ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಲ್ಯಾಣಕ್ಕೆ ಸಚಿವಾಲಯ ಸಂಪುಟದ ನಿರ್ಧಾರ ಸೂಕ್ತ

02:04 AM Sep 18, 2024 IST | Samyukta Karnataka

ಕಲಬುರ್ಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ತೀರ್ಮಾನಿಸಿರುವುದು ಸೂಕ್ತ ನಿರ್ಧಾರ. ಇದು ಇಲ್ಲಿಯ ಜನರ ಬಹುದಿನಗಳ ಕನಸೂ ಆಗಿತ್ತು. ಈಗ ಸಚಿವಾಲಯ ರಚನೆಯಾದ ಮೇಲೆ ಅದಕ್ಕೆ ತಕ್ಕಂತೆ ಅನುದಾನ ಹೆಚ್ಚಿಸುವುದೂ ಅಗತ್ಯ. ಸಂಪುಟದ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರದೇಶಕ್ಕೆ ೫ ಸಾವಿರ ಕೋಟಿ ರೂ. ನೆರವು ನೀಡುವುದಾಗಿ ಪ್ರಕಟಿಸಿ ಅದಕ್ಕೆ ತಕ್ಕಂತೆ ಕೇಂದ್ರ ಅನುದಾನವನ್ನು ಸಮಪಾಲು ನೀಡಬೇಕು ಎಂದು ಕೇಳಿರುವುದು ಸಮರ್ಪಕವಾಗಿದೆ. ಸಂವಿಧಾನದಲ್ಲಿ ೩೭೧ಜೆ ಸೇರ್ಪಡೆ ಮಾಡಿದರ ಮೇಲೆ ಕೇಂದ್ರ ಬಿಡಿಗಾಸು ನೀಡಿಲ್ಲ. ಇದು ರಾಜಕೀಯ ವಿಷಯವಾಗುವುದು ಬೇಡ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮನ್ವಯದಿಂದ ಕೆಲಸ ಮಾಡಿದಲ್ಲಿ ಪ್ರಗತಿಯ ಹಾದಿ ಸುಲಭ.
ಬಜೆಟ್‌ನಲ್ಲಿ ನಮೂದಿಸಿದ್ದ ಎಲ್ಲ ಯೋಜನೆಗಳಿಗೆ ಈಗ ಅನುಮೋದನೆ ನೀಡಲಾಗಿದೆ. ಇಲ್ಲಿಗೆ ಸಂಬಂಧಿಸಿದ ಒಟ್ಟು ೪೬ ಯೋಜನೆಗಳಿಗೆ ೧೧೭೭೦ ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಇದು ಕಾಲಮಿತಿಯಲ್ಲಿ ಕಾರ್ಯಗತವಾಗಬೇಕು. ಇಡೀ ರಾಜ್ಯದ ಆದ್ಯತೆ ಬಂದಾಗ ಕಲ್ಯಾಣ ಕರ್ನಾಟಕ ಕೊನೆಯಲ್ಲಿ ಬರುತ್ತದೆ. ಬೀದರ್ ಮತ್ತು ರಾಯಚೂರು ನಗರಸಭೆಯನ್ನು ಮಹಾನಗರಪಾಲಿಕೆ ಮಾಡುತ್ತಿರುವುದು ಸ್ವಾಗತಾರ್ಹ. ಅದಕ್ಕೆ ತಕ್ಕಂತೆ ಅನುದಾನ ಹೆಚ್ಚಾಗಬೇಕು. ಭೀಮಾ ನದಿಗೆ ಮತ್ತೊಂದು ಬ್ಯಾರೇಜ್ ನಿರ್ಮಿಸುವುದು ಉತ್ತಮ ನಿರ್ಧಾರ. ಈ ಪ್ರದೇಶದ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವುದು ಅಗತ್ಯ. ಅದರಿಂದ ರೋಗರುಜಿನಗಳನ್ನು ನಿಯಂತ್ರಿಸಬಹುದು.
ಇಲ್ಲಿಯ ಜನ ಪ್ರತಿನಿಧಿಗಳು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದರಿಂದ ಹಲವು ಬೆಳವಣಿಗೆ ಕಾಣಲು ಸಾಧ್ಯವಾಗಿದೆ. ಈಗ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಸಂವಿಧಾನದಲ್ಲಿ ೩೭೧ಜೆ ವಿಧಿ ಸೇರ್ಪಡೆಗೊಳ್ಳುವಂತೆ ಮಾಡಿದ ಮೇಲೆ ಈ ಭಾಗದಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗಲು ಕಾರಣವಾಯಿತು. ಅಲ್ಲದೆ ರೈಲ್ವೆ ವಲಯದಲ್ಲೂ ಸಾಕಷ್ಟು ಪ್ರಗತಿ ತಂದರು. ಹಿಂದೆ ಮುಖ್ಯಮಂತ್ರಿಯಾಗಿದ್ದ ವಿರೇಂದ್ರ ಪಾಟೀಲ್, ಧರಂಸಿಂಗ್ ಹಾಗೂ ಶಿಕ್ಷಣ ಸಚಿವರಾಗಿದ್ದ ಅಣ್ಣಾರಾವ್ ಗಣಮುಖಿ ಅವರ ಸೇವೆಯನ್ನು ಈಗಲೂ ಜನ ಸ್ಮರಿಸುತ್ತಾರೆ. ಒಂದು ಕಡೆ ಸೊಲ್ಲಾಪುರ ಮತ್ತೊಂದು ಕಡೆ ಹೈದರಾಬಾದ್ ನಗರಗಳ ಬೆಳವಣಿಗೆಗೆ ಅನುಗುಣವಾಗಿ ಇಲ್ಲಿಯೂ ಬದಲಾವಣೆ ಬರಬೇಕಿದೆ. ಮೆಗಾ ಟೆಕ್ಸ್ಟೈಲ್ ಪಾರ್ಕ್, ಸ್ವಾರ್ಟ್ ಸಿಟಿ ಯೋಜನೆಗಳು ಬಂದಲ್ಲಿ ಸರ್ವಾಂಗೀಣ ಬದಲಾವಣೆ ಬರುತ್ತದೆ. ಕಲಬುರ್ಗಿಯ ಹಳ್ಳಿಯ ಜನ ಕೂಲಿಗಾಗಿ ಗುಳೇ ಹೋಗುವುದು ತಪ್ಪಬೇಕು. ಶಿಕ್ಷಣಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತಿವೆ. ಆದರೆ ಶಿಕ್ಷಣದ ಗುಣಮಟ್ಟ ಉತ್ತಮಗೊಂಡಿಲ್ಲ. ಹಳ್ಳಿಯ ಪ್ರತಿಭಾವಂತರು ಹೊಸ ಅವಕಾಶಗಳಿಗಾಗಿ ಬೇರೆ ನಗರಗಳಿಗೆ ವಲಸೆ ಹೋಗುವುದು ತಪ್ಪಬೇಕು. ಎಲ್ಲ ಸರ್ಕಾರಗಳು ಹಲವು ಘೋಷಣೆಗಳನ್ನು ಮಾಡುತ್ತವೆ. ಆದರೆ ಅನುಷ್ಠಾನದ ಪ್ರಶ್ನೆ ಬಂದಾಗ ಸಕಾಲಕ್ಕೆ ಹಣ ಬಿಡುಗಡೆ ಮಾಡುವುದಿಲ್ಲ. ಪ್ರತಿಯೊಂದು ಘೋಷಿತ ಯೋಜನೆಗೂ ನಿಗದಿತ ಕಾಲಾವಧಿಯನ್ನು ಸರ್ಕಾರ ಪೂರ್ಣಗೊಳಿಸಬೇಕು. ಹಲವು ವರ್ಷಗಳು ಯೋಜನೆಗಳು ಪೂರ್ಣಗೊಳ್ಳದೆ ಇರುವುದರಿಂದ ಯೋಜನೆಗೆ ಆಗುವ ಒಟ್ಟು ವೆಚ್ಚ ಅಧಿಕಗೊಳ್ಳುವುದಲ್ಲದೆ ಜನರಿಗೆ ನಿಗದಿತ ಲಾಭ ಸಿಗುವುದಿಲ್ಲ. ಹಳೆ ಮೈಸೂರು ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ನೀರಾವರಿ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದವು. ಕಲ್ಯಾಣ ಕರ್ನಾಟಕ ಆ ದೃಷ್ಟಿಯಿಂದ ಅಭಿವೃದ್ಧಿ ಕಂಡಿಲ್ಲ. ಅದರಿಂದ ಸರ್ಕಾರ ಹೆಚ್ಚು ಹಣಕಾಸು ಒದಗಿಸುವುದಲ್ಲದೆ ಎಲ್ಲ ಸಚಿವರು ಕಡ್ಡಾಯವಾಗಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ಭೇಟಿ ನೀಡುವಂತೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊರತುಪಡಿಸಿದರೆ ಬೇರೆಯವರು ಬರುವುದೇ ಇಲ್ಲ. ಇಂಥ ಉದಾಸೀನ ಮೊದಲು ಹೋಗಬೇಕು. ಕಲ್ಯಾಣ ಕರ್ನಾಟಕದ ಬೆಳವಣಿಗೆಯಲ್ಲಿ ಇಡೀ ಸಮಗ್ರ ಕರ್ನಾಟಕದ ಅಭಿವೃದ್ಧಿ ಅಡಗಿದೆ ಎಂಬ ಭಾವನೆ ಮೊದಲು ಮೂಡಬೇಕು. ಸಚಿವ ಸಂಪುಟ ಪ್ರತಿ ವರ್ಷ ನಡೆಯಬೇಕು. ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುವ ಹಾಗೆ ಕಲಬುರ್ಗಿಯಲ್ಲೂ ಅಧಿವೇಶನ ನಡೆಸುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಕಲ್ಯಾಣ ಕರ್ನಾಟಕ ಕೂಡ ರಾಜ್ಯ ಬೆಳವಣಿಗೆ ಸಾಕಷ್ಟು ಕೊಡುಗೆ ನೀಡಿದೆ. ಇಲ್ಲಿಯ ನದಿಗಳು ರಾಜ್ಯ ಕೃಷಿ ಅಭಿವೃದ್ಧಿಗೆ ಕಾರಣವಾಗಿದೆ ಎಂಬುದನ್ನು ಮರೆಯಬಾರದು. ಈಗ ರಾಜ್ಯದ ತುಂಬ ರಸ್ತೆ ಸಂಪರ್ಕ ಹರಡಿಕೊಂಡಿದೆ. ಸಾಂಸ್ಕೃತಿಕ ಏಕೀಕರಣದೊಂದಿಗೆ ಆರ್ಥಿಕ ಪ್ರಗತಿ ಕಾಣುವುದು ಅಗತ್ಯ. ಉತ್ತರ ಮತ್ತು ದಕ್ಷಿಣ ಎಂಬ ಅಂತರ ಇರದಂತೆ ಮಾಡುವುದು ಎಲ್ಲರ ಕರ್ತವ್ಯ. ನಮ್ಮ ಹಿರಿಯರು ಈಗಾಗಲೇ ನಮ್ಮ ಹಾದಿಯನ್ನು ಸುಗಮ ಮಾಡಿಹೋಗಿದ್ದಾರೆ. ಇಡೀ ಕರ್ನಾಟಕ ಒಂದು ಎಂಬ ಸಂದೇಶವನ್ನು ಇಂದಿನ ದಿನಗಳಲ್ಲಿ ಪ್ರಸಾರ ಮಾಡುವುದು ಅಗತ್ಯ.

Next Article