ಕನ್ನಡ ಕಸ್ತೂರಿಯ ಪಾವೆಂ ಆಚಾರ್ಯರು
ಮನೋಹರ ಜೋಶಿ
ಕಥೆ, ಕವನ, ನಾಟಕ, ಹರಟೆ, ಅಂಕಣ ಸಾಹಿತ್ಯ, ವ್ಯಕ್ತಿಚಿತ್ರಗಳು, ಪ್ರವಾಸ ಸಾಹಿತ್ಯ, ಶಿಕ್ಷಣ, ರಾಜಕೀಯ, ಹಾಸ್ಯ ವಿಜ್ಞಾನ, ಬರವಣಿಗೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ವಿದ್ವಾನ್ ಬರಹಗಳ ಕೃಷಿ ಮಾಡಿ ಓದುಗರಿಗೆ ಜ್ಞಾನ ತುಂಬಿಸಿದವರು ಶ್ರೀಪಾಡಿಗಾರು ವೆಂಕಟರಮಣ ಆಚಾರ್ಯರು.ಪಾವಂ ಆಚಾರ್ಯ'ರೆಂದೇ ಕನ್ನಡ ಪತ್ರಿಕೋದ್ಯಮ ಲೋಕ ಹಾಗೂ ಸಾಹಿತ್ಯ ಪ್ರಪಂಚದಲ್ಲಿ ಸದಾ ಸ್ಮರಣೀಯರು. ವೃತ್ತಿಯಿಂದ ಪತ್ರಿಕೋದ್ಯಮಿಗಳಾದರೂ ಸಾಹಿತ್ಯ ರಚನೆಯಲ್ಲಿ ಅಪಾರ ಆಸಕ್ತಿಯಿಂದ ಕನ್ನಡ ಸಾಹಿತ್ಯ ಲೋಕದ ವಿವಿಧ ಆಯಾಮಗಳಲ್ಲಿ ಸಮರ್ಥವಾಗಿ ಸಾಹಿತ್ಯ ರಚಿಸುವ ಮೂಲಕ ಸರಸ್ವತಿಯ ಆರಾಧಕರೆಂದೇ ಮಾನ್ಯರಾದವರು. ಪಾವೆಂ ಅವರಿಗೆ ಪತ್ರಿಕೋದ್ಯಮದ ವೃತ್ತಿಯ ನಡುವೆ ಸಾಹಿತ್ಯರಂಗದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಲು ಸಮಯಾವಕಾಶ ಸಾಕಷ್ಟು ಇಲ್ಲದ ಸಮಯದಲ್ಲಿ ಕೂಡ ಅನೇಕ ಬರಹಗಳು, ಕೃತಿಗಳನ್ನು ರಚಿಸಿ ಸಾರಸ್ವತ ಲೋಕಕ್ಕೆ ನೀಡಿದರು. ಲಾಂಗೂಲಾಚಾರ್ಯ, ಪಾವೆಂ, ರಾಧಿಕೃಷ್ಣರಾವ್, ಮುರಳೀಧರ, ದುಷ್ಯ್ಶಂತ ಮುಂತಾದ ಕಾವ್ಯನಾಮಗಳಿಂದ ಕಸ್ತೂರಿ ಓದುಗರಿಗೆ ವಿವಿಧ ಸಾಹಿತ್ಯ ಪ್ರಕಾರದ ವೈವಿಧ್ಯ ವಿಷಯಗಳ ಕುರಿತು ನಿರಂತರವಾಗಿ ಬರೆದರು. ಒಬ್ಬರೇ ಬರೆದರೂ ಪ್ರತಿ ಲೇಖನಗಳ ವಿಷಯ ವೈವಿಧ್ಯತೆ ಒಂದಕ್ಕೊಂದು ಭಿನ್ನವಾಗಿದ್ದು ವಿವಿಧ ವಿಷಯಗಳ ಜ್ಞಾನ ಪಸರಿಸುವ ಬರಹಗಳಾಗಿ ಪ್ರಸಿದ್ಧಿ ಪಡೆದವು. ಶಬ್ದ ಗಾರುಡಿಗ ಪಾವೆಂ ಆಚಾರ್ಯರು ಕಸ್ತೂರಿಯಲ್ಲಿ
ಪದಾರ್ಥ ಚಿಂತಾಮಣಿ' ಅಂಕಣದ ಮೂಲಕ ಶಬ್ದಗಳ ಇತಿಹಾಸದ ಮಹಾದ್ವಾರವನ್ನೇ ಅನಾವರಣಗೊಳಿಸಿದರು. ಪಾವೆಂ ಅವರ ಪದಾರ್ಥ ಚಿಂತಾಮಣಿ' ಅನೇಕಾನೇಕ ಮುದ್ರಣಗಳು ಕಂಡಿರುವ ಭಾಷೆಯ, ಶಬ್ದಗಳ ಸ್ವರೂಪ ಸೊಬಗುಗಳು ಅನಾವರಣಗೊಳಿಸುವ ಮಹೋನ್ನತ ಕೃತಿಯಾಗಿ ಪ್ರಸಿದ್ಧಿ ಪಡೆದಿದೆ. ಜೀವನದ ಬಹುಪಾಲು ಕನ್ನಡದ ಪ್ರಸಿದ್ಧ
ಕಸ್ತೂರಿ' ಮಾಸಪತ್ರಿಕೆಯಲ್ಲಿ ಸೇವೆ ಸಲ್ಲಿಸಿದರು.
ಪಾವೆಂ ಬಾಲ್ಯ ಮತ್ತು ಶಿಕ್ಷಣ
ಪಾಂಡಿತ್ಯ-ಧಾರ್ಮಿಕದ ಹಿನ್ನೆಲೆಯುಳ್ಳ ಶುದ್ಧ ವೈದಿಕ ಸಂಸ್ಕೃತಿಯ ಮನೆತನದಲ್ಲಿ ಫೆಬ್ರವರಿ ೬, ೧೯೧೫ರಂದು ಉಡುಪಿಯ ಕುಂಜುಬೆಟ್ಟು ಗ್ರಾಮದಲ್ಲಿ ಜನಿಸಿದ ಪಾವೆಂ ಆಚಾರ್ಯರ ತಂದೆ ಪಾಡಿಗಾರು ಲಕ್ಷ್ಮೀನಾರಾಯಣಾಚಾರ್ಯರು, ತಾಯಿ ಶ್ರೀಮತಿ ಸೀತಮ್ಮನವರು. ಆಚಾರ್ಯರ ತಂದೆ ಸಂಸ್ಕೃತ ವಿದ್ವಾಂಸರಾಗಿದ್ದು, ನಾಟಕ, ಹರಿಕತೆಗಳಲ್ಲಿ ಆಸಕ್ತಿ ಹೊಂದಿದ್ದರು. ಪವಿತ್ರ ಕ್ಷೇತ್ರ ಸೋದೆ ಶ್ರೀವಾದಿರಾಜರ ಮಠದಲ್ಲಿ ಪಾರುಪತ್ಯಗಾರರಾಗಿ ಸೇವೆ ಸಲ್ಲಿಸಿದ್ದರು. ಅವರು ತಮ್ಮ ಬಾಲ್ಯ ಉಡುಪಿ ಹಾಗೂ ಸೋದೆ ಪ್ರಾಂತಗಳಲ್ಲಿ ಕಳೆದರು. ಪಾವೆಂ ಐದು ವರುಷದ ಹುಡುಗನಿದ್ದಾಗಲೇ ಅವರ ತಂದೆ ತೀರಿಹೋದರು. ಬಡತನದ ಕಾರಣದಿಂದ ಮನೆ-ಮನೆಗಳಲ್ಲಿ ದೇವರ ಪೂಜೆ ಮಾಡುತ್ತಾ ಬಂದ ಹಣದಿಂದ ಉಡುಪಿ ಅನಂತೇಶ್ವರ ಎಲಿಮೆಂಟರಿ ಶಾಲೆಯಲ್ಲಿ ವಿದ್ಯಾಭ್ಯಾಸ. ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು ಕೂಡ ಮನೆತನದ ಆರ್ಥಿಕ ಸ್ಥಿತಿಯಿಂದ ಕಾಲೇಜಿನ ಮುಖ ನೋಡಲಿಲ್ಲ. ೧೯೩೭ರಲ್ಲಿ ಶ್ರೀಮತಿ ಲಕ್ಷ್ಮೀಬಾಯಿ ಅವರೊಡನೆ ಉಡುಪಿಯಲ್ಲಿ ಮದುವೆ, ಅವರದು ತುಂಬು ಸಂಸಾರ. ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಕೆಲವು ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರದ ದಿನಗಳಲ್ಲಿ ಅಂಗಡಿಗಳಲ್ಲಿ ಲೆಕ್ಕಪರಿಶೋಧಕರಾಗಿ ಮುದ್ರಣ ಕಾರ್ಯದ ಉಸ್ತುವಾರಿಯಾಗಿ ದುಡಿದರು. ಹುಬ್ಬಳಿಯ ಸಂಯುಕ್ತ ಕರ್ನಾಟಕ' ಪತ್ರಿಕೆಯ ಮುದ್ರಣದ ಕೆಲಸದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತು ೧೯೫೦ರಿಂದ
ಕರ್ಮವೀರ' ಪತ್ರಿಕೆಯಲ್ಲಿ ಹರಟೆ, ಪುಸ್ತಕ ವಿಮರ್ಶೆ, ರಾಜಕೀಯದ ಕುರಿತಾದ ಟೀಕೆ-ಟಿಪ್ಪಣಿ ಮುಂತಾದ ವಿಷಯಗಳ ಕುರಿತಾದ ಲೇಖನಗಳನ್ನು ಬರೆಯತೊಡಗಿದರು.
ಸಾಹಿತಿ-ಪ್ರತಿಕೋದ್ಯಮಿ
ಪಾವೆಂ ಆಚಾರ್ಯರು ೧೯೫೬ರಲ್ಲಿ ಕಸ್ತೂರಿ' ಪತ್ರಿಕೆಯ ಸಂಪಾದಕರಾಗಿ ೧೯೭೫ರ ನಿವೃತ್ತಿಯಾಗುವರೆಗೂ ಕಸ್ತೂರಿಯ ಕಂಪು ನಾಡಿನಾದ್ಯಂತ ಹರಡಿಸಿದರು. ತಮ್ಮ ವೈವಿಧ್ಯಮಯ ವಿಷಯಗಳ ಬರಹಗಳಿಂದ ಪತ್ರಿಕೆ ಮತ್ತು ಓದುಗರ ನಡುವೆ ಸದೃಢವಾದ ಸೇತುವೆ ನಿರ್ಮಿಸಿದರು.
ಸರ್ವಜ್ಞಾಚಾರ್ಯ'ರೆಂದೇ ಗುರುತಿಸಿಕೊಂಡಿದ್ದ ಪಾವೆಂ ಅವರ ಅಂತರಂಗದಲ್ಲಿ ಒಬ್ಬ ಶ್ರೇಷ್ಠ ವಿಜ್ಞಾನ ಬರಹಗಾರ ಅಡಗಿದ್ದು, ಕಸ್ತೂರಿಯ ಮೊದಲ ಸಂಚಿಕೆಯಿಂದ ಪ್ರಾರಂಭಿಸಿ ೧೯ ಸಂವತ್ಸರಗಳ ಕಾಲ ನಿರಂತರವಾಗಿ ವಿಜ್ಞಾನ ಲೇಖನಗಳನ್ನು ಬರೆದರು.
ಜೀವನದುದ್ದಕ್ಕೂ ಸರಳ, ಸಾಮಾನ್ಯ, ಸಾತ್ವಿಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದ ಪತ್ರಿಕಾ ಲೋಕದ ಆದರ್ಶ ಪುರುಷರೆಂದೇ ಖ್ಯಾತರಾದವರು. ಮಹೋನ್ನತ ಬರಹಗಳಿಂದ ಪ್ರತಿಭಾವಂತ ಪಂಡಿತವರ್ಗದಲ್ಲಿ ಮೊದಲಿಗರು ಸದಾ ಸ್ಮರಣೀಯರು ಆಗಿದ್ದ ಪಾವೆಂ ಆಚಾರ್ಯರು ೧೯೯೨ರ ಏಪ್ರಿಲ್ ೪ ರಂದು ಈ ಲೋಕದಿಂದ ನಿರ್ಗಮಿಸಿದರು.
ಗೌರವ-ಪ್ರಶಸ್ತಿಗಳು
ಪಾವೆಂ ಅವರಿಗೆ ಅನೇಕ ಗೌರವ-ಪ್ರಶಸ್ತಿಗಳು ಹುಡುಕಿಬಂದು ಇವರ ಕೊರಳಿಗೆ ಸರಮಾಲೆಯಾಗಿದ್ದು, ಮುಂಬಯಿ ಸರಕಾರದ ಬಹುಮಾನ, ಪತ್ರಿಕೋದ್ಯಮಕ್ಕಾಗಿ ನೀಡಲಾಗುವ ಪ್ರತಿಷ್ಠಿತ `ಗೋಯೆಂಕಾ ಪ್ರಶಸ್ತಿ', ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ೧೯೮೭ರ ಜನವರಿಯಲ್ಲಿ ಮೂಲ್ಕಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೮೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಪಿ.ಆರ್.ರಾಮಯ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು.