For the best experience, open
https://m.samyuktakarnataka.in
on your mobile browser.

ಕಲಬುರಗಿಯ  ‘ಜಯದೇವ ಆಸ್ಪತ್ರೆ’ ಇಂದು ಲೋಕಾರ್ಪಣೆ

07:23 AM Dec 22, 2024 IST | Samyukta Karnataka
ಕಲಬುರಗಿಯ  ‘ಜಯದೇವ ಆಸ್ಪತ್ರೆ’ ಇಂದು ಲೋಕಾರ್ಪಣೆ

ಕಲಬುರಗಿ: ಕಲಬುರಗಿಯಲ್ಲಿ ಇಂದು  ಜಯದೇವ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ.

ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಕಲಬುರಗಿ ಶಾಖಾ ಆಸ್ಪತ್ರೆ ಇಂದು ಲೋಕಾರ್ಪಣೆಗೊಳ್ಳಲಿದ್ದು,

ಖಾಸಗಿ ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಿದ್ದು, ನೂತನ ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಿರುವ 10 ಹೃದ್ರೋಗ ವೈದ್ಯರ ಜೊತೆಗೆ ಹೆಚ್ಚುವರಿಯಾಗಿ 21 ವೈದ್ಯರು, 120 ಸ್ಟಾಫ್ ನರ್ಸ್ ಸೇರಿದಂತೆ ಇತರೆ ಸಿಬ್ಬಂದಿ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ನೂತನ ಜಯದೇವ ಆಸ್ಪತ್ರೆಯಲ್ಲಿ 3 ಕ್ಯಾಥಲ್ಯಾಬ್, ಮೂರು ಅಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಓ.ಟಿ ಇರಲಿದೆ. ಎಕ್ಸ್ರೇ, ಇ.ಎಂ.ಆರ್.ಐ., ಬ್ಲಡ್ ಬ್ಯಾಂಕ್ ಸೇವೆ ಲಭ್ಯವಿರಲಿದೆ. 105 ಐ.ಸಿ.ಯು ಬೆಡ್, 120 ಜನರಲ್ ಬೆಡ್ ಸೇರಿದಂತೆ ಒಟ್ಟಾರೆ 371 ಹಾಸಿಗೆ ಸಾಮರ್ಥ್ಯ ಇದ್ದು, ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇ.30ರ ರಿಯಾಯಿತಿ ದರದೊಂದಿಗೆ ಚಿಕಿತ್ಸೆ ಇಲ್ಲಿ ಸಿಗಲಿದೆ.

ಬೆಂಗಳೂರು, ಮೈಸೂರು ಬಿಟ್ಟರೆ ರಾಜ್ಯದಲ್ಲಿ ಮೂರನೇ ಸ್ವಂತ ಕಟ್ಟಡವನ್ನು ಕಲಬುರಗಿಯಲ್ಲಿ ಆಸ್ಪತ್ರೆ ಹೊಂದಲಿದ್ದು, ಬೆಂಗಳೂರು ಬಿಟ್ಟರೆ ಕಲಬುರಗಿ ಶಾಖಾ ಆಸ್ಪತ್ರೆಯಲ್ಲಿ ವಸ್ಕುಲರ್ ಸರ್ಜರಿ ಸೇವೆ ಸಹ ನೀಡಲು ಉದ್ದೇಶಿಸಲಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೆ ಮೊದಲನೇಯದು ಎನ್ನುವ ಹೆಗ್ಗಳಿಕೆ.‌

ನೂತನ ಆಸ್ಪತ್ರೆಯಲ್ಲಿ ನೀರಿನ ಕೊರತೆ ಎದುರಾಗದಂತೆ 7 ಲಕ್ಷ ಲೀ. ನೀರು ಸಾಮರ್ಥ್ಯ ಟ್ಯಾಂಕ್ ಸ್ಥಾಪಿಸಿದ್ದು, 11ಕೆ.ವಿ. ವಿದ್ಯುತ್ ಕೇಂದ್ರವನ್ನು 33 ಕೆ.ವಿ.ಗೆ ಮೇಲ್ದರ್ಜೇಗೇರಿಸಲಾಗಿದೆ.

ಜಯದೇವ ಕಲಬುರಗಿ ನೂತನ ಶಾಖೆಯ ವಿಶೇಷತೆಗಳು ಹೀಗಿವೆ:
❖ 371 ಹಾಸಿಗೆ ಸಾಮರ್ಥ್ಯದ ಕಟ್ಟಡ
❖ 3 ಕ್ಯಾಥ್‌ಲ್ಯಾಬ್‌ಗಳು
❖ 3 ಆಪರೇಷನ್ ಥಿಯೇಟರ್‌ಗಳು
❖ 1 ಹೈಬ್ರಿಡ್ OT
❖ 105 ICCU ಹಾಸಿಗೆಗಳು
❖ 120 ಸಾಮಾನ್ಯ ವಾರ್ಡ್ ಬೆಡ್‌
❖ ಅರೆ-ವಿಶೇಷ, ವಿಶೇಷ ಮತ್ತು ಡೀಲಕ್ಸ್ ವಾರ್ಡ್ ಹಾಸಿಗೆಗಳು, 12 ರಿಕವರಿ ಮತ್ತು 12 ಪೋಸ್ಟ್ ಆಪರೇಟಿವ್ ಹಾಸಿಗೆಗಳು
❖ ಕಾರ್ಡಿಯಾಲಜಿ, ಕಾರ್ಡಿಯೋಥೊರಾಸಿಕ್ ಸರ್ಜರಿ, ವ್ಯಾಸ್ಕುಲಾರ್‌ಶಸ್ತ್ರಚಿಕಿತ್ಸೆ, ಪೀಡಿಯಾಟ್ರಿಕ್ ಕಾರ್ಡಿಯಾಲಜಿ, ರೇಡಿಯಾಲಜಿ, 128 ಸ್ಲೈಸ್ CT ಸ್ಕ್ಯಾನ್, 1.5T MRI, ಅಲ್ಟ್ರಾಸೋನೋಗ್ರಫಿ, ಹೈಟೆಕ್ಪ್ಯಾಥಾಲಜಿ ಮತ್ತು ರಕ್ತ ಬ್ಯಾಂಕ್ ಸೇವೆ ದೊರಕಲಿದೆ.

Tags :