ಕಲಬುರಗಿಯಲ್ಲಿ ಐ.ಟಿ.ಎಫ್ ಪುರುಷರ ಟೆನಿಸ್ ಪಂದ್ಯಾವಳಿ ೨೬ರಿಂದ
ಕಲಬುರಗಿ: ಸೂರ್ಯ ನಗರಿ ಕಲಬುರಗಿಯ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ 8 ವರ್ಷದ ನಂತರ ಇದೇ ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ವಿಶ್ವ ಟೆನಿಸ್ ಪಂದ್ಯಾವಳಿಗೆ ಕಲಬುರಗಿ ಆತಿಥ್ಯವಹಿಸಲು ಸಜ್ಜಾಗಿದೆ. ಈಗಾಗಲೇ ಶುಕ್ರವಾರ ಇದರ ಲಾಂಛನ ಮತ್ತು ಟೀಸರ್ ಬಿಡುಗಡೆಗೊಳಿಸಲಾಗಿದೆ.
ನವೆಂಬರ್ 28 ರಂದು ಉದ್ಘಾಟನೆ ಮತ್ತು ಡಿಸೆಂಬರ್ 3 ರಂದು ಸಮಾರೋಪ ನಡೆಯಲಿದೆ. ಶ್ರೀಲಂಕಾದ ಧಾರಕಾ ಎಲ್ಲಾವಾಲಾ ಈ ಪಂದ್ಯಾವಳಿಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಗಮವಾಗಿ ಪಂದ್ಯಾವಳಿ ನಡೆಯಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದೆ.
ಐ.ಟಿ.ಎಫ್. ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಟೂರ್ನಿಗೆ ವಿಶ್ವದ 9 ದೇಶಗಳ ಕ್ರೀಡಾಪಟಗಳು ಭಾಗವಹಿಸುತ್ತಿದ್ದಾರೆ. ಈ ಪೈಕಿ 65ನೇ ವಿಶ್ವ ಶ್ರೇಯಾಂಕಿತ ಆಟಗಾರ ಎವ್ಜೆನಿ ಡಾನ್‍ಸ್ಕಾಯ್, ಜರ್ಮನಿಯ ಲೂಯಿಸ್ ವೆಸೆಲ್ಸ್, ಉಕ್ರೇನ್‍ನ ವ್ಲಾಡಸ್ಲ್ಯಾವ್ ಒರ್ಲೋವ್ ಮತ್ತು ಭಾರತದ ದಿಗ್ವಿಜಯಸಿಂಗ್ ಹಾಗೂ ಇತ್ತೀಚಿಗೆ ಧಾರವಾಡದಲ್ಲಿ ನಡೆದ ಐಟಿಎಪ್ ಓಪನ್ ಪಂದ್ಯಾವಳಿಯ ವಿಜೇತ ರಾಮಕುಮಾರ ರಾಮನಾಥನ್ ಪ್ರಮುಖರಾಗಿದ್ದಾರೆ. ಒಂದು ವಾರಗಳ ಕಾಲ ಕಲಬುರಗಿಯಲ್ಲಿ ಈ ಅಂತಾರಾಷ್ಟ್ರೀಯ ಟೆನಿಸ್ ಹಬ್ಬ ಈ ಭಾಗದ ಜನರು ಕಣ್ತುಂಬಿಕೊಳ್ಳಬಹುದಾಗಿದೆ.
US $25000 ನಗದು ಬಹುಮಾನದ ಟೂರ್ನಿ:
ಪಂದ್ಯಾವಳಿಯ ಲಾಂಛನ ಬಿಡುಗಡೆಗೊಳಿಸಿದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಮಾತನಾಡಿ, US $25000 ನಗದು ಬಹುಮಾನದ ಟೂರ್ನಿ ಇದಾಗಿದೆ. ಇಂಥದೊಂದು ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶ ಕಲಬುರಗಿಗೆ ದೊರೆತಿರುವುದು ಹೆಮ್ಮೆಯ ವಿಷಯ. ಪಂದ್ಯ ವೀಕ್ಷಣೆ ಉಚಿತವಾಗಿದ್ದು, ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇಶ-ವಿದೇಶದ ಪ್ರಖ್ಯಾತ ಕ್ರೀಡಾಪಟುಗಳ ಆಟದ ಸವಿಯನ್ನ ಆನಂದಿಸಬೇಕು ಎಂದು ಮನವಿ ಮಾಡಿದರು.
2002ರಲ್ಲಿ ಮೊದಲ ಟೂರ್ನಿ:
ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ ಮಾತನಾಡಿ, ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ಕಲಬುರಗಿಯ ಇದೇ ಚಂಪಾ ಕ್ರೀಡಾಂಗಣದಲ್ಲಿ ಐ.ಟಿ.ಎಫ್. ಟೆನಿಸ್ ಟೂರ್ನಿ ಆಯೋಜಿಸಲಾಗಿತ್ತು. ತದನಂತರ 2017 ರಲ್ಲಿ ಆಯೋಜಿಸಿದೆ. ಇದು ಅಂತರಾಷ್ಟ್ರೀಯ ಮಟ್ಟದ ಮೂರನೇ ಟೂರ್ನಿ ಇದಾಗಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಮತುವರ್ಜಿಯಿಂದ ಇಂದಿಲ್ಲಿ ಅಂತರಾಷ್ಟ್ರೀಯ ಮಟ್ಟದ ಟೆನಿಸ್ ಟೂರ್ನಿ ಆಯೋಜನೆಗೊಳ್ಳುತ್ತಿದೆ.
ರಾಜ್ಯದ ಇಬ್ಬರು ಸೇರಿ ನಾಲ್ವರಿಗೆ ವೈಲ್ಡ್ ಕಾರ್ಡ್:
ಅರ್ಹತಾ ಸುತ್ತಿನ ಡ್ರಾ ನವೆಂಬರ್ 25 ರಂದು ನಡೆಯಲಿದ್ದು, ಅರ್ಹತಾ ಸುತ್ತಿನ ಪಂದ್ಯಗಳು ನವೆಂಬರ್ 26 ಮತ್ತು 27 ರಂದು ನಡೆಯಲಿವೆ. ಮುಖ್ಯ ಪಂದ್ಯಗಳು ನ.28 ರಿಂದ ಆರಂಭವಾಗಲಿವೆ. ಡಿಸೆಂಬರ್ 2 ರಂದು ಡಬಲ್ಸ್ ಫೈನಲ್ 3 ರಂದು ಸಿಂಗಲ್ಸ್ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಾವಳಿಯಲ್ಲಿ 32 ಆಟಗಾರರು ಸಿಂಗಲ್ಸ್ ಪಂದ್ಯ ಆಡಲಿದ್ದರೆ, 16 ಜೋಡಿಗಳು ತಮ್ಮ ಸಾಮರ್ಥ್ಯ ಒರೆಗೆ ಹಚ್ಚಲಿವೆ. ಈ ಮಧ್ಯೆ, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಶಿಯಷನ್ ಮುಖ್ಯ ಪಂದ್ಯಗಳಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಿದ್ದು, ಆ ಪೈಕಿ ರಾಜ್ಯದ ಆದಿಲ್ ಕಲ್ಯಾಣಪುರ ಮತ್ತು ಮನೀಶ್. ಜಿ (ಕರ್ನಾಟಕ) ಮತ್ತು ಇತರೆ ರಾಜ್ಯದ ಕಬೀರ್ ಹಂಸ ಮತ್ತು ಜಗಮೀತಸಿಂಗ್ ಅವರು ಪ್ರವೇಶ ಪಡೆದಿದ್ದಾರೆ ಎಂದು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯ ಟೂರ್ನಾಮೆಂಟ್ ನಿರ್ದೇಶಕ ಪೀಟರ್ ವಿಜಯಕುಮಾರ ತಿಳಿಸಿದರು.