For the best experience, open
https://m.samyuktakarnataka.in
on your mobile browser.

ಹಣೆಗೆ ಕುಂಕುಮ ಬೇಡವೆಂದ ಅಶೋಕ್

11:07 PM Mar 25, 2024 IST | Samyukta Karnataka
ಹಣೆಗೆ ಕುಂಕುಮ ಬೇಡವೆಂದ ಅಶೋಕ್

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್‌ನಲ್ಲಿರುವ ಬಿಜೆಪಿ ಕಚೇರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿದ್ದ ವೇಳೆಗೆ ಪಕ್ಷದ ಹಿರಿಯ ಮುಖಂಡರೊಬ್ಬರು ಅವರ ಹಣೆಗೆ ಕುಂಕುಮ ಹಚ್ಚಲು ಮುಂದಾದಾಗ, ಅಶೋಕ್ ಅದಕ್ಕೆ ಅವಕಾಶ ನೀಡದೆ, ಬೇಡ ಎನ್ನುವ ಮೂಲಕ ತಡೆದಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಪಕ್ಷ ನಾಯಕನ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ.
ಈ ಬಗ್ಗೆ `ಎಕ್ಸ್'ನಲ್ಲಿ ವೀಡಿಯೋ ಹಂಚಿಕೊಂಡಿರುವ ಕಾಂಗ್ರೆಸ್, ಆರ್.ಅಶೋಕ್ ಅವರಿಗೆ ಕುಂಕುಮ ಎಂದರೆ ಅಲರ್ಜಿಯೇ, ಅಸಹ್ಯವೇ? ಎಂದು ಪ್ರಶ್ನಿಸಿದೆ. ಕುಂಕುಮ ಹಚ್ಚಲು ಬಂದರೆ ಹೌಹಾರಿ ನಿರಾಕರಿಸುವ ಅಶೋಕ್ ಅವರ ಮೂಲಕ ಬಿಜೆಪಿಯವರ ಬೂಟಾಟಿಕೆಯ ಹುಸಿ ಧಾರ್ಮಿಕತೆ ನಾಟಕ ಬಯಲಾಗಿದೆ ಎಂದು ಹೇಳಿದೆ.
ಕೇಸರಿ ಶಾಲು, ಕುಂಕುಮ ಮುಂತಾದವುಗಳು ಬಿಜೆಪಿಗರ ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಟೂಲ್ ಕಿಟ್ ಹೊರತು ಬಿಜೆಪಿಗರ ಅಸಲಿ ಆಚರಣೆಯಲ್ಲ. ಬೊಮ್ಮಾಯಿಯವರು ಕುಂಕುಮಾವನ್ನು ಉಜ್ಜಿ ಉಜ್ಜಿ ಅಳಿಸಿಕೊಂಡರೆ, ಅಶೋಕ್ ಹಚ್ಚಿಕೊಳ್ಳಲು ನಿರಾಕರಿಸುತ್ತಾರೆ, ನಿಮ್ಮ ನಾಯಕರಿಗೆ ಕುಂಕುಮಕ್ಕಿಂತ ಮೇಕಪ್ ಮುಖ್ಯವೇ ಎಂದು ರಾಜ್ಯ ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.