ಕರ್ನಾಟಕದ ಉತ್ತರ ಒಳನಾಡಿನ ಹವಾಮಾನ ಮುನ್ಸೂಚನೆ
ಹುಬ್ಬಳ್ಳಿ : ಮುಂದಿನ 5 ದಿನ ಉತ್ತರ ಕರ್ನಾಟಕದ ಒಳನಾಡಿನ ಬಹುತೇಕ ಪ್ರದೇಶ ಮಳೆ ಇಲ್ಲ. ಶುಷ್ಕ (ಒನ ಹವೆ) ವಾತಾವರಣ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. ಈ ಅವಧಿಯಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-2 ಡಿಗ್ರಿ ಕಡಿಮೆ ಇರಲಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ವಿಭಾಗದ ತಜ್ಞರು ತಿಳಿಸಿದ್ದಾರೆ.
ಕೃಷಿ ಸಲಹೆಗಳು : ಹಲವೆಡೆ ಅತಿವೃಷ್ಟಿ ಹಾಗೂ ನಿರಂತರ ಮಳೆಯಿಂದಾಗಿ ಆರಂಭದಲ್ಲಿ ಬಿತ್ತನೆ ಮಾಡಿದ ಹಿಂಗಾರಿ ಬೆಳೆಗಳು ಹಾನಿಗೀಡಾಗಿವೆ. ಮರು ಬಿತ್ತನೆ ಮಾಡಬಹುದಾಗಿದೆ.
ರೈತರು ಇನ್ನೂ ಕಡಲೆ ಮತ್ತು ಗೋಧಿ ಬಿತ್ತನೆಗೆ ಮುಂದಾಗಬಹುದು. ಬಿತ್ತನೆ ಮಾಡುವ ಒಂದು ದಿನ ಮೊದಲು ಕಡಲೆ ಬೀಜಗಳಿಗೆ ಟ್ರೈಕೋಡರ್ಮಾ ಸೂಕ್ಷ್ಮಾಣು ಜೀವಿಗಳ ಪುಡಿಯೊಂದಿಗೆ ಉಪಚರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಹಣ್ಣಿನ ಹಾಗೂ ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಕಳೆಗಳನ್ನು ತೆಗೆಯುವ ಕೆಲಸ ಮಾಡಬೇಕು. ಮಾವು, ಪೇರಲ, ಚಿಕ್ಕು ಗಿಡಗಳಿಗೆ ಎರಡನೇ ಕಂತಿನ ರಸಗೊಬ್ಬರ ಕೊಟ್ಟು ಮಣ್ಣಿನಲ್ಲಿ ಮಿಶ್ರಣ ಮಾಡಿ ಮರದ ಬುಡವನ್ನು ಬೆಳೆ ಮತ್ತು ಕಳೆಗಳ ಅವಶೇಷಗಳಿಂದ ಮುಚ್ಚಲು ಇದು ಉತ್ತಮ ಸಮಯ. ರೈತರು ಅನುಸರಿಸಬೇಕು ಎಂದಿದ್ದಾರೆ.
ಒಣ ಹವೆ ಮುಂದುವರಿಯುವ ನಿರೀಕ್ಷೆಯಿರುವುದರಿಂದ, ರೈತರು ಮಾರುಕಟ್ಟೆಗೆ ಕಳುಹಿಸುವ ಮೊದಲು ಜೋಳ ಮತ್ತು ಈರುಳ್ಳಿಯ ಕಟಾವು ಮತ್ತು ಸರಿಯಾದ ಒಣಗಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಕೃಷಿ ವಿವಿ ಹವಾಮಾನ ಆಧಾರಿತ ಸೂಕ್ಷ್ಮ ಜಲಾನಯನ ಮಟ್ಟದ ಕೃಷಿ ಸಲಹೆ ಯೋಜನೆ ಘಟಕದ ತಜ್ಞ ಡಾ.ರವಿ ಪಾಟೀಲ ತಿಳಿಸಿದ್ದಾರೆ.