ಕರ್ಮ ಸಿದ್ಧಾಂತ ಮತ್ತು 'ಗರುಡ ಪುರಾಣ'
ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ ಸಿನಿಮಾ
ಚಿತ್ರ: ರುದ್ರ ಗರುಡ ಪುರಾಣ
ನಿರ್ದೇಶನ: ನಂದೀಶ್ ಕೆ.ಎಸ್
ನಿರ್ಮಾಣ: ಅಶ್ವಿನಿ ಆರ್ಟ್ಸ್ ಪ್ರೊಡಕ್ಷನ್ಸ್
ತಾರಾಗಣ: ರಿಷಿ, ಪ್ರಿಯಾಂಕಾ ಕುಮಾರ್, ವಿನೋದ್ ಆಳ್ವಾ, ಅವಿನಾಶ್, ಕೆ.ಎಸ್.ಶ್ರೀಧರ್, ಶಿವರಾಜ್ ಕೆ.ಆರ್ ಪೇಟೆ ಮತ್ತಿತರರು.
ರೇಟಿಂಗ್ಸ್: 3.5
- ಜಿ.ಆರ್.ಬಿ
ಪೊಲೀಸ್ ಅಧಿಕಾರಿ ಆದವರು ಅಮಾನುಷ ಶಕ್ತಿ, ಮೂಢ ನಂಬಿಕೆಯನ್ನು ನಂಬಬೇಕೋ, ನಂಬ ಬಾರದೋ..? ಟೈಮ್ ಟ್ರಾವೆಲಿಂಗ್ ಬಗ್ಗೆ ಆಸಕ್ತಿ ಇದೆಯಾ..? ಅದೂ ಅನುಭವಕ್ಕೆ ಬಂದಾಗ ಮಾತ್ರ ತಲೆ ಕೆಡಿಸಿಕೊಳ್ಳಬೇಕಾ..? ಕರ್ಮ ಸಿದ್ಧಾಂತಗಳ ಕುರಿತು, ಗರುಡ ಪುರಾಣದ ಬಗ್ಗೆ ಏನೆಲ್ಲ ಸತ್ಯಾಸತ್ಯತೆಗಳಿವೆ… ಹೀಗೆಲ್ಲ ಗೊಂದಲಗಳು ಸಹಜ. ಆದರೆ ತನ್ನ ಕಾರ್ಯವ್ಯಾಪ್ತಿಯಲ್ಲೇ ಹೀಗೊಂದು ವಿಭಿನ್ನ-ವಿಚಿತ್ರ ಘಟನೆಗೆ ಸಾಕ್ಷಿಯಾಗುತ್ತಲೇ ಕಾಣೆಯಾದ ಯುವಕನೊಬ್ಬನನ್ನು ಹುಡುಕುವ ಕೆಲಸ ಕಥಾನಾಯಕ ರುದ್ರ (ರಿಷಿ)ನದ್ದು.
ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ ಸಿನಿಮಾಕ್ಕೆ ಏನೇನು ಸರಕು ಬೇಕೋ ಅವೆಲ್ಲವನ್ನೂ ಒಪ್ಪ ಮಾಡಿಕೊಂಡು, ಅದಕ್ಕೆ ತಕ್ಕನಾಗಿ ಚಿತ್ರಕಥೆ ಹೆಣೆದುಕೊಂಡು ‘ರುದ್ರ ಗರುಡ ಪುರಾಣ’ ಕಥೆ ಒಪ್ಪಿಸಿದ್ದಾರೆ ನಿರ್ದೇಶಕ ನಂದೀಶ್. ಸಿದ್ಧಸೂತ್ರಗಳನ್ನು ದಾಟಿ ಹೊಸತೇನನ್ನೋ ಹೇಳಬೇಕೆಂಬ ತುಡಿತ ಅವರ ಕುಸುರಿಯಲ್ಲಿ ಕಾಣಸಿಗುತ್ತದೆ. ಪ್ರತಿಯೊಂದು ದೃಶ್ಯಗಳಲ್ಲಿನ ಸೂಕ್ಷ್ಮ ಹೆಣಿಗೆ, ಒಂದರ ಹಿಂದೊಂದರಂತೆ ನಡೆಯುವ ಘಟನೆಗಳು, ಕಥೆಯೊಳಗೊಂದು ಉಪಕಥೆ… ಎಲ್ಲವೂ ಸಿನಿಮಾದ ಓಟಕ್ಕೆ ಹೊಂದಿಕೊಂಡು ಮುಂದೇನಾಗುತ್ತದೆ ಎಂಬ ಕೌತುಕದಿಂದಲೇ ನೋಡಿಸಿಕೊಂಡು ಹೋಗುವಂತೆ ಮಾಡಿರುವುದು ನಿರ್ದೇಶಕರ ಹೆಚ್ಚುಗಾರಿಕೆ.
ಒಟ್ಟಾರೆ ಸಿನಿಮಾದ ಮೇಕಿಂಗ್, ಸೀನ್‌ಗಳ ಟೇಕಿಂಗ್, ಕತ್ತಲು-ಬೆಳಕಿನ ಲೈಟಿಂಗ್… ಎಲ್ಲವೂ ಚಿತ್ತಾರದಂತೆ ಭಾಸವಾಗುತ್ತದೆ. ಗಟ್ಟಿ ಕಥೆಯೊಂದಿದ್ದರೆ ಒಂದು ಇಂಟರೆಸ್ಟಿಂಗ್ ಸಿನಿಮಾ ಮಾಡಬಹುದು ಎಂಬುದಕ್ಕೆ ‘… ಗರುಡ ಪುರಾಣ’ ತಾಜಾ ಉದಾಹರಣೆ.
ಪೊಲೀಸ್ ತನಿಖಾಧಿಕಾರಿಯಾಗಿ ರಿಷಿ ಇಷ್ಟವಾಗುತ್ತಾರೆ. ಹೀಗೂ ಕಗ್ಗಂಟನ್ನು ಸುಲಭವಾಗಿ ಬಿಡಿಸಬಹುದು ಎಂಬುದನ್ನು ನಟನೆ ಮೂಲಕ ಸಾಬೀತುಪಡಿಸಿದ್ದಾರೆ. ಪ್ರಿಯಾಂಕಾ ಕುಮಾರ್, ವಿನೋದ್ ಆಳ್ವಾ, ಅವಿನಾಶ್, ಕೆ.ಎಸ್.ಶ್ರೀಧರ್, ಶಿವರಾಜ್ ಕೆ.ಆರ್ ಪೇಟೆ ಮುಂತಾದವರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.