For the best experience, open
https://m.samyuktakarnataka.in
on your mobile browser.

ಕರ್ನಾಟಕ ರೈಲ್ವೆ ಯೋಜನೆಗಳು; ಹೊಸ ಆಶಯ, ಭರವಸೆ

02:30 AM Oct 05, 2024 IST | Samyukta Karnataka
ಕರ್ನಾಟಕ ರೈಲ್ವೆ ಯೋಜನೆಗಳು  ಹೊಸ ಆಶಯ  ಭರವಸೆ

ಕರ್ನಾಟಕದಲ್ಲಿ ಪ್ರಗತಿಯಲ್ಲಿರುವ ಹನ್ನೊಂದರ ಪೈಕಿ ಒಂಬತ್ತು ಯೋಜನೆಗಳು ೨೦೨೭ರ ಜೂನ್ ೨೭ಕ್ಕೆ ಪೂರ್ಣಗೊಳ್ಳುತ್ತವೆ ಎಂಬುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಕಟಿಸಿರುವುದು ರಾಜ್ಯದ ದೃಷ್ಟಿಯಿಂದ ಸಕಾರಾತ್ಮಕವಾದ ಅಂಶ. ಪ್ರಗತಿಯಲ್ಲಿರುವ ಅಥವಾ ಘೋಷಿತ ಮಹತ್ವದ ಯೋಜನೆಗಳಿಗೆ ಭೂ ಸ್ವಾಧೀನದ್ದೇ ಪ್ರಸ್ತುತ ದೊಡ್ಡ ಸಮಸ್ಯೆ. ಇದುವೇ ಯೋಜನೆಗಳ ವಿಳಂಬಕ್ಕೆ ಕಾರಣವಾಗಿರುವ ಅಂಶ.
ಸಚಿವರಾದ ನಂತರ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಮೊದಲ ಪೂರ್ಣ ಪ್ರಮಾಣದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಈಗ ಇಲಾಖೆ ಭೂ ಸ್ವಾಧೀನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿ, ಬಹುಪಾಲನ್ನು ಬಗೆಹರಿಸಿದೆ ಎಂದಿರುವದರ ಜೊತೆಗೆ ಲೋಕಾರ್ಪಣೆಯ ದಿನಾಂಕವನ್ನೂ ಪ್ರಕಟಿಸಿರುವುದು ಆಶಾಕಿರಣವನ್ನು ಮೂಡಿಸಿದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ; ತುಮಕೂರು-ಕಲ್ಯಾಣದುರ್ಗ-ರಾಯದುರ್ಗ; ಬಾಗಲಕೋಟೆ-ಕುಡಚಿ; ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು; ಕಡೂರು-ಚಿಕ್ಕಮಗಳೂರು-ಹಾಸನ ಕಾಮಗಾರಿಗಳಿಗೆ ಎದುರಾಗಿದ್ದ ಭೂ ಸ್ವಾಧೀನದ ಸಂಕಷ್ಟ ಹೆಚ್ಚೂ ಕಡಿಮೆ ಬಗೆಹರಿದು, ಕೆಲಸ ಭರದಿಂದ ಸಾಗಿದೆ. ಬೆಳಗಾವಿ-ಧಾರವಾಡ ಮಾರ್ಗದ ಭೂ ಸ್ವಾಧೀನ ಸಮಸ್ಯೆ ಇದೇ ವರ್ಷಾಂತ್ಯಕ್ಕೆ ಬಗೆಹರಿದು ಕೆಲಸ ಆರಂಭವಾಗುವುದೆಂದು ಸಚಿವರು ಹೇಳಿದ್ದು ಶ್ಲಾಘನಾರ್ಹ.
ಇನ್ನು, ರಾಜ್ಯದ ಜನತೆ ದಶಕಗಳಿಂದ ಕಾಯುತ್ತಿರುವ ಹುಬ್ಬಳ್ಳಿ-ಅಂಕೋಲಾ ಯೋಜನೆಯ ಸಮಸ್ಯೆ ಉಳಿದೆಲ್ಲವುಗಳಿಂದ ವಿಶಿಷ್ಟ ಮತ್ತು ಕ್ಲಿಷ್ಟಕರ. ಹೀಗಾಗಿ ಇದರ ಮುಕ್ತಾಯದ ದಿನಾಂಕವನ್ನು ಸಚಿವರು ಸಹಜವಾಗಿ ಘೋಷಿಸಿಲ್ಲ. ಆದರೆ ಈ ಮಹತ್ವದ ಯೋಜನೆಯ ಪ್ರಗತಿಯ ಬಗ್ಗೆ ಕ್ಷಕಿರಣ ಬೀರಿದ್ದು ಗಮನಾರ್ಹ.
ಈ ಯೋಜನೆಗಾಗಿ ಮೊದಲು ಮಾಡಿದ್ದ ವಿನ್ಯಾಸಕ್ಕೆ ಹಸಿರು ನ್ಯಾಯಪೀಠ ಆಕ್ಷೇಪಣೆ ಎತ್ತಿ, ಅರಣ್ಯ ನಾಶವಿಲ್ಲದಂತೆ ಹಾಗೂ ವನ್ಯಜೀವಿ ಸಂಕುಲಕ್ಕೆ ಧಕ್ಕೆಯಾಗದಂತೆ ಮರು ವಿನ್ಯಾಸ ಮಾಡಿ ಎಂಬುದಾಗಿ ಸೂಚಿಸಿತ್ತು. ಇದರಿಂದಾಗಿ ಮರು ಸಮೀಕ್ಷೆ ಮತ್ತು ವಿನ್ಯಾಸ ಸಿದ್ಧಪಡಿಸುವ ಕೆಲಸವನ್ನು ನೈಋತ್ಯ ರೈಲ್ವೆ ನಡೆಸಿ, ಈಗ ವಿಸ್ತೃತ ಕ್ರಿಯಾ ಯೋಜನೆಯನ್ನು (ಡಿಪಿಆರ್) ಸಿದ್ಧಪಡಿಸಿದೆ. ಈ ಡಿಪಿಆರ್ ರೈಲ್ವೆ ಮಂಡಳಿ ಅನುಮೋದಿಸಬೇಕಾದರೆ ವನ್ಯಜೀವಿ ಮಂಡಳಿಯ ಪರವಾನಗಿ ಬೇಕಾಗಿದೆ.
ವನ್ಯಜೀವಿ ಮಂಡಳಿ ಪರವಾನಗಿ ಕೊಟ್ಟೇ ಕೊಡುತ್ತದೆ ಎನ್ನುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿರುವುದು ಉಲ್ಲೇಖಾರ್ಹ. ಕೇವಲ ೨೬ ಎಕರೆ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಒಂದು ಕಡತಕ್ಕೆ ಅನುಮೋದನೆ ಬಾಕಿ ಇದ್ದು, ಈ ಕೆಲಸವೂ ಕರ್ನಾಟಕದ ಪರ ಆಗುತ್ತದೆ ಎಂಬುದು ಸಚಿವರ ಆತ್ಮವಿಶ್ವಾಸ. ನಾನು ಸೋಮಣ್ಣ, ಸುಮ್ಮನೇ ಮಾತನಾಡಲ್ಲ ಎಂದೂ ಮಂತ್ರಿಗಳು ಹೇಳಿಕೊಂಡಿರುವುದರಿಂದ, ನಾಡು ಬಿಟ್ಟಗಣ್ಣು ಬಿಟ್ಟು ಈ ಮಾರ್ಗದ ಅನುಮೋದನೆ ಸುದ್ದಿಗಾಗಿ ಕಾಯುತ್ತಿದೆ. ಅದೇನೇ ಇರಲಿ. ಇದೇ ಪ್ರಥಮ ಬಾರಿಗೆ ಜವಾಬ್ದಾರಿಯುತ ಸಚಿವರಿಂದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಬಗ್ಗೆ ಸ್ಪಷ್ಟ, ಸಕಾರಾತ್ಮಕ ಮಾತು ಕೇಳಿ ಬಂದಿರುವುದು ಸ್ವಾಗತಾರ್ಹ.
ತುಮಕೂರು-ದಾವಣಗೆರೆ ಹಾಗೂ ಬೆಳಗಾವಿ-ಧಾರವಾಡ ನೇರ ಮಾರ್ಗಗಳು ರಾಜ್ಯದ ಪಾಲಿನ ಇನ್ನೆರಡು ಮಹತ್ವದ ಯೋಜನೆಗಳು. ಇವು ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಅವಧಿ ಗಣನೀಯವಾಗಿ ತಗ್ಗಲಿದೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಕೇಂದ್ರ ಸ್ಥಾನ ಹುಬ್ಬಳ್ಳಿ ನಡುವಿನ ಪ್ರಯಾಣದ ಅವಧಿ, ವಂದೇ ಭಾರತ್‌ನಂತಹ ವೇಗದ ರೈಲಿನಲ್ಲಿ ಆರೂವರೆ ತಾಸಿನಿಂದ ಮೂರುವರೆ-ನಾಲ್ಕು ತಾಸುಗಳಿಗೆ ಇಳಿಯಲಿದೆ. ಬೆಂಗಳೂರಿನಿಂದ ಮಹಾರಾಷ್ಟ್ರದ ಪುಣೆ ನಡುವಿನ ಪ್ರಯಾಣ ಅವಧಿ ೧೬ ತಾಸುಗಳಿಂದ ೭-೧೦ ತಾಸುಗಳಿಗೆ ಇಳಿಯಲಿದೆ ಎಂಬುದಾಗಿ ಈಗಾಗಲೇ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈ ಮಾರ್ಗಗಳ ಭೂ ಸ್ವಾಧೀನ ಸಮಸ್ಯೆ ಪರಿಹಾರವಾಗಿರುವ ಬಗ್ಗೆ ಸಚಿವರು ಘೋಷಿಸಿದ್ದು ಸಂತಸದ ಸಂಗತಿ.
ಇದೇ ರೀತಿ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಮಹಾರಾಷ್ಟç ಚುನಾವಣೆ ನಂತರ ನಡೆಯುತ್ತದೆ ಎಂಬುದಾಗಿ ಪ್ರಗತಿ ಪರಿಶೀಲನಾ ಸಭೆಯಿಂದ ತಿಳಿದುಬಂದಿದ್ದು ಇನ್ನೊಂದು ಮಹತ್ವದ ಆಡಳಿತಾತ್ಮಕ ವಿಷಯ. ಇದು ಎಂದೋ ಆಗಬೇಕಿದ್ದ ಕೆಲಸವಾಗಿತ್ತು. ಇಡೀ ದೇಶದಲ್ಲಿ ಭಾರತೀಯ ರೈಲ್ವೆ ಮಂಡಳಿ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವುದರಿಂದ, ಕೊಂಕಣ ರೈಲ್ವೆ ಕಾರ್ಪೊರೇಷನ್‌ಅನ್ನು ಮಂಡಳಿಯಲ್ಲಿ ವಿಲೀನಗೊಳಿಸಿಕೊಳ್ಳಬೇಕಾದದ್ದು ಸಹಜ ನಿಯಮವಾಗಿದೆ. ಕಾರಣಾಂತರಗಳಿಂದ ಮುಂದಕ್ಕೆ ಹೋಗುತ್ತಲೇ ಇದ್ದ ವಿಷಯಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಬಂದಿದ್ದು ಮತ್ತು ಸಂಬಂಧಿಸಿದ ರಾಜ್ಯಗಳು ವಿಲೀನಕ್ಕೆ ಸಮ್ಮತಿ ಸೂಚಿಸಿರುವುದು ಸಮಾಧಾನಕರ ಸಂಗತಿಯಾಗಿದೆ.
ಹೊಸ ಮಾರ್ಗಗಳು ಸೇರಿ ರಾಜ್ಯದ ಈ ಎಲ್ಲ ರೈಲ್ವೆ ಅಭಿವೃದ್ಧಿ ಯೋಜನೆಗಳು, ಸಚಿವರು ಮಾಡಿರುವ ಘೋಷಣೆಯಂತೆ, ಕಾಲಮಿತಿಯಲ್ಲಿ ಮುಗಿಯುವಂತಾಗಲಿ. ಕೇಂದ್ರದ ಈ ಮಾತಿನಿಂದ ಹೆಚ್ಚಿರುವ ನಿರೀಕ್ಷೆಗಳಿಗೆ ಮತ್ತೆ ಅಡ್ಡಿ ಆತಂಕಗಳು ಬಾರದಿರಲಿ ಎಂಬುದು ರಾಜ್ಯದ ಆಶಯವಾಗಿದೆ.