For the best experience, open
https://m.samyuktakarnataka.in
on your mobile browser.

ಕಲಬುರಗಿ: ದಲಿತ ಯುವಕನ ಕೊಲೆ ಖಂಡಿಸಿ ಜಿಮ್ಸ್ ಆಸ್ಪತ್ರೆ ಬಳಿ ರಸ್ತೆ ತಡೆ ಮಾಡಿ ಪ್ರತಿಭಟನೆ

09:25 PM Dec 13, 2024 IST | Samyukta Karnataka
ಕಲಬುರಗಿ  ದಲಿತ ಯುವಕನ ಕೊಲೆ ಖಂಡಿಸಿ ಜಿಮ್ಸ್ ಆಸ್ಪತ್ರೆ ಬಳಿ ರಸ್ತೆ ತಡೆ ಮಾಡಿ ಪ್ರತಿಭಟನೆ

ಸಿಗರೇಟು ಬಂಡಲ್ ಕಳವು ಆರೋಪ: ಯುವಕನ ಭೀಕರ ಹತ್ಯೆ
ಕಲಬುರಗಿ: ಸಿಗರೇಟ್ ಪ್ಯಾಕೆಟ್‌ಗಳಿದ್ದ ಬಾಕ್ಸ್ಗಳನ್ನು ಕದ್ದ ಆರೋಪದ ಮೇರೆಗೆ ನಗರದ ಖಾಸಗಿ ಬ್ಲಡ್ ಬ್ಯಾಂಕ್ ಮಾಲೀಕ ತನ್ನ ಬಳಿ ಕೆಲಸಕ್ಕಿದ್ದ ದಲಿತ ಸಮುದಾಯಕ್ಕೆ ಸೇರಿದ ಯುವಕನಿಗೆ ಸಹಚರರೊಂದಿಗೆ ಸೇರಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.
ನಗರದ ಪ್ರಗತಿ ಕಾಲೊನಿ ನಿವಾಸಿ ಶಶಿಕಾಂತ ನಾಟೀಕಾರ (೨೫) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬ್ಲಡ್ ಬ್ಯಾಂಕ್ ಮಾಲೀಕ ಚಂದ್ರಶೇಖರ ಪಾಟೀಲ್, ರಾಹುಲ್ ಪಾಟೀಲ್, ಅಷ್ಟಾಕ್ , ಆದಿತ್ಯ ಮರಾಠಾ ಹಾಗೂ ಓಂಪ್ರಕಾಶ್ ಘೋರವಾಡಿ ಎಂಬ ಆರೋಪಿಗಳ ವಿರುದ್ಧ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರಲ್ಲಿ ಮೂವರನ್ನು ಬಂಧಿಸಲಾಗಿದೆ.
ನಗರದ ಬಸವೇಶ್ವರ ಆಸ್ಪತ್ರೆಯ ಬಳಿ ಬ್ಲಡ್ ಬ್ಯಾಂಕ್ ನಡೆಸುತ್ತಿರುವ ಚಂದ್ರಶೇಖರ ಪಾಟೀಲ್ ಬಳಿ ಶಶಿಕಾಂತ ಎಂಬಾತ ಕೆಲಸ ಮಾಡುತ್ತಿದ್ದ. ೧.೪೦ ಲಕ್ಷ ರೂ. ಮೌಲ್ಯದ ಸಿಗರೇಟ್ ಪ್ಯಾಕೆಟ್‌ಗಳನ್ನು ಶಶಿಕಾಂತ ಕದ್ದಿರುವ ಆರೋಪ ಹೊರಿಸಿದ ಚಂದ್ರಶೇಖರ ಅಷ್ಟು ಹಣವನ್ನು ದಂಡದ ರೂಪದಲ್ಲಿ ಕಟ್ಟುವಂತೆ ಎಚ್ಚರಿಕೆ ನೀಡಿದ್ದನು. ನಂತರ ತನ್ನ ಸಹಚರರನ್ನು ಕರೆಸಿ ಶಶಿಕಾಂತನ ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಹೋದ ಪಾಲಕರು ಮನೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಶಶಿಕಾಂತ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಪ್ರತಿಭಟನೆ: ಈ ಘಟನೆ ಖಂಡಿಸಿ ಮೃತನ ಕುಟುಂಬಸ್ಥರು ಜಿಮ್ಸ್ ಆಸ್ಪತ್ರೆ ಬಳಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದರು. ನಂತರ ಯುವಕನ ಶವವಿಟ್ಟು ಪ್ರತಿಭಟನೆ ನಡೆಸಲು ಯತ್ನಿಸಿದಾಗ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ಮತ್ತು ಎಂ.ಬಿ.ನಗರ ಠಾಣೆ ಪೊಲೀಸರು ಬಂದು ಪ್ರಮುಖ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮನವೊಲಿಸಿದ ಬಳಿಕ ಹೋರಾಟ ಕೈಬಿಟ್ಟಿದ್ದಾರೆ.
ಆರೋಪಿಗಳ ವಿರುದ್ಧ ಕೊಲೆ ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿರುವುದರಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೃತ ಶಶಿಕಾಂತ ಪೋಷಕರಿಗೆ ೪.೧೨ ಲಕ್ಷ ರೂ.ಮೊತ್ತದ ಪರಿಹಾರದ ಚೆಕ್ ವಿತರಿಸಿದರು. ಈ ಕುರಿತು ಮೃತನ ತಂದೆ ಮಲ್ಲಿಕಾರ್ಜುನ ನಾಟೀಕಾರ ದೂರು ನೀಡಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಲು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags :