ಕರೆಯದೇ ಬರುವ ಬಂಧು ಮಧುಮೇಹ
ಸೈಲೆಂಟ್ ಕಿಲ್ಲರ್ ಎಂದು ಕರೆಸಿಕೊಳ್ಳುವ ಮತ್ತೊಂದು ದೀರ್ಘ ಕಾಲದ ಕಾಯಿಲೆ ಎಂದರೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ.
ಇಂದಿನ ದಿನಗಳಲ್ಲಿ ದೀರ್ಘ ಕಾಲದ ಕಾಯಿಲೆಗಳು ವಯಸ್ಸಲ್ಲದ ವಯಸ್ಸಿನಲ್ಲಿ ಕಂಡುಬರುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತದೆ. ಇದರಲ್ಲಿ ಮಧುಮೇಹ ಕಾಯಿಲೆ ಕೂಡ ಒಂದು. ಮಧುಮೇಹ ಕಾಯಿಲೆ ಎಷ್ಟು ಅಪಾಯಕಾರಿ ಎಂದರೆ ಮನುಷ್ಯನಿಗೆ ಒಮ್ಮೆ ಬಂದರೆ ಮತ್ತೆ ಹೋಗುವ ಮಾತೇ ಇಲ್ಲ. ಕೇವಲ ಈ ಕಾಯಿಲೆ ನಿಯಂತ್ರಣ ತಪ್ಪಿ ಹೋಗದಂತೆ ಕಂಟ್ರೋಲ್ ಮಾಡಿಕೊಳ್ಳಬಹುದು ಅಷ್ಟೇ! ಇದನ್ನು ನಿಯಂತ್ರಣದಲ್ಲಿರಿಸಿ ಕೊಳ್ಳುವ ಸಂದರ್ಭದಲ್ಲಿ ಅಡ್ಡ ಪರಿಣಾಮಗಳು ಎದುರಾಗದಂತೆ ನೋಡಿಕೊಳ್ಳುವುದೇ ಜಾಣತನ ಮತ್ತು ಆರೋಗ್ಯಕರ ಕ್ರಮ. ರಕ್ತದಲ್ಲಿ ಸಕ್ಕರೆ ಅಂಶವು ಜಾಸ್ತಿ ಆಗಿ ಮಧುಮೇಹ ರೂಪದಲ್ಲಿ ಕಾಡುವ ಸಮಸ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ದೇಹದಲ್ಲಿ ಅಗತ್ಯ ಇನ್ಸುಲಿನ್ ಉತ್ಪತ್ತಿಯ ಕೊರತೆ, ದೋಷದಿಂದ ಅಥವಾ ಇನ್ಸುಲಿನ್ ಹಾರ್ಮೋನ್ ಶರೀರದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಸಕ್ಕರೆ ಅಂಶವು ರಕ್ತದಲ್ಲಿ ಹೆಚ್ಚಾಗಿ ಕಿಡ್ನಿಯ ಮೂಲಕ ಮೂತ್ರದಲ್ಲಿ ಸಹ ಕಾಣಿಸುತ್ತದೆ, ಇದನ್ನು ಸಿಹಿಮೂತ್ರ ಅಂತಲೂ ಹೇಳುತ್ತಾರೆ. ಸಹಜವಾಗಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಇನ್ಸುಲಿನ್ ಸಮತೋಲನದಲ್ಲಿಡುತ್ತದೆ. ಇನ್ಸುಲಿನ್ ಅಂದರೆ ದೇಹದಲ್ಲಿರುವ ಪ್ಯಾಂಕ್ರಿಸ್ ಎನ್ನುವ ಅಂಗದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್. ಆಹಾರ ಸೇವನೆ ನಂತರ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಪ್ಯಾಂಕ್ರಿಸ್‌ನಿಂದ ಇನ್ಸುಲಿನ್ ಉತ್ಪತ್ತಿಯಾಗಿ ರಕ್ತದಲ್ಲಿ ಗ್ಲುಕೋಸ್ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ.
ಮಧುಮೇಹದಲ್ಲಿ ಎರಡು ವಿಧಗಳಿವೆ, ಒಂದು ಮಧುಮೇಹ ಇದು ಶರೀರದ ರೋಗನಿರೋಧಕ ಶಕ್ತಿಯು ಇನ್ಸುಲಿನ್ ಉತ್ಪತ್ತಿಸುವ ಪ್ಯಾಂಕ್ರಿಸ್ ಬೀಟಾ ಕಣಗಳನ್ನು ನಾಶಪಡಿಸುತ್ತದೆ, ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಅಥವಾ ಮಧ್ಯ ವಯಸ್ಕರಲ್ಲಿ ಕಂಡುಬರುತ್ತದೆ ಇದರ ಲಕ್ಷಣಗಳೆಂದರೆ ಅತಿಯಾದ ಬಾಯಾರಿಕೆ, ಹಸಿವು, ಆಯಾಸ, ಅತಿಯಾದ ಮೂತ್ರ ವಿಸರ್ಜನೆ, ತೂಕ ಕಡಿಮೆ, ದೃಷ್ಟಿ ಮಂದ, ವಾಕರಿಕೆ ಹಾಗೂ ಮುಟ್ಟಿನ ತೊಂದರೆ.
ಟೈಪ್ ೨ ಡಯಾಬಿಟಿಸ್ ಇದು ಸಾಮಾನ್ಯವಾಗಿ ಕಂಡುಬರುವ ವಿವಿಧ ಶೇಕಡ ೯೫ರಷ್ಟು ಜನರು ಈ ವಿಧದ ಮಧುಮೇಹದಿಂದ ನರಳುತ್ತಾರೆ. ಇದಕ್ಕೆ ಕಾರಣ ಬೊಜ್ಜು, ವಂಶಪರಂಪರೆ, ಚಟುವಟಿಕೆ ಇಲ್ಲದ ಜೀವನಶೈಲಿ ಈ ರೀತಿ ಇದ್ದರೆ ಕ್ರಮೇಣ ಇನ್ಸುಲಿನ್ ಕೊರತೆ ಉಂಟಾಗುತ್ತದೆ. ಇದರ ಲಕ್ಷಣಗಳೆಂದರೆ ಅತಿಯಾದ ಆಯಾಸ,ಪದೇ ಪದೇ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ಹಸಿವು, ಸೋಂಕು ರೋಗ, ಗಾಯ ವಾಸಿಯಾಗದೆ ಇರುವುದು. ಜೀವನಶೈಲಿ ಅಥವಾ ವಂಶಪರಂಪರೆಯಿಂದ ಬರುವ ಮಧುಮೇಹವನ್ನು ಕೆಲವು ಬದಲಾವಣೆಗಳ ಮೂಲಕ ಕಾಯಿಲೆಯನ್ನು ನಿಯಂತ್ರಣಗೊಳಿಸಬಹುದು.
ಮಧುಮೇಹ ಹೀಗೆ ನಿಯಂತ್ರಿಸಿ
ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ನಿವಾರಣೆ ಮತ್ತು ಆರೋಗ್ಯಕರ ತೂಕವು ಮೂಲಭೂತ ಅಂಶಗಳಾಗಿವೆ. ದಿನನಿತ್ಯ ನಿಯಮಿತವಾದ ವೇಗ ನಡಿಗೆ/ವಾಕಿಂಗ್ ಅಭ್ಯಾಸ ಮತ್ತು ಸೈಕಲ್ ತುಳಿತ ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಬಹುಮುಖ್ಯ ಪಾತ್ರವೆನ್ನಬಹುದು. ದಿನನಿತ್ಯದ ಆಹಾರದಲ್ಲಿ ಕೊಂಚ ಬದಲಾವಣೆಯಲ್ಲಿದ್ದರೆ ಒಳಿತು. ರಾತ್ರಿ ಏಳು ಗಂಟೆ ನಂತರ ಊಟ ಮಾಡಿದರೆ ತೂಕ ಹೆಚ್ಚುವುದು ಸಹಜ, ರಾತ್ರಿಯಲ್ಲಿ ಸಲಾಡ್ ತಿನ್ನುವುದು ಒಳಿತು. ರಾತ್ರಿ ಊಟ ಲಘುವಾಗಿರಬೇಕು. ಸಕ್ಕರೆ ಕಾಯಿಲೆ ಇರುವವರು ರಕ್ತ ಬಹಳ ಸಿಹಿ ಅಂಶವನ್ನು ಹೊಂದಿರುತ್ತದೆ ಅಂಥವರು ಹಾಗಲಕಾಯಿ ರಸ ನಿಯಮಿತವಾಗಿ ಸೇವಿಸಿದರೆ ರಕ್ತದಲ್ಲಿ ಸಿಹಿ ಕಡಿಮೆ ಆಗಿ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರುತ್ತದೆ.