For the best experience, open
https://m.samyuktakarnataka.in
on your mobile browser.

ಕರ್ನಾಟಕದ ಗ್ಯಾರಂಟಿ ತೆಲಂಗಾಣದಲ್ಲಿ ಫಲಕಾರಿ

11:16 AM Dec 04, 2023 IST | Samyukta Karnataka
ಕರ್ನಾಟಕದ ಗ್ಯಾರಂಟಿ ತೆಲಂಗಾಣದಲ್ಲಿ ಫಲಕಾರಿ

ಕರ್ನಾಟಕದಲ್ಲಿ ಕಾಂಗ್ರೆಸ್ ೫ ಉಚಿತ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಂತೆ ತೆಲಂಗಾಣದಲ್ಲೂ ಅಧಿಕಾರ ಪಡೆಯಲು ಸಾಧ್ಯವಾಗಿದೆ. ತೆಲಂಗಾಣದ ಮತದಾರರು ಕರ್ನಾಟಕದವರನ್ನು ನೋಡಿ ಅದನ್ನೇ ಮಾದರಿಯಾಗಿ ಸ್ವೀಕರಿಸಿದ್ದಾರೆ. ಮೋದಿ ಕಡೆಗಣಿಸಿದ್ದು ಬೆಲೆಏರಿಕೆ ಮತ್ತು ನಿರುದ್ಯೋಗ. ಈಗ ಕಾಂಗ್ರೆಸ್ ಅದಕ್ಕೆ ಮಹತ್ವ ನೀಡಲಿದೆ. ಜಾತಿ ಸಮೀಕ್ಷೆಗೆ ಎಲ್ಲ ಕಡೆ ಬೇಡಿಕೆ ಬರುತ್ತಿದೆ. ಮೋದಿ ಅದನ್ನು ಒಪ್ಪುತ್ತಿಲ್ಲ. ಬಿಜೆಪಿಯ ನಿಜವಾದ ಬಣ್ಣ ಬಯಲಾಗುತ್ತಿದೆ. ಅಕ್ರಮಗಳು ಬಹಿರಂಗಗೊಳ್ಳುತ್ತಿದೆ. ೫ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಪರಿಗಣಿಸಬೇಕಿಲ್ಲ ೨೦೧೮ ಮತ್ತು ೨೦೧೯ ರ ಚುನಾವಣೆಗಳು ಇನ್ನೂ ನಮ್ಮ ನೆನಪಿನಲ್ಲಿ ಹಚ್ಚಹಸಿರಾಗಿದೆ.
ಛತ್ತೀಸಗಢದಲ್ಲಿ ಬಿಜೆಪಿ ಹಿಂದೆ ಆಡಳಿತ ನಡೆಸಿತ್ತು. ಆಗ ಬಡತನ ಅಧಿಕಗೊಂಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದು ಭತ್ತದ ಕಣಜವಾಯಿತು. ತಲಾವಾರು ಆದಾಯ ೮೮೭೯೩ ರೂ ಇದ್ದದ್ದು ೧೩೩೮೯೭ ರೂ. ಆಯಿತು. ೪೦ ಲಕ್ಷ ಜನ ಬಡತನದಿಂದ ಹೊರಬಂದರು. ಈಗ ಮತ್ತೆ ಚುನಾವಣೆಯಲ್ಲಿ ಮೋದಿಯ ಮುಖ ತೋರಿಸಿ ಬಿಜೆಪಿ ಮತ ಪಡೆಯುತ್ತಿದೆ. ಮಧ್ಯಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಹಣಶಹಣಿ ಹೋರಾಟ ನಡೆಸಿದೆ.
ರಾಜಸ್ಥಾನದೇ ಬೇರೆ ಕತೆ. ಅಲ್ಲಿ ಪ್ರತಿ ೫ ವರ್ಷಕ್ಕೊಮ್ಮೆ ಸರ್ಕಾರ ಬದಲಾಗುತ್ತಿದೆ. ಜನ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುತ್ತಾರೆ. ಅವರ ಅಗ್ನಿಪರೀಕ್ಷೆ ಎಲ್ಲ ಸರ್ಕಾರಗಳೂ ಒಳಗಾಗಲೇಬೇಕು. ಪಕ್ಷೇತರರದೇ ಪ್ರಾಬಲ್ಯ. ಇವರು ಬಹುತೇಕ ಪ್ರಮುಖ ಪಕ್ಷಗಳಲ್ಲಿ ಟಿಕೆಟ್‌ಗೆ ಪ್ರಯತ್ನಿಸಿ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿದವರು. ಈಗ ಫಲಿತಾಂಶ ಬಂದಿದೆ. ಇನ್ನೂ ನಡೆಯುವ ನಾಟಕಗಳೇ ಬೇರೆ.
ತೆಲಂಗಾಣ ಫಲಿತಾಂಶವೇ ಬೇರೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರನ್ನು ಜನ ಫಾರಂ ಹೌಸ್ ಸಿಎಂ ಎಂದು ಕರೆಯುತ್ತಾರೆ. ಇಡೀ ಕುಟುಂಬವೇ ಸರ್ಕಾರವನ್ನು ನಡೆಸುತ್ತದೆ. ಅದೇ ಈಗ ದೌರ್ಬಲ್ಯವಾಗಿದೆ.
ಕಾಂಗ್ರೆಸ್ ಪಕ್ಷ ರೇವಂತ್ ರೆಡ್ಡಿ ನೇತೃತ್ವದಲ್ಲಿ ತಲೆಎತ್ತಿದೆ. ಕಾಂಗ್ರೆಸ್‌ಗೆ ಗ್ರಾಮೀಣ ಯುವಕರ ಬೆಂಬಲ ಶ್ರೀರಕ್ಷೆಯಾಗಿದೆ. ಎಐಎಂಐಎ ಮತ್ತು ಬಿಜೆಪಿ ಅಲ್ಪಸ್ವಲ್ಪ ಸ್ಥಾನಗಳನ್ನು ಗಳಿಸಬಹುದು. ಕರ್ನಾಟಕದ ಪ್ರಭಾವ ಎದ್ದು ಕಂಡು ಬರುತ್ತಿದೆ. ಕರ್ನಾಟಕದ ನಾಯಕರು ತೆಲಂಗಾಣ ಶಾಸಕರ ರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ. ಹೀಗಾಗಿ ತೆಲಂಗಾಣ ಹೊಸ ಬದಲಾವಣೆ ಕಾಣುವ ಹಂತದಲ್ಲಿದೆ.
ಮಿಜೋರಾಂನಲ್ಲಿ ರಾಜಕೀಯವೇ ಬೇರೆ. ಎರಡೂ ಸ್ಥಳೀಯ ಪಕ್ಷಗಳು. ಕುಕಿ ಮತ್ತು ಜೋಮೊಸ್ ನಡುವೆ ಹೋರಾಟ. ಕುಕಿಗಳ ವಲಸೆ ಈಗ ಬಹು ದೊಡ್ಡ ಸಮಸ್ಯೆ. ಇದನ್ನು ಮನಗಂಡ ಮೋದಿ ಅಲ್ಲಿಗೆ ಭೇಟಿಕೊಟ್ಟಿಲ್ಲ. ಮಣಿಪುರಕ್ಕಂತೂ ಮೇ ತಿಂಗಳಿನಿಂದ ಕಾಲಿಟ್ಟಿಲ್ಲ.
ಇಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷವನ್ನು ಬೆಂಬಲಿಸುತ್ತದೆ. ಅದರಿಂದ ರಾಷ್ಟೀಯ ಮಟ್ಟದಲ್ಲಿ ಮಿಜೋರಾಂ ಪಾತ್ರ ಕಡಿಮೆ. ೫ ರಾಜ್ಯಗಳ ಚುನಾವಣೆ ಫಲಿತಾಂಶ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸವಾಲು ಹಾಕುವವರು ಯಾರು ಎಂಬುದನ್ನು ಜನ ತೀರ್ಮಾನಿಸಬೇಕಿದೆ.
ರಾಜ್ಯ ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ ಬಹಳ ಅಂತರ ಇದೆ. ಜನ ರಾಷ್ಟ್ರೀಯ ಸಮಸ್ಯೆ ಬಂದಾಗ ನೋಡುವ ರೀತಿಯೇ ಬೇರೆ. ರಾಜ್ಯದ ಪ್ರಶ್ನೆ ಬಂದಾಗ ನೋಡುವ ದೃಷ್ಟಿಕೋನವೇ ಬೇರೆ.
ಇಂದಿನಿಂದ ಲೋಕಸಭೆ ಚುನಾವಣೆಯ ಬಗ್ಗೆ ಮುಕ್ತ ಆರಂಭಗೊಳ್ಳುತ್ತದೆ. ೫ ರಾಜ್ಯಗಳ ಚುನಾವಣೆ ಫಲಿತಾಂಶ ಅದಕ್ಕೆ ನಾಂದಿ ಹಾಡಲಿದೆ. ಕೇಂದ್ರ ಸರ್ಕಾರ ಇದುವರೆಗೆ ಮಾಡಿರುವ ಸಾಧನೆ ಏನು? ಮುಂದಿನ ದಿನಗಳು ಹೇಗಿರುತ್ತದೆ ಎಂಬುದನ್ನು ಮತದಾರರು ಕೂಲಂಕಷವಾಗಿ ಪರಿಶೀಲಿಸುವರು.