ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಲ್ಯಾಣಾದ್ಭುತ ಗಾತ್ರಾಯ

03:15 AM Feb 17, 2024 IST | Samyukta Karnataka

ಅಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಎಷ್ಟೇ ಇರಲಿ, ನೀರುಗಂಟಿ ಹೃದಯವಂತನಾಗಿದ್ದರೆ ಕಾಲುವೆಯ ಕೊನೆಯ ಜಮೀನಿಗೆ ನೀರು ಹರಿಯುವುದು ಸುಲಭ. ಇದು ಕೇವಲ ನೀರುಗಂಟಿಯ ಗುರುತ್ವಾಕರ್ಷಣೆಯ ಫಲ. ಹಾಗೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಸ್ಥಾಪಿಸುವ ರೀತಿಯಲ್ಲಿ ಹದಿನೈದನೇ ಬಾರಿಗೆ ಮಂಡಿಸಿರುವ ಕರ್ನಾಟಕದ ಮುಂಗಡಪತ್ರದಲ್ಲಿ ಎಲ್ಲಾ ವರ್ಗದ ಜನರಿಗೂ ಸೌಲಭ್ಯ ಸಿಗುವ ರೀತಿಯಲ್ಲಿ ಯೋಚಿಸಿ ಕಾರ್ಯಕ್ರಮಗಳನ್ನು ರೂಪಿಸಿ ಇತಿಮಿತಿಯಲ್ಲೇ ಹಣವನ್ನು ಮೀಸಲಿಟ್ಟಿರುವ ಮಾರ್ಗ ನಿಜವಾದ ಅರ್ಥದಲ್ಲಿ ಕಲ್ಯಾಣ ರಾಜ್ಯದ ರಾಜಧರ್ಮ. ಎಲ್ಲ ವರ್ಗದ ಜನರೂ ಎಂದು ಹೇಳುವಾಗ ಆದ್ಯತೆಯ ಮೇರೆಗೆ ಇಲ್ಲದವರನ್ನು ಗುರುತಿಸಿ ಅವರಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿರುವುದು ಸಾಮಾಜಿಕ ನ್ಯಾಯದ ಮುಖ ಎಂದು ರಾಜಕೀಯವಾಗಿ ಗುರುತಿಸಬಹುದಾದರೂ ವಾಸ್ತವವಾಗಿ ಇದರಲ್ಲಿ ಅಡಗಿರುವುದು ವಾಸ್ತವಿಕ ನೆಲೆಗಟ್ಟಿನ ಅರ್ಥಶಾಸ್ತ್ರದ ದೃಷ್ಟಿಕೋನ. ಲೋಕಸಭಾ ಚುನಾವಣೆಯ ನೆರಳು ದಟ್ಟವಾಗಿ ಕವಿದಿರುವ ಸಂದರ್ಭದಲ್ಲಿ ಮುಂಗಡ ಪತ್ರವನ್ನು ಮಂಡಿಸುವಾಗ ರಾಜಕಾರಣಿಯಾಗಿ ವರ್ತಮಾನದ ವರಾತಗಳನ್ನು ಗುರುತಿಸುತ್ತಲೇ ಅರ್ಥಶಾಸ್ತ್ರಜ್ಞನಾಗಿ ಉತ್ತಮ ನಾಳೆಗಳ ಸಮಾಜ ಸೃಷ್ಟಿಸಲು ವಿಂಗಡಿಸಿರುವ ಹಣಕಾಸಿನ ಏರ್ಪಾಡಿನ ಜೊತೆಗೆ ನಾಡಿನ ಹೆಗ್ಗುರುತುಗಳೆನಿಸಿದ ಸಾಂಸ್ಕೃತಿಕ, ಚಾರಿತ್ರಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳ ಕಡೆ ಗಮನಹರಿಸಿ ಯೋಜನೆಗಳನ್ನು ಜಾರಿಗೊಳಿಸಲು ಹೊರಟಿರುವ ವಿಧಾನದಲ್ಲಿ ಆಡಳಿತ ನೈಪುಣ್ಯತೆಯ ಸ್ಪರ್ಶ ಎದ್ದುಕಾಣುತ್ತದೆ.
ನಿಜ. ಮುಂಗಡ ಪತ್ರ ಸೇರಿದಂತೆ ಯಾವುದೇ ರೀತಿಯಲ್ಲಿ ಸರ್ಕಾರ ರೂಪಿಸುವ ಯೋಜನೆಗಳಲ್ಲಿ ಯಾವತ್ತಿಗೂ ಪರಿಪೂರ್ಣತೆಯನ್ನು ಗುರುತಿಸುವುದು ಅಸಾಧ್ಯ. ಏಕೆಂದರೆ, ಮನುಷ್ಯನೇ ಮೂಲತಃ ಅಪೂರ್ಣ. ಅಪೂರ್ಣತೆಯಿಂದ ಪೂರ್ಣತೆಯ ಕಡೆಗೆ ಹೆಜ್ಜೆ ಹಾಕುವುದೇ ಪ್ರಗತಿಪರ ಚಿಂತಕನ ಕ್ರಮ. ಈ ಮಾತಿನ ಆಧಾರದ ಮೇರೆಗೆ ಸಿದ್ದರಾಮಯ್ಯ ಪ್ರಣೀತ ಮುಂಗಡಪತ್ರದ ಯೋಜನೆಗಳನ್ನು ವಿಶ್ಲೇಷಿಸುವಾಗ ಮೈನವಿರೇಳಿಸುವ ಕಾರ್ಯಕ್ರಮಗಳಾಗಲೀ ಇಲ್ಲವೇ ಬೇಸರದಿಂದ ರೋಸಿಹೋಗುವ ಯೋಜನೆಗಳಾಗಲೀ ಕಾಣದೇ ಇರುವುದು ನಿಜವಾದ ಅರ್ಥದಲ್ಲಿ ಮುಂಗಡಪತ್ರದ ಯಶಸ್ಸು ಎಂದು ಗುರುತಿಸಬಹುದು. ಉದಾತ್ತ ಮನೋಭಾವದಿಂದ ರೂಪಿಸಿರುವ ಈ ಮುಂಗಡಪತ್ರ ೩ ಲಕ್ಷ ೭೧ ಸಾವಿರ ಕೋಟಿ ರೂಪಾಯಿ. ಲೆಕ್ಕಾಚಾರದ ಪ್ರಕಾರ ಇದೊಂದು ಕೊರತೆ ಮುಂಗಡ ಪತ್ರ. ಉಳಿತಾಯ ಮುಂಗಡಪತ್ರಗಳನ್ನು ಸೃಷ್ಟಿಸಿ ಸೈ ಎನಿಸಿಕೊಳ್ಳುವ ಹಣಕಾಸು ಮಂತ್ರಿಗಳು ಸಾಕಷ್ಟು ಮಂದಿ. ಆದರೆ, ಸಿದ್ದರಾಮಯ್ಯ ಇಂತಹ ಜನಪ್ರಿಯತೆಯ ದಾರಿಗೆ ಹೋಗದೇ ವಸ್ತುನಿಷ್ಠವಾಗಿ ಕೊರತೆಯನ್ನು ತೋರಿಸಿ ಅದನ್ನು ನಿಭಾಯಿಸಲು ಅನುಸರಿಸುವ ಮಾರ್ಗಗಳನ್ನೂ ಪ್ರಸ್ತಾಪಿಸಿರುವುದರಿಂದ ಹಣಕಾಸಿನ ಶಿಸ್ತು ಏನೆಂಬುದು ಸ್ಪಷ್ಟವಾಗುತ್ತದೆ.
ಮುಂಗಡಪತ್ರವೆಂಬುದು ಅಂಕಿ ಸಂಖ್ಯೆಗಳ ಆಟ ಎಂಬುದು ವಾದದ ಮಟ್ಟಿಗೆ ಸರಿ. ಆದರೆ, ಈ ಅಂಕಿ ಸಂಖ್ಯೆಗಳ ಹಿಂದಿರುವುದು ಬುದ್ಧಿ ಮತ್ತು ಭಾವ. ಇವೆರಡರ ಸಮಾಗಮಕ್ಕೆ ಬೇಕಾಗುವುದು ಅನುಭವ ಮತ್ತು ಜಾಣ್ಮೆ. ಸಿದ್ದರಾಮಯ್ಯನವರೇ ಹಲವಾರು ಬಾರಿ ಹೇಳಿಕೊಂಡಿರುವಂತೆ ಅವರು ಅರ್ಥಶಾಸ್ತ್ರಜ್ಞರಲ್ಲ. ಅವರೊಬ್ಬ ಕಾನೂನು ತಜ್ಞರಷ್ಟೆ. ಆದರೆ, ಲೋಕಾನುಭವದಲ್ಲಿ ಬದುಕಿನ ಬವಣೆ - ಕವಣೆಗಳನ್ನು ಕಂಡಿರುವ ಪರಿಣಾಮ ಅಂಕಿಸಂಖ್ಯೆಗಳನ್ನು ಜೋಡಿಸುವ ಪೂರ್ವದಲ್ಲಿ ಲೋಕಾನುಭವದ ನಿಘಂಟಿನ ಮೂಲಕ ಜ್ಞಾನದ ದೀವಿಗೆಯಲ್ಲಿ ತಮ್ಮ ನಿಲುವುಗಳ ಪ್ರತಿಬಿಂಬವನ್ನು ಕಂಡು ಅದನ್ನು ಮುಂಗಡಪತ್ರದಲ್ಲಿ ಅಡಕ ಮಾಡಿರುವ ರೀತಿಯಲ್ಲಿ ಪ್ರಾಜ್ಞತೆಗಿಂತ ಹೃದಯವಂತಿಕೆ ಪಾಲು ಹೆಚ್ಚಿದೆ.
ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಒತ್ತು ಕೊಡುವ ಸಂದರ್ಭದಲ್ಲಿಯೇ ನೀರಾವರಿ, ಕೈಗಾರಿಕೆ, ಕೃಷಿ, ಹೈನುಗಾರಿಕೆ, ಕಲೆ ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸಗಳ ಕಡೆ ದೃಷ್ಟಿ ಹರಿಸಿದರೂ ಹಣಕಾಸಿನ ಮುಗ್ಗಟ್ಟಿನಿಂದ ನಿರೀಕ್ಷಿತ ಪ್ರಮಾಣದಲ್ಲಿ ಹಣವನ್ನು ಒದಗಿಸಲಾಗದೇ ಸಾಂಕೇತಿಕವಾಗಿ ಹಣ ಮೀಸಲಿಟ್ಟಿರುವ ಕ್ರಮದಲ್ಲಿ ಅನಿವಾರ್ಯತೆ ಎದ್ದು ಕಾಣುತ್ತದೆ. ಹಾಗೆ ನೋಡಿದರೆ, ೧೮೧ ಪುಟಗಳ ಈ ಮುಂಗಡ ಪತ್ರದಲ್ಲಿ ಬೃಹತ್ ಎನಿಸುವಂತಹ ಒಂದು ಯೋಜನೆ ಇಲ್ಲ. ಆದರೆ, ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿ ಯೋಜನೆಗಳನ್ನು ವಿಂಗಡಿಸಿ ಎಲ್ಲ ವರ್ಗಕ್ಕೂ ಕಲ್ಯಾಣವಾಗುವ ರೀತಿಯಲ್ಲಿ ಹಣ ಒದಗಿಸಿರುವ ಕ್ರಮ ಒಂದು ರೀತಿಯ ವಿಕೇಂದ್ರೀಕರಣ ಆಡಳಿತದ ವಿಧಾನ. ಶಿಕ್ಷಣ ಕ್ಷೇತ್ರಕ್ಕೆ ೪೪,೪೨೨ ಕೋಟಿ ರೂಪಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗೆ ೩೪,೪೦೬ ಕೋಟಿ ರೂ., ಗ್ರಾಮೀಣಾಭಿವೃದ್ಧಿಗೆ ೨೧,೧೬೦ ಕೋಟಿ ರೂ. ಕೃಷಿಗೆ ೬,೬೮೮ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ಸರ್ಕಾರದ ಆದ್ಯತೆಯನ್ನು ತೋರಿಸುತ್ತದೆ.
ಮುಂಗಡಪತ್ರಗಳ ಯಶಸ್ಸು ಇರುವುದು ಅವುಗಳ ಕಾರ್ಯಾನುಷ್ಠಾನದ ಕ್ರಮದಲ್ಲಿ. ಅನೇಕ ಮುಂಗಡಪತ್ರದ ಯೋಜನೆಗಳು ನನೆಗುದಿಗೆ ಬಿದ್ದಿರುವ ಇತಿಹಾಸದ ಹಿನ್ನೆಲೆಯಲ್ಲಿ ೨೦೨೪-೨೫ರ ಮುಂಗಡಪತ್ರದ ಯಶಸ್ಸು ಅದರ ಜಾರಿಯಲ್ಲಿ ಅಡಗಿದೆ. ಇದಕ್ಕೆ ಮುಖ್ಯವಾಗಿ ಬೇಕಾಗುವುದು ಆಡಳಿತಗಾರರ ಆತ್ಮವಿಶ್ವಾಸದ ಜೊತೆಗೆ ರಾಜಕೀಯ ಸಂಕಲ್ಪ. ಅಧಿಕಾರಶಾಹಿಯೂ ಕೂಡಾ ಆಡಳಿತದ ಜಾಡಿನಲ್ಲಿ ಹೆಜ್ಜೆ ಹಾಕಿದಾಗ ನಿರೀಕ್ಷಿತ ರೀತಿಯಲ್ಲಿ ಯೋಜನೆಗಳು ಜಾರಿಯಾಗಿ ಫಲಾನುಭವಿಗಳ ಮೂಲಕ ನಾಡಿನ ಕಲ್ಯಾಣವಾಗುವುದು ಖಂಡಿತ. ಇದೊಂದು ರೀತಿಯಲ್ಲಿ ಕಲ್ಯಾಣಾದ್ಭುತ ಗಾತ್ರಾಯ ಎಂಬ ನುಡಿಗಟ್ಟಿನ ಹಿಂದಿರುವ ಆಶಯ ಕೂಡಾ.
ಹಣಕಾಸಿನ ಬಲ ಇಲ್ಲದಿರುವಾಗ ಯೋಜನೆಗಳನ್ನು ರೂಪಿಸುವುದರಿಂದ ಯಾವ ಪುರುಷಾರ್ಥ ಸಾಧ್ಯ ಎಂಬ ಟೀಕೆಯನ್ನು ನಿರಾಕರಿಸುವುದು ಕಷ್ಟವೇ. ಏಕೆಂದರೆ, ಗ್ಯಾರಂಟಿ ಯೋಜನೆಗಳಿಗೆ ಸುಮಾರು ೫೮ ಸಾವಿರ ಕೋಟಿ ರೂಪಾಯಿ ಹಣವನ್ನು ವಿನಿಯೋಗಿಸಬೇಕಾದ ಅನಿವಾರ್ಯತೆ ಇರುವಾಗ ಹೊಸ ಯೋಜನೆಗಳನ್ನು ಕೈಗೊಳ್ಳುವುದಾಗಲೀ ಇಲ್ಲವೇ ಬೃಹತ್ ಸ್ವರೂಪದ ಮಹಾಯೋಜನೆಗಳ ಪ್ರಸ್ತಾಪಿಸುವುದಾಗಲೀ ಅಸಾಧ್ಯ. ತೆರಿಗೆ ಪಾಲಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದಂತೆ ಕಂಡುಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಆಯೋಗಕ್ಕೆ ಖಚಿತ ಅಂಕಿ ಅಂಶಗಳ ಮನವಿ ಪತ್ರವನ್ನು ಸಲ್ಲಿಸಿ ಮತ್ತೆ ಹೆಚ್ಚಿನ ಅನುದಾನ ಪಡೆಯಲು ಮನಸ್ಸು ಮಾಡಿರುವ ವಿಧಾನದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರುವ ಲಕ್ಷಣಗಳು ಕಂಡುಬಂದಿದ್ದರೂ ರಾಜ್ಯಗಳು ತಮ್ಮ ತೆರಿಗೆ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಅನಿವಾರ್ಯ ಕ್ರಮ ಆಗಲೂಬಹುದು. ಬಲಿಷ್ಠ ಕೇಂದ್ರ ಹಾಗೂ ಸುಭದ್ರ ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಬಲವರ್ಧನೆ ಮಾಡಲು ದೇಶದಲ್ಲಿ ಸರ್ವಸಮ್ಮತ ಹಾಗೂ ನ್ಯಾಯಸಮ್ಮತ ಮಾರ್ಗದಲ್ಲಿ ಆಂದೋಲನ ಹಮ್ಮಿಕೊಳ್ಳುವುದು ರಾಜ್ಯಗಳ ಸಾಂವಿಧಾನಿಕ ಹಕ್ಕು ಎಂಬುದನ್ನು ಬೇಷರತ್ತಾಗಿ ಒಪ್ಪಿಕೊಳ್ಳಬಹುದು.

Next Article