ಕನ್ನಡಿಗರ ತೆರಿಗೆ ಹಣದಲ್ಲಿ ದೆಹಲಿ ಜಾತ್ರೆ
ಬೆಂಗಳೂರು: ಕನ್ನಡಿಗರ ತೆರಿಗೆ ಹಣದಲ್ಲಿ ದೆಹಲಿ ಜಾತ್ರೆ, ಜಾಹೀರಾತಿಗೆ ಕೋಟಿಗಟ್ಟಲೆ ಹಣವಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಕರ್ನಾಟಕದ ಜನ ಬರದಿಂದ ಕಂಗೆಟ್ಟಿದ್ದಾರೆ. ಪರಿಹಾರಕ್ಕೆ ಸರ್ಕಾರದ ಬಳಿ ಹಣವಿಲ್ಲ. ಅನ್ನದಾತ ಆತ್ಮಹತ್ಯೆ ಮಾಡಿಕೊಂಡರೂ ಕೇಳುವವರು ಸರ್ಕಾರದಲ್ಲಿಲ್ಲ. ಆದರೆ ಕನ್ನಡಿಗರ ತೆರಿಗೆ ಹಣದಲ್ಲಿ ದೆಹಲಿ ಜಾತ್ರೆ, ಜಾಹೀರಾತಿಗೆ ಕೋಟಿಗಟ್ಟಲೆ ಹಣವಿದೆ. ಅಭಿವೃದ್ಧಿ ಕಾರ್ಯಗಳಿಗೆ ಬಿಡಿಗಾಸೂ ನೀಡದ ಸಿದ್ದರಾಮಯ್ಯ ಸರ್ಕಾರ ಈಗ ಓಲೈಕೆ ರಾಜಕಾರಣಕ್ಕೆ ಮೊಗೆಮೊಗೆದು ಹಣ ಸುರಿಯುತ್ತಿದೆ. ವಕ್ಫ್ ಆಸ್ತಿ 'ರಕ್ಷಣೆ' ಮಾಡಲು ಮಾತ್ರ ಕೇಳಿದಷ್ಟು ಹಣವಿದೆ. ಕನ್ನಡ ಅಭಿವೃದ್ಧಿಗಿಲ್ಲದ 32 ಕೋಟಿ ರೂ.ಗಳಷ್ಟು ಹಣ ಈಗೆಲ್ಲಿಂದ ಬಂತು ಮುಖ್ಯಮಂತ್ರಿಗಳೇ. ಕಾಂಗ್ರೆಸ್ಸಿನ ತೆರಿಗೆ ಹೋರಾಟ ಎನ್ನುವುದು ಕೇವಲ ಕನ್ನಡಿಗರ ಗಮನ ಬೇರೆಡೆಗೆ ಸೆಳೆಯಲು ಮಾತ್ರ. ಇವರ ಯೋಜನೆ, ಯೋಚನೆಗಳೆಲ್ಲವೂ ಕೇವಲ ಒಂದು ಸಮುದಾಯವನ್ನು ಓಲೈಸಿ ಮತಬೇಟೆ ಮಾಡುವುದಷ್ಟೇ ಆಗಿದೆ ಎಂದು ಬರೆದುಕೊಂಡಿದ್ದಾರೆ.