ಕಲಬುರಗಿ: ದರೋಡೆಕೋರನ ಮೇಲೆ ಫೈರಿಂಗ್
ಕಲಬುರಗಿ: ಪೊಲೀಸರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಲು ಮುಂದಾಗಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಸಬ್ ಆರ್ಬನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಗರ ಹೊರವಲಯದ ಜಾಪುರ ಬಳಿ ಮಂಗಳವಾರ ಸಂಜೆ ನಡೆದಿದೆ.
ಇದರೊಂದಿಗೆ ಕಲಬುರಗಿ ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಅಪರಾಧ ಲೋಕ ಬೆಚ್ಚಿ ಬೀಳುವಂತೆ ಮಾಡಿದೆ. ಎಂಎಸ್‌ಕೆಮಿಲ್ ಪ್ರದೇಶದ ಕಟ್ಟಾ ಜಿಲಾನಾಬಾದ್ ಏರಿಯಾದ ನಿವಾಸಿ, ಹಣ್ಣಿನ ವ್ಯಾಪಾರಿ ಇಮ್ತಿಯಾಜ್ ಮಕ್ಬೂಲ್ ಗಿಣಿ(೨೮) ಎಂಬುವವರು ಫೈರಿಂಗ್‌ಕ್ಕೊಳಗಾದ ಆರೋಪಿ.
ಪಿಎಸ್‌ಐ ಬಸವರಾಜ್, ಸಿಬ್ಬಂದಿಯವರಾದ ವಿಠಲ್, ಫಿರೋಜ್ ಜತೆಗೂಡಿ ಆರೋಪಿಯನ್ನು ಬಂಧಿಸುವ ವೇಳೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಪಿಎಸ್‌ಐ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ನಗರ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್ ಸಮೀಪದ ವೈಷ್ಣೋದೇವಿ ಮಂದಿರ ಬಳಿ ಸುಲಿಗೆ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈತನ ವಿರುದ್ಧ ಹೈದರಾಬಾದ್ ಸೇರಿ ನಗರದ ವಿವಿಧ ಠಾಣೆಗಳಲ್ಲಿ ೧೦ ಕೇಸ್ ದಾಖಲಾಗಿವೆ.