ಕನ್ನಡ ಚಿತ್ರರಂಗದ ಸಾಕ್ಷಿಕಲ್ಲು
ಸಂಕೋಚ ಮೀರುವ ಧೈರ್ಯವನ್ನು ಸ್ವಯಾರ್ಜಿತವಾಗಿ ಸಂಪಾದಿಸಿದವರ ಪೈಕಿ ಸಾಧಕರ ಸಂಖ್ಯೆಯೇ ಹೆಚ್ಚು. ಒಪ್ಪಿಕೊಂಡ ಕೆಲಸವನ್ನು ಮಹಾಕಾಯಕ ಎಂದೇ ಭಾವಿಸಿ ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಧಾರೆ ಎರೆಯುವ ಎದೆಗಾರಿಕೆ ತೋರಿದಾಗಲಷ್ಟೆ ಕಂಡುಕೊಂಡ ಬದುಕುವ ದಾರಿಯಲ್ಲಿ ಬಂಗಾರದ ಕನಸು ಕಾಣಲು ಸಾಧ್ಯ. ನಿಜ. ಇಷ್ಟೆಲ್ಲಾ ಪೂರ್ವಪೀಠಿಕೆಯ ಅಗತ್ಯವಿರುವುದು ನಮ್ಮೊಳಗಿದ್ದು ನಮ್ಮಂತಾಗದೆ ತನ್ನತನವನ್ನೇ ಉಸಿರಿರುವತನಕ ಉಳಿಸಿಕೊಂಡು ಲೋಕದಿಂದ ನಿರ್ಗಮಿಸಿರುವ ಬಹುಮುಖ ಪ್ರತಿಭೆಯ ಅಭಿನಯಪಟು ದ್ವಾರಕೀಶ್ ಸಾಧನೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತರು ಪ್ರತಿಪಾದಿಸಿರುವಂತೆ ಹುಚ್ಚು ಮನಸ್ಸಿನ ಹತ್ತು ಮುಖಗಳ ಸಾಧನೆ.
ಅಭಿನಯ ಕಲೆಯನ್ನು ಕಂಡು ಅನುಭವಿಸಿ ಚಪ್ಪರಿಸಿಕೊಂಡು ಚಪ್ಪಾಳೆ ಹೊಡೆಯುವುದು ಸುಲಭದ ಮಾತು. ಆದರೆ, ಆ ಕಲೆಯ ನೈಪುಣ್ಯತೆ ಸಾಧಿಸಲು ಬದುಕಿನಲ್ಲಿ ಇದ್ದದ್ದನ್ನೇ ನೀಗಿಕೊಳ್ಳಬೇಕು. ನೀಗಿಕೊಂಡದ್ದನ್ನೆಲ್ಲ ಸಾಹಿತಿ ಸಂಸನಂತೆ ಮತ್ತೆ ಆವಾಹಿಸಿಕೊಳ್ಳಬೇಕು. ಇದು ಚಪ್ಪರಿಸಿ ಚಪ್ಪಾಳೆ ಹೊಡೆದಷ್ಟು ಸುಲಭದ ಕೆಲಸವಲ್ಲ. ಮಾವ ಹುಣಸೂರು ಕೃಷ್ಣಮೂರ್ತಿಯವರ ವೀರ ಸಂಕಲ್ಪ' ಚಿತ್ರದಲ್ಲಿ ಹಾಸ್ಯ ನಟನಾಗಿ ಓನಾಮ ಹಾಡಿದ ಬಂಗ್ಲೆ ಶಾಮರಾಯರ ಮಗ ದ್ವಾರಕೀಶ್ ಮೈಸೂರಿನ ಲಲಿತ್ ಮಹಲ್ ಅನ್ನು ಮೀರಿ ವಿಧಾನಸೌಧವನ್ನು ದಾಟಿ ಮೆರೆಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ನಿರ್ದಾಕ್ಷಿಣ್ಯವಾಗಿ ಹೇಳಬೇಕೆಂದರೆ, ಸ್ವತಃ ದ್ವಾರಕೀಶ್‌ಗೂ ಕೂಡಾ ಅಂತಹ ಮಹತ್ವವೇನೂ ಇದ್ದಂತಿರಲಿಲ್ಲ. ಆದರೆ, ಮೈಸೂರಿನ ಮಿತ್ರಮಂಡಳಿಯವರು ಬೆನ್ನು ತಟ್ಟಿ ಚೋಟುದ್ದದ ಹುಡುಗನಿಗೆ ಮುದ್ದಾಡುವ ರೀತಿಯಲ್ಲಿ ಹುರಿದುಂಬಿಸಿದಾಗ
ಮಮತೆಯ ಬಂಧನ' ಚಿತ್ರದ ನಿರ್ಮಾಣಕ್ಕೆ ಹೆಜ್ಜೆ ಪೂಜೆ. ಈ ಮಮತೆಯ ಬಂಧನದಲ್ಲಿ ಸಿಕ್ಕಿಬಿದ್ದಿದ್ದವರು ನಿರ್ದೇಶಕರಾಗಿ ಕೆಎಸ್‌ಎಲ್ ಸ್ವಾಮಿ, ಸಂಗೀತ ನಿರ್ದೇಶಕರಾಗಿ ವಿಜಯಭಾಸ್ಕರ್ ಹಾಗೂ ಆಗ ತಾನೇ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ ಮೈಸೂರು ಮೂಲದ ನಟ ನಟಿಯರು. ಇದಾದ ಮೇಲೆ ತೂಗುದೀಪ'ದಿಂದ ಶುರುವಾದ ದ್ವಾರಕೀಶ್ ಸಾಹಸ ಕಥೆ ಮೇಯರ್ ಮುತ್ತಣ್ಣ, ಕಳ್ಳಕುಳ್ಳ ಸೇರಿದಂತೆ ಕುಳ್ಳ ಏಜಂಟ್ ಸರಣಿಯ ಚಿತ್ರಗಳು ಕನ್ನಡಿಗರು ಮೈಸೂರು ಪಾಕ್‌ನಂತೆ ಬಾಯಿ ಚಪ್ಪರಿಸಿದಾಗ ಆಫ್ರಿಕಾದಲ್ಲಿ ಸಿನಿಮಾ ಮಾಡುವ ಹೆಬ್ಬಯಕೆ ದ್ವಾರಕೀಶ್‌ಗೆ. ಸರಿ ಆಫ್ರಿಕಾದಲ್ಲಿ ಶೀಲ ಸಿನಿಮಾ ಮಾಡಿದ ತಪ್ಪಿಗೆ ದ್ವಾರಕೀಶ್ ಸ್ವತಃ ಹೇಳಿರುವಂತೆ
ಆಫ್ರಿಕಾದಲ್ಲಿ ಶೀಲ ಇಂಡಿಯಾದಲ್ಲಿ ಸಾಲ'. ಇದೆಲ್ಲಾ ಏಳುಬೀಳಿನ ಕಥೆ. ಕನ್ನಡದ ವರನಟ ರಾಜಕುಮಾರ್ ಚಿತ್ರಗಳಲ್ಲಿ ಅವಿಭಾಜ್ಯ ಅಂಗವಾಗಿದ್ದು ನಂತರ ಬೆರೆತ ಜೀವದಂತಿದ್ದ ವಿಷ್ಣುವರ್ಧನ್ ಜೊತೆಯಲ್ಲಿ ಸತತ ಯಶಸ್ವಿ ಚಿತ್ರಗಳನ್ನು ತಯಾರಿಸಿ ಸೋಲು ಗೆಲುವುಗಳ ನಡುವೆ ಕಟ್ಟಿದ್ದ ಮನೆ ಮಾರಿ ಬೇರೆಯವರು ಕಟ್ಟಿದ್ದ ಮನೆ ಕೊಂಡು ಕಡೆಗೆ ಸಾಲಗಾರರ ಕಾಟಕ್ಕೆ ಇದ್ದದ್ದನ್ನೆಲ್ಲಾ ಕಳೆದುಕೊಂಡ ನಂತರ `ಆಪ್ತಮಿತ್ರ' ಚಿತ್ರ ನಿರ್ಮಾಣ ಮಾಡಿ ಆರ್ಥಿಕ ಹಾಗೂ ಹಾರ್ದಿಕ ಗೃಹಪ್ರವೇಶ ನೆರವೇರಿಸಿಕೊಂಡಿದ್ದು ಇನ್ನೊಂದು ಸಾಹಸಕಥೆ. ಇದೆಲ್ಲಾ ವೈಯಕ್ತಿಕ ಸಾಧನೆಗಿಂತ ಸಾಮಾಜಿಕ ಸಾಧನೆಯೇ ಹೆಚ್ಚು.
ನಿಜ. ದ್ವಾರಕೀಶ್ ಕನ್ನಡದ ಮೊದಲ ಹಾಸ್ಯ ನಟ ಅಲ್ಲ. ನರಸಿಂಹರಾಜು, ಬಾಲಕೃಷ್ಣ, ಮುಸುರಿ ಕೃಷ್ಣಮೂರ್ತಿ, ರತ್ನಾಕರ್, ಗಣಪತಿ ಭಟ್ ಮೊದಲಾದವರು ಆಗಲೇ ಜನರ ಬಿಗುಮುಖವನ್ನು ಸಡಿಲಿಸುವ ಕೌಶಲ್ಯವನ್ನು ತಮ್ಮ ಅಭಿನಯ ಚಾತುರ್ಯವನ್ನು ತೋರಿ ಹೆಸರಾಗಿದ್ದರು. ಆದರೆ, ದ್ವಾರಕೀಶ್ ಉಳಿದವರಂತೆ ಪಾತ್ರಗಳ ಒಳಗೆ ಪರಕಾಯ ಪ್ರವೇಶ ಮಾಡದೆ ಪಾತ್ರೋಚಿತವಾಗಿ ಅಂಗಚೇಷ್ಟೆ, ಶಬ್ದ ಚೇಷ್ಟೆ ಜೊತೆಗೆ ಅಗತ್ಯ ಬಿದ್ದಾಗಲೆಲ್ಲಾ ಮಂಗಚೇಷ್ಟೆಯನ್ನು ಪ್ರದರ್ಶಿಸುತ್ತಿದ್ದ ರೀತಿಯಲ್ಲಿ ನಂಜಿನ ಬದಲು ಮಂಜು ಕರಗಿಸುವ ಸಿದ್ಧೌಷದದ ಗುಣವಿತ್ತು. ಹಲವಾರು ಪಾತ್ರಗಳ ನಿರ್ವಹಣೆಯಲ್ಲಿ ದ್ವಾರಕೀಶ್ ನಾಯಕ ನಟರನ್ನು ಹಿಂದಕ್ಕೆ ಸರಿಸಿರುವ ನಿದರ್ಶನಗಳುಂಟು. ಆದರೆ, ಆತನೆಂದೂ ತಾನೇ ಶ್ರೇಷ್ಠ ಎಂಬ ಅಹಂ ಬ್ರಹ್ಮಾಸ್ಮಿಯ ವ್ಯಸನಿಯಾಗಿರಲಿಲ್ಲ. ಅದು ಆತನ ದೊಡ್ಡತನ. ಕನ್ನಡದ ಕುಳ್ಳ ಎಂದು ಕರೆಸಿಕೊಳ್ಳುವುದು ಆತನ ಮಟ್ಟಿಗೆ ನೊಬೆಲ್ ಪ್ರಶಸ್ತಿ ಪುರಸ್ಕಾರಗಳಷ್ಟು ಪವಿತ್ರವಾಗಿತ್ತು.
ವೈಯಕ್ತಿಕ ನೆಲೆಯಲ್ಲಿ ಆರಂಭದಲ್ಲಿ ನಟನಾಗಿ, ನಂತರ ನಿರ್ಮಾಪಕನಾಗಿ, ಆತ್ಮವಿಶ್ವಾಸ ಕುದುರಿದ ನಂತರ ನಿರ್ದೇಶಕನಾಗಿ, ಲೋಕಾನುಭವದ ಜೊತೆಗೆ ಲೋಕದೃಷ್ಟಿಯ ವೈಶಾಲ್ಯವೂ ಹಿರಿದಾದಾಗ ಸಂಗೀತ ಸಾಹಿತ್ಯದ ಕಡೆ ಹರಿದು ಇದರ ನಡುವೆ ಮಧ್ಯಂತರ ಬಿಡುವ ಎಂಬಂತೆ ರಾಜಕಾರಣದಲ್ಲಿ ಕೈಯ್ಯಾಡಿಸಿದ್ದು ಈತನ ಬಹುಮುಖ ನಡಾವಳಿಯ ದಿಕ್ಸೂಚಿ. ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ದ್ವಾರಕೀಶ್ ಮಾಡಿರುವ ಪ್ರಯೋಗಗಳು ಅನೇಕ. ಇದರ ಪೈಕಿ ಮೈಸೂರಿನಲ್ಲಿ ಚಲನಚಿತ್ರ ನಗರಿ ಸ್ಥಾಪನೆಯ ಕನಸೂ ಒಂದ. ಒಂದರ್ಥದಲ್ಲಿ ಕನ್ನಡ ಚಲನಚಿತ್ರರಂಗದ ನಿಲುವುಗನ್ನಡಿಯಂತಿದ್ದ ವರನಟ ಡಾ. ರಾಜಕುಮಾರ್ ಅವರ ರೀತಿಯಲ್ಲಿ ಕನ್ನಡಕ್ಕಾಗಿ, ಕನ್ನಡದ ಸಂಸ್ಕೃತಿಗಾಗಿ, ಕನ್ನಡಿಗರ ಔದಾರ್ಯದಿಂದ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕೆಂಬ ನಯನಮಹೋಹರ ಮನೋಧರ್ಮವನ್ನು ಸೃಷ್ಟಿಸಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಜಗಳಗಂಟಿಯಾಗಿ, ದೊಡ್ಡಣ್ಣನಂತೆ ಸ್ನೇಹಜೀವಿಯಾಗಿ, ಅಪ್ಪಟ ಕನ್ನಡಿಗನಂತೆ ಹೃದಯ ಶ್ರೀಮಂತಿಕೆಯ ಪೂರ್ಣ ಬಾಳನ್ನು ಅನುಭವಿಸಿ ಹಾಗೆಯೇ ಅನುಭವಿಸಲು ಲೋಕಕ್ಕೆ ತನ್ನ ಬದುಕನ್ನು ತೆರೆದಿಟ್ಟ ದ್ವಾರಕೀಶ್ ಕನ್ನಡ ಚಿತ್ರರಂಗದ ಒಂದು ಸಾಕ್ಷಿಕಲ್ಲು.