‘ಕರುನಾಡ ಜಯದ ಕಿರೀಟ’
ಬೆಂಗಳೂರು: ಭಾರತ ಪ್ರಜ್ವಲಿಸಲು ‘ಕರುನಾಡ ಜಯದ ಕಿರೀಟ’ ಸಮರ್ಪಿಸಬೇಕು ಎಂದು ನೂತನ ಕರ್ನಾಟಕ ಬಿಜೆಪಿ ರಾಜಾಧ್ಯಾಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ನಳಿನ್ ಕುಮಾರ್ ಕಟೀಲ್ ಅವರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಸ್ವೀಕರಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಈ ಅಮೃತ ಘಳಿಗೆಯಲ್ಲಿ ‘ಜನ ಸಂಘದ ದಿನಗಳು
ತ್ಯಾಗ ಮೆರೆದ ಹಿರಿಯರು, ಪರಿಶ್ರಮದ ಕಾರ್ಯಕರ್ತರು ಕಣ್ಣ ಮುಂದೆ ಹಾದು ಹೋದರು’. ದಿಗ್ಗಜರು, ಪುಣ್ಯವಂತರು ಸೇವೆ ಸಲ್ಲಿಸಿದ ಸಾಲಿನಲ್ಲಿ ನಾನೂ ಸೇರ್ಪಡೆಯಾಗುವ ಸುಯೋಗ ಕಲ್ಪಿಸಿದ ಪಕ್ಷದ ವರಿಷ್ಠರ ತೀರ್ಮಾನ ನೆನೆದು ಭಾವುಕನಾದೆನು, ಒಬ್ಬ ಕಾರ್ಯಕರ್ತನಾಗಿ ಹೆಮ್ಮೆ ಎನಿಸಿತು, ಜವಾಬ್ದಾರಿ ಎಚ್ಚರಿಸಿತು.
ವರಿಷ್ಠರ ನಿರೀಕ್ಷೆ, ಕಾರ್ಯಕರ್ತರ ಅಪೇಕ್ಷೆ ಗುರಿ ತಲುಪುವ ನಿಟ್ಟಿನಲ್ಲಿ ‘ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ’ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ, ಪಕ್ಷ ಸದೃಢಗೊಳಿಸಲು ಪಕ್ಷದ ಪ್ರತಿಯೊಬ್ಬ ಪ್ರಮುಖರೂ ನನ್ನೊಂದಿಗೆ ಹೆಗಲು ಕೊಡಲು ಮುಂದಾಗಿರುವುದು ನನ್ನಲ್ಲಿ ಅಮಿತೋತ್ಸಾಹ ತುಂಬಿದೆ.
ಕೇಂದ್ರ ಹಾಗೂ ರಾಜ್ಯದ ಪಕ್ಷದ ಹಿರಿಯರೆಲ್ಲರ ಆಶೀರ್ವಾದ, ಮಾರ್ಗದರ್ಶನ, ಸಹಕಾರದೊಂದಿಗೆ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ನವ ಚೈತನ್ಯ ತುಂಬಿ 2024ರ ಲೋಕಸಭಾ ಚುನಾವಣೆಯಲ್ಲಿ 2019 ರ ಚುನಾವಣೆಯ ಫಲಿತಾಂಶ ಮತ್ತೆ ಮರುಕಳಿಸಿ ಮಗದೊಮ್ಮೆ ಮೋದಿ ಪ್ರಧಾನಿಯಾಗಿ ಭಾರತ ಪ್ರಜ್ವಲಿಸಲು ‘ಕರುನಾಡ ಜಯದ ಕಿರೀಟ’ ಸಮರ್ಪಿಸಬೇಕೆಂದು ಛಲ ಹೊತ್ತ ಕಾರ್ಯಕರ್ತರ ಪಡೆಯೊಂದಿಗೆ ಸಂಕಲ್ಪ ತೊಟ್ಟಿರುವೆ. ಈ ನಿಟ್ಟಿನಲ್ಲಿ ರಾಜ್ಯದ ಸಮಸ್ತ ಜನತೆಯ ಕೃಪಾಶೀರ್ವಾದ ಬೇಡುವೆ ಎಂದಿದ್ದಾರೆ.