ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಲರ್ ಕಲರ್ ಕೈ ಕಾಲು

02:56 AM May 29, 2024 IST | Samyukta Karnataka

ವಿಶ್ವನಿಗೆ ಬಣ್ಣದ ವೇಷ ಎಂದರೆ ಬಲು ಪ್ರಿಯ. ಯಕ್ಷಗಾನದಲ್ಲಿ ಎಲ್ಲರ ಚಿತ್ತ ಗೆಲ್ಲುವ ರಾಕ್ಷಸಪಾತ್ರ ಅದ್ಭುತ. ಪ್ರೇಕ್ಷಕರಿಗೆ ನಿದ್ದೆಯ ಜೋಂಪು ಹತ್ತಿರುವಾಗ ಮಧ್ಯರಾತ್ರಿಯಲ್ಲಿ ಈ ಪಾತ್ರ ಬರುತ್ತೆ. ಎತ್ತರದ ಧ್ವನಿಯಲ್ಲಿ ಮಾತಾಡುವ ತಮ್ಮದೇ ರೀತಿಯಲ್ಲಿ ಕುಣಿಯುವ ರಾಕ್ಷಸ ಪಾತ್ರಗಳೆಂದರೆ ವಿಶ್ವನಿಗೆ ಬಹಳವೇ ಇಷ್ಟ. ಬಣ್ಣದ ವೇಷದ ಎಂಟ್ರಿಗೆ ನಿದ್ದೆಯಲ್ಲಿದ್ದವರೆಲ್ಲ ಎದ್ದು ಮೈ ಕೊಡವಿ ಜಾಗೃತರಾಗುತ್ತಾರೆ. ಅಷ್ಟೇ ಅಲ್ಲ, ಮೇಳ ನಡೆಯುವ ರಸ್ತೆಯಲ್ಲಿನ ಮನೆಗಳಲ್ಲಿ ಮಲಗಿರುವ ಜನ ಕೂಡ ಚಂಡೆ, ಮದ್ದಳೆಯ ನಿನಾದಕ್ಕೆ ಎಚ್ಚರ ಆಗಿ ಮುಗುಳ್ನಗುತ್ತಾರೆ.
ಬಣ್ಣದ ವೇಷದಲ್ಲಿ ಎಲ್ಲಾ ಬಣ್ಣಗಳನ್ನೂ ಬಳಸುತ್ತಾರೆ ಎಂದು ವಿಶ್ವ ಹೇಳಿದ. ಮುಖದ ಮೇಕಪ್‌ಗೆ ಕಡುನೀಲಿ, ಕೆಂಪು, ಹಳದಿ, ಹಸಿರು ಎಲ್ಲಾ ಬಣ್ಣಗಳು ಇರುತ್ತವೆ. ಡಾರ್ಕ್ ಕರ‍್ಸ್ ಬಳಸಿದಷ್ಟೂ ಮುಖದ ರೌದ್ರತೆ ಹೆಚ್ಚುತ್ತದೆ. ಕಣ್ಣುಗಳು ವಿಶಾಲವಾಗಿ ಮುಖದಲ್ಲಿ ರಾಕ್ಷಸ ಕಳೆ ತನಗೆ ತಾನೇ ಬರುತ್ತದೆ. ಜಂಪೆ ತಾಳಕ್ಕೆ ಜಂಪ್ ಮಾಡಿ ಕುಣಿಯುವಾಗ ವೀರ, ಭೀಭತ್ಸ ರಸಗಳ ಮಿಶ್ರಣ ಪಾತ್ರದಲ್ಲಿ ಎದ್ದು ಕಾಣುತ್ತದೆ.
ವಿಶ್ವ ವಾರ ಕಾಲ ರಜಾ ಹಾಕಿ ಯಕ್ಷಗಾನ ಸಪ್ತಾಹ ನೋಡಲು ಉತ್ತರ ಕರ್ನಾಟಕಕ್ಕೆ ಹೋಗಿ ಬಂದ. ಯಕ್ಷಗಾನ ಪ್ರಸಂಗಗಳನ್ನು ನೋಡಿ ಆನಂದಿಸಿ ಬಂದ ನಂತರ ಅವನ ಆರೋಗ್ಯದಲ್ಲಿ ವಿಚಿತ್ರ ಸಮಸ್ಯೆ ಶುರುವಾಗಿತ್ತು. ವಿಶ್ವನ ಕಲರ್ ಕಲರ್ ಕೈಕಾಲುಗಳನ್ನು ಮಡದಿ ವಿಶಾಲು ನೋಡಿ ಗಾಬರಿ ಪಟ್ಟಳು. ವಿಶ್ವನ ಆರೋಗ್ಯ ವಿಚಾರಿಸಲು ನಾನು ಹೋದಾಗ ವಿಶಾಲು ಅಳುತ್ತಿದ್ದಳು.
“ಏನಾಯ್ತು ನನ್ನ ಗೆಳೆಯನಿಗೆ?” ಎಂದೆ.

“ಒಂದು ವಾರ ಯಕ್ಷಗಾನ ಪ್ರಸಂಗಗಳು ನೋಡಿ ಬಂದ ಮೇಲೆ ಅವರ ದೇಹದ ಚರ್ಮ ಕಲರ್ ಕಲರ್ ಆಗಿದೆ”
“ಬಣ್ಣ ಬದಲಾವಣೆಯಾ?” ಎಂದೆ ಆಶ್ಚರ್ಯದಿಂದ.
“ನೀವೇ ನೋಡಿ, ದೇಹದ ಪೂರ್ವಭಾಗ ಚೀನೀಯರ ಥರ ತಿಳಿ ಹಳದಿ ಇದೆ. ಪಶ್ಚಿಮ ಭಾಗ ಒಂಟೆ ಕರ‍್ರು, ತಲೆ ಮತ್ತು ಮುಖ ಇಂಗ್ಲೀಷರ ಥರ ಬೆಳ್ಳಗಿದೆ. ಇನ್ನು ಕಾಲುಗಳೋ ಆಫ್ರಿಕಾ ಟೈಪಲ್ಲಿ ಸಖತ್ ಕಪ್ಪು. ಇದ್ದಕ್ಕಿದ್ಹಾಗೇ ಈ ರೀತಿ ಚರ್ಮದ ಬಣ್ಣ ಬದಲಾವಣೆ ಹೆಂಗಾಯ್ತು?” ಎಂದು ವಿಶಾಲು ಗೋಳಾಡಿದಳು.
ಬಣ್ಣದ ಲೋಕದ ಕನಸುಗಳಲ್ಲಿ ಮುಳುಗಿದ್ದ ವಿಶ್ವನನ್ನು ಮಾತಾಡಿಸಿದಾಗ ಅವನು ನನ್ನನ್ನೇ ದಬಾಯಿಸಿದ.
“ಮನುಷ್ಯನಿಗೆ ಲಲಿತಕಲೆಗಳು, ಯಕ್ಷಗಾನ ನಾಟಕಗಳು ಬೇಕು. ಪ್ರಾಣಿಗೂ ಮನುಷ್ಯನಿಗೂ ಅದೇ ಇರೋದು ವ್ಯತ್ಯಾಸ. ಹಸು, ಎಮ್ಮೆಗಳು ಯಕ್ಷಗಾನಕ್ಕೆ ಬರೊಲ್ಲ, ಮನುಷ್ಯರಾದ್ರೆ ಹೋಗ್ತಾರೆ” ಎಂದು ಚುಚ್ಚಿದ.
“ನೀನು ಪ್ರವಾಸ ಮುಗಿಸಿ ಬಂದ್ಮೇಲೆ ಯಾಕೆ ಮೈ ಕೈ ಕಲರ್ ಚೇಂಜಾಗ್ತಾ ಇದೆ?” ಎಂದೆ.
“ನನಗೆ ಬಣ್ಣದ ವೇಷ ಎಂದರೆ ತುಂಬಾ ಇಷ್ಟ. ಪತ್ರೊಡೆಗೆ ಜೈ!” ಎಂದ.
“ಅದೇ ಹ್ಯಾಂಗ್ ಓವರ್‌ನಲ್ಲಿದ್ದೀಯಾ?”
“ಅಗೋ, ವೀರಭದ್ರ ಬಂದ. ಮಹಿರಾವಣ ಬಂದ, ಬಾಣಾಸುರ ಬಂದ” ವಿಶ್ವ ರಾಕ್ಷಸರ ಹೆಸರುಗಳನ್ನು ಹೇಳುತ್ತಾ ಅದೇ ರೀತಿ ಕುಣಿಯಲು ಶುರು ಮಾಡಿದ.
ವಿಶಾಲು ಬಲವಂತ ಮಾಡಿ ಅವನನ್ನು ಸೆಳೆದು ಕುರ್ಚಿ ಮೇಲೆ ಕೂರಿಸಿದಳು.
“ಹುಚ್ಚನ ಥರ ಆಡಬೇಡ ವಿಶ್ವ, ಏನಾಗಿದೆ ನಿನಗೆ?” ಎಂದೆ.
ಅದೇ ವೇಳೆಗೆ ವೈದ್ಯರು ಬಂದರು. ವಿಶ್ವನನ್ನು ಚೆಕ್ ಮಾಡಿದರು.
“ಯಕ್ಷಗಾನ ಅಂಬೋದು ಮನೋಲ್ಲಾಸದ ಕಾರ್ಯಕ್ರಮ! ಶರೀರಕ್ಕೆ, ತಲೆಗೆ ಆನಂದ ತುಂಬುವ ಕಲಾ ಪ್ರಕಾರ. ವಿಶ್ವನಾಥ ಪ್ರಸಂಗಗಳು ನೋಡಿದ್ದಕ್ಕೂ ಈ ಕಾಯಿಲೆಗೂ ಸಂಬಂಧವೇ ಇಲ್ಲ” ಎಂದು ಪಾಸಿಟಿವ್ ರಿಪೋರ್ಟ್ ಕೊಟ್ಟರು.
“ಚರ್ಮದ ಕಲರ್ ಬದಲಾಗಿದ್ದಕ್ಕೆ ಕಾರಣ?”
“ಮೆಲಾನಿನ್ ಚರ್ಮದ ಬಣ್ಣ ನಿರ್ಧರಿಸುತ್ತೆ. ಇಲ್ಲಿ ಚರ್ಮದ ಮೇಲ್ಭಾಗದಲ್ಲಿ ಮಾತ್ರ ಬಣ್ಣ ಕಾಣುತ್ತಿದೆ ಅಷ್ಟೇ. ಕಾಮಾಲೆ ಬಂದ್ರೆ ಶರೀರ ಹಳದಿ ಆಗೋದು ಸಹಜ. ಸೌತ್ ಆಫ್ರಿಕಾಗೆ ಹೋಗಿ ಬಂದ್ರೆ ಕಪ್ಪಾಗ್ತೀವಿ. ಅದೇ ರೀತಿ ಲಂಡನ್ನು, ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಿ ಬಂದ್ರೆ ಬೆಳ್ಳಗಾಗ್ತೀವಿ” ಎಂದರು ಡಾಕ್ಟರು.
“ಆದ್ರೆ ಇಲ್ಲಿ ದೇಹದ ಪೂರ್ವಕ್ಕೇ ಒಂದು ಬಣ್ಣ, ಪಶ್ಚಿಮಕ್ಕೇ ಒಂದು ಬಣ್ಣ?” ಎಂದಾಗ ವಿಶ್ವ `ಪತ್ರೊಡೆ, ಪತ್ರೊಡೆ’ ಎಂದು ಮತ್ತೆ ಕೂಗಿದ.
ವಿಶಾಲು ಹಣೆ ಚೆಚ್ಚಿಕೊಂಡಳು.
“ಯಾವಾಗ ನೋಡಿದ್ರೂ ಪತ್ರೊಡೆ ಅಂತ ರ‍್ತಾರೆ. ಮಾಡಿ ಬಡಿಸೋಣ ಅಂದ್ರೆ ಕೆಸುವಿನ ಎಲೆ ಸಿಗ್ತಿಲ್ಲ. ನುಚ್ಚಿನುಂಡೆ ಮಾಡ್ಕೊಟ್ಟೆ. ನುಚ್ಚಿನುಂಡೆ ಬೇಡ, ಪತ್ರೊಡೆ ಬೇಕು” ಅಂತಾರೆ.
ಡಾಕ್ಟರ್‌ಗೆ ವಿಶ್ವನ ಸಮಸ್ಯೆ ಅರ್ಥವಾಯಿತು.
“ಟೀವೀನ ಜಾಸ್ತಿ ನೋಡ್ತೀರಾ?” ಎಂದಾಗ ವಿಶ್ವ ಅಭಿಮಾನದಿಂದ ಹೇಳಿದ.
“ಹೌದು, ಡಾಕ್ಟರ್ ಟಿ.ವಿ. ನೋಡ್ತರ‍್ತೀನಿ. ಯರ‍್ಗೂ ಗೊತ್ತಾಗ್ದೆ ಇರೋ ಒಂದು ಹೊಸ ವಿಷ್ಯ ಕೆಲವು ದಿನಗಳ ಹಿಂದೆ ನನ್ಗೆ ಗೊತ್ತಾಯ್ತು. ಭಾರತದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ಜನರಿದ್ದಾರಂತೆ. ಒಂದ್ಕಡೆ ಹಳದಿ ಬಣ್ಣದವರು, ಒಂದ್ಕಡೆ ಕಪ್ಪು ಬಣ್ಣದವರು, ಒಂದ್ಕಡೆ ಬಿಳಿ ಬಣ್ಣದವರು, ಇದು ಪತ್ರೊಡೆಯ ಈ ಶತಮಾನದ ಸಂಶೋಧನೆ. ಮಂಗನಿಂದ ಮಾನವ ಆದ ಅಂತ ಹೇಳಿದ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್‌ನ ಬಿಟ್ಟರೆ ನೆಕ್ಸ್ಟ ನಮ್ಮ ಪತ್ರೊಡೇನೇ” ಎಂದ.
ಈ ಸಮಸ್ಯೆಗೆ ಪರಿಹಾರವಿದೆ ಎಂಬುದು ವೈದ್ಯರಿಗೆ ಖಾತ್ರಿಯಾಯಿತು.
“ನೋಡೀಮ್ಮಾ ಯಾರೋ ಒಬ್ಬ ವ್ಯಕ್ತಿ ಭಾರತೀಯರ ಬಗ್ಗೆ ಕೊಟ್ಟಿದ್ದ ಒಂದು ಲಘುವಾದ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಅದೇ ಹೇಳಿಕೆ ನಿನ್ನ ಗಂಡನ ಮೇಲೆ ಕೆಟ್ಟ ಪರಿಣಾಮ ಬೀರಿದೆ”
“ತಲೆ ಕೆಟ್ಟ ವ್ಯಕ್ತಿಗಳು ಕೊಡೋ ಆಧಾರ ರಹಿತ ಹೇಳಿಕೇನ ಯಾಕೆ ಇವರು ಸೀರಿಯಸ್ ಆಗಿ ತಗೋಬೇಕು?” ಎಂದಳು ವಿಶಾಲು.
“ಯಾರಿಗೂ ಗೊತ್ತಿಲ್ದೆ ಇರೋ ವಿಷ್ಯಗಳ್ನ ದೊಡ್ಡ ಮನುಷ್ಯರು ಹೇಳಿದಾಗ ಗಾಬರಿ ಆಗುತ್ತದೆ” ಎಂದು ಕಿಟ್ ತೆಗೆದ ವೈದ್ಯರು ಬಾಟೆಲ್, ಹತ್ತಿ ರೆಡಿ ಮಾಡಿದರು. ಅನಂತರ ಸ್ಪಿರಿಟ್‌ನಲ್ಲಿ ಅದ್ದಿದ ಹತ್ತಿಯಿಂದ ಚರ್ಮವನ್ನು ಉಜ್ಜಿ ಪರೀಕ್ಷೆ ಮಾಡಿದ್ರು. ತಪಾಸಣೆ ಪೂರ್ಣ ಫಲ ನೀಡಿತ್ತು. ಬಣ್ಣ ಮಾಯ ಆಗಿತ್ತು.
ಪತ್ರೊಡೆ ಹೇಳಿಕೆಯಿಂದ ಮಾನಸಿಕವಾಗಿ ಖಿನ್ನನಾದ ವಿಶ್ವ ತನಗೆ ತಾನೇ ಬಣ್ಣ ಬಳ್ಕೊಳ್ತಾನೆ ಎಂಬುದು ತಿಳಿಯಿತು. ವಿಶ್ವ ಟೂರ್‌ಗೆ ತೆಗೆದುಕೊಂಡು ಹೋಗಿದ್ದ ಕಿಟ್‌ಬ್ಯಾಗನ್ನು ಚೆಕ್ ಮಾಡಿದಾಗ ಅದರಲ್ಲಿ ಮೇಕಪ್‌ಗೆ ಬಳಸುವ ಬಣ್ಣಗಳು ಇದ್ದವು.
“ತಪ್ಪು ಹೇಳಿಕೆ ಮನಕ್ಕೆ ಘಾಸಿ ಉಂಟು ಮಾಡಿದೆ. ವಿಶ್ವ ತಾನೇ ತಂದ ಬಣ್ಣಗಳನ್ನು ತನ್ನ ಶರೀರಕ್ಕೆ ಬಳ್ಕೊಂಡಿದ್ದಾರೆ”
“ಇದಕ್ಕೆ ಪರಿಹಾರ ಡಾಕ್ಟರ್?”
“ತಲೆಗೆ ಹರಳೆಣ್ಣೆ ಹಚ್ಚಿ ಎರಡು ಗಂಟೆ ನೆನೆ ಹಾಕಿ ಬಿಸಿ ಬಿಸಿ ನೀರಿಂದ ಅಭ್ಯಂಜನ ಮಾಡಿಸಬೇಕು. ಸೀಗೇಕಾಯಿ ಪುಡಿಯಿಂದ ಗ್ರಹಚಾರ ಬಿಡಿಸಬೇಕು. ಪತ್ರೊಡೆ ಹೇಳಿಕೆ ಮತ್ತೆ ನೆನಪಾಗದಂತೆ ಮನೆ ಮಂದಿ ಎಚ್ಚರಿಕೆ ವಹಿಸಬೇಕು” ಎಂದು ಪ್ರಿಸ್‌ಕ್ರಿಪ್ಷನ್ ಕೊಟ್ಟರು.
ಮೂರು ದಿನಗಳ ನಂತರ ಹೋದಾಗ ವಿಶ್ವ ಮಾಮೂಲಾಗಿದ್ದ. ಪತ್ರೊಡೇನ ಮರೆತು ತೈರ್‌ವಡೆ ತಿನ್ನುತ್ತಾ ಕುಳಿತಿದ್ದ!

Next Article