ಕನ್ಯಾಕುಮಾರಿಯಲ್ಲಿನ ಸಾಧನಾದಿಂದ ಹೊಸ ಸಂಕಲ್ಪಗಳು
ನನ್ನ ಪ್ರೀತಿಯ ಭಾರತೀಯರೇ,
ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ ೨೦೨೪ರ ಲೋಕಸಭಾ ಚುನಾವಣೆಗಳು ಇಂದು ಪ್ರಜಾಪ್ರಭುತ್ವದ ತಾಯಿಯಾದ ನಮ್ಮ ರಾಷ್ಟ್ರದಲ್ಲಿ ಮುಕ್ತಾಯಗೊಳ್ಳುತ್ತಿವೆ. ಕನ್ಯಾಕುಮಾರಿಯಲ್ಲಿ ಮೂರು ದಿನಗಳ ಆಧ್ಯಾತ್ಮಿಕ ಪಯಣ ಮುಗಿಸಿ ಈಗಷ್ಟೇ ದೆಹಲಿಗೆ ವಿಮಾನವೇರಿದೆ. ದಿನವಿಡೀ ಕಾಶಿ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ನನ್ನ ಮನಸ್ಸು ಹಲವಾರು ಅನುಭವಗಳು ಮತ್ತು ಭಾವನೆಗಳಿಂದ ತುಂಬಿದೆ… ನನ್ನೊಳಗೆ ಅನಂತ ಶಕ್ತಿಯ ಹರಿವಿನ ಅನುಭವವಾಗುತ್ತಿದೆ. ೨೦೨೪ರ ಲೋಕಸಭಾ ಚುನಾವಣೆಯು ಅಮೃತ ಕಾಲದ ಮೊದಲನೆಯ ಚುನಾವಣೆ. ನಾನು ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನೆಲವಾದ ಮೀರತ್ ನಿಂದ ಕೆಲವು ತಿಂಗಳ ಹಿಂದೆ ನನ್ನ ಅಭಿಯಾನವನ್ನು ಪ್ರಾರಂಭಿಸಿದೆ. ಅಂದಿನಿಂದ, ನಾನು ನಮ್ಮ ಮಹಾನ್ ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಈ ಚುನಾವಣೆಗಳ ಅಂತಿಮ ಸಮಾವೇಶವು ಪಂಜಾಬಿನ ಹೋಶಿಯಾರಪುರದಲ್ಲಿ ನಡೆಯಿತು. ಇದು ಮಹಾನ್ ಗುರುಗಳ ನಾಡು ಮತ್ತು ಸಂತ ರವಿದಾಸ್ ಜಿ ಅವರ ನೆಲ. ಇಲ್ಲಿಂದ ನಾನು ಭಾರತ ಮಾತೆಯ ಪಾದಗಳಾದ ಕನ್ಯಾಕುಮಾರಿಗೆ ಆಗಮಿಸಿದೆ.
ಚುನಾವಣೆಯ ಕಾವು ನನ್ನ ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿತ್ತು. ಸಮಾವೇಶಗಳು ಮತ್ತು ರೋಡ್ ಶೋಗಳಲ್ಲಿ ಕಾಣುತ್ತಿದ್ದ ಅಪಾರಸಂಖ್ಯೆಯ ಮುಖಗಳು ನನ್ನ ಕಣ್ಣ ಮುಂದೆ ಬಂದವು. ನಮ್ಮ ನಾರಿ ಶಕ್ತಿಯ ಆಶೀರ್ವಾದಗಳು… ನಂಬಿಕೆ, ವಾತ್ಸಲ್ಯ, ಇವೆಲ್ಲವೂ ಬಹಳ ವಿನಮ್ರವಾದ ಅನುಭವ. ನನ್ನ ಕಣ್ಣುಗಳು ತೇವವಾಗುತ್ತಿದ್ದವು… ನಾನು 'ಸಾಧನ'(ಧ್ಯಾನಸ್ಥ ಸ್ಥಿತಿ)ಗೆ ಪ್ರವೇಶಿಸಿದೆ. ತದನಂತರ, ಬಿಸಿಬಿಸಿ ರಾಜಕೀಯ ಚರ್ಚೆಗಳು, ದಾಳಿ ಮತ್ತು ಪ್ರತಿದಾಳಿಗಳು, ಚುನಾವಣೆಯಲ್ಲಿ ವಿಶಿಷ್ಟವಾದ ಆರೋಪಗಳ ಧ್ವನಿಗಳು ಮತ್ತು ಮಾತುಗಳು… ಅವೆಲ್ಲವೂ ಶೂನ್ಯದಲ್ಲಿ ಕಣ್ಮರೆಯಾದವು. ನನ್ನೊಳಗೆ ನಿರ್ಲಿಪ್ತತೆಯ ಭಾವ ಬೆಳೆಯತೊಡಗಿತು… ನನ್ನ ಮನಸ್ಸು ಬಾಹ್ಯ ಪ್ರಪಂಚದಿಂದ ಸಂಪೂರ್ಣ ಬೇರ್ಪಟ್ಟಿತು.
ದೊಡ್ಡ ಜವಾಬ್ದಾರಿಗಳ ನಡುವೆ ಧ್ಯಾನವು ಸವಾಲಿನದಾಗುತ್ತದೆ, ಆದರೆ ಕನ್ಯಾಕುಮಾರಿಯ ನೆಲ ಮತ್ತು ಸ್ವಾಮಿ ವಿವೇಕಾನಂದರ ಸ್ಫೂರ್ತಿ ಅದನ್ನು ಸುಲಭವಾಗಿಸಿತು. ನಾನೇ ಅಭ್ಯರ್ಥಿಯಾಗಿರುವ ನನ್ನ ಪ್ರೀತಿಯ ಕಾಶಿಯ ಜನರ ಕೈಗೆ ನನ್ನ ಪ್ರಚಾರವನ್ನು ಒಪ್ಪಿಸಿ ಇಲ್ಲಿಗೆ ಬಂದಿದ್ದೇನೆ.
ಹುಟ್ಟಿನಿಂದಲೇ ನನಗೆ ಈ ಮೌಲ್ಯಗಳನ್ನು ನನ್ನಲ್ಲಿ ತುಂಬಿದ ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಈ ಸ್ಥಳದಲ್ಲಿ ಧ್ಯಾನ ಮಾಡುವಾಗ ಏನನ್ನು ಅನುಭವಿಸಿರಬಹುದು ಎಂದು ನಾನು ಯೋಚಿಸುತ್ತಿದ್ದೆ! ನನ್ನ ಧ್ಯಾನದ ಒಂದು ಭಾಗವು ಇದೇ ರೀತಿಯ ಆಲೋಚನೆಗಳ ಹೊಳೆಯಲ್ಲಿ ಹರಿಯಿತು.
ಈ ನಿರ್ಲಿಪ್ತತೆಯ ನಡುವೆ, ಶಾಂತಿ ಮತ್ತು ಮೌನದ ನಡುವೆ, ಭಾರತದ ಉಜ್ವಲ ಭವಿಷ್ಯಕ್ಕಾಗಿ, ಭಾರತದ ಗುರಿಗಳಿಗಾಗಿ ನನ್ನ ಮನಸ್ಸಿನಲ್ಲಿ ಆಲೋಚನೆಗಳು ನಿರಂತರವಾಗಿ ಚಿಮ್ಮುತ್ತಿದ್ದವು. ಕನ್ಯಾಕುಮಾರಿಯಲ್ಲಿ ಉದಯಿಸಿದ ಸೂರ್ಯ ನನ್ನ ಆಲೋಚನೆಗಳಿಗೆ ಹೊಸ ಎತ್ತರವನ್ನು ನೀಡಿತು, ಸಾಗರದ ವಿಶಾಲತೆಯು ನನ್ನ ಆಲೋಚನೆಗಳನ್ನು ವಿಸ್ತರಿಸಿತು ಮತ್ತು ದಿಗಂತದ ವಿಸ್ತಾರವು ಬ್ರಹ್ಮಾಂಡದ ಆಳದಲ್ಲಿ ಹುದುಗಿರುವ ಏಕತೆಯ ನಿರಂತರ ಭಾವನೆಯನ್ನು ನೀಡಿತು. ಹಿಮಾಲಯದ ಮಡಿಲಲ್ಲಿ ದಶಕಗಳ ಹಿಂದೆ ಮಾಡಿದ ಆಲೋಚನೆಗಳು ಮತ್ತು ಅನುಭವಗಳು ಪುನರುಜ್ಜೀವನಗೊಳ್ಳುತ್ತಿರುವಂತೆ ತೋರುತ್ತಿದೆ.
ಮಿತ್ರರೇ,
ಕನ್ಯಾಕುಮಾರಿ ಯಾವತ್ತೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದುದು. ಕನ್ಯಾಕುಮಾರಿಯಲ್ಲಿ ವಿವೇಕಾನಂದ ರಾಕ್ ಸ್ಮಾರಕವನ್ನು ಶ್ರೀ ಏಕನಾಥ್ ರಾನಡೆ ಅವರ ನೇತೃತ್ವದಲ್ಲಿ ನಿರ್ಮಿಸಲಾಯಿತು. ಏಕನಾಥ್ ಜೀ ಅವರೊಂದಿಗೆ ವ್ಯಾಪಕವಾಗಿ ಪ್ರಯಾಣಿಸುವ ಅವಕಾಶ ನನಗೆ ದೊರೆಯಿತು. ಈ ಸ್ಮಾರಕದ ನಿರ್ಮಾಣದ ಸಮಯದಲ್ಲಿ ಕನ್ಯಾಕುಮಾರಿಯಲ್ಲಿಯೂ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಕ್ಕಿತು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ… ಇದು ಪ್ರತಿಯೊಬ್ಬ ದೇಶವಾಸಿಗಳ ಹೃದಯದಲ್ಲಿ ಆಳವಾಗಿ ಬೇರೂರಿರುವ ಸಾಮಾನ್ಯ ಗುರುತು, ಇದು ತಾಯಿ ಶಕ್ತಿಯು ಕನ್ಯಾಕುಮಾರಿಯ ರೂಪದಲ್ಲಿ ಅವತರಿಸಿದ ಶಕ್ತಿಪೀಠವಾಗಿದೆ. ಈ ದಕ್ಷಿಣದ ತುದಿಯಲ್ಲಿ, ತಾಯಿ ಶಕ್ತಿಯು ತಪಸ್ಸು ಮಾಡಿದಳು ಮತ್ತು ಭಾರತದ ಉತ್ತರದ ತುದಿಯಲ್ಲಿ ಹಿಮಾಲಯದ ಮೇಲೆ ಕುಳಿತಿರುವ ಭಗವಾನ್ ಶಿವನಿಗಾಗಿ ಕಾಯುತ್ತಿದ್ದಳು.
ಕನ್ಯಾಕುಮಾರಿ ಸಂಗಮಗಳ ನಾಡು. ನಮ್ಮ ದೇಶದ ಪವಿತ್ರ ನದಿಗಳು ವಿವಿಧ ಸಮುದ್ರಗಳಿಗೆ ಸೇರುತ್ತವೆ ಮತ್ತು ಇಲ್ಲಿ, ಆ ಸಮುದ್ರಗಳು ಸಂಗಮಿಸುತ್ತವೆ. ಇಲ್ಲಿ ನಾವು ಇನ್ನೊಂದು ಮಹಾ ಸಂಗಮಕ್ಕೆ ಸಾಕ್ಷಿಯಾಗಿದ್ದೇವೆ-ಭಾರತದ ಸೈದ್ಧಾಂತಿಕ ಸಂಗಮ! ಇಲ್ಲಿ, ವಿವೇಕಾನಂದ ರಾಕ್ ಸ್ಮಾರಕ, ಸಂತ ತಿರುವಳ್ಳುವರ್ ಅವರ ಭವ್ಯವಾದ ಪ್ರತಿಮೆ, ಗಾಂಧಿ ಮಂಟಪ ಮತ್ತು ಕಾಮರಾಜರ್ ಮಣಿ ಮಂಟಪವಿದೆ. ಈ ದಿಗ್ಗಜರ ಈ ಚಿಂತನಾ ಧಾರೆಗಳು ಇಲ್ಲಿ ಸಮ್ಮಿಲನವಾಗಿ ಸಂಗಮಗೊಂಡಿವೆ. ಇದು ರಾಷ್ಟ್ರ ನಿರ್ಮಾಣಕ್ಕೆ ಮಹತ್ತರವಾದ ಸ್ಫೂರ್ತಿಯನ್ನು ನೀಡುತ್ತದೆ. ಕನ್ಯಾಕುಮಾರಿಯ ಈ ಭೂಮಿ ಐಕ್ಯತೆಗೆ ವಿಶೇಷವಾಗಿ ಭಾರತದ ರಾಷ್ಟ್ರೀಯತೆ ಮತ್ತು ಏಕತೆಯ ಭಾವನೆಯನ್ನು ಅನುಮಾನಿಸುವವರಿಗೆ ಅಳಿಸಲಾಗದ ಸಂದೇಶವನ್ನು ನೀಡುತ್ತದೆ.
ಕನ್ಯಾಕುಮಾರಿಯಲ್ಲಿರುವ ಸಂತ ತಿರುವಳ್ಳುವರ್ ಅವರ ಭವ್ಯವಾದ ಪ್ರತಿಮೆಯು ಸಮುದ್ರದಿಂದ ಭಾರತ ಮಾತೆಯ ವಿಸ್ತಾರವನ್ನು ನೋಡುತ್ತಿದೆ. ಅವರ ಕೃತಿ ತಿರುಕ್ಕುರಳ್ ಸುಂದರ ತಮಿಳು ಭಾಷೆಯ ಮುಕುಟಮಣಿಗಳಲ್ಲಿ ಒಂದಾಗಿದೆ. ಇದು ಜೀವನದ ಪ್ರತಿಯೊಂದು ಅಂಶವನ್ನು ಒಳಗೊಂಡಿದೆ, ರಾಷ್ಟ್ರಕ್ಕಾಗಿ ಅತ್ಯುತ್ತಮವಾದದ್ದನ್ನು ನೀಡಲು ನಮ್ಮನ್ನು ಪ್ರೇರೇಪಿಸುತ್ತದೆ. ಅಂತಹ ಮಹಾನ್ ವ್ಯಕ್ತಿಗೆ ನಮನ ಸಲ್ಲಿಸುವುದು ನನ್ನ ಅದೃಷ್ಟ.ಸೌಭಾಗ್ಯವಾಗಿದೆ.
ಸ್ನೇಹಿತರೇ,
ಸ್ವಾಮಿ ವಿವೇಕಾನಂದರು ಒಮ್ಮೆ ಹೀಗೆ ಹೇಳಿದ್ದರು, 'ಪ್ರತಿಯೊಂದು ರಾಷ್ಟçಕ್ಕೂ ತಲುಪಿಸಲು ಒಂದು ಸಂದೇಶವಿದೆ, ಪೂರೈಸಲು ಒಂದು ಧ್ಯೇಯವಿದೆ, ತಲುಪಲು ಒಂದು ಗಮ್ಯವಿದೆ?.
ಭಾರತವು ಸಹಸ್ರಾರು ವರ್ಷಗಳಿಂದ ಒಂದು ಅರ್ಥಪೂರ್ಣ ಉದ್ದೇಶದೊಂದಿಗೆ ಈ ಚೈತನ್ಯದೊಂದಿಗೆ ಮುನ್ನಡೆಯುತ್ತಿದೆ. ಭಾರತವು ಸಾವಿರಾರು ವರ್ಷಗಳಿಂದ ಚಿಂತನೆಗಳ ತೊಟ್ಟಿಲು. ನಾವು ಗಳಿಸಿದ್ದನ್ನು ಎಂದಿಗೂ ನಮ್ಮ ವೈಯಕ್ತಿಕ ಬಂಡವಾಳವೆಂದು ಪರಿಗಣಿಸುವುದಿಲ್ಲ ಮತ್ತು ಅದನ್ನು ಆರ್ಥಿಕ ಅಥವಾ ವಸ್ತು ನಿಯತಾಂಕಗಳಿಂದ ಅಳೆಯುವುದಿಲ್ಲ. ಆದುದರಿಂದಲೇ, 'ಇದಂ-ನಾ-ಮಮ' (ಇದು ನನ್ನದಲ್ಲ) ಭಾರತದ ಅಂತರ್ಗತ ಮತ್ತು ಸಹಜ ಭಾಗವಾಗಿದೆ.
ಭಾರತದ ಕಲ್ಯಾಣವು ಪ್ರಪಂಚದ ಕಲ್ಯಾಣಕ್ಕೆ ಕಾರಣವಾಗುತ್ತದೆ, ಭಾರತದ ಪ್ರಗತಿಯು ಪ್ರಪಂಚದ ಪ್ರಗತಿಗೆ ಕಾರಣವಾಗುತ್ತದೆ, ನಮ್ಮ ಸ್ವಾತಂತ್ರ್ಯ ಚಳುವಳಿ ಇದಕ್ಕೆ ದೊಡ್ಡ ಉದಾಹರಣೆಯಾಗಿದೆ. ಭಾರತವು ೧೫ ಆಗಸ್ಟ್ ೧೯೪೭ ರಂದು ಸ್ವತಂತ್ರವಾಯಿತು. ಆ ಸಮಯದಲ್ಲಿ ಪ್ರಪಂಚದ ಅನೇಕ ದೇಶಗಳು ಗುಲಾಮಗಿರಿಯಲ್ಲಿದ್ದವು. ಆ ದೇಶಗಳು ಸಹ ಭಾರತದ ಸ್ವಾತಂತ್ರ್ಯದಿಂದ ಸ್ಫೂರ್ತಿ ಮತ್ತು ಶಕ್ತಿಯನ್ನು ಪಡೆದುಕೊಂಡವು, ಅವು ಕೂಡ ಸ್ವಾತಂತ್ರ್ಯವನ್ನು ಗಳಿಸಿದವು. ಇದೀಗ ಕೊರೊನಾ ಸಂಕಷ್ಟದ ಅವಧಿಯ ಉದಾಹರಣೆಯೂ ನಮ್ಮ ಮುಂದಿದೆ. ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಬಗ್ಗೆ ಆತಂಕಗಳು ವ್ಯಕ್ತವಾಗುತ್ತಿದ್ದಾಗ, ಭಾರತದ ಯಶಸ್ವಿ ಪ್ರಯತ್ನಗಳು ಅನೇಕ ದೇಶಗಳಿಗೆ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡಿದವು.
ಇಂದು ಭಾರತದ ಆಡಳಿತವು ವಿಶ್ವದ ಹಲವು ದೇಶಗಳಿಗೆ ಮಾದರಿಯಾಗಿದೆ. ಕೇವಲ ೧೦ ವರ್ಷಗಳಲ್ಲಿ ೨೫ ಕೋಟಿ ಜನರನ್ನು ಬಡತನದಿಂದ ಮೇಲೆತ್ತಿರುವುದು ಅಭೂತಪೂರ್ವವಾದುದು. ಜನಪರವಾದ ಉತ್ತಮ ಆಡಳಿತ, ಮಹತ್ವಾಕಾಂಕ್ಷೆಯ ಜಿಲ್ಲೆ, ಮಹತ್ವಾಕಾಂಕ್ಷೆಯ ತಾಲ್ಲೂಕಿನಂತಹ ವಿನೂತನ ಪ್ರಯೋಗಗಳು ಇಂದು ವಿಶ್ವದಲ್ಲಿ ಚರ್ಚೆಯಾಗುತ್ತಿವೆ. ಬಡವರ ಸಬಲೀಕರಣದಿಂದ ಕೊನೆಯ ಮೈಲಿಗೆ ತಲುಪಿಸುವವರೆಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆದ್ಯತೆ ನೀಡುವ ನಮ್ಮ ಪ್ರಯತ್ನಗಳು ಜಗತ್ತಿಗೆ ಸ್ಫೂರ್ತಿ ನೀಡಿವೆ. ಬಡವರನ್ನು ಸಬಲೀಕರಣಗೊಳಿಸಲು, ಪಾರದರ್ಶಕತೆಯನ್ನು ತರಲು ಮತ್ತು ಅವರ ಹಕ್ಕುಗಳನ್ನು ನೀಡಲು ನಾವು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದಕ್ಕೆ ಭಾರತದ ಡಿಜಿಟಲ್ ಇಂಡಿಯಾ ಅಭಿಯಾನವು ಇಂದು ಇಡೀ ಜಗತ್ತಿಗೆ ಉದಾಹರಣೆಯಾಗಿದೆ. ಭಾರತದಲ್ಲಿ ಇಂದು, ಅಗ್ಗದ ಡೇಟಾವು ಮಾಹಿತಿ ಮತ್ತು ಸೇವೆಗಳಿಗೆ ಬಡವರ ಪ್ರವೇಶವನ್ನು ಖಾತ್ರಿಪಡಿಸುವ ಮೂಲಕ ಸಾಮಾಜಿಕ ಸಮಾನತೆಯ ಮಾಧ್ಯಮವಾಗುತ್ತಿದೆ. ಇಡೀ ಜಗತ್ತು ಈ ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವನ್ನು ಸಂಶೋಧನಾ ದೃಷ್ಟಿಕೋನದಿಂದ ನೋಡುತ್ತಿದೆ ಮತ್ತು ದೊಡ್ಡ ಜಾಗತಿಕ ಸಂಸ್ಥೆಗಳು ನಮ್ಮ ಮಾದರಿಯಿಂದ ಕಲಿಯುವಂತೆ ಅನೇಕ ದೇಶಗಳಿಗೆ ಸಲಹೆ ನೀಡುತ್ತಿವೆ.
ಇಂದು ಭಾರತದ ಪ್ರಗತಿ ಮತ್ತು ಭಾರತದ ಏಳಿಗೆ ಭಾರತಕ್ಕೆ ಮಾತ್ರ ದೊಡ್ಡ ಅವಕಾಶವಲ್ಲ. ಪ್ರಪಂಚದಾದ್ಯಂತದ ಎಲ್ಲಾ ದೇಶಗಳಿಗೆ ಇದೊಂದು ಐತಿಹಾಸಿಕ ಅವಕಾಶವಾಗಿದೆ. ಜಿ-೨೦ ಯಶಸ್ಸಿನ ನಂತರ, ಜಗತ್ತು ಭಾರತಕ್ಕೆ ಹೆಚ್ಚಿನ ಪಾತ್ರವನ್ನು ಕಲ್ಪಿಸುತ್ತಿದೆ. ಇಂದು ಭಾರತವನ್ನು ಜಾಗತಿಕ ದಕ್ಷಿಣದ ಪ್ರಬಲ ಮತ್ತು ಪ್ರಮುಖ ಧ್ವನಿಯಾಗಿ ಸ್ವೀಕರಿಸಲಾಗುತ್ತಿದೆ. ಭಾರತದ ಉಪಕ್ರಮದ ಮೇರೆಗೆ ಆಫ್ರಿಕಾ ಒಕ್ಕೂಟ ಜಿ-೨೦ ಗುಂಪಿನ ಭಾಗವಾಯಿತು. ಇದು ಆಫ್ರಿಕನ್ ದೇಶಗಳ ಭವಿಷ್ಯಕ್ಕೆ ನಿರ್ಣಾಯಕ ತಿರುವು ನೀಡಲಿದೆ.
ಸ್ನೇಹಿತರೇ,
ಭಾರತದ ಅಭಿವೃದ್ಧಿ ಪಥವು ನಮಗೆ ಹೆಮ್ಮೆ ಮತ್ತು ವೈಭವವನ್ನು ತುಂಬುತ್ತದೆ, ಆದರೆ ಅದೇ ಸಮಯದಲ್ಲಿ, ಇದು ೧೪೦ ಕೋಟಿ ನಾಗರಿಕರಿಗೆ ಅವರ ಜವಾಬ್ದಾರಿಗಳನ್ನೂ ನೆನಪಿಸುತ್ತದೆ. ಈಗ, ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ನಾವು ಹೆಚ್ಚಿನ ಕರ್ತವ್ಯಗಳು ಮತ್ತು ದೊಡ್ಡ ಗುರಿಗಳ ಕಡೆಗೆ ಹೆಜ್ಜೆ ಹಾಕಬೇಕು. ನಾವು ಹೊಸ ಕನಸುಗಳನ್ನು ಕಾಣಬೇಕು, ಅವುಗಳನ್ನು ನನಸು ಮಾಡಬೇಕು ಮತ್ತು ಆ ಕನಸುಗಳನ್ನು ಬದುಕಲು ಪ್ರಾರಂಭಿಸಬೇಕು.
ನಾವು ಭಾರತದ ಅಭಿವೃದ್ಧಿಯನ್ನು ಜಾಗತಿಕ ದೃಷ್ಟಿಕೋನದಲ್ಲಿ ನೋಡಬೇಕು ಮತ್ತು ಇದಕ್ಕಾಗಿ ನಾವು ಭಾರತದ ಅಂತರ್ಗತ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ನಾವು ಭಾರತದ ಶಕ್ತಿಯನ್ನು ಒಪ್ಪಿಕೊಳ್ಳಬೇಕು, ಅವುಗಳನ್ನು ಪೋಷಿಸಬೇಕು ಮತ್ತು ಪ್ರಪಂಚದ ಪ್ರಯೋಜನಕ್ಕಾಗಿ ಬಳಸಿಕೊಳ್ಳಬೇಕು. ಇಂದಿನ ಜಾಗತಿಕ ಸನ್ನಿವೇಶದಲ್ಲಿ, ಯುವ ರಾಷ್ಟçವಾಗಿ ಭಾರತದ ಶಕ್ತಿಯು ಒಂದು ಅವಕಾಶವಾಗಿದೆ, ಇದರಿಂದ ನಾವು ಹಿಂತಿರುಗಿ ನೋಡಬಾರದು.
೨೧ನೇ ಶತಮಾನದ ಜಗತ್ತು ಹಲವು ಭರವಸೆಗಳೊಂದಿಗೆ ಭಾರತದತ್ತ ನೋಡುತ್ತಿದೆ ಮತ್ತು ಜಾಗತಿಕ ಸನ್ನಿವೇಶದಲ್ಲಿ ಮುಂದುವರಿಯಲು ನಾವು ಹಲವಾರು ಬದಲಾವಣೆಗಳನ್ನು ಮಾಡಬೇಕಾಗಿದೆ. ಸುಧಾರಣೆಗೆ ಸಂಬಂಧಿಸಿದಂತೆ ನಮ್ಮ ಸಾಂಪ್ರದಾಯಿಕ ಚಿಂತನೆಯನ್ನೂ ನಾವು ಬದಲಾಯಿಸಬೇಕಾಗಿದೆ. ಭಾರತವು ಸುಧಾರಣೆಯನ್ನು ಕೇವಲ ಆರ್ಥಿಕ ಸುಧಾರಣೆಗಳಿಗೆ ಸೀಮಿತಗೊಳಿಸುವುದಿಲ್ಲ. ಸುಧಾರಣೆಯ ದಿಕ್ಕಿನತ್ತ ನಾವು ಜೀವನದ ಪ್ರತಿಯೊಂದು ಅಂಶದಲ್ಲೂ ಮುನ್ನಡೆಯಬೇಕು. ನಮ್ಮ ಸುಧಾರಣೆಗಳು ೨೦೪೭ ರ ವೇಳೆಗೆ 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ) ದ ಆಶಯಗಳಿಗೆ ಅನುಗುಣವಾಗಿರಬೇಕು.
ಯಾವುದೇ ದೇಶಕ್ಕೆ ಸುಧಾರಣೆ ಎಂದಿಗೂ ಪ್ರತ್ಯೇಕ ಪ್ರಕ್ರಿಯೆಯಾಗುವುದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿಯೇ ನಾನು ದೇಶಕ್ಕಾಗಿ ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ದೃಷ್ಟಿಕೋನವನ್ನು ಮುಂದಿಟ್ಟಿದ್ದೇನೆ. ಸುಧಾರಣೆಯ ಜವಾಬ್ದಾರಿ ನಾಯಕತ್ವದ ಮೇಲಿದೆ. ಅದರ ಆಧಾರದ ಮೇಲೆ ನಮ್ಮ ಅಧಿಕಾರಶಾಹಿಯು ಕಾರ್ಯನಿರ್ವಹಿಸುತ್ತದೆ ಮತ್ತು ನಂತರ ಸಾರ್ವಜನಿಕರು ಅದರೊಂದಿಗೆ ತೊಡಗಿಸಿಕೊಂಡಾಗ, ನಾವು ಪರಿವರ್ತನೆಗೆ ಸಾಕ್ಷಿಯಾಗುತ್ತೇವೆ.
ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲು, ನಾವು ಶ್ರೇಷ್ಠತೆಯನ್ನು ನಮ್ಮ ಪ್ರಮುಖ ಮೌಲ್ಯವನ್ನಾಗಿ ಮಾಡಿಕೊಳ್ಳಬೇಕು. ನಾವು ಎಲ್ಲಾ ನಾಲ್ಕು ದಿಕ್ಕುಗಳಾದ ವೇಗ, ಪ್ರಮಾಣ, ವ್ಯಾಪ್ತಿ ಮತ್ತು ಮಾನದಂಡಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ನಾವು ಉತ್ಪಾದನೆಯೊಂದಿಗೆ ಗುಣಮಟ್ಟಕ್ಕೆ ಒತ್ತು ನೀಡಬೇಕು, ?ಶೂನ್ಯ ದೋಷ-ಶೂನ್ಯ ಪರಿಣಾಮ?ದ ಮಂತ್ರವನ್ನು ನಾವು ಅಳವಡಿಸಿಕೊಳ್ಳಬೇಕು.
ಸ್ನೇಹಿತರೇ,
ದೇವರು ನಮಗೆ ಭರತ ಭೂಮಿಯಲ್ಲಿ ಜನ್ಮ ನೀಡಿದ್ದಾನೆ ಎಂದು ನಾವು ಪ್ರತಿ ಕ್ಷಣವೂ ಹೆಮ್ಮೆಪಡಬೇಕು. ಭಾರತಕ್ಕೆ ಸೇವೆ ಸಲ್ಲಿಸಲು ಮತ್ತು ಅದರ ಉನ್ನತಿಯ ಪ್ರಯಾಣದಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲು ದೇವರು ನಮ್ಮನ್ನು ಆರಿಸಿಕೊಂಡಿದ್ದಾನೆ.
ಪುರಾತನ ಮೌಲ್ಯಗಳನ್ನು ಆಧುನಿಕ ರೂಪದಲ್ಲಿ ಅಳವಡಿಸಿಕೊಂಡು ನಮ್ಮ ಪರಂಪರೆಯನ್ನು ಆಧುನಿಕ ರೀತಿಯಲ್ಲಿ ಪುನರ್ ವ್ಯಾಖ್ಯಾನಿಸಬೇಕು.
ಒಂದು ರಾಷ್ಟçವಾಗಿ, ನಾವು ಹಳೆಯ ಆಲೋಚನೆಗಳು ಮತ್ತು ನಂಬಿಕೆಗಳನ್ನು ಮರುಮೌಲ್ಯಮಾಪನ ಮಾಡಬೇಕಾಗಿದೆ. ನಿರಾಶಾವಾದಿಗಳ ಒತ್ತಡದಿಂದ ನಮ್ಮ ಸಮಾಜವನ್ನು ಮುಕ್ತಗೊಳಿಸಬೇಕಾಗಿದೆ. ನಕಾರಾತ್ಮಕತೆಯಿಂದ ಮುಕ್ತಿ ಪಡೆಯುವುದು ಯಶಸ್ಸನ್ನು ಸಾಧಿಸುವ ಮೊದಲ ಹೆಜ್ಜೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಸಕಾರಾತ್ಮಕತೆಯ ಮಡಿಲಲ್ಲಿ ಯಶಸ್ಸು ಅರಳುತ್ತದೆ.
ಭಾರತದ ಅನಂತ ಮತ್ತು ಅಮರ ಶಕ್ತಿಯಲ್ಲಿ ನನ್ನ ನಂಬಿಕೆ, ಗೌರವ ಮತ್ತು ವಿಶ್ವಾಸವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ೧೦ ವರ್ಷಗಳಲ್ಲಿ ಬೆಳೆಯುತ್ತಿರುವ ಭಾರತದ ಈ ಸಾಮರ್ಥ್ಯವನ್ನು ನಾನು ನೋಡಿದ್ದೇನೆ ಮತ್ತು ಅನುಭವಿಸಿದ್ದೇನೆ.
ನಾವು ೨೦ ನೇ ಶತಮಾನದ ನಾಲ್ಕು ಮತ್ತು ಐದನೇ ದಶಕಗಳನ್ನು ಸ್ವಾತಂತ್ರ್ಯ ಚಳುವಳಿಗೆ ಹೊಸ ವೇಗವನ್ನು ನೀಡಲು ಬಳಸಿಕೊಂಡಂತೆ, ೨೧ ನೇ ಶತಮಾನದ ಈ ೨೫ ವರ್ಷಗಳಲ್ಲಿ ನಾವು 'ವಿಕಸಿತ ಭಾರತ'ಕ್ಕೆ ಅಡಿಪಾಯ ಹಾಕಬೇಕು. ಸ್ವಾತಂತ್ರ್ಯ ಹೋರಾಟವು ಮಹಾನ್ ತ್ಯಾಗಕ್ಕೆ ಕರೆ ನೀಡಿದ ಸಮಯ. ಪ್ರಸ್ತುತ ಸಮಯವು ಪ್ರತಿಯೊಬ್ಬರಿಂದ ಉತ್ತಮ ಮತ್ತು ನಿರಂತರ ಕೊಡುಗೆಗಳನ್ನು ಬಯಸುತ್ತದೆ.
೧೮೯೭ರಲ್ಲಿ ಸ್ವಾಮಿ ವಿವೇಕಾನಂದರು ಮುಂದಿನ ೫೦ ವರ್ಷಗಳನ್ನು ದೇಶಕ್ಕಾಗಿ ಮೀಸಲಿಡಬೇಕು ಎಂದು ಹೇಳಿದ್ದರು. ಈ ಕರೆ ನೀಡಿದ ೫೦ ವರ್ಷಗಳ ನಂತರ, ಭಾರತವು ೧೯೪೭ ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು.
ಇಂದು ನಮಗೆ ಅದೇ ಸುವರ್ಣಾವಕಾಶವಿದೆ. ಮುಂದಿನ ೨೫ ವರ್ಷಗಳನ್ನು ದೇಶಕ್ಕಾಗಿ ಮುಡಿಪಾಗಿಡೋಣ. ನಮ್ಮ ಪ್ರಯತ್ನಗಳು ಮುಂಬರುವ ಪೀಳಿಗೆಗೆ ಮತ್ತು ಮುಂಬರುವ ಶತಮಾನಗಳಿಗೆ ಬಲವಾದ ಅಡಿಪಾಯವನ್ನು ಸೃಷ್ಟಿಸುತ್ತದೆ, ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ದೇಶದ ಶಕ್ತಿ ಮತ್ತು ಉತ್ಸಾಹವನ್ನು ನೋಡಿದರೆ ಗುರಿ ಈಗ ದೂರವಿಲ್ಲ ಎನಿಸುತ್ತಿದೆ. ಬನ್ನಿ, ವೇಗವಾಗಿ ಸಾಗೋಣ…ಒಟ್ಟಾಗಿ ವಿಕಸಿತ ಭಾರತವನ್ನು ನಿರ್ಮಿಸೋಣ.
ಈ ಚಿಂತನಾ ಬರಹವನ್ನು ಪ್ರಧಾನಿ ಮೋದಿಯವರು ಜೂನ್ ೧ ರಂದು ಸಂಜೆ ೪:೧೫ ರಿಂದ ೭ ರವರೆಗೆ ಕನ್ಯಾಕುಮಾರಿಯಿಂದ ದೆಹಲಿಗೆ ಹಿಂದಿರುಗುವ ವಿಮಾನದಲ್ಲಿ ಬರೆದಿದ್ದಾರೆ.