ಕಪ್ಪು ಕಲ್ಲು ಮತ್ತು ರಾಜಣ್ಣ
ಗಣೇಶ್ ರಾಣೆಬೆನ್ನೂರು
ಚಿತ್ರ: ಕಾಲಾಪತ್ಥರ್
ನಿರ್ದೇಶನ: ವಿಕ್ಕಿ ವರುಣ್
ನಿರ್ಮಾಣ: ಭುವನ್ ಮೂವೀಸ್
ತಾರಾಗಣ: ವಿಕ್ಕಿ ವರುಣ್, ಧನ್ಯಾ, ನಾಗಾಭರಣ, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಸಂಪತ್ ಮುಂತಾದವರು.
ಆತ ವೀರ ಸೇನಾನಿ. ಗಾಳಿ, ಮಳೆ, ಬಿಸಿಲೆನ್ನದೇ ಗಡಿಯಂಚಿನಲ್ಲಿ ಗಸ್ತು ತಿರುಗುವ ಯೋಧ, ಕೆಲವೊಮ್ಮೆ ಅಡುಗೆ ಮನೆಯಲ್ಲಿ ಥರಹೇವಾರಿ ಅಡುಗೆ ಮಾಡುತ್ತಾನೆ. ಎದುರಾಳಿಗಳು ಆತನಿರುವ ಅಡುಗೆ ಮನೆಗೆ ನುಸುಳುತ್ತಾರೆ. ಅವರನ್ನೆಲ್ಲ ಸದೆಬಡಿದ ಬಳಿಕ ರಾಷ್ಟ್ರಾದ್ಯಂತ ಖ್ಯಾತಿ ಹೊಂದುತ್ತಾನೆ. ಊರಿನಲ್ಲಂತೂ ರಾಜ ಮರ್ಯಾದೆ. ಪ್ರೀತಿ ಹೆಚ್ಚಾಗಿ ಊರಿನವರು ಆತನ ಪುತ್ತಳಿಯನ್ನೇ ನಿಲ್ಲಿಸುತ್ತಾರೆ. ಆದರೆ ಈ ವಿಷಯ ಎಂಎಲ್‌ಎ ಕಿವಿಗೆ ಬೀಳುತ್ತಿದ್ದಂತೇ ಕೆಂಡಾಮಂಡಲವಾಗುತ್ತಾನೆ. ಊರಿಗೆ ನೀರು ಸರಬರಾಜು ನಿಲ್ಲಿಸುವ ಎಂಎಲ್‌ಎ, ಒಂದೊಂದಾಗಿಯೇ ವ್ಯವಸ್ಥೆ, ಸಂಪರ್ಕ ಕಟ್ ಮಾಡುತ್ತಾ ಹೋಗುತ್ತಾನೆ. ಇದು ನಾಯಕನ ಅರಿವಿಗೆ ಬರುವ ಹೊತ್ತಿಗೆ ಪರಿಸ್ಥಿತಿ ಒಂದು ಹಂತಕ್ಕೆ ಕೈ ಮೀರಿ ಹೋಗಿರುತ್ತದೆ. ಆದರೆ ಅಲ್ಲೊಂದು ವಿಸ್ಮಯ ಅಡಗಿರುತ್ತದೆ. ನಾಯಕನ ಪುತ್ತಳಿಯನ್ನು ಕಪ್ಪು ಶಿಲೆಯಲ್ಲಿ ಕೆತ್ತಿರಲಾಗಿರುತ್ತದೆ. ಇಡೀ ಸಿನಿಮಾದ ಕಥೆ-ಚಿತ್ರಕಥೆ ಅದರ ಸುತ್ತಲೇ ಸುತ್ತುವುದರಿಂದ ಕೆಲವೊಂದು ಸಂಗತಿಗಳು ಕ್ರಮೇಣ ಅನಾವರಣಗೊಳ್ಳುತ್ತಾ ಸಾಗುತ್ತದೆ. ಇದರ ಜತೆಗೆ ಮತ್ತೊಂದು ಪ್ರಮುಖ ವಿಷಯ-ಡಾ.ರಾಜ್‌ಕುಮಾರ್. ಸಾಕಷ್ಟು ಕಡೆ ಅಣ್ಣಾವ್ರನ್ನು ಸ್ಮರಿಸುವ ನಾಯಕ, ಏನಾದರೂ ಹೇಳಿಕೊಳ್ಳಬೇಕೆಂದರೆ ಅಪ್ಪ-ಅಮ್ಮನಿಗಿಂತ ರಾಜಣ್ಣನ ಜತೆಯೇ ನಿವೇದನೆ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿರುತ್ತಾನೆ. ಕಪ್ಪು ಕಲ್ಲಿನ (ಕಾಲಾಪತ್ಥರ್) ಪುತ್ತಳಿ ಹಾಗೂ ರಾಜಣ್ಣನ ವಿಷಯವನ್ನು ಹೇಳುತ್ತಲೇ ತನ್ನ ಮನಸ್ಸಿನ ವೇದನೆ, ತಳಮಳಗಳನ್ನು ಬಿಚ್ಚಿಡುತ್ತಾ ಸಾಗುವುದೇ ಇಡೀ ಸಿನಿಮಾದ ಸಾರಾಂಶ.
ಇಂತಿಪ್ಪ ನಾಯಕ ಊರಿಗೆ ಉಪಕಾರಿಯಾಗುತ್ತಾನಾ… ಅಪಾಯ ಒಡ್ಡುತ್ತಾನಾ ಎಂಬುದೇ ಕೊನೆಯ ಕೌತುಕ.
ನಟನೆ ಮತ್ತು ನಿರ್ದೇಶನವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಕ್ಕಿ ವರುಣ್ ಗೆದ್ದಿದ್ದಾರೆ. ಹಾಗೆಯೇ ತಂತ್ರಜ್ಞರ ಮೂಲಕ ಚೆನ್ನಾಗಿ ಕೆಲಸ ತೆಗೆಸಿಕೊಳ್ಳುವುದರಲ್ಲೂ ಹಿಂದೆ ಬಿದ್ದಿಲ್ಲ. ಹೀಗಾಗಿ ಕ್ಯಾಮೆರಾ ಕುಸುರಿ, ಸಂಗೀತ, ಸಂಕಲನ… ಎಲ್ಲವೂ ಅಚ್ಚುಕಟ್ಟು. ಹೆಚ್ಚು ಸಮಯ ತೆಗೆದುಕೊಳ್ಳದೇ ಚೊಕ್ಕವಾಗಿ ಕಥೆ ಹೇಳಿ ಮುಗಿಸಿದ್ದಾರೆ.
ಧನ್ಯಾ ರಾಮ್‌ಕುಮಾರ್, ಟಿ.ಎಸ್.ನಾಗಾಭರಣ, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಸಂಪತ್ ಮೈತ್ರೇಯ ಇತರರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.