For the best experience, open
https://m.samyuktakarnataka.in
on your mobile browser.

ಕರ್ನಾಟಕದಲ್ಲಿ ಶೇ. ೮೫.೨೩ ಕಡು ಬಡವರು!

02:39 AM Sep 10, 2024 IST | Samyukta Karnataka
ಕರ್ನಾಟಕದಲ್ಲಿ ಶೇ  ೮೫ ೨೩ ಕಡು ಬಡವರು

ಕರ್ನಾಟಕದಲ್ಲಿ ಶೇ. ೮೫.೨೩ ಕಡು ಬಡವರು. ಇದು ಸರ್ಕಾರವೇ ನೀಡಿರುವ ಅಂಕಿಅಂಶ. ತಮಿಳುನಾಡಿನಲ್ಲಿ ಶೇ. ೪೦ರಷ್ಟು ಕಡು ಬಡವರಿದ್ದಾರೆ. ಅವರಿಗೆ ಪಡಿತರ ಚೀಟಿಗಳನ್ನು ಹಂಚಲಾಗಿದೆ, ದಕ್ಷಿಣ ಭಾರತದಲ್ಲಿ ಎಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಪಡಿತರ ಚೀಟ ನೀಡಿಲ್ಲ. ಇದನ್ನು ರಾಜ್ಯ ಸರ್ಕಾರವೂ ಒಪ್ಪಿಕೊಂಡಿದೆ ಎಂಬುದೇ ಆಶ್ಚರ್ಯದ ಸಂಗತಿ. ವಿಚಿತ್ರದ ಸಂಗತಿ ಎಂದರೆ ಕಡು ಬಡವರಿಗೆ ಅರ್ಜಿ ಸಲ್ಲಿಸಲು ಬರುವುದೇ ಇಲ್ಲ. ಕಾರು, ಬಂಗಲೆ, ಮನೆಯಲ್ಲಿ ರೆಫ್ರಿಜರೇಟ್ ಹೊಂದಿರುವವರು ಪಡಿತರ ಚೀಟಿ ಪಡೆಯುತ್ತಿದ್ದಾರೆ. ಈ ರೀತಿ ಪಡಿತರ ಚೀಟಿ ನೀಡುವುದೇ ಒಂದು ದೊಡ್ಡ ದಂಧೆ. ಇದಕ್ಕಾಗಿ ಮಧ್ಯವರ್ತಿಗಳ ಗುಂಪೇ ಇದೆ. ಈ ಗುಂಪು ಯಾವುದೇ ಸರ್ಕಾರ ಬಂದರೂ ಹೊಂದಾಣಿಕೆ ಮಾಡಿಕೊಳ್ಳುವ ಗುಣ ಹೊಂದಿದೆ. ಈಗ ನಕಲಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ಈ ನಕಲಿ ಕಾರ್ಡ್‌ಗಳು ಚಲಾವಣೆಗೆ ಬರಲು ಬೇರೆ ಯಾರೂ ಕಾರಣರಲ್ಲ. ಸರ್ಕಾರವೇ ಇದರ ಹೊಣೆ ಹೊರಬೇಕು. ಪ್ರತಿ ಬಾರಿ ಚುನಾವಣೆ ಬಂದಾಗ ಶಾಸಕರು ಮತ್ತು ಸಂಸದರು ತಮ್ಮ ಸಾಧನೆಯ ಪಟ್ಟಿಯಲ್ಲಿ ಪಡಿತರ ಚೀಟಿ ವಿತರಣೆಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.
ಪ್ರತಿಯೊಬ್ಬ ಜನಪ್ರತಿನಿಧಿ ಮತಬ್ಯಾಂಕ್ ಹೆಚ್ಚಿಸಿಕೊಳ್ಳಲು ಹೊಸದಾಗಿ ಪಡಿತರ ಚೀಟಿ ಹಂಚುತ್ತಾರೆ. ಆಮೇಲೆ ಅಧಿಕಾರಕ್ಕೆ ಬಂದ ಮೇಲೆ ನಕಲಿ ಕಾರ್ಡ್ ತೆಗೆಯಿರಿ ಎಂದು ಅವರೇ ಹೇಳುತ್ತಾರೆ. ಇದರಲ್ಲಿ ಬೇರೆಯವರ ಕೈವಾಡ ಏನೂ ಇಲ್ಲ. ಇಡೀ ದೇಶದ ಆರ್ಥಿಕ ಪ್ರಗತಿಯನ್ನು ನೋಡಿದರೆ ಎಲ್ಲ ಪ್ರಗತಿಪರ ರಾಜ್ಯಗಳ ಪಟ್ಟಿಯಲ್ಲಿ ೩-೪ನೇ ಸ್ಥಾನದಲ್ಲಿದೆ. ಆದರೆ ಕಡು ಬಡವರ ಸಂಖ್ಯೆ ಬಂದಾಗ ನಮ್ಮ ರಾಜ್ಯ ಮೊದಲ ಸ್ಥಾನ ಪಡೆಯುತ್ತಿದೆ. ಇದು ಯಾರ ತಂತ್ರ ಎಂಬುದು ತಿಳಿಯುತ್ತಿಲ್ಲ. ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಪಡಿತರ ಚೀಟಿ ಸಂಖ್ಯೆ ಇಳಿಮುಖಗೊಳ್ಳುವುದಿಲ್ಲ. ಜನಸಂಖ್ಯೆ ಏರಿದಂತೆ ಕಡು ಬಡವರ ಸಂಖ್ಯೆಯೂ ಅಧಿಕಗೊಳ್ಳುತ್ತದೆ. ಪ್ರತಿ ಕಾರ್ಡ್ಗೆ ೧೦ ಅಕ್ಕಿ ಉಚಿತ. ಈ ನಕಲಿ ಕಾರ್ಡ್ ಪಡೆದವರಲ್ಲಿ ಸರ್ಕಾರಿ ನೌಕರರು, ಶ್ರೀಮಂತರು, ಕಾರು ಹೊಂದಿದವರು, ಮನೆಗಳನ್ನು ಬಾಡಿಗೆ ಕೊಟ್ಟವರು ಸೇರಿದ್ದಾರೆ. ವಾರ್ಷಿಕ ೧.೨೦ ಲಕ್ಷ ರೂ. ಆದಾಯ ಹೊಂದಿದ್ದವರಿಗೆ ಪಡಿತರ ಚೀಟಿ ನೀಡುವಂತಿಲ್ಲ ಎಂದಿದೆ. ಈಗ ಸರ್ಕಾರ ನಕಲಿ ಚೀಟಿಗಳನ್ನು ಹಿಂತಿರುಗಿಸಲು ಆದೇಶ ಹೊರಡಿಸಿದೆ. ಪ್ರತಿ ಪಡಿತರ ಚೀಟಿಯನ್ನು ಆಧಾರ್‌ಗೆ ಜೋಡಿಸಿ ಅದರೊಂದಿಗೆ ಪ್ಯಾನ್ ಕಾರ್ಡ್ ಲಗತ್ತಿಸಿದರೆ ಎಲ್ಲ ವಿವರ ಲಭಿಸುತ್ತದೆ. ಇದನ್ನು ಮಾಡಲು ಸರ್ಕಾರ ಮಾನಸಿಕವಾಗಿ ಸಿದ್ಧಗೊಳ್ಳಬೇಕು. ಈಗ ಇದೇನಿದ್ದರೂ ಹುತ್ತವ ಬಡಿಯುವ ಕೆಲಸ ಮಾತ್ರ.
ನೀತಿ ಆಯೋಗ ಕರ್ನಾಟಕದಲ್ಲಿರುವ ಕಡು ಬಡವರ ಸಂಖ್ಯೆ ನೋಡಿ ಆಶ್ಚರ್ಯಗೊಂಡಿದೆ. ಕೂಡಲೇ ನಕಲಿ ಚೀಟಿಗಳನ್ನು ತೆಗೆದುಹಾಕಲು ತಿಳಿಸಿದೆ. ಇದಕ್ಕಾಗಿ ಸರ್ಕಾರ ಹೊಸ ಮಾರ್ಗದರ್ಶಿ ಸೂತ್ರ ರೂಪಿಸಿದೆ. ಇದನ್ನು ಜಾರಿಗೆ ತರುವ ಮುನ್ನ ಸ್ವಯಂಪ್ರೇರಣೆಯಿಂದ ನಕಲಿ ಚೀಟಿಯನ್ನು ಹಿಂತಿರುಗಿಸುವಂತೆ ಜನರನ್ನು ಪ್ರೇರೇಪಿಸಬೇಕು. ಮೊದಲು ಮನವಿ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ. ಬೇರೆ ರಾಜ್ಯಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆಗೆ ಅನುಸರಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಇಲ್ಲೂ ಪಾಲಿಸಬೇಕು. ಈಗ ಬಿಪಿಎಲ್ ಕುಟುಂಬ ಗುರುತಿಸಲು ಕೇಂದ್ರ ಅನುಸರಿಸುವ ಮಾರ್ಗದರ್ಶಿ ಸೂತ್ರಗಳೇ ಬೇರೆ. ರಾಜ್ಯ ಸರ್ಕಾರಗಳು ತಮ್ಮದೇ ಆದ ಸೂತ್ರಗಳಂತೆ ಪಡಿತರ ಚೀಟಿ ಪಡೆಯುವವರನ್ನು ಗುರುತಿಸುವ ಕೆಲಸ ಕೈಗೊಂಡಿದೆ. ನೀತಿ ಆಯೋಗ ರಾಜಕೀಯವಾಗಿ ಈ ವಿಷಯವನ್ನು ನೋಡುವುದಿಲ್ಲ. ಬಡವರನ್ನು ಗುರುತಿಸುವುದಕ್ಕೆ ನಿಗದಿತ ಮಾನದಂಡಗಳನ್ನು ರೂಪಿಸಬೇಕು. ಅದು ಸರ್ಕಾರ ಬದಲಾದಂತೆ ಬದಲಾಗಬಾರದು. ಕಡು ಬಡವರು ನಮ್ಮ ರಾಜ್ಯದಲ್ಲಿ ಹೆಚ್ಚಾಗಿದ್ದಾರೆ ಎಂಬುದು ನಾಚಿಕೆಗೇಡಿನ ಸಂಗತಿ. ಮೊದಲು ಎಲ್ಲ ಕಡೆ ಇರುವ ಮಧ್ಯವರ್ತಿಗಳನ್ನು ದಮನ ಮಾಡಬೇಕು. ಕಡು ಬಡವರನ್ನು ಗುರುತಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಬದಲಾಗಬೇಕು. ಸಮಾಜದಲ್ಲಿರುವ ಎಲ್ಲರೂ ಕಡು ಬಡವರೇ ಆಗಿಬಿಟ್ಟರೆ ನಮ್ಮ ಜಿಡಿಪಿ ಬೆಳವಣಿಗೆ ಏನನ್ನು ತಿಳಿಸುತ್ತದೆ ಎಂಬುದನ್ನು ಆಡಳಿತದಲ್ಲಿರುವವರು ಹೇಳಬೇಕು. ಸರ್ಕಾರದ ಅಂಕಿಅಂಶಗಳನ್ನು ನಂಬದ ಪರಿಸ್ಥಿತಿ ಈಗ ಬಂದಿದೆ. ಅದರಲ್ಲಿ ಕಡು ಬಡವರ ಸಂಖ್ಯೆಯೂ ಒಂದು ಎಂಬುದನ್ನು ಮರೆಯುವಂತಿಲ್ಲ.