ಕನ್ನಡ ಹೋರಾಟಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ
09:55 PM Jan 16, 2024 IST | Samyukta Karnataka
ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಹೋರಾಟಗಾರರಿಗೆ ಎಂಇಎಸ್ ಬೆದರಿಕೆ ಹಾಕಿರುವುದು ಈಗ ಬಹಿರಂಗವಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಹೋರಾಟಗಾರರಾದ ಅನಿಲ್ ದಡ್ಡೀಮನಿ ಹಾಗೂ ಸಂಪತ್ ಕುಮಾರ ಅವರಿಗೆ ಇನ್ಸ್ಟಾಗ್ರಾಂನಲ್ಲಿ ರಾಯಲ್ ಬೆಳಗಾಂವ್ಕರ ಎಂಬ ಖಾತೆಯಿಂದ ಬೆದರಿಕೆ ಹಾಕಲಾಗಿದೆ. ನಗರದಲ್ಲಿ ಕನ್ನಡ ನಾಮಫಲಕ ಕಡ್ಡಾಯ ಮಾಡುವಂತೆ ಹೋರಾಟ ಮಾಡಿದ್ದಕ್ಕೆ ಪುಂಡರು ಈ ಕೃತ್ಯ ಎಸಗಿದ್ದಾರೆ ಎಂದು ಗೊತ್ತಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಕಳೆದ ವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ನಾಮಫಲಕಗಳಿಗೆ ಬೆಂಕಿ ಹಚ್ಚಿ ಎಂಇಎಸ್ ವಿಕೃತಿ ಮೆರೆದಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕುವ ಮೂಲಕ ತನ್ನ ಚಾಳಿ ಮುಂದುವರೆಸಿದೆ.