For the best experience, open
https://m.samyuktakarnataka.in
on your mobile browser.

ಭ್ರಷ್ಟಾಚಾರವಿಲ್ಲದೆ ಕಾಂಗ್ರೆಸ್ ಉಸಿರಾಡದು

11:59 PM Mar 16, 2024 IST | Samyukta Karnataka
ಭ್ರಷ್ಟಾಚಾರವಿಲ್ಲದೆ ಕಾಂಗ್ರೆಸ್ ಉಸಿರಾಡದು

ಕಲಬುರಗಿ: ಕಾಂಗ್ರೆಸ್‌ಗೆ ಲೂಟಿ, ಭ್ರಷ್ಟಾಚಾರಗಳಿಂದ ದೂರವಿರಲಾಗದು. ಕಾಂಗ್ರೆಸ್ಸಿಗರಿಗೆ ಭ್ರಷ್ಟಾಚಾರವೇ ಆಕ್ಸಿಜನ್ ಇದ್ದಂತೆ. ಭ್ರಷ್ಟಾಚಾರವಿಲ್ಲದೇ ಅವರು ಉಸಿರಾಡುವುದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ನಗರದ ಎನ್.ವಿ. ಮೈದಾನದಲ್ಲಿ ಶನಿವಾರ ಮಧ್ಯಾಹ್ನ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಜನರು ಆಕ್ರೋಶಭರಿತರಾಗಿದ್ದು ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಸಲು ಕಾತುರರಾಗಿದ್ದಾರೆಂದರು. ಕಾಂಗ್ರೆಸ್ ಏನೇನೋ ಬದಲಾವಣೆ ಕಂಡಿದೆ, ಆದರೆ ಅದರ ಭ್ರಷ್ಟ ಮನಸ್ಥಿತಿ, ನಿಯತ್ತು ಬದಲಾಗಿಲ್ಲ. ಕರ್ನಾಟಕದ ಜನರು ಜಾಗೃತರಾಗಿದ್ದಾರೆ, ಸಿಟ್ಟು, ಆಕ್ರೋಶ ಹೊರಹಾಕುತ್ತಿದ್ದಾರೆ. ಯಾವುದೇ ಸರ್ಕಾರ ಕೂಡ ಅತ್ಯಲ್ಪ ಅವಧಿಯಲ್ಲಿ ಇಷ್ಟೊಂದು ಹೆಸರು ಕೆಡಿಸಿಕೊಂಡಿಲ್ಲ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಅವರು, ಜನರಿಗೆ ಸತ್ಯದ ಅರಿವಾಗಿದೆ, ಭ್ರಮನಿರಸನಗೊಂಡಿದ್ದಾರೆ ಎಂದರು. ಸುಧಾರಿಸಿಕೊಳ್ಳಲು ಕಾಂಗ್ರೆಸ್‌ಗೆ ಎಷ್ಟೇ ಅವಕಾಶ ಕೊಟ್ಟರೂ ಸುಧಾರಿಸಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರವೇ ರಕ್ಷಣೆ ನೀಡುತ್ತಿದೆ ಎಂದು ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಘಟನೆ ಹಾಗೂ ರಾಮೇಶ್ವರಂ ಕೆಫೆ ಘಟನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ಜನರ ಮನಸ್ಸಿನಲ್ಲಿ ಭಯ ಆವರಿಸಿದೆ ಎಂದರು. ಜನರು ಗಾಬರಿಗೊಂಡು ತತ್ತರಿಸಿದ್ದರೆ ಕಾಂಗ್ರೆಸ್ ಲೂಟಿಯಲ್ಲಿ ತೊಡಗಿದೆ. ಒಮ್ಮೊಮ್ಮೆ ಕಲ್ಲಿದ್ದಲಿನ ಕಪ್ಪು ಹೋಗಬಹುದಾದರೂ ಕಾಂಗ್ರೆಸ್‌ನ ಭ್ರಷ್ಟ ಮನಸ್ಥಿತಿ ಮಾತ್ರ ತೊಲಗುವುದಿಲ್ಲ. ಚುನಾವಣೆಗಳಲ್ಲಿ ದೊಡ್ಡ ಘೋಷಣೆ ಮಾಡಿ ಬಳಿಕ ಮರೆತು ಹಳೆ ಚಾಳಿ ತೋರುತ್ತದೆ ಎಂದರು. ದಕ್ಷಿಣ ಭಾರತದಲ್ಲಿ ಬಲ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಜನರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದೆರಡು ದಿನಗಳಿಂದ ತಾವು ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಅಂದರೆ ನಾಗರಕೋಯಿಲ್, ಹೈದರಾಬಾದ್, ಪಟ್ನಂತಿಟ್ಟಕ್ಕೆ ಹೋಗಿ ರ‍್ಯಾಲಿ, ರೋಡ್ ಶೋ'ಗಳನ್ನು ನಡೆಸಿದ್ದು ಎಲ್ಲ ಕಡೆ ಎಲ್ಲ ವರ್ಗಗಳ ಜನರು ಬಿಜೆಪಿ ಮೇಲೆ ಭಾರಿ ನಿರೀಕ್ಷೆಯೊಂದಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಜನರು ತಮ್ಮ ಮಕ್ಕಳಿಗಾಗಿ ವಿಕಸಿತ ಭಾರತವನ್ನು ಎದುರು ನೋಡುತ್ತಿದ್ದಾರೆ ಎಂದರು.ಕಾಶ್ಮೀರದ ಶ್ರೀನಗರಕ್ಕೂ ಇತ್ತೀಚೆಗೆ ನಾನು ಹೋಗಿ ರ‍್ಯಾಲಿ ನಡೆಸಿದೆ. ಆಗ ಅಲ್ಲಿಯ ಪತ್ರಕರ್ತರೊಬ್ಬರು ಬ್ಲಾಗ್‌ನಲ್ಲಿ ೧೯೯೮ರ ನಂತರ ಶ್ರೀನಗರದಲ್ಲಿ ಇಂಥ ರ‍್ಯಾಲಿ ನಡೆದಿದ್ದು ಇದೇ ಮೊದಲು ಎಂದು ಬರೆದರು. ಶ್ರೀನಗರದಲ್ಲಿ ನೋಡಿದ ದೃಶ್ಯ ತಮಲ್ಲಿ ದೊಡ್ಡ ಆತ್ಮವಿಶ್ವಾಸ ಮೂಡಿಸಿದೆ, ಭಾರತದ ಪ್ರತಿ ಕಡೆಯೂ ಇಂಥ ವಾತಾವರಣ ಇರುವಂತೆ ಮಾಡಬೇಕೆಂಬುದೇ ತಮ್ಮ ಸಂಕಲ್ಪವಾಗಿದೆ ಎಂದರು.
ಫ್ಯಾಮಿಲಿ ಎಟಿಎಂ
ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಫ್ಯಾಮಿಲಿ ಎಟಿಎಂ ಆಗಿದೆ. ಇಲ್ಲಿ ಅಧಿಕಾರದಲ್ಲಿದ್ದವರು ರಾಜ್ಯದ ಜನರ ಶ್ರಮ, ದುಡಿಮೆಯ ದುಡ್ಡನ್ನು ಲೂಟಿ ಹೊಡೆದು ದೆಹಲಿಯವರ ತಿಜೋರಿ ತುಂಬುತ್ತಿದ್ದಾರೆ. ಇಲ್ಲಿ ದುರಾಡಳಿತ ಬೇರುಬಿಟ್ಟಿದೆ. ಕಾಂಗ್ರೆಸ್ ಇಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ದೆಹಲಿಯಲ್ಲಿ ಫೈನಾನ್ಸ್ ವ್ಯವಹಾರ ಶುರುವಾಗುತ್ತದೆ. ಕಾಂಗ್ರೆಸ್‌ನವರು ಭರವಸೆ ನೀಡೋದೊಂದು ಮಾಡೋದೇ ಬೇರೊಂದು, ಉಚಿತ ವಿದ್ಯುತ್ ಅಂದ್ರು, ಬಳಿಕ ಕಟ್ ಮಾಡಿ ಜನರನ್ನು, ರೈತರನ್ನು ಅಂಧಕಾರದಲ್ಲಿರುವಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ರಾಜ್ಯದ ೫೫ ಲಕ್ಷ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ವರ್ಷಕ್ಕೆ ಆರು ಸಾವಿರ ರೂ. ನೀಡುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಅದಕ್ಕೆ ಹೆಚ್ಚುವರಿಯಾಗಿ ಇನ್ನೂ ೪ ಸಾವಿರ ರೂ. ಸೇರಿಸಿ ಒಟ್ಟು ಹತ್ತು ಸಾವಿರ ರೂ. ಸಿಗುವಂತೆ ಮಾಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದ ೪ ಸಾವಿರ ರೂ.ಗಳನ್ನು ಬಂದ್ ಮಾಡಿದೆ ಎಂದು ಟೀಕಿಸಿದರು.ವಿದ್ಯಾರ್ಥಿ-ಯುವಜನರ ಸ್ಕಾಲರ್‌ಶಿಪ್ ನಿಲ್ಲಿಸಿದ್ದಾರೆ. ಕಡಿತಗೊಳಿಸಿದ್ದಾರೆ. ಇಂಥವರು ಮತ್ತೆ ಸರ್ಕಾರ ಮಾಡಲಾಗದು. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಬೇಕೆಂದುಕೊಂಡಿದ್ದಾರೆ ಎಂದರು.