For the best experience, open
https://m.samyuktakarnataka.in
on your mobile browser.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ ನಡೆಸಲು ಸೂಚನೆ

01:05 AM Feb 02, 2024 IST | Samyukta Karnataka
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ ನಡೆಸಲು ಸೂಚನೆ

ಶಿವಮೊಗ್ಗ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತೆ ಪ್ರತಿದಿನ ಸಂಜೆ ಅಥವಾ ರಜಾ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಗುರುವಾರ ನಗರದ ಹೊರವಲಯದಲ್ಲಿರುವ ತುಂಗಾನಗರದ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಮಹತ್ವವನ್ನು ಅರಿತ ಮುಸ್ಲಿಂ ಸಮುದಾಯದವರು ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ತೊಡಗಿಸುತ್ತಿದ್ದಾರೆ. ಮಕ್ಕಳೂ ಕೂಡ ಓದಿನಲ್ಲಿ ಅಸಾಧಾರಣ ಪ್ರತಿಭಾ ಸಂಪನ್ನರಾಗಿರುವುದು ವಿಶೇಷವಾಗಿದೆ ಎಂದರು.
ಇಂದು ದೇಶದಲ್ಲಿ ಜಾತಿ-ಧರ್ಮ ಭಾಷೆ, ಬಣ್ಣ ಮೀರಿ ಬೆಳೆಯಲು ಶಿಕ್ಷಣ ಅಗತ್ಯವಾಗಿದೆ ಎಂದ ಅವರು, ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು ಅತ್ಯಂತ ಕ್ರಿಯಾಶೀಲರು ಹಾಗೂ ಪ್ರತಿಭಾವಂತರಿದ್ದಾರೆ. ನಾಡಿನ ಸಮಸ್ತ ಪೋಷಕರು ತಮ್ಮ ಮಕ್ಕಳ
ವಿದ್ಯಾಭ್ಯಾಸವನ್ನು ಸರ್ಕಾರಿ ಶಾಲೆಗಳಲ್ಲಿ ನಡೆಸಲು ಮುಂದಾಗುವಂತಹ ರೀತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಅಭಿವೃದ್ಧಿಪಡಿಸಲಾಗುವುದು ಎಂದರು.
ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಕಟ್ಟಡ, ಶೌಚಾಲಯ, ಅಡುಗೆ ಕೋಣೆ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲು ವಿಶೇಷ ಗಮನಹರಿಸಲಾಗುವುದು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಶಾಲೆಯ ಸರ್ವಾಂಗೀಣ ವಿಕಾಸಕ್ಕೆ ಗಮನಹರಿಸುವಂತೆ ಸೂಚಿಸಿದರು.