For the best experience, open
https://m.samyuktakarnataka.in
on your mobile browser.

ಕಲ್ಯಾಣ ಕರ್ನಾಟಕದ ಜನತೆಯ ಪ್ರಶ್ನೆಗಳಿಗೆ ಉತ್ತರಿಸಿ

11:25 AM Sep 17, 2024 IST | Samyukta Karnataka
ಕಲ್ಯಾಣ ಕರ್ನಾಟಕದ ಜನತೆಯ ಪ್ರಶ್ನೆಗಳಿಗೆ ಉತ್ತರಿಸಿ

ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ಸಂಪುಟ ಸಭೆ ಮಾಡಿ ಮಾಡಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಕಲ್ಯಾಣ ಕರ್ನಾಟಕದ ಜನತೆಯ ಕಣ್ಣಿಗೆ ಮಣ್ಣೆರಚಿ ದ್ರೋಹ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪ್ರಶ್ನೆ ಮಾಡಿ ಪೋಸ್ಟ್‌ ಮಾಡಿದ್ದು ಸಿಎಂ ಸಿದ್ದರಾಮಯ್ಯನವರೇ, ಕಲ್ಯಾಣ ಕರ್ನಾಟಕದಲ್ಲಿ ಸಂಪುಟ ಸಭೆ ಮಾಡಿದ ಮಾತ್ರಕ್ಕೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆಗಿಬಿಡುತ್ತಾ? ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ಸಂಪುಟ ಸಭೆ ಮಾಡುವ ಮುನ್ನ ಕಲ್ಯಾಣ ಕರ್ನಾಟಕದ ಜನತೆಯ ಈ ಪ್ರಶ್ನೆಗಳಿಗೆ ಉತ್ತರಿಸಿ.

1.) ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5,000 ಕೋಟಿ ರೂಪಾಯಿ ನೀಡುವುದಾಗಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರಲ್ಲ, ಕಳೆದ ಎರಡು ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಒಟ್ಟು ಎಷ್ಟು ಹಣ ಮೀಸಲಿಟ್ಟಿದ್ದೀರಿ? ಅದರಲ್ಲಿ ಬಿಡುಗಡೆಯಾದ ಅನುದಾನ ಎಷ್ಟು? ಖರ್ಚಾಗಿದ್ದು ಎಷ್ಟು?

2.) ಬಳ್ಳಾರಿಯಲ್ಲಿ 5,000 ಕೋಟಿ ರೂಪಾಯಿ ಮೊತ್ತದ ಅಪೇರಲ್ ಪಾರ್ಕ್ ಸ್ಥಾಪಿಸುವ ಭರವಸೆ ಏನಾಯ್ತು? ರಾಹುಲ್‌ ಗಾಂಧಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಬಳ್ಳಾರಿಯನ್ನ ಜೀನ್ಸ್ ರಾಜಧಾನಿ ಮಾಡುವ ಭರವಸೆ ಏನಾಯ್ತು?

3.) ಕಲ್ಯಾಣ ಕರ್ನಾಟಕದಲ್ಲಿ 41 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 100 ಪಿಯುಸಿ ಕಾಲೇಜು, ಒಂದು ಮಹಿಳಾ ಪದವಿ ಕಾಲೇಜು ಸ್ಥಾಪಿಸುವ ಭರವಸೆ ನೀಡಿದ್ದರಲ್ಲಾ? ಅದರಲ್ಲಿ ಒಂದಾದರೂ ಸ್ಥಾಪನೆಯಾಗಿದೆಯಾ?

4.) ಕಲ್ಯಾಣ ಕರ್ನಾಟಕದ ಪ್ರತಿ ಹೋಬಳಿಯಲ್ಲಿ ಒಂದು ಬಾಬಾ ಸಾಹೇಬ್ ಅಂಬೇಡ್ಕರ್ ಇಂಗ್ಲಿಷ್ ಮಾಧ್ಯಮ ಶಾಲೆ ಸ್ಥಾಪಿಸುವ ಭರವಸೆ ನೀಡಿದ್ದರಲ್ಲ, ಕನಿಷ್ಠ ಪಕ್ಷ ಒಂದಾದರೂ ಸ್ಥಾಪನೆ ಆಗಿದೆಯಾ?

5.) ಎರಡು ವರ್ಷದೊಳಗೆ ಕಲ್ಯಾಣ ಕರ್ನಾಟಕದ 2,500 ಹೊಸ ಶಾಲಾ ಕೊಠಡಿ ನಿರ್ಮಾಣ ಹಾಗು ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳ ನೇಮಕಾತಿ ಮಾಡುತ್ತೇವೆ ಎನ್ನುವ ಭರವಸೆ ಈಡೇರುವುದು ಯಾವಾಗ? ಕಳೆದ 15 ತಿಂಗಳಲ್ಲಿ ಎಷ್ಟು ಶಿಕ್ಷಕರ ನೇಮಕಾತಿ ಆಗಿದೆ? ಎಷ್ಟು ಶಾಲಾ ಕೊಠಡಿಗಳ ನಿರ್ಮಾಣ ಆಗಿದೆ?

6.) ಕಲ್ಯಾಣ ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡುವ ಭರವಸೆ ಈಡೇರಿದೆಯೇ?

ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕವನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತಾದರೂ ನೈತಿಕತೆ ಇದ್ದರೆ ನಾಮಕಾವಸ್ತೆ ಸಂಪುಟ ಸಭೆ ಮಾಡುವ ಮೊದಲು ಕಲ್ಯಾಣ ಕರ್ನಾಟಕದ ಜನತೆಯ ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮೀಸಲಿಟ್ಟ ಹಣ ಹಾಗೇ ಉಳಿದಿದೆಯೇ ಅಥವಾ ತೆಲಂಗಾಣ ಚುನಾವಣಾ ಪ್ರಚಾರಕ್ಕೆ "ಗುಳೇ" ಹೋಯಿತೋ? ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಕೇವಲ ಪೊಳ್ಳು ಭರವಸೆಗಳಾಗಿ ಉಳಿದಿದೆಯೂ ಅಥವಾ ಕಿಂಚಿತ್ತಾದರೂ ಅನುಷ್ಠಾನ ಆಗಿದೆಯೂ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ತಮ್ಮ 'ಚೀಫ್' ಮೊಹ್ಮದ ಜಮೀರ್‌ ಮೂಲಕ ಫ್ಯಾಕ್ಟ್ ಚೆಕ್ ಮಾಡಿಸಿ ಕಲ್ಯಾಣ ಕರ್ನಾಟಕದ ಜನತೆಗೆ ವಾಸ್ತವಾಂಶ ತಿಳಿಸಬೇಕು ಎಂದಿದ್ದಾರೆ.

Tags :