿದಿರುವ ಬೆಳವಣಿಗೆ. ಯಾವ ರಂಗಮಂದಿರದಲ್ಲಿ ನಾಟಕ ಸತ್ರ ಸತತವಾಗಿರಬೇಕಿತ್ತೋ, ಯಾವ ತಾಣದಲ್ಲಿ ಹಾರ್ಮೋನಿಯಂ, ತಬಲಾ, ಹೆಜ್ಜೆ ಗೆಜ್ಜೆ ಸದ್ದಿನೊಂದಿಗೆ ಕರ್ಣಸೌಖ್ಯ ಉಣಬಡಿಸಬೇಕಿದ್ದ ರಂಗಸಂಗೀತದ ಅಲೆ ಅಡರ ಬೇಕಿತ್ತೋ ಆ ಜಾಗದಲ್ಲಿ ಶುನಕ ನೃತ್ಯ ನಡೆದಿದೆ ಎನ್ನುವುದು ಕಂದಗಲ್ಲರ ಸ್ಮೃತಿಗೆ ಗ್ರಹಣ ಒಕ್ಕರಿಸಿರುವ ಬೆಳವಣಿಗೆ.
ಈ ನಾಟಕಕಾರನಿಗೆ ಸಂದಿರುವ ಶಬ್ದ ಗೌರವದ ಇನ್ನೊಂದು ಪ್ರಶಂಸೆ ಇಲ್ಲಿದೆ ಓದಿ: "ಔನ್ನತ್ಯದ ರಂಗನಾಟಕಗಳ ಅರಿವು, ಹರಿವು, ಇರುವನ್ನು ಸಾಹಿತ್ಯದ ವಿದ್ವಾಂಸರಂತೆ ಮುಗ್ಧನೊಬ್ಬನಲ್ಲಿ ಖುಷಿ ಉಕ್ಕಿಸುವ ಕವಿ ನಮ್ಮ ಕಂದಗಲ್ಲ ಹನುಮಂತರಾಯ…" ಈ ಮಾತು ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರದು. ಕುವೆಂಪು, ಬೇಂದ್ರೆಯವರಿಬ್ಬರೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಷ್ಟೇ ಅಲ್ಲ, ಕುವೆಂಪು ರಾಷ್ಟ್ರಕವಿ, ಬೇಂದ್ರೆಯವರು ವರಕವಿ. ಈ ಇಬ್ಬರ ದೃಷ್ಟಿಯಲ್ಲೂ ಕಂದಗಲ್ಲರು ಅನನ್ಯ ವ್ಯಕ್ತಿತ್ವದ ಮೇರು ಪುರುಷ. ಕನ್ನಡ ರಂಗಭೂಮಿಗೆ ಒತ್ತಾಸೆ ಸಿಗುವಂತೆ ಮಾಡಿದವರಲ್ಲಿ ಅ.ನ. ಕೃಷ್ಣರಾಯರದು ಬಹಳ ದೊಡ್ಡ ಮತ್ತು ಮಂಚೂಣಿ ಹೆಸರು. ಅವರ ಪ್ರಕಾರ "ಕಂದಗಲ್ಲ ಹನುಮಂತರಾಯರು ಕನ್ನಡದ ಮತ್ತೊಬ್ಬ ಮುದ್ದಣ". ನಲವಡಿ ಶ್ರೀಕಂಠ ಶಾಸ್ತಿçಗಳು ಹೇಳಿರುವಂತೆ "ಕಂದಗಲ್ಲರು (ಕನ್ನಡ) ರಂಗಭೂಮಿಯ ಬೆಳ್ಳಿಚುಕ್ಕಿ."
ಪ್ರಶಂಸೆಗಳ ಭಾರದಲ್ಲಿ ಬಸವಳಿದಿದ್ದ ಕಂದಗಲ್ಲರದು ಬಡ ಕುಲಕರ್ಣಿ ಮನೆತನ. ಬಾಗಲಕೋಟೆಯ ಕಂದಗಲ್ಲ ಅವರ ಹುಟ್ಟೂರು. ಅವರ ಕರ್ಮ ಕ್ಷೇತ್ರ ಕನ್ನಡದ ರಂಗಭೂಮಿ. ಎಲ್ಲೆಲ್ಲಿ ರಂಗಭೂಮಿ ಚಲನಶೀಲವಾಗಿತ್ತೋ ಅಲ್ಲೆಲ್ಲ ಹಾಜರಿದ್ದು ನಾಟಕ ಕಂಪೆನಿಗಳಿಗೆ ಅವರು ಬಯಸಿದ, ಇವರಿಗೆ ಪ್ರಿಯವೆನಿಸಿದ ವಸ್ತು ಆಧರಿಸಿ ನಾಟಕ ಬರೆದುಕೊಟ್ಟವರು ಕಂದಗಲ್ಲರು. ಆ ಕಾಲದ ರಂಗ ಇತಿಹಾಸದಲ್ಲಿ ಒಳನೋಟ ಹರಿಸಿದರೆ ಅವರ ನಾಟಕಗಳೆಲ್ಲವೂ ಪ್ರಯೋಗಗೊಂಡು ಸೂಪರ್ ಡ್ಯೂಪರ್ ಹಿಟ್ ಎನಿಸಿದವು. ಕಂಪೆನಿಗಳ ಮಾಲೀಕರು ವೀಳ್ಯೆದೆಲೆಯಲ್ಲಿ ಎರಡು ಅಡಿಕೆ ಹೋಳನ್ನಿಟ್ಟು ಎರಡೋ ಮೂರೋ ರೂಪಾಯಿ ಸಂಭಾವನೆಯನ್ನು ನಾಟಕಕಾರನಿಗೆ ನೀಡಿ ತಾವು ಶ್ರೀಮಂತರಾದ ಕಥೆ ಆ ಇತಿಹಾಸದಲ್ಲಿ ಅಡಗಿದೆ. ಬಾಗಲಕೋಟೆ ಜಿಲ್ಲೆ ಸಾಹಿತ್ಯಕವಾಗಿ ಸಮೃದ್ಧ ಪ್ರದೇಶ. ನೀರೊಳಗಿರ್ದುಂ ಬೆಮರ್ದಂ ಉರಗಪತಾಕಂ ಎಂಬ ಸಾರ್ವಕಾಲಿಕ ರೂಪಕವನ್ನು ಕನ್ನಡಕ್ಕೆ ನೀಡಿದ ಮಹಾಕವಿ ರನ್ನ, ಹರಿದಾಸ ಶ್ರೇಷ್ಠ ಪ್ರಸನ್ನ ವೆಂಕಟದಾಸರು, ಸತ್ಯಕಾಮ, ರಾವ್ ಬಹಾದ್ದೂರ್, ಕೃಷ್ಣಮೂರ್ತಿ ಪುರಾಣಿಕ, ರಾ.ಯ. ಧಾರವಾಡಕರ ಮುಂತಾದವರು ಹುಟ್ಟಿ ಬೆಳೆದು ಸಾಹಿತ್ಯ ಕೃಷಿ ಗೈದ ನೆಲ. ಇಂಥ ಪ್ರದೇಶದಲ್ಲಿ ಹುಟ್ಟಿದ ಕಂದಗಲ್ಲರ ರಕ್ತದಲ್ಲಿ ಮಣ್ಣಿನ ಗುಣ ಇದ್ದುದು ಮತ್ತು ತಾವು ಹುಟ್ಟಿದ ನೆಲದ ಋಣವನ್ನು ಅವರು ತೀರಿಸಿದ ರೀತಿ ಕೋಟಿಯಲ್ಲೊಬ್ಬರಿಗೂ ಸಾಧ್ಯವಾಗದ ನಡೆ.
ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಗಲಕೋಟೆಗೆ ಬಂದ ಅವರಿಗೆ ಓದು ಹಿಡಿಸಲಿಲ್ಲ, ಆದರೇನಂತೆ ಅವರ ಬುದ್ಧಿಭಾವಕ್ಕೆ ನಾಟಕ, ಸಂಗೀತ ಬೇಲಿ ಹಾಕಿ ಕಟ್ಟಿನಿಲ್ಲಿಸಿದವು. ಮೆಟ್ರಿಕ್‌ನಲ್ಲಿ ಫೈಲ್ ಆದಾಗ ಮನೆಮಂದಿಯ ಅವಹೇಳನ ಸಹಿಸಲಾಗದೆ ಪುಣೆಗೆ ಓಡಿ ಹೋಗಿ ಮಿಲಿಟರಿಯಲ್ಲಿ ಕಾರಕೂನ ಆದರು. ಅಲ್ಲಿದ್ದಾಗ ಮರಾಠಿ ರಂಗಭೂಮಿ ವೈಭವ ಅವರ ಮೈಮನವನ್ನು ಆವರಿಸಿತು. ಶಾಲಾ ದಿನಗಳಲ್ಲಿ ಅವರು ಬರೆಯುತ್ತಿದ್ದ ನಾಟಕಗಳು ಹೊಗಳಿಕೆಗೆ ಪಾತ್ರವಾಗಿದ್ದವು. ನಂತರದಲ್ಲಿ ಅವರೊಳಗೆ ಸುಪ್ತಾವಸ್ಥೆಯಲ್ಲಿದ್ದ ನಾಟಕಕಾರ ಎಚ್ಚೆತ್ತ. ಅದರ ಪರಿಣಾಮ ಅಗ್ನಿ ಕಮಲ (ರಾಮಾಯಣ) ರುದ್ರ ಧನುರ್ಭಂಗ (ಸೀತಾ ಸ್ವಯಂವರ) ಮಾಯಾಮೃಗ, ಪಾಂಡವರ ಪಾಣಿಪತ್ (ಕುರುಕ್ಷೇತ್ರ) ಅಕ್ಷಯಾಂಬರ (ದ್ರೌಪದಿ ವಸ್ತಾçಪಹರಣ) ರಕ್ತರಾತ್ರಿ, ಪಾಂಚಾಲಿ, ನರವೀರ ಪಾರ್ಥ, ದೈವ ದುರಂತ ಕರ್ಣ ಮುಂತಾದ ಪ್ರಕಟಿತ ಹನ್ನೆರಡು ಪೌರಾಣಿಕ ಮತ್ತು ೨೧ ಸಾಮಾಜಿಕ ನಾಟಕಗಳನ್ನು ಅವರು ನಾಟಕ ಕಂಪೆನಿಗಳ ಅಪೇಕ್ಷೆ ಮೇರೆಗೆ ಬರೆದುಕೊಟ್ಟರು. ಅವರು ಬರೆದು ಪ್ರಕಟವಾಗದ ನಾಟಕಗಳು ಎಷ್ಟೋ. ಕೆಲವರ ಪ್ರಕಾರ ಅವರಿಂದ ಹಸ್ತಪ್ರತಿ ಪಡೆದವರು ಪರತ್ ಕೊಡದೆ ತಮ್ಮ ಹೆಸರನ್ನೇ ಹಾಕಿಕೊಂಡು "ನಾಟಕಕಾರರಾದ" ದುರಂತವೂ ಘಟಿಸಿಹೋಗಿದೆ. ತಾಯಿಯ ಅನಾರೋಗ್ಯದ ಸುದ್ದಿ ಕೇಳಿ ಪುಣೆಯಿಂದ ತೌರಿಗೆ ಮರಳಿದ ರಾಯರು, ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಕೆಗೊಳಗಾದರು. ನಾಟಕದ ಅವರ ಹಸಿವನ್ನು ತೌರೂರು ಶಮನಗೊಳಿಸಲಿಲ್ಲ. ಬಿಜಾಪುರಕ್ಕೆ ಬಂದರು. ಯಾವುದೋ ಸಹಕಾರಿ ಬ್ಯಾಂಕಿನಲ್ಲಿ ಕಾರಕೂನನಾದರು. ಅವರು ಅಲ್ಲಿಯೂ ಬಾಳಲಿಲ್ಲ. ನಾಟಕದ ಸೆಳೆತಕ್ಕೆ ಒಳಗಾಗಿ ಶ್ರೀಕೃಷ್ಣ ನಾಟಕ ಮಂಡಲಿ ಸ್ಥಾಪಿಸಿ ತಮ್ಮದೇ ನಾಟಕಗಳ ಪ್ರಯೋಗಕ್ಕೆ ಅವಕಾಶ ಮಾಡಿಕೊಂಡರು. ಕಂಪೆನಿ ಬದುಕುಳಿಯಲಿಲ್ಲ. ಗದುಗಿನ ವಾಣಿ ವಿಲಾಸ ನಾಟಕ ಕಂಪೆನಿಗೆ ಸೇರಿದರು. ಅಲ್ಲಿ ಅವರಿಗೆ ಮಲ್ಲಿಕಾರ್ಜುನ ಮನ್ಸೂರ್, ಹಂದಿಗನೂರು ಸಿದ್ರಾಮಪ್ಪ ಮುಂತಾದ ಘಟಾನುಘಟಿಗಳ ಸಹವಾಸದ ಲಾಭ ದೊರೆಯಿತು. ಆದರೆ ಕಂಪೆನಿ ಲಾಭ ಗಳಿಸಲಾಗದೆ ಬಾಗಿಲು ಬಂದ್ ಮಾಡಿತು.
ಛಲ ಬಿಡದ ತ್ರಿವಿಕ್ರಮನಂತೆ ಭಾಗ್ಯೋದಯ ನಾಟಕ ಕಂಪೆನಿ ಸ್ಥಾಪಿಸಿದರು. ಆದರೆ ಅದಕ್ಕಾಗಿ ಪಡೆದ ಸಾಲ ಮರಳಿಸಲಾಗದೆ ಜೈಲು ವಾಸ ಅನುಭವಿಸಬೇಕಾಗಿ ಬಂತು. ರಾತ್ರಿಯಿಂದ ಬೆಳಗಿನವರೆಗೆ ನಡೆಯುವ ನಾಟಕಗಳನ್ನು ಮಂತ್ರಮುಗ್ಧ ಸ್ಥಿತಿಯಲ್ಲಿ ಪ್ರೇಕ್ಷಕರು ನೋಡಿ ಆನಂದಿಸುವಂತೆ ಬರೆದ ಕನ್ನಡದ ಶೇಕ್ಸ್ಪಿಯರ್ ಬಂದಿದ್ದೂ ಗೊತ್ತಾಗದಂತೆ ಇಹದ ಸಂಗ ತೊರೆದುದೂ ಗೊತ್ತಾಗದಂತೆ ನಿರ್ಗಮಿಸಿದರು. ಅಂಕದ ಪರದೆ ಜಾರಿದ ಬಳಿಕ ಉಳಿಯಿತಿನ್ನೇನು ಎಂಬಂತೆ ಅವರ ನೆನಪು. ಅವರ ಸ್ಮೃತಿ ರಂಗಮಂದಿರವನ್ನು ಇನ್ನಷ್ಟು ವಿಳಂಬವಿಲ್ಲದೆ ಪೂರ್ಣಗೊಳಿಸುವ ಹೊಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವುದಕ್ಕೆ ಇದು ಸುಸಮಯ. ನಮ್ಮ ಸಂಸ್ಕೃತಿಯ ಮಹಾನ್ ಪೋಷಕರಾಗಿದ್ದ ಪೂರ್ವಸೂರಿಗಳನ್ನು ನೆನಪಿಸಿಕೊಳ್ಳುವುದು ಕನ್ನಡ ಸಂಸ್ಕೃತಿಯ ಭಾಗ ಎನ್ನುವುದನ್ನು ಮತ್ತೆ ಘೋಷಿಸಿಕೊಳ್ಳಲು ಸರ್ಕಾರಕ್ಕೆ ಇದೂ ಒಂದು ಅವಕಾಶ.