For the best experience, open
https://m.samyuktakarnataka.in
on your mobile browser.

ಕರುನಾಡ ಪರಂಜ್ಯೋತಿಗೆ ಸಾಂಸ್ಕೃತಿಕ ನಾಯಕತ್ವ

11:35 AM Jan 20, 2024 IST | Samyukta Karnataka
ಕರುನಾಡ ಪರಂಜ್ಯೋತಿಗೆ ಸಾಂಸ್ಕೃತಿಕ ನಾಯಕತ್ವ

ಸಾಟಿಯಿಲ್ಲದ ಇತಿಹಾಸ ಪುರುಷನಿಗೆ ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂಬ ಗೌರವ ಕೊಟ್ಟಿರುವುದು ನಿಜಕ್ಕೂ ಇದೊಂದು ತಡವಾದರೂ ಅರ್ಹವಾದ ಸಮರ್ಪಣೆ.

ಪ್ರಗತಿಪರ ವಿಚಾರಧಾರೆಗಳಿಗೆ ಮುಕ್ತ ಸ್ವಾಗತ ನೀಡುವುದು ಕರುನಾಡ ಪರಂಪರೆಯ ವೈಶಿಷ್ಟ್ಯ. ಹೃದಯವೈಶಾಲ್ಯಕ್ಕೆ ಇದೊಂದು ಹೆಗ್ಗುರುತು. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಆರಂಭಿಸಿದ ಸಮಾನತೆಯ ಚಳವಳಿ ಕಾಲದಿಂದ ಕಾಲಕ್ಕೆ ಹೊಸ ಹೊಸ ರೂಪ ಪಡೆದುಕೊಂಡು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೈಮನಗಳಲ್ಲಿ ಸಕ್ರಿಯವಾಗುವಂತೆ ಮಾಡಲು ಜರುಗಿದ ನಿರ್ಣಾಯಕ ಘಟನಾವಳಿಗಳು ಚರಿತ್ರಾರ್ಹವಷ್ಟೇ ಅಲ್ಲ - ಅವು ಕ್ರಾಂತಿಕಾರಕವೂ ಹೌದು. ಇಂತಹ ಕ್ರಾಂತಿಪುರುಷರು ಜಗಜ್ಯೋತಿ ಬಸವೇಶ್ವರರು. ಬಸವಣ್ಣ ಎಂಬ ಜನವಾಣಿಯ ಮೂಲಕ ಜನತೆಗೆ ಹತ್ತಿರವಾದ ಬಸವೇಶ್ವರರು ಬಿಜ್ಜಳ ದೊರೆಯ ಆಸ್ಥಾನದಲ್ಲಿ ಮಂತ್ರಿ ಕಾರ್ಯ ನಿರ್ವಹಿಸುತ್ತಲೇ ಬಿತ್ತಿದ ಸಮಾನತೆಯ ಬೀಜ ಪರ್ಯಾಯ ಸಾಮಾಜಿಕ ಪದ್ಧತಿ ರೂಪುಗೊಳ್ಳಲು ಕಾರಣವಾಗಿದ್ದು ಈಗ ಇತಿಹಾಸ. ಇಂತಹ ಸಾಟಿಯಿಲ್ಲದ ಇತಿಹಾಸ ಪುರುಷನಿಗೆ ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂಬ ಗೌರವ ಕೊಟ್ಟಿರುವುದು ನಿಜಕ್ಕೂ ಇದೊಂದು ತಡವಾದರೂ ಅರ್ಹವಾದ ಸಮರ್ಪಣೆ.
ಹಾಗೆ ನೋಡಿದರೆ, ಬಸವಣ್ಣನವರದು ದೇಶ - ಕಾಲವನ್ನು ಮೀರಿದ ವ್ಯಕ್ತಿತ್ವ. ಪ್ರಜಾಪ್ರಭುತ್ವದ ಉಗಮವಾದದ್ದು ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆಯಿಂದಲೇ ಎಂಬುದು ಕನ್ನಡ ನಾಡಿಗೆ ಒಂದು ಹೆಗ್ಗಳಿಕೆಯ ವಿಚಾರ. ಸಂಸದೀಯ ವ್ಯವಸ್ಥೆ ಪಾಶ್ಚಾತ್ಯ ದೇಶಗಳಲ್ಲಿ ಚಿಗುರೊಡೆಯುವ ಮೊದಲೇ ಕನ್ನಡ ನಾಡಿನಲ್ಲಿ ಅದರ ಉಗಮ ಬಸವಣ್ಣನವರ ಸಾರಥ್ಯದಲ್ಲಿ ಆಗಿತ್ತು ಎಂಬುದು ಸಾಮಾನ್ಯ ಸಂಗತಿಯಲ್ಲ. ಮಾತೆತ್ತಿದರೆ ಗ್ರೀಕ್ ಇಲ್ಲವೇ ಬ್ರಿಟಿಷ್ ರಾಜಕೀಯ ಪಂಡಿತರ ಮೀಮಾಂಸೆಗಳನ್ನು ಆಧರಿಸಿ ಪ್ರಮೇಯಗಳನ್ನು ರೂಪಿಸಿ ಮಂಡಿಸುವ ವಿದ್ವಾಂಸರಿಗೆ ಅದೇಕೋ ಏನೋ ಬಸವಣ್ಣ ಪ್ರಜಾಪ್ರಭುತ್ವದ ಸಂಸ್ಥಾಪನೆಗೆ ಆಚಾರ್ಯಪುರುಷ ಎಂಬ ಮಾತು ನೆನಪಿಗೆ ಬಾರದೇ ಹೋಗುವುದು ಬೇಸರದ ಸಂಗತಿ. ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತು ಸೇರಿದಂತೆ ಹಲವು ವೇದಿಕೆಗಳಲ್ಲಿ ಬಸವಣ್ಣನವರ ಅನುಭವ ಮಂಟಪದ ಮಹತ್ವವನ್ನು ಪ್ರಸ್ತಾಪಿಸಿ ನುಡಿನಮನ ಸಲ್ಲಿಸಿರುವುದು ಗಮನಾರ್ಹ ಸಂಗತಿ.
ನಿಜ. ಬಸವಣ್ಣನವರ ಪರಿಕಲ್ಪನೆಯ ಸಾಮಾಜಿಕ ಕ್ರಾಂತಿ ಕಾಲದ ಉರುಳಿಗೆ ಸಿಕ್ಕಿ ಬೇರೆ ಬೇರೆ ರೂಪಗಳನ್ನು ಪಡೆದುಕೊಂಡಿರಬಹುದು. ಧರ್ಮಜಿಜ್ಞಾಸೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಜನರ ಬಳಿಗೇ ಧರ್ಮವನ್ನು ಒಯ್ಯುವ ರೀತಿಯಲ್ಲಿ ಹಮ್ಮಿಕೊಂಡ ವಚನ ಚಳವಳಿಯ ಮೂಲದ ಕ್ರಾಂತಿ ಸಾಹಿತ್ಯ ಲೋಕದಲ್ಲಿ ಈಗಲೂ ಕೂಡಾ ಹೊಸ ಹೊಸ ಸಂವೇದನೆಗಳಿಗೆ ಪ್ರೇರಣೆ ನೀಡುತ್ತಿರುವುದು ಬಸವಾದಿ ಶರಣರ ಅನುಭವ ಹಾಗೂ ಜ್ಞಾನದ ಸಾಂದ್ರತೆಯ ಶಕ್ತಿ. ಹೊಸ ಧರ್ಮ ಸ್ಥಾಪಿಸಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿದ ಬಸವಣ್ಣನವರಿಗೆ ನಂತರದ ದಿನಗಳಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾಗಿದ್ದು ಮನುಷ್ಯನ ಸ್ವಾಭಾವಿಕ ಸಣ್ಣತನ ಹಾಗೂ ಅಸೂಯೆಯ ಇನ್ನೊಂದು ಮುಖ.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿರುವುದರಲ್ಲಿ ಅರ್ಥಗಳು ಅನೇಕ. ಸಂಸ್ಕೃತಿ ಎಂಬುದು ಕೇವಲ ಸಾಂಸ್ಕೃತಿಕ ವಲಯಕ್ಕೆ ಮಾತ್ರ ಸೀಮಿತವಾಗುವ ಸಂಗತಿಯಲ್ಲ. ಬದುಕಿನ ಎಲ್ಲಾ ಆಯಾಮಗಳನ್ನೂ ಒಳಗೊಂಡು, ಎಲ್ಲರನ್ನೂ ಒಳಗೊಂಡು, ಎಲ್ಲರೂ ಕೂಡಾ ಸಮಾನರೆಂಬ ಸ್ಥಾನ ಕಲ್ಪಿಸಿ, ಸಮಾಜದಲ್ಲಿ ಯಾರೊಬ್ಬರೂ ಪ್ರಾಮುಖ್ಯರಾಗುವುದಿಲ್ಲ. ಸಂಘಟಿತ ಸಮಾಜವೇ ಪ್ರಾಮುಖ್ಯ ಎಂಬ ಅಂಶಕ್ಕೆ ಒತ್ತು ನೀಡಿದ್ದರಿಂದ ಸಾಮೂಹಿಕ ನಾಯಕತ್ವದ ಪರಿಕಲ್ಪನೆ ಕೇವಲ ಘೋಷಣೆಯ ಮೂಲಕ ಹೊರಬೀಳದೆ ಆಚರಣೆಯ ಮೂಲಕ ಕಾರ್ಯರೂಪಕ್ಕೆ ಬಂದದ್ದು ಒಂದು ಮೌನಕ್ರಾಂತಿಯ ರೂಪ. ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಒಡಕಲು ಬಿಂಬಗಳೇ ಹೆಚ್ಚು. ಸಮಾಜದಲ್ಲಿ ಒಮ್ಮತವನ್ನು ನಿರೀಕ್ಷಿಸುವುದು ಅಸಹಜ ಎಂಬುದೇನೋ ಸರಿ. ಆದರೆ, ಆಧಾರವಿಲ್ಲದ ಭಿನ್ನಮತಗಳ ಮೂಲಕ ಬಹುಮತವನ್ನು ನಿರಾಕರಿಸುವ ಗುಣ ಯಾವತ್ತಿಗೂ ಸರ್ವಸಮ್ಮತದ ಹಾದಿಯನ್ನು ಪ್ರತಿನಿಧಿಸುವುದಿಲ್ಲ. ಎಲ್ಲಾ ಮತಗಳ ಗುಣಗಳು ಸರ್ವಸಮ್ಮತ ನಿಲುವನ್ನು ರೂಪಿಸಲು ಅತ್ಯಗತ್ಯ. ಈಗಿನ ಸಂದರ್ಭದಲ್ಲಿ ತಮ್ಮ ಮತವೇ ಸರ್ವೋತ್ಕೃಷ್ಟ, ಸರ್ವಾಂತರ್ಯಾಮಿ, ಸರ್ವಜ್ಞ ಎಂದು ಬೀಗುವ ಮನೋಧರ್ಮ ಈ ಕಾಲದಲ್ಲಿ ಹೆಚ್ಚಾಗಿರುವುದರಿಂದ ಭಿನ್ನಮತ ಚೌಕಟ್ಟನ್ನು ಮುರಿದು ದಾರಿ ಕಾಣದ ಸ್ಥಿತಿಯನ್ನು ತಂದಿಡುತ್ತಿರುವ ಸಂದರ್ಭದಲ್ಲಿ ಬಸವಣ್ಣನವರಂತಹ ಸಮಷ್ಠಿ ಪ್ರಜ್ಞೆ, ದೂರದರ್ಶಿತ್ವ ಹಾಗೂ ಸಮಭಾವದ ನಾಯಕತ್ವದ ದೃಷ್ಟಿ ಹೊಸ ಮನೋಧರ್ಮದ ಸೃಷ್ಟಿಗೆ ಪ್ರೇರಣೆಯಾಗುವುದು ನಿಶ್ಚಿತ. ಇದೇ ಸಾಂಸ್ಕೃತಿಕ ನಾಯಕತ್ವದ ಬೆರಗು ಹಾಗೂ ಬೆಡಗು.