ಕರುನಾಡಿನ ಕ್ರೀಡಾಪಟುಗಳಿಗೆ 10 ಲಕ್ಷ ನೀಡಿ ಪ್ರೋತ್ಸಾಹಿಸಲಿ
ಮಹರಾಷ್ಟ್ರ ರಾಜ್ಯದಿಂದ ವಿಶ್ವ ಕಪ್ ನಲ್ಲಿ ಪ್ರತಿನಿಧಿಸಿದ್ದ ಕ್ರೀಡಾಪಟುಗಳಿಗೆ ಸರ್ಕಾರ 2.25 ಕೋಟಿ ಹಾಗೂ ಸರ್ಕಾರೀ ಉದ್ಯೋಗ ನೀಡಿದೆ
ಬೆಂಗಳೂರು: ಖೋ ಖೋ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ನಾಟಕದ ಚೈತ್ರ ಹಾಗೂ ಗೌತಮ್ ಅವರಿಗೆ ತಲಾ 10 ಲಕ್ಷ ನೀಡಿ ಪ್ರೋತ್ಸಾಹಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಚೊಚ್ಚಲ ಖೋ ಖೋ ವಿಶ್ವ ಕಪ್ ಗೆದ್ದ ಭಾರತ ಪುರುಷ ಹಾಗೂ ಮಹಿಳಾ ತಂಡಕ್ಕೆ ಕೇವಲ 5 ಲಕ್ಷ ನೀಡಿರುವುದು ಸಾಧಕರಿಗೆ ಮಾಡಿದ ಅವಮಾನ. ದೇಶೀಯ ಕ್ರೀಡೆಗಳಲ್ಲಿ ಭಾರತ ಅದ್ಭುತ ಸಾಧನೆ ಮಾಡುತ್ತಿರುವುದನ್ನು ರಾಜ್ಯ ಸರ್ಕಾರ ಗುರುತಿಸಿ ಈ ಹಿಂದೆ ಆಶ್ವಾಸನೆ ನೀಡಿದ್ದ 10 ಲಕ್ಷ ನೀಡಬೇಕು.
ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ನಾಟಕದ ಚೈತ್ರ ಹಾಗೂ ಗೌತಮ್ ಅವರಿಗೆ ತಲಾ 10 ಲಕ್ಷ ನೀಡಿ ಪ್ರೋತ್ಸಾಹಿಸಬೇಕು ಹಾಗೂ ಅವರಿಗೆ ತರಬೇತಿಗೆ ಬೇಕಾದ ಎಲ್ಲ ರೀತಿಯಾದ ಸೌಕರ್ಯಗಳನ್ನು ಸರ್ಕಾರ ಮಾಡಿಕೊಡಬೇಕು.
ಮಹರಾಷ್ಟ್ರ ರಾಜ್ಯದಿಂದ ವಿಶ್ವ ಕಪ್ ನಲ್ಲಿ ಪ್ರತಿನಿಧಿಸಿದ್ದ ಕ್ರೀಡಾಪಟುಗಳಿಗೆ ಸರ್ಕಾರ 2.25 ಕೋಟಿ ಹಾಗೂ ಸರ್ಕಾರೀ ಉದ್ಯೋಗ ನೀಡಿದೆ. ಕರ್ನಾಟಕ ಕೂಡ ಭರವಸೆಯ ಆಟಗಾರರಾದ ಚೈತ್ರ ಅವರ ಶಿಕ್ಷಣಕ್ಕೆ, ತರಬೇತಿಗೆ ಕನಿಷ್ಠ 10 ಲಕ್ಷ ನೀಡಿ ಸರ್ಕಾರ ಪ್ರೋತ್ಸಾಹಿಸಲಿ ಎಂದಿದ್ದಾರೆ.