ಕನ್ನಡ ಭಾಷಾ ಅಭಿವೃದ್ಧಿಗೆ ಸದಾ ಸಿದ್ಧ
ನವದೆಹಲಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಇಂದು ಭೇಟಿ ಮಾಡಿ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಲಾಯಿತು.
ನವದೆಹಲಿಯಲ್ಲಿ ಸಚಿವರಿಗೆ ಭೇಟಿ ನೀಡಿದ ನಿಯೋಗವು, ಮುಂದಿನ ಪೀಳಿಗೆಗೆ ಕನ್ನಡದ ಮಹತ್ವ ತಿಳಿಸಿ ಕೊಡುವಲ್ಲಿ ಮತ್ತು ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆಯ ಕುರಿತು ವಿಸ್ತಾರವಾಗಿ ಚರ್ಚಿಸಿತು.
ಈ ವೇಳೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಈಗಾಗಲೇ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಹಳಷ್ಟು ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲು ಅವಕಾಶ ಕಲ್ಪಿಸಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ(NEP) ಯಲ್ಲಿಯೂ ಸಹಿತ ಸ್ಥಳೀಯ ಭಾಷೆಗಳಿಗೆ ಒತ್ತು ನೀಡಲಾಗಿದೆ. ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗೆ ಅತ್ಯಂತ ಮಹತ್ವವನ್ನು ನೀಡುತ್ತಿದೆ ಮತ್ತು ಇದರ ಅಭಿವೃದ್ಧಿಗೆ ಸದಾ ಸಿದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಮಾಜಿ ಸಚಿವರು ಹಾಗೂ ಶಿಕ್ಷಣ ತಜ್ಞರು ಪ್ರೊ. ಬಿ.ಕೆ. ಚಂದ್ರಶೇಖರ್, ಮಾಜಿ ಸಭಾಪತಿಗಳಾದ ವಿ.ಆರ್. ಸುರ್ದಶನ್, ಮಾಜಿ ಸಂಸದ ಹಾಗೂ ಮಾಜಿ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಸೇರಿದಂತೆ ಇತರರಿದ್ದರು.