ಕರ್ನಾಟಕಕ್ಕೆ ಯುಪಿಎ ಅವಧಿಗಿಂತ ಹೆಚ್ಚು ಅನುದಾನ
ಮಂಗಳೂರು: ಕೇಂದ್ರ ಸರ್ಕಾರದಿಂದ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೆ ಯುಪಿಎ ಅವಧಿಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಈ ಕುರಿತಾಗಿ ಮಾಡುತ್ತಿರುವ ಆರೋಪ ಆಧಾರ ರಹಿತ. ವಿದ್ಯಾವಂತರನ್ನು ಗೊಂದಲಕ್ಕೀಡು ಮಾಡುವ ಹೇಳಿಕೆ ನೀಡುತ್ತಿದ್ದಾರೆ, ಇದು ರಾಜಕೀಯವಾಗಿ ಕೆಸರೆರಚುವ ಕೆಲಸ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುನರುಚ್ಚರಿಸಿದ್ದಾರೆ.
ಮಂಗಳೂರು ಸಿಟಿಝನ್ಸ್ ಕೌನ್ಸಿಲ್ ವತಿಯಿಂದ ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಣಕಾಸು ಆಯೋಗದ ಶಿಫಾರಸಿನ ಪ್ರಕಾರವೇ ರಾಜ್ಯಗಳಿಗೆ ಅನುದಾನ ನೀಡಲಾಗಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಕೇಂದ್ರದಲ್ಲಿ ಯುಪಿಎ ಅವಧಿಯ 10 ವರ್ಷಗಳು ಮತ್ತು ಎನ್‌ಡಿಎ ಅವಧಿಯ 10 ವರ್ಷಗಳಿಗೆ ಹೋಲಿಸಿದರೆ ಜಾಸ್ತಿಯೇ ಅನುದಾನ ಹಂಚಿಕೆ ಮಾಡಿದ್ದೇವೆ. ಈ ಕುರಿತಾದ ಎಲ್ಲ ಅಂಕಿ ಅಂಶಗಳು ಇರುವಾಗ ಸ್ವತಃ ಮುಖ್ಯಮಂತ್ರಿಯೇ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ ಎಂದರು.
ತಾರತಮ್ಯ ಮಾಡಿಲ್ಲ:
ಬಿಹಾರ, ಆಂಧ್ರಪ್ರದೇಶ ರಾಜ್ಯಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿ, ಕೇರಳ-ಮಣಿಪುರಕ್ಕೆ ಕಡಿಮೆ ಅನುದಾನ ಹಂಚಿಕೆ ಮಾಡಿರುವ ಕುರಿತು ನಾಗರಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಅಂತಹ ಯಾವ ತಾರತಮ್ಯವನ್ನೂ ಮಾಡಿಲ್ಲ. ಬಿಹಾರದಲ್ಲಿ ಪ್ರತಿವರ್ಷ ಪ್ರವಾಹ ಸಮಸ್ಯೆಯಿಂದ ಜನ- ಜೀವನಕ್ಕೆ ತೀವ್ರ ಹಾನಿ ಉಂಟಾಗುತ್ತಿದೆ. ಈ ಕಾರಣಕ್ಕೆ ಸೂಕ್ತ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ. ಹಾಗಂತ ಇತರ ರಾಜ್ಯಗಳನ್ನು ನಿರ್ಲಕ್ಷ್ಯ ಮಾಡಿಲ್ಲ. ಈ ವಿಚಾರದಲ್ಲಿ ಕರ್ನಾಟಕದಂತೆ ಕೇರಳವೂ ರಾಜಕೀಯವಾಗಿ ಕೆಸರೆರಚುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಉತ್ಪಾದನಾ ಹಬ್ ಗುರಿ:
ಭಾರತವನ್ನು ಉತ್ಪಾದನಾ ಹಬ್ ಮಾಡುವ ಗುರಿ ಹೊಂದಲಾಗಿದೆ. ರಕ್ಷಣಾ ಕ್ಷೇತ್ರದ ಸಾಮಗ್ರಿಗಳನ್ನು ತಯಾರಿಸಿ ರಫ್ತು ಮಾಡುವ ದೊಡ್ಡ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ. ಸೌರಶಕ್ತಿಗೆ ಸಂಬಂಧಿಸಿದ ಉಪಕರಣಗಳನ್ನು ಹಿಂದೆ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಇಂದು ಗುಣಮಟ್ಟದ ವಸ್ತುಗಳನ್ನು ತಯಾರಿಸಿ ರಫ್ತು ಮಾಡುವ ಮಟ್ಟಕ್ಕೇರಿದ್ದೇವೆ. ದೇಶವನ್ನು ಎಲೆಕ್ಟ್ರಾನಿಕ್ ಹಬ್ ಮಾಡುವತ್ತವೂ ಗುರಿ ಹಾಕಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವೆ ತಿಳಿಸಿದರು.
ಕೊರೋನಾ ನಂತರವೂ ಆರ್ಥಿಕತೆಯಲ್ಲಿ ಭಾರತವು 5ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ನರೇಂದ್ರ ಮೋದಿ ಅವರ ಸ್ಥಿರ ನೀತಿ-ನಿಲುವುಗಳ ನಾಯಕತ್ವದಿಂದ ಇದು ಸಾಧ್ಯವಾಗಿದೆ. ಹೆಚ್ಚಿನ ದೇಶಗಳಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗದೆ ಇರುವ ಪರಿಸ್ಥಿತಿ ಇದ್ದರೆ, ಭಾರತದಲ್ಲಿ ಮೋದಿ ಅವರ ಮೇಲೆ ಜನರಿಟ್ಟ ವಿಶ್ವಾಸದಿಂದ ಮೂರನೇ ಬಾರಿಯೂ ಅಧಿಕಾರಕ್ಕೆ ಬಂದಿದ್ದೇವೆ ಎಂದ ಅವರು, ದೇಶದ ಸಮಗ್ರ ಅಭಿವೃದ್ಧಿಗಾಗಿ ಅಲ್ಪಾವಧಿಯ ಹಾಗೂ ದೀರ್ಘ ಕಾಲದ ಗುರಿಗಳನ್ನು ಹಾಕಿಕೊಳ್ಳಲಾಗಿದೆ. ಬಂಡವಾಳ ಹೂಡಿಕೆ, ಮೂಲಸೌಕರ್ಯ, ನಾವೀನ್ಯತೆ, ಒಳಗೊಳ್ಳುವಿಕೆ- ಈ ನಾಲ್ಕು ವಿಚಾರಗಳ ಆಧಾರದಲ್ಲಿ ದೇಶವನ್ನು ಆರ್ಥಿಕತೆ ಅಭಿವೃದ್ಧಿಯನ್ನು ಸಾಧಿಸಲು ಮುಂದಾಗಿದ್ದೇವೆ ಎಂದರು.
ಈ ಬಾರಿ ಬಜೆಟ್‌ನಲ್ಲಿ ಯುವ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದ್ಯೋಗಾರ್ಹತೆ ಹೆಚ್ಚಿಸಲು 21-24 ವರ್ಷದೊಳಗಿನ ನಿರುದ್ಯೋಗಿ ಯುವಕರಿಗೆ ಕೌಶಲ ನೀಡಲು 500 ಟಾಪ್ ಕಂಪೆನಿಗಳ ಸಹಯೋಗದಲ್ಲಿ ಇಂಟರ್ನ್‌ಶಿಪ್ ಕಾರ್ಯಕ್ರಮ ಯೋಜಿಸಿದ್ದೇವೆ. ಈ ಮೂಲಕ ಐದು ವರ್ಷಗಳಲ್ಲಿ ಒಂದು ಕೋಟಿ ಯುವಜನರು ಉದ್ಯೋಗಾರ್ಹತೆ ಪಡೆದುಕೊಳ್ಳಲಿದ್ದಾರೆ. ಅದೇ ರೀತಿ ಐಟಿಐ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ತರಬೇತಿ ನೀಡಲು ಐಟಿಐಗಳಿಗೆ ಅತ್ಯಾಧುನಿಕ ಯಂತ್ರೋಪಕರಣ ಒದಗಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡದಲ್ಲಿ ಉತ್ಸಾಹದ ಸಂಸದರು ಇದ್ದಾರೆ. ಈ ಭಾಗಕ್ಕೆ ಯಾವ ಸೌಲಭ್ಯ ಬೇಕು ಎನ್ನುವುದನ್ನು ಗುರುತಿಸಿ, ಅಂತಹ ಸೌಲಭ್ಯ ನೀಡಲು ಬದ್ಧ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ಸಿಟಿಝನ್ ಕೌನ್ಸಿಲ್ ಅಧ್ಯಕ್ಷ ವಾಸುದೇವ ಕಾಮತ್ ಇದ್ದರು.