ಕರುನಾಡ ಕರಾವಳಿಯತ್ತವೂ ಸ್ವಲ್ಪ `ಲಕ್ಷ' ಬೇಕಲ್ಲವೇ…
ನೀಲಿ ಆಕಾಶದಲ್ಲಿ ಹುಟ್ಟುವ ಸಮುದ್ರದ ಅಲೆಗಳು ಬಂಗಾರದ ತೀರವನ್ನು ತೊಳೆಯುತ್ತವೆ... ಸಾಲು ಸಾಲು ಹಸಿರು ಬೆಟ್ಟಗಳು ಅಲೆಗಳನ್ನು ಸ್ವಾಗತಿಸುತ್ತವೆ... ಮುಗಿಲೆತ್ತರದ ಗಾಳಿ ಮರಗಳು ಸುಂಯ್ಯ ಎನ್ನುವ ನಿನಾದವನ್ನು ಹೊರ ಹಾಕುತ್ತವೆ... ಸೂರ್ಯಾಸ್ತದ ಸಮಯದಲ್ಲಿ ಭೂಮಿ, ನೀರು, ಬೆಳಕು ಎಲ್ಲವೂ ಇಲ್ಲಿ ಒಂದಾಗಿ ಅಪರಿಮಿತ ಆಹ್ಲಾದಕರ ನಿಸರ್ಗವನ್ನು ಸೃಷ್ಟಿಸುತ್ತವೆ. ಇದೊಂದು ಅದ್ಭುತ ನಿಸರ್ಗ ತಾಣ' ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್, ಕಾರವಾರದ ಸಮುದ್ರ ತೀರವನ್ನು ಇನ್ನೂ ಇಪ್ಪತ್ತೊಂದರ ಹರೆಯದಲ್ಲಿ ಕಂಡ ರೀತಿ ಇದು. ಕಾರವಾರ ಜಿಲ್ಲಾ ನ್ಯಾಯಾಧೀಶರಾಗಿದ್ದ ಸಹೋದರ ಸತ್ಯೇಂದ್ರನಾಥ ಟ್ಯಾಗೋರ್ ಅವರ ಬಂಗಲೆಯಲ್ಲಿ ಉಳಿದು ಕಾರವಾರವನ್ನು ಸುತ್ತಾಡಿದ ರವೀಂದ್ರನಾಥ ಟ್ಯಾಗೋರ್,
ಪ್ರಕೃತಿ ಪ್ರತಿಶೋಧ್' ಎಂದು ಬಣ್ಣಿಸಿ ನಾಟ್ಯ ಕವನ ಸೃಷ್ಟಿಸಿದರು. ಟ್ಯಾಗೋರ್ ಅಪರಿಚಿತ ಯುವಕರು ಆಗ. ಅವರೇ ಹೇಳಿಕೊಂಡಂತೆ-ಕಾರವಾರದ ಸೌಂದರ್ಯ ನನ್ನ ಮೇಲೆ ಅಗಾಧ ಪರಿಣಾಮ ಬೀರಿದೆ. ಸಾಹಿತ್ಯ ರಚನೆಗೆ ಸ್ಫೂರ್ತಿ ಪಡೆದದ್ದು ಇಲ್ಲಿಯೇ! ನನ್ನ ಭವಿಷ್ಯದ ಸಾಹಿತ್ಯದ ಕೃತಿಗಳಲ್ಲಿ ಈ ಪ್ರಕೃತಿಯ ಪ್ರತಿಶೋಧ್ ಪ್ರಭಾವ ಕಾಣಬಹುದು. ಅನಂತತೆಯು ಸಾಧಿಸುವ ಸಂತೋಷ !! ದಿಸ್ ನೇಚರ್ ರಿವೇಂಜ್ ಮೇ ಬಿ ಲುಕ್ಡ್ ಅಪಾನ್ ಆ್ಯಸ್ ಆ್ಯನ್ ಇಂಟ್ರೊಡಕ್ಷನ್ ಟು ಹೋಲ್ ಆಫ್ ಮೈ ಫ್ಯೂಚರ್ ಲಿಟರರಿ ವರ್ಕ್ಸ್ ಎಂದು ಟ್ಯಾಗೋರ್ ತಮ್ಮ ಮೈ ಲೈಫ್ ಇನ್ ಮೈ ವರ್ಡ್ಸ್' ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಶತಮಾನದ ಹಿಂದೆಯೇ ಪ್ರಕೃತಿಯಲ್ಲಿ ಹುದುಗಿದ್ದ ಕಾರವಾರ ಸಮುದ್ರ ತೀರ, ಸಾಹಿತ್ಯ ಕೃತಿಯಲ್ಲಿ ವಿಜೃಂಭಿಸಿದಷ್ಟು ಜನತೆಗೆ, ದೇಶಕ್ಕೆ ತೆರೆದುಕೊಂಡೇ ಇಲ್ಲ. ಲಕ್ಷದ್ವೀಪದ ಪ್ರಕೃತಿಯ ಸೊಬಗನ್ನು ಪ್ರಧಾನಿ ತೆರೆದಿಡುತ್ತಿದ್ದಂತೆ ಅದಕ್ಕೂ ಸುಂದರ, ಅತ್ಯುತ್ತಮ, ರಮಣೀಯ ಕರ್ನಾಟಕದ ತೀರಗಳಿಗೇನು ಕಮ್ಮಿ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಟ್ಯಾಗೋರ್ ನೂರ ಇಪ್ಪತ್ತೈದು ವರ್ಷಗಳ ಹಿಂದೆ ವರ್ಣಿಸಿದ ಕಾರವಾರ ತೀರ ಲಕ್ಷದ್ವೀಪವಷ್ಟೇ ಅಲ್ಲ, ಯಾವ ದೇಶ ವಿದೇಶದ ಎಲ್ಲ ರಮಣೀಯ ಸ್ಥಳಗಳಿಗಿಂತಲೂ ಅದ್ಭುತವಾಗಿದೆ. ಪ್ರಕೃತಿಯೇ ಮೈವೆತ್ತ ಖನಿಯಾಗಿದೆ. ಕೇವಲ ಕಾರವಾರವಷ್ಟೇ ಅಲ್ಲ. ಇಡೀ ಕರ್ನಾಟಕದ ಕಡಲ ತೀರ ೩೦೦ ಕಿಲೋ ಮೀಟರ್‌ಗಳಷ್ಟು ಚಾಚಿಕೊಂಡಿರುವುದು, ಅದೂ ಪ್ರಶಾಂತವಾದ ನೆಲವನ್ನು ಮುತ್ತಿಕೊಂಡ ಅಲೆಗಳ ರೂಪದಲ್ಲಿ... ಇವು ತೀರವನ್ನು ತೊಳೆಯುತ್ತಿರುವ ರೀತಿ ಅದ್ಭುತ. ಪ್ರಧಾನಿ ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅದರ ಸೌಂದರ್ಯವನ್ನು ವರ್ಣಿಸಿ ಪ್ರವಾಸಿಗರನ್ನು ಕೈಬೀಸಿ ಕರೆದಿರುವುದು ಮಾಲ್ಡೀವ್ಸ್‌ನಂತಹ ದ್ವೀಪ ರಾಷ್ಟ್ರಗಳಿಗೆ ಉರಿ ಹತ್ತಿಕೊಂಡಿತು. ಲಕ್ಷದ್ವೀಪದಲ್ಲಿ ಏನಿದೆ ಎಂದು ಪ್ರಶ್ನಿಸಿ ಮೋದಿ ಮತ್ತು ಭಾರತವನ್ನು ಟೀಕಿಸಿದ ಅಲ್ಲಿನ ಮೂವರು ಮಂತ್ರಿಗಳು ರಾಜೀನಾಮೆ ನೀಡಿದರು. ಜನರೇ ಮಾಲ್ಡೀವ್ಸ್‌ಗೆ ಹೋಗುವುದನ್ನು ರದ್ದುಗೊಳಿಸಿದರು. ಇದು ದೇಶದ ಸ್ವಾಭಿಮಾನದ ಪ್ರಶ್ನೆ. ಎದ್ದಿರುವ ಪ್ರಶ್ನೆ-ನಮ್ಮಲ್ಲಿಯೇ ಲಕ್ಷದ್ವೀಪ, ಮಾಲ್ಡೀವ್ಸ್, ಥೈಲ್ಯಾಂಡ್, ಮಾರಿಷಸ್‌ನಂತಹ ಅದ್ಭುತವಾದ ಕಡಲತೀರವಿದೆ. ಟ್ಯಾಗೋರ್ ಅವರೇ ಬಣ್ಣಿಸಿದಂತೆ ಇದೊಂದು ಸೌಂದರ್ಯದ ಖನಿ. ನಿಸರ್ಗವೇ ಮೈವೆತ್ತಂತೆ ನಿಂತಿರುವ ಸೊಬಗು. ಇವನ್ನೇಕೆ ಜನತೆಗೆ ಬಿಚ್ಚಿಟ್ಟಿಲ್ಲ? ನೋಡಿ, ಕಾರವಾರ, ಗೋಕರ್ಣ, ಮುರುಡೇಶ್ವರ, ಮಲ್ಪೆ, ಮರವಂತೆ ಬೀಚ್‌ಗಳನ್ನು ಬಿಟ್ಟು ವಿದೇಶಿ ಬೀಚ್‌ಗಳತ್ತ ಸಿನೆಮಾದವರು ಅಲ್ಲಿ ಶೂಟಿಂಗ್ ನಡೆಸುತ್ತಾರೆ. ಬೀಚ್ ಪ್ರವಾಸೋದ್ಯಮವನ್ನು ಹಲವು ದೇಶಗಳು ಶೋಕೇಸ್ ಮಾಡಿವೆ. ನೂರಾರು ದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಿ ಬರಮಾಡಿಕೊಳ್ಳುತ್ತಿವೆ. ಪುಟ್ಟ ಸ್ಥಳಗಳಲ್ಲಿ ಏನೆಲ್ಲ ಜನಾಕರ್ಷಣೆ ಮಾಡಬಹುದೋ ಅವೆಲ್ಲವನ್ನೂ ಆ ದೇಶಗಳು ಮಾಡಿವೆ. ಹಾಗಾಗಿ ಆ ದೇಶಗಳಿಗೆ ಪ್ರವಾಸಿಗರೇ ಬದುಕು. ಪ್ರವಾಸಿಗರಿಂದಲೇ ಜೀವನ. ಲಕ್ಷಾಂತರ ಕೋಟಿ ಪ್ರವಾಸೋದ್ಯಮದ ಮೇಲೆಯೇ ನಿಂತಿದೆ. ಪಕ್ಕದ ಗೋವಾ ಕೂಡ ಹೀಗೆಯೇ. ಏನೊಂದೂ ಬೆಳೆಯದ, ಎಲ್ಲವನ್ನೂ ಪಕ್ಕದ ರಾಜ್ಯಗಳಿಂದ ಆಮದು ಪಡೆಯುವ ಗೋವಾ ಅತ್ಯಂತ ಶ್ರೀಮಂತ ರಾಜ್ಯ ಎನ್ನುವುದನ್ನು ನೆನಪಿಡಿ. ಅದೇ ಅದರ ಪಕ್ಕದ ಕಾರವಾರ ಪ್ರವಾಸೋದ್ಯಮವಾಗಿ ಬೆಳೆದಿಲ್ಲ. ಕಾರವಾರದ ಸಮುದ್ರ ತೀರ-ಕಾಳಿ ಸಂಗಮ, ಗೋಕರ್ಣದ ಓಂ ಬೀಚ್-ಅಘನಾಶಿನಿಯ ಸಂಗಮ, ಗಂಗೊಳ್ಳಿಯ ಸುಂದರ ಬಂದರು ಮತ್ತು ಸಂಗಮ, ಅಲ್ಲಿಯ ಹಿನ್ನೀರುಗಳ ಭರತ-ಇಳಿತ, ಪಕ್ಕದಲ್ಲೇ ಹಾದು ಹೋಗುವ ಹೆದ್ದಾರಿ, ಹಾಗೆಯೇ ಸಹ್ಯಾದ್ರಿಯ ಪರ್ವತ ಶ್ರೇಣಿ, ಹಚ್ಚ ಹಸಿರು ವಾತಾವರಣ... ಇಂತಹ ಅದ್ಭುತ ಪ್ರಕೃತಿ... ಇದನ್ನು ಆಸ್ವಾದಿಸುವ ಮನಸ್ಸುಗಳಿಗೆ ಇದು ತೆರೆದಿಲ್ಲವೇಕೆ? ಪ್ರವಾಸಿಗರನ್ನು ಹಾಗೂ ಪ್ರವಾಸೋದ್ಯಮವನ್ನು ಗಂಭೀರವಾಗಿ ಪರಿಗಣಿಸದಿರುವುದು ಮೂಲ ಕಾರಣ. ಕರ್ನಾಟಕ ಹತ್ತು ಹಲವು ವಿಸ್ಮಯಗಳನ್ನು ಒಳಗೊಂಡ ವಿಭಿನ್ನತೆ ಹೊಂದಿರುವ ರಾಜ್ಯ. ಸಮುದ್ರ ತೀರವಿದೆ. ಅಭಯಾರಣ್ಯವಿದೆ. ಜಲಪಾತಗಳಿವೆ. ನದಿ-ತೊರೆಗಳಿವೆ. ಧಾರ್ಮಿಕ, ಭಕ್ತಿ ಭಾವದ ಕೇಂದ್ರಗಳಿವೆ. ಶಿಲ್ಪಕಲೆಗಳ ತವರೂರು ಇದು; ಇತಿಹಾಸ-ಪುರಾಣ, ಪ್ರೇಕ್ಷಣೀಯ ಸ್ಥಳ ವಿಸ್ಮಯಗಳಿಲ್ಲಿವೆ. ಆದರೂ ಹೊರ ಜಗತ್ತಿಗೆ ಕರ್ನಾಟಕ ಕೃಷಿ, ಐಟಿ-ಬಿಟಿ ರಾಜ್ಯ ಮಾತ್ರ! ಕಾರವಾರದ ಕಾಳಿ ನದಿ ಪಕ್ಕದಲ್ಲೇ ತಿಳಮಾತಿ ಎನ್ನುವ ಬೀಚ್ ಇದೆ. ಅಲ್ಲಿಯ ಮರಳು ಕಪ್ಪು ಬಣ್ಣದ ಎಳ್ಳಿನ ರೀತಿ ಕಾಣುತ್ತದೆ. ಆದ್ದರಿಂದ ತಿಲ ಅಂದರೆ ಎಳ್ಳು, ಮಾತಿ ಅಂದರೆ ಮಣ್ಣು ಎಂಬ ಹೆಸರು. ಉಡುಪಿ ಮಲ್ಪೆಯ ಸೇಂಟ್ ಮೇರಿಸ್ ದ್ವೀಪದ್ದು ಇನ್ನೊಂದು ವೈಶಿಷ್ಟ್ಯ. ವಿಸ್ಮಯ. ಕಲ್ಲು ಕೊರೆದು ಮಹಡಿ ಮನೆ ಕಟ್ಟಿದಂತೆ, ಚೌಕಾಕಾರದ ಭೂಮಿ ಮೈದಳೆದಂತೆ ಇರುವ ಅದ್ಭುತವಿದು. ಸುತ್ತಲೂ ಕಾಡಿನ ಮಧ್ಯೆ, ದಂಡಕಾರಣ್ಯದ ನಡುವೆ ಮೈದಳೆದ ಯಾಣ ಎಂತಹ ವಿಸ್ಮಯ. ಜಗತ್ಪ್ರಸಿದ್ಧ ಜೋಗ, ರಾವಣ ಪ್ರತಿಷ್ಠಾಪಿಸಿದ ಆತ್ಮಲಿಂಗ ಗೋಕರ್ಣ, ಪರಶುರಾಮನ ಸೃಷ್ಟಿಯಾದ ಕುಡ್ಲೆ ಗೋಕರ್ಣ ತೀರ; ಬಿಳಿ ಉಸುಕಿನ ಮುರುಡೇಶ್ವರ, ಮರವಂತೆ, ಹಾಗೆಯೇ ಇಡೀ ಅರಬ್ಬೀ ಸಮುದ್ರದಿಂದ ಅಪಾಯ ಎದುರಾಗದಂತೆ ತಡೆದ ಅಂಜುದೀವ್, ಕೂರ್ಮಗಡ, ನೇತ್ರಾಣಿ ಇತ್ಯಾದಿ ಪುಟ್ಟ ಪುಟ್ಟ ದ್ವೀಪ ಗುಡ್ಡಗಳು... ಅದ್ಭುತ ಮೇರು ಕಲೆ ಯಕ್ಷಗಾನ, ಕಂಬಳ, ಹಾಲಕ್ಕಿಗಳ ಗುಮಟೆ ಪಾಂಗು, ಸಿದ್ದಿಗಳ ದಮಾಮಿ ನೃತ್ಯ, ಕೋಲ... ಬಯಲಾಟ ಏನೆಲ್ಲ ಕಲಾವೈವಿಧ್ಯಗಳು.. ಇದೇ ಪ್ರಕೃತಿ ಸೊಬಗು-ಕಲಾ ವೈಭವ ಬೇರೆ ದೇಶದಲ್ಲಿ ಇದ್ದಿದ್ದರೆ ಸ್ವರ್ಗ ಸೃಷ್ಟಿಸುತ್ತಿದ್ದರಲ್ಲವೇ...? ನಿಜ. ಕರ್ನಾಟಕದ ಪ್ರವಾಸೋದ್ಯಮ ಆಯವ್ಯಯ ಕೇವಲ ಹತ್ತಾರು ಸಾವಿರ ಕೋಟಿ. ಅದೂ ಕೇವಲ ಹೋಟೆಲ್ಲು, ಟ್ಯಾಕ್ಸಿಗಳಿಗೆ ಸಬ್ಸಿಡಿ ನೀಡುವುದ್ದಕ್ಕಷ್ಟೇ ಸೀಮಿತ. ಸರ್ಕಾರವೇ ಯಾತ್ರಿ ನಿವಾಸ, ಜಂಗಲ್ ಲಾಜ್ ಇತ್ಯಾದಿಗಳನ್ನು ನಿರ್ಮಿಸಿ, ಅವನ್ನು ನಿರ್ವಹಿಸಲಾಗದೇ ಈಗವು ಪಾಳು ಭೂತ ಬಂಗಲೆಗಳಾಗಿವೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಮೂಲ ಕಾರಣ ಸಂಪರ್ಕ ಹಾಗೂ ಸೌಲಭ್ಯ. ಇರುವ ಸೌಂದರ್ಯವನ್ನು ಕಾಪಾಡಿಕೊಂಡು ಇನ್ನಷ್ಟು ಹೆಚ್ಚಿಸುವ ಕಾರ್ಯ ಮಾಡಿದ್ದರೆ ಕರ್ನಾಟಕದ ಪ್ರವಾಸೋದ್ಯಮ ಕೇವಲ ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗಿ ಉಳಿಯುತ್ತಿರಲಿಲ್ಲ. ಬೀಚ್ ಪ್ರವಾಸೋದ್ಯಮ ಇರಬಹುದು, ಇತರೇ ತಾಣಗಳಿರಬಹುದು, ಜನರಿಂದ ದೂರವಾಗಿವೆ ಎಂದರೆ ನೈರ್ಮಲ್ಯ ಇಲ್ಲದಿರುವುದು!. ಕರ್ನಾಟಕದ ಬೀಚ್‌ಗಳ ಸಮಸ್ಯೆಯೇ ಇದು. ಸ್ಥಳೀಯರ ವಿಶ್ವಾಸ ಗಳಿಸಿಕೊಂಡು ಅವರ ಸಾಮರ್ಥ್ಯದ ಸದ್ಬಳಕೆ ಮಾಡಿಕೊಳ್ಳಲಾಗಿಲ್ಲ. ಸ್ಟಾರ್ ಹೋಟೆಲ್‌ಗಳಿದ್ದರೆ ಮಾತ್ರ ಪ್ರವಾಸೋದ್ಯಮ ಅಭಿವೃದ್ಧಿ ಎನ್ನುವ ತಪ್ಪು ಕಲ್ಪನೆಯೊಂದರೆ ಯೋಜನೆ ಸಿದ್ಧವಾಗುತ್ತದೆ. ಸಾಮಾನ್ಯ ಪ್ರವಾಸಿಗರಿಗೆ ಏನು ಬೇಕು? ಅವರ ಖರ್ಚು ಗಮನದಲ್ಲಿಟ್ಟುಕೊಂಡು ಯೋಜನೆ ಸಿದ್ಧವಾಗಬೇಕಿದೆ. ಪ್ರವಾಸ ತುಂಬ ತುಟ್ಟಿಯಾಗಬಾರದು. ರಕ್ಷಣೆಯೂ ಇರಬೇಕು. ಈ ನಿಟ್ಟಿನಲ್ಲಿ ಗೋವಾ ಯಶಸ್ವಿಯಾಗಿದೆ. ನಮ್ಮಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೋ ಪ್ರವಾಸೋದ್ಯಮದಲ್ಲಿ ಏನಿದೆ? ಎಂಬ ತಾತ್ಸಾರ. ತಮಗೇನು ಸಿಗುತ್ತದೆ ಎನ್ನುವ ಲೆಕ್ಕಾಚಾರ. ಪ್ರವಾಸೋಧ್ಯಮ ಅಭಿವೃದ್ಧಿ ಹೆಸರಿನಲ್ಲಿ ಸಂಸದರು, ಶಾಸಕರು, ಯೋಜಕರು ದೇಶ ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಇಲ್ಲಿ ಬಂದು ಬಣ್ಣಿಸುತ್ತಾರೆ. ಅವರ ಕ್ಷೇತ್ರದ ಪ್ರವಾಸಿ ತಾಣಗಳ ಬಗ್ಗೆ, ಅಭಿವೃದ್ಧಿ ಬಗ್ಗೆ ಕಾಳಜಿ-ಕಳಕಳಿಯೇ ಇಲ್ಲ. ಲಕ್ಷದ್ವೀಪದಿಂದ ಒಬ್ಬರೇ ಒಂಬತ್ತು ಸಾರಿ ಸಂಸದರಾದವರಿದ್ದಾರೆ. ಏಕೆ, ಮಾಲ್ಡೀವ್ಸ್‌ಗಿಂತ ಉತ್ತಮವಾಗಿ ಈ ದ್ವೀಪ ರೂಪಿಸಬಹುದು ಎನಿಸಿರಲಿಲ್ಲ? ಹಾಗಂತ ಲಕ್ಷದ್ವೀಪದ ಜನಸಂಖ್ಯೆ ಕೇವಲ ಐವತ್ತು ಸಾವಿರ ಅಷ್ಟೇ. ಪುಟ್ಟ ದ್ವೀಪದಲ್ಲಿ ಕುಡಿಯುವ ಸಿಹಿ ನೀರಿನ ಕೊರತೆ ಇದೆ. ಮೂಲಭೂತ ಸೌಲಭ್ಯದ ಕೊರತೆ ಇದೆ. ಮಾಲ್ಡೀವ್ಸ್ ಮೇಲಿನ ಸಿಟ್ಟಿಗೆ ಜನ ಲಕ್ಷದ್ವೀಪದ ಕಡೆ ಹೊರಟರೆ ಅಲ್ಲಿ ಕಾಲಿಡಲೂ ಜಾಗ ಸಿಗುವುದಿಲ್ಲ. ಕುಡಿಯಲು ನೀರು ಸಹ ಸಿಗಲಿಕ್ಕಿಲ್ಲ. ಇಡಿ ದ್ವೀಪದಲ್ಲಿ ಇರುವುದು ಒಂದು ನೂರ ಎಪ್ಪತ್ತು ವಸತಿ ಕೊಠಡಿಗಳು ಮಾತ್ರ!.
ನಾವು ದೇವಿ ಆರಾಧಕರು, ಪ್ರಕೃತಿ ಆರಾಧಕರು, ಧರ್ಮದ ಪ್ರತಿಪಾದಕರು ಕಣ್ರೀ, ನಮ್ಮ ರಕ್ತದಲ್ಲಿ ಸರ್ವೇ ಜನಾ ಸುಖಿನೋ ಭವಂತು ಇದೆ… 'ಎಂದು ಘೋಷಿಸುವ ನಮ್ಮ ಸಂಸದರುಗಳು, ಮಂತ್ರಾಕ್ಷತೆ ಹಂಚಿದರೆ ಪ್ರವಾಸಿ ಸೌಲಭ್ಯಗಳು ಸೃಷ್ಟಿಯಾಗುವುದಿಲ್ಲ. ಮೂವತ್ತು ವರ್ಷಗಳ ಕಾಲಾವಧಿ ಈ ನಾಡಿನ ಪ್ರವಾಸೋದ್ಯಮ ಶೋಕೇಸ್‌ಗೊಳಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಈಗ ಲಕ್ಷದ್ವೀಪದ ಸದ್ದು ಕೇಳಿ ಬರುತ್ತಿದೆ.
ಕರ್ನಾಟಕದ ಪ್ರವಾಸೋದ್ಯಮ ಸಚಿವರು ನಾಡಿನ ಶಿಲ್ಪಕಲೆ, ಐತಿಹಾಸಿಕ ಕೇಂದ್ರಗಳ ಅಭಿವೃದ್ಧಿಯ ಜೊತೆಜೊತೆಗೆ ಈಗ ಕರಾವಳಿ ತೀರದ ಅಭಿವೃದ್ಧಿಯತ್ತ ಗಮನ ಹರಿಸಿರುವುದು, ಆ ಸಂಬಂಧ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ರಾಜಸ್ಥಾನ ಹೊರತುಪಡಿಸಿದರೆ ಇಂತಹ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ಒಳ್ಳೆಯ ಕ್ರಮ. ಸಚಿವ ಎಚ್.ಕೆ. ಪಾಟೀಲರ ಕಳಕಳಿ ಮತ್ತು ಬದ್ಧತೆಯಿಂದ ಕರ್ನಾಟಕದ ಶಿಲ್ಪಕಲಾ ಶ್ರೀಮಂತಿಕೆ ಹೊರಬರುವಂತಾಗಲಿ ಎನ್ನುವ ಆಶಯ ಬಲವಾಗಿ ಮೂಡಿದೆ.ಲಕ್ಷದ್ವೀಪ'ಕ್ಕೆ ಪ್ರಧಾನಿ ಭೇಟಿ ಸದ್ದು-ಸುದ್ದಿ ಜೋರಾಗಿರುವ ಈ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಶ್ರೇಷ್ಠ ಬ್ರಾಂಡ್ ಅಂಬಾಸಿಡರ್ ಎಂಬುದು ಮತ್ತೆ ಸಾಬೀತಾಯಿತು.. ಅವರ ಒಂದು ಪ್ರವಾಸ, ಒಂದು ಶ್ಲಾಘನೆ.. ಬಣ್ಣನೆ ವಿಶ್ವದ ಪ್ರವಾಸಿಗರ ಮನಸ್ಸು, ಪ್ರವಾಸೋದ್ಯಮದ ಲಕ್ಷವೆಲ್ಲ ಈ ದ್ವೀಪದತ್ತ ತಿರುಗಿತು... ಹಾವು-ಚೇಳು, ಮಾಟ-ಮಂತ್ರ, ದೆವ್ವ-ಪಿಶಾಚಿ, ಕೊಳಗೇರಿ ದೇಶವೆಂದು ಹೀಯಾಳಿಸುವವರಿಗೆ ಈಗ ಉತ್ತರ ನೀಡಬೇಕಾದ ಸಮಯ ಕೂಡಾ. ಕರ್ನಾಟಕ ಮತ್ತು ಇಡೀ ದೇಶದ ಕರಾವಳಿ-ಮಲೆನಾಡು-ಒಳನಾಡು-ಬಯಲು ಸೀಮೆ ಪ್ರವಾಸೋದ್ಯಮ; ಶಿಲ್ಪಕಲಾ ವೈಭವ ಮತ್ತು ಆಯಾ ಪ್ರದೇಶಗಳ ಸಾಂಸ್ಕೃತಿಕ-ಸಾಮಾಜಿಕ ಬದುಕಿನ ರೀತಿನೀತಿಗಳನ್ನು ಬ್ಯ್ರಾಂಡಿಂಗ್ ಮಾಡಬೇಕಾದ ಕಾಲಘಟ್ಟವಿದು. ಹೀಗೆ ಮಾಡುವುದರಿಂದ ಕೇವಲ ಮನರಂಜನೆ, ಧಾರ್ಮಿಕ ಕೇಂದ್ರಿತ ಪ್ರವಾಸೋದ್ಯಮ ಮಾತ್ರ ಬೆಳೆಯುವುದಿಲ್ಲ. ಬದಲಾಗಿ ಒಟ್ಟಾರೆ ದೇಶ-ರಾಜ್ಯಗಳ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ. ಆದ್ದರಿಂದ ಬ್ರ್ಯಾಂಡ್ ಮಾಡಿ ಜನರನ್ನು ಸೆಳೆಯುವುದು ಈಗಿನ ಅವಶ್ಯಕತೆ. ಲಕ್ಷದ್ವೀಪಕ್ಕೆ ಮೋದಿ ಹೋದದ್ದು ಅಂತಾರಾಷ್ಟ್ರೀಯ ಸುದ್ದಿಯಾಯಿತು. ಅದೇ ಅವರು ಕರ್ನಾಟಕದ ಕರಾವಳಿಗೆ ಮೋದಿ ಕರೆತಂದು ಇಲ್ಲಿಯ ಸೌಂದರ್ಯ ಬಣ್ಣಿಸಿದ್ದರೇ.. ಹೊಸ ಮನ್ವಂತರಕ್ಕೆ ನಾಂದಿಯಾಗುತ್ತಿತ್ತಲ್ಲವೇ.. ಆಗ ಎಲ್ಲಿ ಗೋವಾ ಮುನಿಸಿಕೊಂಡೀತೆಂದು ಅನಿಸಿತೋ.., ಗೊತ್ತಿಲ್ಲ. ಇಷ್ಟಕ್ಕೂ ಅನಿಸುವುದೇನೆಂದರೆ
ಹಿತ್ತಲ ಗಿಡ ಮದ್ದಲ್ಲ… ಅಲ್ಲವೇ?