For the best experience, open
https://m.samyuktakarnataka.in
on your mobile browser.

ಕನ್ನಡಿಗರಿಗೆ ಉದ್ಯೋಗಾವಕಾಶ ವಿಶೇಷ ಶಾಸನ ರೂಪಿಸುವುದಗತ್ಯ

02:00 AM Apr 25, 2024 IST | Samyukta Karnataka
ಕನ್ನಡಿಗರಿಗೆ ಉದ್ಯೋಗಾವಕಾಶ ವಿಶೇಷ ಶಾಸನ ರೂಪಿಸುವುದಗತ್ಯ

ರಾಷ್ಟ್ರಭಕ್ತಿ ಎಂಬುದು ಪ್ರಶ್ನಾತೀತ ಸಂಗತಿ. ಆದರೆ, ರಾಷ್ಟ್ರ ಹಿತದ ದೃಷ್ಟಿಯಲ್ಲಿ ರಾಜ್ಯದ ಜನರ ಬದುಕಿನ ಜೊತೆ ಚೆಲ್ಲಾಟವಾಡುವ ವರ್ತನೆ ಎಂದಿಗೂ ಸಲ್ಲ. ಆಳುವ ಸರ್ಕಾರಗಳು ಉದ್ಯೋಗಾವಕಾಶ ಸೃಷ್ಟಿ ಹಾಗೂ ಸಂಪನ್ಮೂಲ ಸಂಗ್ರಹಣೆ ದೃಷ್ಟಿಯಿಂದ ಖಾಸಗಿ ಕಂಪನಿಗಳ ಸ್ಥಾಪನೆಗೆ ನೀಡುವ ಭೂಮಿ ಸೇರಿದಂತೆ ಹಲವು ಸೌಲಭ್ಯಗಳನ್ನು ಬಳಸಿಕೊಳ್ಳುವಾಗ ಕೆಲ ಷರತ್ತುಗಳನ್ನು ಪಾಲಿಸಲೇಬೇಕು ಎಂಬ ಕಡ್ಡಾಯ ಆದೇಶವಿದ್ದರೂ ಅದನ್ನು ಮರೆಮಾಚಿ ಸ್ಥಳೀಯರಿಗೆ ನಾಲಾಯಕ್ ಹುದ್ದೆಗಳನ್ನು ನೀಡಿ ಕಾನೂನಿನ ವ್ಯಾಪ್ತಿಯಿಂದ ಪಾರಾಗುತ್ತಿರುವ ಬೆಳವಣಿಗೆಯನ್ನು ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ಗುರಿಪಡಿಸಿರುವುದು ಕನ್ನಡಿಗರ ಹಿತದೃಷ್ಟಿಯಿಂದ ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಷರತ್ತನ್ನು ಪಾಲಿಸಲು ಖಾಸಗಿ ಕಂಪನಿಗಳು ಕಂಡುಕೊಂಡಿರುವ ಮಾರ್ಗವೆಂದರೆ ಕೆಳದರ್ಜೆಯ ಸಿ ಮತ್ತು ಡಿ ಶ್ರೇಣಿಯ ಹುದ್ದೆಗಳನ್ನು ನೀಡಿ ತೆಪ್ಪಗಾಗುವುದು. ವಿದ್ಯಾರ್ಹತೆ ಹಾಗೂ ಕೌಶಲ್ಯದ ಅರ್ಹತೆಗಳಿದ್ದರೂ ಅವುಗಳನ್ನು ಪರಿಗಣಿಸದೇ ನಾಮಾಕಾವಸ್ಥೆ ಎಂಬಂತೆ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುತ್ತಿರುವ ಖಾಸಗಿಯವರ ವರ್ತನೆಯ ಬಗ್ಗೆ ಕೇವಲ ಸರ್ಕಾರ ಮಾತ್ರವಲ್ಲ. ಸಾರ್ವಜನಿಕರೂ ಕೂಡಾ ಎಚ್ಚರಿಕೆಯಿಂದಿರುವುದು ಈಗಿನ ಅಗತ್ಯ.
ನಿಜ. ಕರ್ನಾಟಕ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಕೊಟ್ಟಿರುವ ಎಚ್ಚರಿಕೆ ಎಲ್ಲ ಕಂಪನಿಗಳಿಗೂ ಅನ್ವಯಾಗುವಂತದ್ದು. ಇದನ್ನು ಆದೇಶ ಪರಿಗಣಿಸಲಾಗದಿದ್ದರೂ ಹೈಕೋರ್ಟ್ ಸಂದೇಶ ಎಂದು ಭಾವಿಸಿ ಸೂಕ್ತ ಕ್ರಮ ಜರುಗಿಸುವುದು ಸರ್ಕಾರ ಹಾಗೂ ಖಾಸಗಿ ಕಂಪನಿಗಳ ಜವಾಬ್ದಾರಿ. ಉದ್ಯೋಗಾವಕಾಶದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಮಾತು ಗೋಕಾಕ್ ಚಳವಳಿಯ ಕಾಲದಿಂದಲೂ ದಟ್ಟವಾಗಿ ಕೇಳಿಬರುತ್ತಿದೆ. ಗೋಕಾಕ್ ಚಳವಳಿಯ ಶಿಫಾರಸುಗಳನ್ನು ಜಾರಿಗೊಳಿಸುವ ಅಂಗವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಆದ್ಯತೆಯ ಮೇರೆಗೆ ಕಲ್ಪಿಸುವ ದೃಷ್ಟಿಯಿಂದ ರಚಿಸಲಾದ ಡಾ. ಸರೋಜಿನಿ ಮಹಿಷಿ ಆಯೋಗ ರಚನೆಗೊಂಡು ನಲವತ್ತಕ್ಕೂ ಹೆಚ್ಚು ವರ್ಷಗಳು ಉರುಳಿದ್ದರೂ ಆಗಿರುವ ಬೆಳವಣಿಗೆ ಅಷ್ಟರಲ್ಲಿಯೇ ಇದೆ. ಆಳುವ ಸರ್ಕಾರಗಳಿಗೆ ದೃಢ ರಾಜಕೀಯ ಸಂಕಲ್ಪ ಇದ್ದಿದ್ದರೆ ಬಹುಶಃ ಇಂತಹ ಸ್ಥಿತಿ ಬರುತ್ತಿರಲಿಲ್ಲವೇನೋ.
ಕನ್ನಡಿಗರಿಗೆ ಉದ್ಯೋಗಾವಕಾಶದಲ್ಲಿ ಪ್ರಾಧಾನ್ಯತೆ ನೀಡಲು ಸಂವಿಧಾನಾತ್ಮಕವಾಗಿ ಕಾನೂನಿನ ಅಡೆತಡೆಗಳು ಇರಬಹುದು. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಅನ್ವಯವಾಗುವ ಅಂಶವಲ್ಲ. ಭಾರತದ ಎಲ್ಲ ರಾಜ್ಯಗಳಿಗೂ ಕೂಡಾ ಅನ್ವಯವಾಗುವ ಸೂತ್ರವಿದು. ಪ್ರತಿಶತ ೧೦ರಿಂದ ೧೫ರಷ್ಟು ಎಲ್ಲಾ ಶ್ರೇಣಿಯ ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂಬ ಶಾಸನವನ್ನು ರೂಪಿಸಲು ಸರ್ಕಾರಕ್ಕೆ ಅವಕಾಶವೇನೋ ಇದೆ. ಆದರೆ, ಶಾಸನಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಹಾಗೂ ಸಾರ್ವಜನಿಕ ಸಂವಾದದ ಮೂಲಕ ಇಡೀ ರಾಜ್ಯದಲ್ಲಿ ಒಮ್ಮತದ ನಿಲುವು ವ್ಯಕ್ತವಾದಾಗ ಸರ್ಕಾರದ ಕೆಲಸ ಹಗುರವಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಪ್ರತ್ಯೇಕವಾದ ಉದ್ಯೋಗ ಮೀಸಲು ನೀತಿಯನ್ನು ರೂಪಿಸಲು ಅವಕಾಶವಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾನೂನು ಆಯೋಗದ ಮೂಲಕ ಖಚಿತಪಡಿಸಿಕೊಂಡು ಮುನ್ನಡೆಯುವುದು ಯೋಗ್ಯವಾದ ಮಾರ್ಗ. ಅರ್ಹತೆ ಮತ್ತು ಕೌಶಲ್ಯದ ದೃಷ್ಟಿಯಿಂದ ಹೇಳುವುದಾದರೆ ಕರ್ನಾಟಕದಲ್ಲಿ ಉದ್ಯೋಗ ನಿರೀಕ್ಷಿಸುತ್ತಿರುವ ತರುಣರಲ್ಲಿ ಇಂತಹ ಅರ್ಹತೆಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಅಮೆರಿಕ ಸೇರಿದಂತೆ ಹೊರ ದೇಶಗಳಲ್ಲಿ ಕನ್ನಡದ ಅಭ್ಯರ್ಥಿಗಳಿಗೆ ವಿಶೇಷವಾದ ಮಾನ್ಯತೆ ಇರುವುದು ಬಹಿರಂಗ ಗುಟ್ಟು. ಪ್ರಾದೇಶಿಕತೆಯನ್ನು ಬಿಟ್ಟು ಅರ್ಹತೆಯನ್ನೇ ಪರಿಗಣಿಸಿ ನೇಮಕಾತಿ ಮಾಡಿಕೊಳ್ಳುವುದಾದರೆ ಆಗಲೂ ಕೂಡಾ ಕನ್ನಡ ಅಭ್ಯರ್ಥಿಗಳಿಗೆ ಉದ್ಯೋಗ ಸಿಕ್ಕುವುದು ಖಚಿತ. ಆದರೆ, ಖಾಸಗಿ ಕಂಪನಿಗಳಿಗೆ ಸ್ಥಳೀಯ ಅಭ್ಯರ್ಥಿಗಳ ಕಡೆ ಕಣ್ತೆರೆದು ನೋಡುವ ಮನಸ್ಸು ಬೇಕು. ಭೂಮಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕನ್ನಡ ನಾಡಿನಿಂದ ಪಡೆದು ಕನ್ನಡಿಗರನ್ನು ಉದ್ಯೋಗದಿಂದ ದೂರ ಇಡುವುದು ಮನೆ ಹಾಳು ಕೃತ್ಯ ಎಂದು ಧಾರಾಳವಾಗಿ ಹೇಳಬಹುದು. ಕೆಲವು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಸಾಕಷ್ಟು ಪ್ರಮಾಣದ ಮಾನ್ಯತೆ ಉಂಟು. ಆದರೆ, ಇದು ಬೆರಳೆಣಿಕೆಯಷ್ಟು ಮಾತ್ರ.
ಹಾಗೊಮ್ಮೆ ಕಾನೂನಿನ ಬಿಕ್ಕಟ್ಟು ತಲೆದೋರಿದರೆ ಸಂಸತ್ ಸದಸ್ಯರ ಬೆಂಬಲದಿಂದ ಸಂಸತ್ತಿನಲ್ಲಿ ನಿರ್ಣಯವೊಂದನ್ನು ಮಂಡಿಸಿ ಸ್ಥಳೀಯರಿಗೆ ಉದ್ಯೋಗಾವಕಾಶದಲ್ಲಿ ಮೀಸಲಾತಿ ಕಲ್ಪಿಸುವ ವಿಶೇಷ ಪ್ರಸ್ತಾಪ ರಾಜ್ಯಾಂಗದ ಒಂಬತ್ತನೇ ಶೆಡ್ಯೂಲ್‌ಗೆ ಸೇರುವಂತೆ ಮಾಡುವ ಪ್ರಕ್ರಿಯೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕೈಜೋಡಿಸಿದರೆ ಮಾತ್ರ ಯಶಸ್ಸು ಸಾಧ್ಯ. ಕಲ್ಯಾಣ ಕರ್ನಾಟಕಕ್ಕೆ ೩೭೧ಜೆ ಅನ್ವಯ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಸ್ತಾಪ ಪ್ರಸ್ತುತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ವಿಶೇಷ ಆಸಕ್ತಿಯಿಂದ ರಾಜ್ಯಾಂಗದ ಕಲಮಿನಲ್ಲಿ ಸೇರ್ಪಡೆಯಾಗುವಂತೆ ಮಾಡಿದ ರೀತಿಯಲ್ಲಿ ಈಗಲೂ ಅಂತಹ ಪ್ರಯತ್ನಗಳು ನಡೆದರೆ ಕನ್ನಡ ಯುವಕರ ಬಾಳು ಹಸನಾಗುವುದು ಖಂಡಿತ.