ಕರ್ಮವೆಂಬುದು ನಾವೇ ರಚಿಸುವ ನೀಲಿನಕ್ಷೆ
ನಾವು ಉಸಿರಾಡುವ ಗಾಳಿ ನಮ್ಮ ಹೊರಗಿನ ಪ್ರಪಂಚ ಮತ್ತು ನಮ್ಮೊಳಗಿನ ಪ್ರಪಂಚವನ್ನು ಒಂದು ಮಾಡುತ್ತದೆ. ತ್ರೇತಾಯುಗದ ರಾಮ ಓಡಾಡಿದ ಭೂಮಿ; ದ್ವಾಪರಯುಗದ ಭೀಮ ಉಸಿರಾಡುತ್ತಿದ್ದ ಗಾಳಿ; ಆಕಾಶದಿಂದ ಭಗೀರಥನು ಭೂಮಿಗೆ ತಂದ ಗಂಗೆ; ಸಮುದ್ರಮಂಥನದಲ್ಲಿ ಮೂಡಿಬಂದ ಚಂದ್ರ ಅರ್ಥಾತ್ ಈ ಭೂಮಿ, ಗಾಳಿ, ಚಂದ್ರ, ಸಮುದ್ರ ಈ ಎಲ್ಲವೂ ಹಳೆಯದ್ದೇ ಆಗಿರುವಾಗ ನಾವು ಮಾತ್ರ ಹೇಗೆ ಹೊಸಬರಾದೇವು? ನಾವೂ ಹಳಬರೇ ಅಲ್ಲವೇ? “ಇದೆಲ್ಲಾ ಹಳೆಯ ಕಾಲದ ಮಾತು. ಈಗಿನ ಕಾಲಕ್ಕೆ ಆಗುವುದಿಲ್ಲ. ಈವಾಗ ಎಲ್ಲವೂ ನೂತನ ಮತ್ತು ನವೀನವಾದದ್ದು” ಎಂಬುದಾಗಿ ಜನ ಹೇಳುತ್ತಾರೆ. ನಾವು ಕಿರಿಯರಾಗಿದ್ದಾಗ ನಮ್ಮ ಹಿರಿಯರಿಗೆ ಈ ಮಾತನ್ನು ನಾವು ಹೇಳಿದ್ದುಂಟು. ಅದನ್ನೇ ಈಗ ನಮ್ಮ ಕಿರಿಯರು ಮರಳಿ ನಮಗೆ ಹೇಳುತ್ತಿದ್ದಾರೆ! ಇದನ್ನೇ ಮಂಕುತಿಮ್ಮನ ಕಗ್ಗ ಹೀಗೆ ಹೇಳುತ್ತದೆ:
ರಾಮನಡಿಯಿಟ್ಟ ನೆಲ, ಭೀಮನುಸಿರಿದ ಗಾಳಿ
ವ್ಯೋಮದೆ ಭಗೀರಥಂ ತಂದ ಸುರತಟಿನಿ
ಸೋಮನಂ ಪೆತ್ತ ಕಡಲೀ ಪುರಾತನಗಳಿರೆ
ನಾಮೆಂತು ಹೊಸಬರೆಲೊ-ಮಂಕುತಿಮ್ಮ
ಹೊಸದೊಂದು ರಸ ಭೂಮಿಯಿಂದ ಬೇರಿಗೆ ಪ್ರತಿನಿತ್ಯವೂ ಒದಗಿ ಸಸಿಗೆ ಹೊಸ ಚಿಗುರನ್ನು ಮೂಡಿಸುವಂತೆ; ಹೊಸ ಸೃಷ್ಟಿತತ್ವಗಳು ಎಲ್ಲಿಂದಲೋ ಪ್ರತಿದಿನವೂ ಬಂದು ಈ ಜಗತ್ತನ್ನು ಹೊಸದನ್ನಾಗಿ ಮಾಡುತ್ತಿರುತ್ತವೆ. ಮನುಷ್ಯನ ಚರಿತ್ರೆ ನಿರಂತರವಾಗಿ ಸಾಗುತ್ತಾ ಇರಬೇಕಾದರೆ ಹಿಂದಿನಿಂದ ಬಂದ ಕರ್ಮದ ಋಣ ಸ್ವಲ್ಪವಾದರೂ ಉಳಿದಿರಬೇಕು. ಆವಾಗಲೇ ಆ ಕರ್ಮದ ಋಣಶೇಷವನ್ನು ತೀರಿಸಲು ಅವನ ಚರಿತ್ರೆ ಮುಂದೆ ಸಾಗುವುದು. ಆನೆಯನ್ನು ಹದ್ದಿನಲ್ಲಿಡಲು ಅಂಕುಶ ಬೇಕಾದಂತೆ ಈ ಪೂರ್ವದ ಋಣಶೇಷ ಮನುಷ್ಯನನ್ನು ಸದಾ ನಿಯಂತ್ರಿಸುತ್ತಿರುತ್ತದೆ.
‘ಕರ್ಮ’ ಎಂದರೆ ಸರಳವಾಗಿ ಹೇಳುವುದಾದರೆ; ‘ನಮ್ಮ ಜೀವನಕ್ಕಾಗಿ ನಾವೇ ರಚಿಸುವ ನೀಲಿನಕ್ಷೆ.’ ಕರ್ಮ ಎಂದರೆ ನಮ್ಮ ಸೃಷ್ಟಿಯ ಮೂಲ ನಾವೇ ಆಗುವುದು. ನಮ್ಮ ಜೀವನದ ಜವಾಬ್ದಾರಿಯನ್ನು ಸ್ವರ್ಗದಿಂದ ನಮಗೇ ವರ್ಗಾಯಿಸಿಕೊಂಡು ತನ್ನ ಹಣೆಬರಹದ ಸೃಷ್ಟಿಕರ್ತ ತಾನೇ ಆಗುತ್ತಾನೆ. ಇದು ಮೇಲಿಂದ ಹೇರಿದ ಕಾನೂನಲ್ಲ. ನಮ್ಮ ಕರ್ಮದ ಹೊಣೆಗಾರಿಕೆ ನಮ್ಮ ಮಾತಾಪಿತೃಗಳಿಗೆ, ಶಿಕ್ಷಕರಿಗೆ, ಗುರುವಿಗೆ, ದೇವರಿಗೆ ಹೊರಿಸಲು ಬರುವುದಿಲ್ಲ. ತ್ರೇತಾಯುಗದಲ್ಲಿ ಮೋಸದಿಂದ ವಾಲಿಯನ್ನು ಸಂಹಾರ ಮಾಡಿದ ರಾಮ ದ್ವಾಪರಯುಗದಲ್ಲಿ ಒಬ್ಬ ಅನಾಮಿಕ ಬೇಡನ ಬಾಣದಿಂದ ಅದೇ ರೀತಿಯ ಅಂತ್ಯವನ್ನು ಕಂಡ. ದೇವಕಿಯ ಗರ್ಭದಲ್ಲಿ ಜನಿಸಿದ ಕೃಷ್ಣ ಯಶೋದೆಯ ಮಡಿಲಲ್ಲಿ ಬೆಳೆದ. ಮಹಾರಾಣಿ ಗಾಂಧಾರಿ ಕಣ್ಣಿದ್ದೂ ಕುರುಡಿಯಂತೆ ಬದುಕಿದಳು. ಕರ್ಣನಿಗೆ ಒಬ್ಬ ಉತ್ತಮ ಮನುಷ್ಯನಾಗಿ ಬದುಕಲು ಬೇಕಾದ ಎಲ್ಲಾ ಸವಲತ್ತುಗಳೂ, ಸಂಸ್ಕಾರಗಳೂ ಸಿಕ್ಕಿದ್ದವು. ಆದರೆ ಸದಾ ಆತನಲ್ಲಿ ಹೊಗೆಯಾಡುತ್ತಿದ್ದ ಕಹಿಭಾವನೆ, ಅತೃಪ್ತಿಯಿಂದಾಗಿ ಅವನಲ್ಲಿದ್ದ ಉತ್ಕೃಷ್ಟ ದಾನಗುಣವನ್ನು ನಾವಿಂದಿಗೂ ನೆನೆಯುತ್ತಿದ್ದರೂ ಕೂಡಾ ಅವನ ಕರ್ಮಫಲವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಮನಮೆಚ್ಚಿದ ಹೆಂಡತಿ, ಮಗ ಎಲ್ಲಾ ಇದ್ದರೂ ಅವರೊಡನೆ ಜೀವನದ ಕೊನೆಯವರೆಗೂ ಬದುಕುವ ಸೌಭಾಗ್ಯವನ್ನೇ ಕಳೆದುಕೊಂಡ ಕರ್ಣ ದುರ್ದೈವಿಯಾದ. ಇದುವೇ ಕರ್ಮಫಲವೆಂದರೆ.
ಕರ್ಮ ಒಂದು ಸಿದ್ಧಾಂತವಲ್ಲ; ಧರ್ಮಗ್ರಂಥವಲ್ಲ; ತತ್ತ್ವಶಾಸ್ತ್ರವಲ್ಲ; ಇದು ‘ವಸ್ತುಸ್ಥಿತಿ.’ ಅಸ್ತಿತ್ವವಾದದ ಕಾರ್ಯವಿಧಾನ ಸೂರ್ಯನಂತೆ. ನೀವು ಒಪ್ಪಿದರೂ, ಒಪ್ಪದಿದ್ದರೂ ಸೂರ್ಯ ತಾನು ಬೆಳಕು ಚೆಲ್ಲುವ ಕೆಲಸ ನಿತ್ಯವೂ ಮಾಡಿಯೇ ಮಾಡುತ್ತಾನೆ. ಕರ್ಮವು ನೀವೇ ಅರಿವಿಲ್ಲದೆ ಬರೆದ ಸಾಫ್ಟ್‌ವೇರ್. ಸಹಜವಾಗಿ ನೀವದನ್ನು ಪ್ರತಿದಿನವೂ ಅಪ್‌ಡೇಟ್ ಮಾಡುತ್ತಿದ್ದೀರಿ. ನೀವು ನಿರ್ವಹಿಸುವ ದೈಹಿಕ, ಮಾನಸಿಕ ಮತ್ತು ಶಕ್ತಿಯ ಕಾರ್ಯಗಳ ಆಧಾರದಲ್ಲಿ ನೀವು ಸಾಫ್ಟ್‌ವೇರ್ ಬರೆಯುತ್ತೀರಿ. ಈ ಸಾಫ್ಟ್‌ವೇರಿಗೆ ಅನುಗುಣವಾಗಿಯೇ ನಿಮ್ಮೆಲ್ಲಾ ಕ್ರಿಯೆಗಳು ಜರುಗುತ್ತವೆ. ಹಿಂದಿನ ಮಾಹಿತಿಗಳ ಆಧಾರದ ಮೇಲೆ ನೆನಪಿನ ಮಾದರಿಗಳು ಮರುಕಳಿಸುತ್ತಲೇ ಇದ್ದು ಅವುಗಳೇ ನಿಮ್ಮ ಜೀವನದ ಅಭ್ಯಾಸವಾಗುತ್ತದೆ; ಪುನರಾವರ್ತಿತ ಮತ್ತು ಆವರ್ತನಕ್ರಮಕ್ಕೆ ಒಳಪಡುತ್ತದೆ. ಸಮಯ ಕಳೆದಂತೆ ನೀವು ನಿಮ್ಮಲ್ಲಿ ಸಂಗ್ರಹಿತವಾದ ಮಾಹಿತಿಯ ಕೈಗೊಂಬೆಯಾಗುತ್ತೀರಿ. ನಿಮ್ಮಲ್ಲಿನ ಪ್ರತಿ ಮಾನಸಿಕ ಏರಿಳಿತವು ರಾಸಾಯನಿಕ ಕ್ರಿಯೆಯನ್ನು ಸೃಷ್ಟಿಸುತ್ತದೆ; ಅದು ಭೌತಿಕ ಸಂವೇದನೆಯನ್ನು ಪ್ರಚೋದಿಸುತ್ತದೆ. ಈ ಸಂವೇದನೆಗಳು ತೀವ್ರವಾಗದ ಹೊರತು ನಿಮ್ಮ ಅರಿವಿಗೆ ಬರುವುದಿಲ್ಲ. ಕಾಲಾಂತರದಲ್ಲಿ ಈ ಎಲ್ಲಾ ಸಂವೇದನೆಗಳು ದಾಖಲಿಸಲ್ಪಟ್ಟು ನಿಮ್ಮ ಸುಪ್ತಮನಸ್ಸಿನ ನೀಲಿನಕ್ಷೆಯಾಗುತ್ತದೆ. ನೀವು ನಿಮ್ಮ ತಿಳಿವಳಿಕೆಗೆ ಬಾರದೆಯೇ ಕರ್ಮಗಳ ಜೀವಂತ ಭಂಡಾರವಾಗಿರುತ್ತೀರಿ. ನೀವು ಸಿ.ಡಿ.ಯನ್ನು ಹಾಕಿದಾಗ ನೀವು ಸಿ.ಡಿ.ಯನ್ನು ಅನುಭವಿಸುವುದಿಲ್ಲ; ಅದರೊಳಗಿನ ಸಂಗೀತವನ್ನು ಅನುಭವಿಸುತ್ತೀರಿ. ಕರ್ಮವೂ ಹಾಗೆಯೇ. ನಿಮ್ಮ ದೈಹಿಕ, ಮಾನಸಿಕ, ಚೈತನ್ಯವನ್ನು ಅನುಭವಿಸುವುದಿಲ್ಲ; ಸಂಗೀತವನ್ನು (ಪರಿಣಾಮವನ್ನು) ಮಾತ್ರ ಅನುಭವಿಸುತ್ತೀರಿ. ಆದರೆ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ನಮ್ಮಲ್ಲಿನ ವ್ಯವಸ್ಥೆಯಲ್ಲಿರುವ ಕರ್ಮದ ಮಾಹಿತಿ ವಿವಿಧ ವಿನ್ಯಾಸಗಳಲ್ಲಿ ರೂಪಿಸಲ್ಪಟ್ಟಿವೆ.
ಕರ್ಮವು ಪ್ರಥಮ ಮೂರು ಶರೀರಗಳಾದ ಅನ್ನಮಯಕೋಶ, ಮನೋಮಯಕೋಶ ಮತ್ತು ಪ್ರಾಣಮಯಕೋಶಗಳಲ್ಲಿ ಮಾತ್ರವೇ ಸಂಚಯನಗೊಳ್ಳುತ್ತದೆ. ಸೂಕ್ಷ್ಮಶರೀರಗಳಾದ ವಿಜ್ಞಾನಮಯಕೋಶ ಮತ್ತು ಆನಂದಮಯಕೋಶಗಳನ್ನು ಪ್ರಭಾವಿಸುವುದಿಲ್ಲ. ಸಾಧನೆಯನ್ನು ವಿಜ್ಞಾನಮಯ ಮತ್ತು ಆನಂದಮಯ ಕೋಶಗಳಿಗೆ ವಿಸ್ತರಿಸುವ ಮೂಲಕ ಕರ್ಮದ ಪ್ರಭಾವದಿಂದ ಕಳಚಿಕೊಳ್ಳಬಹುದು. ಕಾರ್ಯ-ಕಾರಣ ಸಂಬಂಧ ಪ್ರಥಮ ಮೂರು ಭೌತಿಕ ಶರೀರಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಅಂತಿಮವಾಗಿ ಜೀವನ ದುಃಖವೂ ಅಲ್ಲ; ಆನಂದವೂ ಅಲ್ಲ. ನೀವು ಏನನ್ನಾಗಿ ಮಾಡಿಕೊಳ್ಳುತ್ತೀರೋ ಅಥವಾ ತಿಳಿದುಕೊಳ್ಳುತ್ತೀರೋ ಅದೇ ಆಗಿರುತ್ತದೆ.
ಶನಿದೆಸೆಯ ಪ್ರಭಾವ ಪದವಿ ಹಾಗೂ ಶಕ್ತಿಗಳು ಕರ್ತವ್ಯ ನಿರ್ವಹಿಸುವುದಕ್ಕಾಗಿ ದತ್ತವಾಗಿರುತ್ತವೆ. ಕರ್ತವ್ಯ ಮರೆತು ತಮಗಿರುವ ಬಲವನ್ನು ದುರುಪಯೋಗ ಮಾಡಿಕೊಳ್ಳುವವರನ್ನು ತನ್ನ ಏಳೂವರೆ ವರ್ಷಗಳ ಸಂಚಾರದಲ್ಲಿ ಶನಿ ಕಷ್ಟಕ್ಕೆ ಸಿಲುಕಿಸುತ್ತಾನೆ. ಈ ಅವಧಿಯಲ್ಲಿ ಅನುಭವಿಸುವ ಕಷ್ಟಗಳು ಮನುಷ್ಯನಲ್ಲಿರುವ ಪದವಿ ಮತ್ತು ಅಹಂಕಾರವನ್ನು ನಾಶಮಾಡಿ ಕರ್ತವ್ಯವನ್ನು ನೆನಪಿಸುತ್ತವೆ. ಶನಿ ತನ್ನ ಸಾಡೇಸಾತಿ ಅಥವಾ ಏಳೂವರೆ ವರ್ಷಗಳ ಉಪಸ್ಥಿತಿಯಲ್ಲಿ ನಮ್ಮ ಶತ್ರುಗಳನ್ನು ಸ್ವಲ್ಪ ಪ್ರಬಲನಾಗಿಸುತ್ತಾನೆ. ಇದರ ಹಿಂದೆ ಮಹಾ ಉದ್ದೇಶವಿದೆ. ನಾವು ನಮ್ಮ ಶಕ್ತಿಯ ಇತಿಮಿತಿಗಳನ್ನು ಅರಿಯಬೇಕು; ನಮ್ಮವರ ಸಹಯೋಗದೊಂದಿಗೆ ಸಮಸ್ಯೆಗಳ ವಿರುದ್ಧ ಹೋರಾಡಲು ಕಲಿಯಬೇಕು ಎಂಬುದೇ ಈ ಉದ್ದೇಶ. ಯಾರು ಹೆಣ್ಣನ್ನು ಕೀಳುದೃಷ್ಟಿಯಿಂದ ಕಾಣುತ್ತಾರೋ ಅವರಿಗೆ ಶನಿ ಸಹಜಶತ್ರು. ಸಾಡೇಸಾತಿಯ ಅವಧಿಯಲ್ಲಿ ಇಂಥವರಿಗೆ ಹಲವು ಬಗೆಯ ಕಷ್ಟಗಳನ್ನು ನೀಡುವ ಮೂಲಕ ಶನಿ ಕಾಡುತ್ತಾನೆ. ಸ್ತ್ರೀಯರನ್ನು ಗೌರವಿಸುವುದು ಮತ್ತು ಅವರನ್ನು ಸಮಾನವಾಗಿ ಕಾಣುವುದು ಅಗತ್ಯ ಎಂಬುವುದು ಶನಿ ಕಲಿಸುವ ಪಾಠ. ಭಕ್ತಿ-ಜ್ಞಾನ-ಕ್ರಿಯೆ ಮತ್ತು ಕರ್ಮಗಳು ಒಟ್ಟಾಗಿ ಪ್ರಜ್ಞೆ ರೂಪುಗೊಳ್ಳುತ್ತದೆ. ಈ ಪ್ರಜ್ಞೆ ಭ್ರಷ್ಟವಾಗದಂತೆ ಕಾಪಾಡಿಕೊಳ್ಳುವುದು ಹೇಗೆ ಎಂದು ಸಾಡೇಸಾತಿಯ ಅವಧಿಯಲ್ಲಿ ಶನಿ ಕಲಿಸುತ್ತಾನೆ. ಮನುಷ್ಯನ ಅಹಂಕಾರಕ್ಕೆ ಕಾರಣಗಳು ಹಲವು. ಹಾಗೆಯೇ ಅದನ್ನು ಪೋಷಿಸುವ ಸಂಗತಿಗಳು ಹಲವು. ಆದರೆ ಒಮ್ಮೆ ಅಹಂಕಾರದ ಸೌಧ ಮುರಿದರೆ ಅದರ ಜೊತೆಜೊತೆಗೆ ಹೊಂದಿಕೊಂಡಂತೆ ಇರುವ ಪದವಿ, ಪ್ರತಿಷ್ಠೆಗಳೂ ಇಲ್ಲವಾಗುತ್ತವೆ. ಮನುಷ್ಯ ಏಕಾಂಗಿಯಾಗುತ್ತಾನೆ. ಸಾಡೇಸಾತಿಯ ಅವಧಿಯಲ್ಲಿ ಶನಿ ವ್ಯಕ್ತಿಯನ್ನು ಹೀಗೆ ಏಕಾಂಗಿಯಾಗಿಸುತ್ತಾನೆ. ಏಕೆಂದರೆ, ಅವನು ಆತ್ಮಮಂಥನ ನಡೆಸಿ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಶನಿ ಒದಗಿಸುವ ಅವಕಾಶವಿದು.