ಕರ್ನಾಟಕದ ಅಭಿವೃದ್ಧಿ ಉತ್ತಮವಾಗಿದೆ
ಮೈಸೂರು: ಡಿಸೆಂಬರ್ ವೇಳೆಗೆ ಬೆಂಗಳೂರು ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರ ಆಗಲಿದೆ. ಮುಂದಿನ ವರ್ಷದ ಜನವರಿ ಆರಂಭದಲ್ಲಿ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೈವೇ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕರ್ನಾಟಕದ ಅಭಿವೃದ್ಧಿ ಉತ್ತಮವಾಗಿದೆ. 4,000 ಕೋಟಿಯ ಕಾಮಗಾರಿ ನಡೆಯುತ್ತಿದೆ. 2024ರ ಅಂತ್ಯಕ್ಕೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮೈಸೂರು-ಹಾಸನಕ್ಕೆ ರಿಂಗ್ ರಸ್ತೆ, ಕುಶಾಲನಗರ-ಮಾಣಿ ರಸ್ತೆಗೆ ಡಿಪಿಆರ್, ಮೈಸೂರು-ನಂಜನಗೂಡಿಗೆ ಆರು ಪಥದ ರಸ್ತೆ ನಿರ್ಮಾಣ ಮಾಡುವುದಾಗಿ ಹಾಗೂ ರಾಜ್ಯ ಸರ್ಕಾರದಿಂದ ಇತರೆ ರಸ್ತೆ ಕಾಮಗಾರಿಗಳ ಪ್ರಸ್ತಾವನೆ ಬಂದಿದೆ. ಇನ್ನಾವುದೇ ಪ್ರಸ್ತಾವನೆಗಳಿದ್ದಲ್ಲಿ ಅವುಗಳನ್ನು ನೀಡಿದರೆ ಎಲ್ಲವನ್ನೂ ಪರಿಶೀಲಿಸಿ ಡಿಪಿಆರ್ ಮಾಡಲು ಒಪ್ಪಿಗೆ ನೀಡಲಾಗುವುದು ಎಂದು ತಿಳಿಸಿದರು.
ಹುಳಿಯಾರ್-ಕೆಬಿ ಕ್ರಾಸ್-ಚುಂಚನಹಳ್ಳಿ-ನೆಲ್ಲಿಗೆರೆ ರಸ್ತೆಯಂತಹ ಯೋಜನೆ ಮೈಸೂರು ಮತ್ತು ಉತ್ತರ ಕರ್ನಾಟಕದ ನಡುವೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮೈಸೂರು ರಿಂಗ್ ರೋಡ್, ಸರ್ವಿಸ್ ರೋಡ್ ಸಂಚಾರ ದಟ್ಟಣೆ ನಿವಾರಿಸಲು ಸಹಕಾರಿಯಾಗಲಿದೆ. ಬೇಲೂರು-ಹಾಸನ ಮತ್ತು ಯಡೇಗೌಡನಹಳ್ಳಿ-ಬಿಳಿಕೆರೆ ರಸ್ತೆಯ 4-ಲೇನ್ ವಿಸ್ತರಣೆ, ಹಂಗರಹಳ್ಳಿ ಮತ್ತು ಹೊಳೆನರಸೀಪುರ ಬೈಪಾಸ್‌ನಲ್ಲಿ ಆರ್.ಒ.ಬಿಗಳ ನಿರ್ಮಾಣದಿಂದ ಪ್ರಯಾಣದಲ್ಲಿ 2-ಗಂಟೆಗಳ ಕಡಿತವನ್ನು ನಿರೀಕ್ಷಿಸಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಮುನಿಸ್ವಾಮಿ, ಹೆಚ್.ಡಿ. ರೇವಣ್ಣ, ಹೆಚ್.ವಿಶ್ವನಾಥ್, ಸಿ.ಎನ್. ಮಂಜೇಗೌಡ, ಉಪಸ್ಥಿತರಿದ್ದರು.